ಸಾರಾಂಶ
ನಗರದ ಐತಿಹಾಸಿಕ ಬಸವನಗುಡಿ ಕಡಲೆಕಾಯಿ ಪರಿಷೆಗೆ ಕಾರ್ತಿಕ ಕಡೆಯ ಸೋಮವಾರ ವಿಧ್ಯುಕ್ತ ಚಾಲನೆ ದೊರೆಯಿತು. ಬುಲ್‌ಟೆಂಪಲ್ ರಸ್ತೆಯುದ್ದಕ್ಕೂ ಕಡಲೆಕಾಯಿಯ ಘಮ ಆವರಿಸಿದ್ದು, ಸಾಂಸ್ಕೃತಿಕ ಪರಂಪರೆ ಮೇಳೈಸಿದೆ. ಮೊದಲ ದಿನವೇ ಲಕ್ಷಕ್ಕೂ ಅಧಿಕ ಜನ ಭೇಟಿ ನೀಡಿ ಗ್ರಾಮೀಣ ಸೊಗಡನ್ನು ಸವಿದರು.
ಬೆಂಗಳೂರು : ನಗರದ ಐತಿಹಾಸಿಕ ಬಸವನಗುಡಿ ಕಡಲೆಕಾಯಿ ಪರಿಷೆಗೆ ಕಾರ್ತಿಕ ಕಡೆಯ ಸೋಮವಾರ ವಿಧ್ಯುಕ್ತ ಚಾಲನೆ ದೊರೆಯಿತು. ಬುಲ್‌ಟೆಂಪಲ್ ರಸ್ತೆಯುದ್ದಕ್ಕೂ ಕಡಲೆಕಾಯಿಯ ಘಮ ಆವರಿಸಿದ್ದು, ಸಾಂಸ್ಕೃತಿಕ ಪರಂಪರೆ ಮೇಳೈಸಿದೆ. ಮೊದಲ ದಿನವೇ ಲಕ್ಷಕ್ಕೂ ಅಧಿಕ ಜನ ಭೇಟಿ ನೀಡಿ ಗ್ರಾಮೀಣ ಸೊಗಡನ್ನು ಸವಿದರು.
ಪರಿಷೆಯ ಪ್ರಯುಕ್ತ ದೊಡ್ಡಗಣಪತಿ, ದೊಡ್ಡ ಬಸವಣ್ಣ ದೇವಸ್ಥಾನಕ್ಕೆ ಭಕ್ತರು ಆಗಮಿಸಿ ದರ್ಶನ ಪಡೆದು ಕಡಲೆಕಾಯಿಯನ್ನು ಪ್ರಸಾದವಾಗಿ ಸ್ವೀಕರಿಸಿದರು. ದೇವಾಲಯದ ಒಳ ಹಾಗೂ ಹೊರ ಭಾಗದಲ್ಲಿ ಮಾತ್ರವಲ್ಲದೆ, ಬುಲ್ ಟೆಂಪಲ್ ರಸ್ತೆ, ಗಾಂಧಿಬಜಾರ್, ಎನ್.ಆರ್.ರಸ್ತೆ, ನೆಟ್ಟಕಲ್ಲಪ್ಪ ವೃತ್ತದವರೆಗೆ ಪರಿಷೆಯ ಸೊಬಗು ಆವರಿಸಿದೆ.
ಪರಿಷೆಗಾಗಿ ತಿರುವಣ್ಣಾಮಲೈ, ಸೇಲಂ, ಧರ್ಮಾಪುರಿ, ಅದಕಪಾಡಿ, ಬೆಳಗಾವ್, ನಾಟಿ ಕಾಯಿಗಳನ್ನು ರೈತರು, ವರ್ತಕರು ತಂದಿದ್ದಾರೆ. ಬುಲ್ ಟೆಂಪಲ್ ರಸ್ತೆಯುದ್ದಕ್ಕೂ ಮಾತ್ರಲ್ಲದೆ ಸುತ್ತಮುತ್ತಲ ರಸ್ತೆಗಳ ಇಕ್ಕೆಲಗಳಲ್ಲಿ ರಾಶಿ ಹಾಕಿಕೊಂಡು ಮಾರುತ್ತಿದ್ದಾರೆ. ಬಹುತೇಕ ವ್ಯಾಪಾರಿಗಳು ಹಸಿ, ಹುರಿದ ಸೇರು ಕಡಲೆಕಾಯಿಗೆ ₹50 ದರ ನಿಗದಿಸಿಕೊಂಡಿದ್ದಾರೆ. ಅರ್ಧ ಸೇರಿಗೆ ₹30 ನಂತೆ ವ್ಯಾಪಾರ ಮಾಡುತ್ತಿದ್ದಾರೆ. ಕಳೆದ ಎರಡು ವರ್ಷದಿಂದ ಸುಂಕ ರದ್ದು ಮಾಡಿರುವುದಕ್ಕೆ ವ್ಯಾಪಾರಿಗಳು ಸಂತಸ ವ್ಯಕ್ತಪಡಿಸಿದರು.
ಕಿಕ್ಕಿರಿದು ಸೇರಿದ್ದ ಜನ:
ಕಳೆದ ಎರಡು ದಿನಗಳಿಂದಲೆ ಜನಜಾತ್ರೆ ಸೇರುತ್ತಿದೆ. ಅಧಿಕೃತವಾಗಿ ಪರಿಷೆ ಆರಂಭವಾದ ಸೋಮವಾರ ಬೆಳಗ್ಗೆ ಬಿಸಿಲಿನ ನಡುವೆಯೂ ರಸ್ತೆಯಲ್ಲಿ ಕಾಲೇಜು ಯುವಕ ಯುವತಿಯರು, ಭಕ್ತರು ಕಿಕ್ಕಿರಿದು ಸೇರಿದ್ದರು. ಕಡಲೆಕಾಯಿ, ಕಳ್ಳೆಪುರಿ, ಸಿಹಿತಿನಿಸು, ಹಣ್ಣು ಸೇವಿಸಿದರು. ಗೃಹೋಪಯೋಗಿ ವಸ್ತುಗಳು, ಬಟ್ಟೆಬರೆ, ಪಾತ್ರೆ , ಗೃಹಾಲಂಕಾರ ಪರಿಕರಗಳು ಬಂದಿವೆ. ಜತೆಗೆ ದೇವಸ್ಥಾನದ ಎದುರು ಅಮ್ಯೂಸ್‌ಮೆಂಟ್ ಪಾರ್ಕ್ ಬಂದಿದ್ದು, ಮಕ್ಕಳು ಆಡಿ ಸಂತಸಪಟ್ಟರು. ಮೊದಲ ದಿನ 1.20ಲಕ್ಷಕ್ಕೂ ಹೆಚ್ಚಿನ ಜನ ಭೇಟಿ ಕೊಟ್ಟಿದ್ದಾರೆ ಎಂದು ಸಮಿತಿ ತಿಳಿಸಿದೆ. ಇನ್ನು ರಾತ್ರಿ ಪರಿಷೆಯ ರಸ್ತೆ ವಿದ್ಯುದೀಪಾಲಂಕಾರದಿಂದ ಜಗಮಗಿಸಿತು. ತಡರಾತ್ರಿವರೆಗೂ ಜನ ದಟ್ಟಣೆಯಿಂದ ಕೂಡಿತ್ತು.
ಅದ್ಧೂರಿ ತೆಪ್ಪೋತ್ಸವ:
ಪರಿಷೆಯ ಪ್ರಯುಕ್ತ ಕೆಂಪಾಂಬುಧಿ ಕರೆಯಲ್ಲಿ ಸೋಮವಾರ ಸಂಜೆ ತೆಪ್ಪೋತ್ಸವ ಅದ್ಧೂರಿಯಾಗಿ ನಡೆಯಿತು. ತೆಪ್ಪವನ್ನು ವೈಭವಯುತವಾಗಿ ಅಲಂಕೃತಗೊಳಿಸಿ ನಂದಿಯನ್ನ ಪ್ರತಿಷ್ಠಾಪಿಸಿ ಉತ್ಸವ ನೆರವೇರಿಸಲಾಯಿತು. ಕರೆಯ ಸುತ್ತ ಜನಸ್ತೋಮ ನೆರೆದಿತ್ತು.
ಎರಡು ಲಕ್ಷ ಪೇಪರ್ ಬ್ಯಾಗ್:
ಕೆಲ ಮಳಿಗೆಯವರು ತಂದಿದ್ದ ಪ್ಲಾಸ್ಟಿಕ್ ಚೀಲವನ್ನು ಬಿಬಿಎಂಪಿ ಸಿಬ್ಬಂದಿ ವಶಪಡಿಸಿಕೊಂಡರು. ವರ್ತಕರಿಗೆ ಬಟ್ಟೆ, ಪೇಪರ್ ಚೀಲವನ್ನು ದೇವಸ್ಥಾನ ಸಮಿತಿ ಹಂಚಿದೆ. ಸ್ವಯಂಸೇವಾ ಸಂಘಟನೆಗಳು ಪ್ಲಾಸ್ಟಿಕ್ ಬಳಕೆ ಮಾಡದಂತೆ ಪರಿಷೆಯಲ್ಲಿ ಜಾಗೃತಿ ಮೂಡಿಸುತ್ತಿವೆ. ಎರಡು ಲಕ್ಷ ಪೇಪರ್ ಬ್ಯಾಗ್ ಮಾಡಿ ಪರಿಷೆಗೆ ಬಂದವರಿಗೆ ಹಂಚುತ್ತಿದ್ದಾರೆ. ಪ್ಲಾಸ್ಟಿಕ್ ತ್ಯಜಿಸಿ ಜೀವ ಉಳಿಸಿ ಫಲಕ ಹಿಡಿದು ಬುಲ್ ಟೆಂಪಲ್ ರಸ್ತೆಯಲ್ಲಿ ಅಭಿಯಾನ ನಡೆಸಿದರು.
ಸಾಂಸ್ಕೃತಿಕ ಕಾರ್ಯಕ್ರಮ:
ಸಂಜೆ ದೊಡ್ಡ ಬಸವಣ್ಣ ದೇವಾಲಯದ ಆವರಣದಲ್ಲಿ ಕಿಕ್ಕೆರಿ ಕೃಷ್ಣಮೂರ್ತಿ ತಂಡದಿಂದ ಸಂಗೀತ ಕಾರ್ಯಕ್ರಮ, ನರಸಿಂಹಸ್ವಾಮಿ ಉದ್ಯಾನವನದಲ್ಲಿ ವಿಜಯ ವಿಠಲ ಶಾಲೆಯ ವತಿಯಿಂದ ಸಂಗೀತ ಕಾರ್ಯಕ್ರಮ ನಡೆಯಿತು.
ಪರಿಷೆಗೆ ಸಚಿವ ರೆಡ್ಡಿ ಚಾಲನೆ
ದೊಡ್ಡಬಸವಣ್ಣ ದೇವಸ್ಥಾನದ ಎದುರು ಬಸವಣ್ಣನ ಮೂರ್ತಿಗೆ ಕಡಲೆಯ ತುಲಾಭಾರ, ಐದು ಬಸವಗಳಿಗೆ ಕಡಲೆಕಾಯಿ ತಿನ್ನಿಸುವ ಮೂಲಕ ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಅವರು ಚಾಲನೆ ನೀಡಿದರು.
ಬಳಿಕ ಮಾತನಾಡಿ, ಬಸವನಗುಡಿ ಪರಿಷೆಗೆ 500 ವರ್ಷಗಳ ಇತಿಹಾಸವಿದೆ. ಕಳೆದ ವರ್ಷ 5 ಲಕ್ಷ ಮಂದಿ ಬಂದಿದ್ದರು, ಈ ವರ್ಷ ಅದಕ್ಕೂ ಹೆಚ್ಚಿನವರು ಬರುವ ನಿರೀಕ್ಷೆಯಿದೆ. ಅಗತ್ಯ ಭದ್ರತಾ ಸಿಬ್ಬಂದಿ, ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಕುಡಿವ ನೀರಿನ ವ್ಯವಸ್ಥೆ, ತುರ್ತುಚಿಕಿತ್ಸಾ ವ್ಯವಸ್ಥೆ, ಶೌಚಾಲಯ ವ್ಯವಸ್ಥೆ ಸೇರಿ ಅಗತ್ಯ ಮೂಲಸೌಕರ್ಯ ಒದಗಿಸಲಾಗಿದೆ. ಎರಡು ದಿನದ ಪರಿಷೆಯನ್ನು ಐದು ದಿನಕ್ಕೆ ವಿಸ್ತರಿಸಲಾಗಿದೆ ಎಂದರು.
ಸಂಸದ ತೇಜಸ್ವಿ ಸೂರ್ಯ ಮಾತನಾಡಿ, ಬೆಂಗಳೂರು ಆಧುನಿಕ ಹಾಗೂ ಜಾಗತಿಕ ನಗರವಾಗಿ ಬೆಳೆಯುತ್ತಿರುವ ಸಂದರ್ಭದಲ್ಲಿ ಸುಮಾರು ಐನೂರು ವರ್ಷಗಳ ಗ್ರಾಮೀಣ ಸೊಗಡು ಇಂದಿಗೂ ಜೀವಂತವಾಗಿರುವುದಕ್ಕೆ ಕಡಲೇಕಾಯಿ ಪರಿಷೆಯೆ ನಿದರ್ಶನ. ಪೋಷಕರು ತಮ್ಮ ಮಕ್ಕಳನ್ನು ಪರಿಷೆಗೆ ಕರೆತಂದು ನಮ್ಮ ಪರಂಪರೆ ಬಗ್ಗೆ ಮಕ್ಕಳಿಗೆ ತಿಳಿಸಿ ಎಂದು ಕರೆ ನೀಡಿದರು.
ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ ಮಾತನಾಡಿ, ಇದು ಕೇವಲ ಕಡಲೇಕಾಯಿ ಮಾರಾಟದ ಸಂತೆಯಲ್ಲ, ಇದು ಧಾರ್ಮಿಕ ಆಚರಣೆಯಾಗಿದೆ. ಜೊತೆಗೆ ರೈತರ ಜಾತ್ರೆ, ಪರಂಪರೆಯ ಪುನರುತ್ಥಾನವಾಗಿದೆ. ರಾಜ್ಯ, ಹೊರ ರಾಜ್ಯಗಳ ರೈತರು ಜಾತ್ರೆಗೆ ತಮ್ಮ ಉತ್ಪನ್ನಗಳೊಂದಿಗೆ ಆಗಮಿಸುತ್ತಾರೆ. ದೇವರಿಗೆ ತಾವು ಬೆಳೆದ ಉತ್ಪನ್ನ, ವಿಶೇಷವಾಗಿ ಕಡಲೆಕಾಯಿ ಅರ್ಪಿಸಿ ಧನ್ಯವಾದ ಸಲ್ಲಿಸುತ್ತಾರೆ ಎಂದರು. ಶಾಸಕರಾದ ಉದಯ್ ಗರುಡಾಚಾರ್, ಎಲ್.ಎ.ರವಿ ಸುಬ್ರಹ್ಮಣ್ಯ ಇದ್ದರು.
;Resize=(690,390))
)
)
;Resize=(128,128))
;Resize=(128,128))
;Resize=(128,128))
;Resize=(128,128))