ವೈದ್ಯಕೀಯ ಶಿಕ್ಷಣ ಇಲಾಖೆಯು ಕಿದ್ವಾಯಿ ಸ್ಮಾರಕ ಆಂಕೊಲಾಜಿ ಸಂಸ್ಥೆಯಲ್ಲಿ (ಕೆಎಂಐಒ) ದೇಶದಲ್ಲೇ ಮೊದಲ ಬಾರಿಗೆ ಪ್ರೋಟಾನ್ ಚಿಕಿತ್ಸಾ ಸೌಲಭ್ಯವನ್ನು ಸ್ಥಾಪಿಸಲು ಮುಂದಾಗಿದ್ದು, ಈ ಸಂಬಂಧ ಕೇಂದ್ರದಿಂದ ₹ 500 ಕೋಟಿ ಅನುದಾನ ಕೋರಿ ಪ್ರಸ್ತಾವನೆ ಸಲ್ಲಿಸಿದೆ.

 ಬೆಂಗಳೂರು : ವೈದ್ಯಕೀಯ ಶಿಕ್ಷಣ ಇಲಾಖೆಯು ಕಿದ್ವಾಯಿ ಸ್ಮಾರಕ ಆಂಕೊಲಾಜಿ ಸಂಸ್ಥೆಯಲ್ಲಿ (ಕೆಎಂಐಒ) ದೇಶದಲ್ಲೇ ಮೊದಲ ಬಾರಿಗೆ ಪ್ರೋಟಾನ್ ಚಿಕಿತ್ಸಾ ಸೌಲಭ್ಯವನ್ನು ಸ್ಥಾಪಿಸಲು ಮುಂದಾಗಿದ್ದು, ಈ ಸಂಬಂಧ ಕೇಂದ್ರದಿಂದ ₹ 500 ಕೋಟಿ ಅನುದಾನ ಕೋರಿ ಪ್ರಸ್ತಾವನೆ ಸಲ್ಲಿಸಿದೆ.

ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಜೀವನೋಪಾಯ ಸಚಿವ ಡಾ. ಶರಣ್ ಪ್ರಕಾಶ್ ಪಾಟೀಲ್‌ ಅವರು ಇತ್ತೀಚೆಗೆ ಬೆಂಗಳೂರಿಗೆ ಆಗಮಿಸಿದ್ದ ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರೊಂದಿಗಿನ ನಡೆಸಿದ ಸಭೆಯಲ್ಲಿ ಈ ಸುಧಾರಿತ ಚಿಕಿತ್ಸಾ ಸೌಲಭ್ಯವನ್ನು ಕಿದ್ವಾಯಿ ಸಂಸ್ಥೆಯಲ್ಲಿ ಸ್ಥಾಪನೆಗೆ ಅನುದಾನ ಕೋರಿ ಪ್ರಸ್ತಾವನೆ ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.

ದೇಶದ ಪ್ರಮುಖ ಕ್ಯಾನ್ಸರ್ ಆಸ್ಪತ್ರೆಗಳಲ್ಲಿ ಒಂದಾದ ಕೆಎಂಐಒದಲ್ಲಿ ವಾರ್ಷಿಕ 21ಸಾವಿರಕ್ಕೂ ಹೆಚ್ಚು ಹೊಸ ಕ್ಯಾನ್ಸರ್ ಪ್ರಕರಣಗಳು ದಾಖಲಾಗುತ್ತಿದೆ. ವಿಕಿರಣ ಚಿಕಿತ್ಸೆಯಲ್ಲಿ ಗೆಡ್ಡೆಯ ಅಕ್ಕಪಕ್ಕದ ಭಾಗಗಳಿಗೂ ಪರಿಣಾಮವಾಗುವ ಸಾಧ್ಯತೆ ಇರುತ್ತದೆ. ಆದರೆ, ಸುಧಾರಿತ ರೂಪ ಪ್ರೋಟಾನ್ ಚಿಕಿತ್ಸೆಯು ಗೆಡ್ಡೆಯ ಬಳಿ ನಿರ್ಣಾಯಕ ಅಂಗಗಳಿಗೆ ಯಾವುದೇ ರೀತಿಯ ಹಾನಿ ಮಾಡುವುದಿಲ್ಲ.

ವಿಶೇಷವಾಗಿ ಸೂಕ್ಷ್ಮ ಪ್ರದೇಶಗಳಲ್ಲಿದೀರ್ಘಕಾಲೀನ ಅಡ್ಡಪರಿಣಾಮಗಳನ್ನು ಕಡಿಮೆ ಮಾಡುತ್ತದೆ. ಗಾಮಾ ಕಿರಣಗಳು ಅಥವಾ ಎಕ್ಸ್-ಕಿರಣಗಳನ್ನು ಬಳಸುವುದು ಸಾಂಪ್ರದಾಯಿಕ ರೇಡಿಯೊ ಥೆರಪಿಗಿಂತ ಭಿನ್ನವಾಗಿದೆ. ಪ್ರೋಟಾನ್ ಚಿಕಿತ್ಸೆಯು ನಿಖರವಾಗಿ ಸಮಸ್ಯೆ ಇರುವ ಜಾಗಕ್ಕೆ ಮಾತ್ರ ಚಿಕಿತ್ಸೆ ಒದಗಿಸುತ್ತದೆ. ಇದರಿಂದ ಹಾನಿ ಪ್ರಮಾಣ ಕಡಿಮೆ ಎಂದು ಡಾ. ಪಾಟೀಲ್ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

ಈ ಪ್ರಸ್ತಾವನೆಯು ಮಕ್ಕಳ ಕ್ಯಾನ್ಸರ್‌ ಪ್ರಕರಣ, ವಿಶೇಷವಾಗಿ ಎನ್‌ಎಫ್‌-1 ಮತ್ತು ರೆಟಿನೋಬ್ಲಾಸ್ಟೊಮಾದಂತಹ ಆನುವಂಶಿಕ ಪ್ರಕಾರ ಮತ್ತು ಕಣ್ಣು, ಕಕ್ಷೆ, ತಲೆಬುರುಡೆಯ ಬುಡ, ಬೆನ್ನುಮೂಳೆ, ಯಕೃತ್ತು, ಪ್ರಾಸ್ಟೇಟ್, ಸ್ತನ, ತಲೆ ಮತ್ತು ಕುತ್ತಿಗೆ ಮತ್ತು ಪ್ಯಾರಾನಾಸಲ್ ಸೈನಸ್‌ಗಳ ಕ್ಯಾನ್ಸರ್‌ ಸೇರಿದಂತೆ ವ್ಯಾಪಕ ಶ್ರೇಣಿಯ ಇತರ ಮಾರಕ ಕಾಯಿಲೆಗಳಿಗೆ ಚಿಕಿತ್ಸೆ ನೀಡಲಿದೆ. ಮರು-ವಿಕಿರಣ ಪ್ರಕರಣಗಳು ಮತ್ತು ತೆಗೆದುಹಾಕಲಾಗದ ಗೆಡ್ಡೆಗಳ ಪ್ರಕರಣಗಳಿಗೂ ಬಳಸಬಹುದಾಗಿದೆ. ಇದರಿಂದ ವಾಸಿಯಾಗುವ ಭರವಸೆ ಹೆಚ್ಚಾಗಿರುತ್ತದೆ ಎಂದು ಸಚಿವ ಡಾ. ಪಾಟೀಲ್‌ ತಿಳಿಸಿದ್ದಾರೆ.

ಪ್ರೋಟಾನ್ ಚಿಕಿತ್ಸೆಯ ಪ್ರಮುಖ ಪ್ರಯೋಜನ

1 ಮಕ್ಕಳ ಮತ್ತು ಆನುವಂಶಿಕ ಗೆಡ್ಡೆಗಳಿಗೆ ಹೆಚ್ಚು ಪರಿಣಾಮಕಾರಿ

2 ಚಿಕಿತ್ಸೆಯ ನಂತರ ವೇಗವರ್ಧಿತ ಚೇತರಿಕೆ

3 ದ್ವಿತೀಯ ಪೂರಕ ಕ್ಯಾನ್ಸರ್‌ಗಳ ಸಾಧ್ಯತೆ ಕಡಿಮೆ

4 ಜೀವಿತಾವಧಿ ಹೆಚ್ಚಿಸುತ್ತದೆ

ಕಿದ್ವಾಯಿ ಆಸ್ಪತ್ರೆಯಲ್ಲಿ ಈ ಸೌಲಭ್ಯ ಶುರುವಾದಲ್ಲಿ ಕ್ಯಾನ್ಸರ್‌ಗೆ ಅತ್ಯಾಧುನಿಕ ಚಿಕಿತ್ಸೆ ಒದಗಿಸುತ್ತದೆ. ಜತೆಗೆ ನಿಮ್ಹಾನ್ಸ್‌ ಮತ್ತು ಇಂದಿರಾ ಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯಿಂದ ಬರುವ ಪ್ರಕರಣಗಳಿಗೂ ಚಿಕಿತ್ಸೆ ನೀಡಲು ಸಹಕಾರಿಯಾಗುತ್ತದೆ.

ಡಾ. ಶರಣ್ ಪ್ರಕಾಶ್ ಪಾಟೀಲ್, ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವ