ಸಾರಾಂಶ
ಕೆಆರ್ ನಗರದ ಲೈಂಗಿಕ ಕಿರುಕುಳ ಸಂತ್ರಸ್ತೆಯೊಬ್ಬರ ಅಪಹರಣ ಕೇಸ್ ನಲ್ಲಿ ಮಾಜಿ ಸಚಿವ ಎಚ್.ಡಿ.ರೇವಣ್ಣನವರ ಪತ್ನಿ ಭವಾನಿ ರೇವಣ್ಣನವರಿಗೆ ನೀಡಲಾಗಿದ್ದ ನಿರೀಕ್ಷಣಾ ಜಾಮೀನನ್ನು ರದ್ದುಗೊಳಿಸಲು ಸುಪ್ರೀಂಕೋರ್ಟ್ ನಿರಾಕರಿಸಿದೆ.
ನವದೆಹಲಿ : ಕೆಆರ್ ನಗರದ ಲೈಂಗಿಕ ಕಿರುಕುಳ ಸಂತ್ರಸ್ತೆಯೊಬ್ಬರ ಅಪಹರಣ ಕೇಸ್ ನಲ್ಲಿ ಮಾಜಿ ಸಚಿವ ಎಚ್.ಡಿ.ರೇವಣ್ಣನವರ ಪತ್ನಿ ಭವಾನಿ ರೇವಣ್ಣನವರಿಗೆ ನೀಡಲಾಗಿದ್ದ ನಿರೀಕ್ಷಣಾ ಜಾಮೀನನ್ನು ರದ್ದುಗೊಳಿಸಲು ಸುಪ್ರೀಂಕೋರ್ಟ್ ನಿರಾಕರಿಸಿದೆ.
ಆ ಮೂಲಕ, ಭವಾನಿ ರೇವಣ್ಣನವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ್ದ ಕರ್ನಾಟಕ ಹೈಕೋರ್ಟ್ ನ ನಿರ್ಧಾರವನ್ನು ಎತ್ತಿ ಹಿಡಿದಿದೆ. ಭವಾನಿಯವರು ರಾಜಕೀಯ ಕುಟುಂಬದಿಂದ ಬಂದವರೆಂಬ ಕಾರಣಕ್ಕೆ ಅವರಿಗೆ ಜಾಮೀನು ನಿರಾಕರಿಸುವಂತಿಲ್ಲ ಎಂದು ನ್ಯಾಯಪೀಠ ಸ್ಪಷ್ಟವಾಗಿ ಹೇಳಿದೆ.
ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಮಾಜಿ ಸಚಿವ ಎಚ್.ಡಿ.ರೇವಣ್ಣನವರಿಂದ ಲೈಂಗಿಕ ಕಿರುಕುಳಕ್ಕೆ ಒಳಗಾಗಿರುವುದಾಗಿ ಕೆಲವು ತಿಂಗಳುಗಳ ಹಿಂದೆ ಕೆಆರ್ ನಗರದ ಮಹಿಳೆಯೊಬ್ಬರು ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ರೇವಣ್ಣ ವಿರುದ್ಧ ಕೇಸ್ ದಾಖಲಾಗಿದ್ದು, ಎಸ್ಐಟಿ ತನಿಖೆಗೆ ರಾಜ್ಯ ಸರ್ಕಾರ ಆದೇಶಿಸಿತ್ತು. ತನಿಖೆ ಶುರುವಾದಾಗ ಆ ಸಂತ್ರಸ್ತ ಮಹಿಳೆಯನ್ನು ಅಪಹರಿಸಿ ಗ್ರಾಮವೊಂದರ ಫಾರ್ಮ್ ಹೌಸ್ ನಲ್ಲಿ ಕೂಡಿ ಹಾಕಲಾಗಿತ್ತು ಎಂಬ ಆರೋಪ ಭವಾನಿ ವಿರುದ್ಧ ಕೇಳಿ ಬಂದಿತ್ತು. ಬಳಿಕ, ಎಸ್‌ಐಟಿ ಅಧಿಕಾರಿಗಳು ಆ ಮಹಿಳೆಯನ್ನು ರಕ್ಷಿಸಿದ್ದರು. ಈ ಹಿನ್ನೆಲೆಯಲ್ಲಿ ಭವಾನಿಯವರು ನಿರೀಕ್ಷಣಾ ಜಾಮೀನು ಕೋರಿದ್ದು, ಜೂ.18ರಂದು ಕರ್ನಾಟಕ ಹೈಕೋರ್ಟ್ ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು. ಇದನ್ನು ಪ್ರಶ್ನಿಸಿ ಎಎಸ್‌ಟಿ, ಸುಪ್ರೀಂಕೋರ್ಟ್ ಮೊರೆ ಹೋಗಿತ್ತು.
ಶುಕ್ರವಾರ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ನ್ಯಾ.ಸೂರ್ಯಕಾಂತ್ ನೇತೃತ್ವದ ಪೀಠ, ಹೈಕೋರ್ಟ್ ತೀರ್ಪನ್ನು ಎತ್ತಿ ಹಿಡಿಯಿತು.