15000 ಹುದ್ದೆ ಭರ್ತಿಗೆ ಸರ್ಕಾರಕ್ಕೆ ಶಿಫಾರಸು

| N/A | Published : May 23 2025, 12:04 PM IST

Vidhan soudha
15000 ಹುದ್ದೆ ಭರ್ತಿಗೆ ಸರ್ಕಾರಕ್ಕೆ ಶಿಫಾರಸು
Share this Article
  • FB
  • TW
  • Linkdin
  • Email

ಸಾರಾಂಶ

ಪಡಿತರ ಚೀಟಿ ದತ್ತಾಂಶವನ್ನು ಜನನ ಮತ್ತು ಮರಣ ನೋಂದಣಿ ತಂತ್ರಾಂಶದೊಂದಿಗೆ ಸಂಯೋಜಿಸುವುದು, ಎಲ್ಲ ಇಲಾಖೆಗಳಲ್ಲಿ ಖಾಲಿ ಇರುವ 15000 ಹುದ್ದೆಗಳನ್ನು ಆದ್ಯತೆ ಮೇರೆಗೆ ಭರ್ತಿ ಮಾಡುವುದು ಸೇರಿ 189 ಹೊಸ ಶಿಫಾರಸುಗಳನ್ನು ಸರ್ಕಾರಕ್ಕೆ ರಾಜ್ಯ ಆಡಳಿತ ಸುಧಾರಣಾ ಆಯೋಗ ಸಲ್ಲಿಸಿದೆ.

 ಬೆಂಗಳೂರು : ಪಡಿತರ ಚೀಟಿ ದತ್ತಾಂಶವನ್ನು ಜನನ ಮತ್ತು ಮರಣ ನೋಂದಣಿ ತಂತ್ರಾಂಶದೊಂದಿಗೆ ಸಂಯೋಜಿಸುವುದು, ಎಲ್ಲ ಇಲಾಖೆಗಳಲ್ಲಿ ಖಾಲಿ ಇರುವ 15000 ಹುದ್ದೆಗಳನ್ನು ಆದ್ಯತೆ ಮೇರೆಗೆ ಭರ್ತಿ ಮಾಡುವುದು ಸೇರಿ 189 ಹೊಸ ಶಿಫಾರಸುಗಳನ್ನು ಸರ್ಕಾರಕ್ಕೆ ರಾಜ್ಯ ಆಡಳಿತ ಸುಧಾರಣಾ ಆಯೋಗ ಸಲ್ಲಿಸಿದೆ.

ಗುರುವಾರ 8ನೇ ಆಡಳಿತ ಸುಧಾರಣಾ ವರದಿಯನ್ನು ಆಯೋಗ-2ರ ಅಧ್ಯಕ್ಷ ಆರ್‌.ವಿ.ದೇಶಪಾಂಡೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದರು. ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದೇಶಪಾಂಡೆ ಅವರು, ಆಯೋಗವು ಈಗಾಗಲೇ 23 ಸರ್ಕಾರಿ ಇಲಾಖೆಗಳಿಗೆ ಭೇಟಿ ನೀಡಿ ಅಲ್ಲಿನ ಕಾರ್ಯವೈಖರಿ ಪರಿಶೀಲಿಸಿದೆ. ಇಲಾಖೆ ಸಿಬ್ಬಂದಿ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಅಧ್ಯಯನ ಮಾಡಲಾಗಿದೆ. ವಿವಿಧ ಇಲಾಖೆಗಳು, ಸಾರ್ವಜನಿಕ ಉದ್ಯಮಗಳು ಮತ್ತು ಮಧ್ಯಸ್ಥಗಾರರ ಸಲಹೆ ಆಧಾರದ ಮೇಲೆ ಆಯೋಗವು 189 ಹೊಸ ಶಿಫಾರಸುಗಳನ್ನು ಸರ್ಕಾರಕ್ಕೆ ಮಾಡಿದೆ ಎಂದರು.

ಹಿಂದಿನ ವರದಿಗಳಲ್ಲಿ ಸೇರ್ಪಡೆಯಾಗದ ಇಲಾಖೆಗಳಾದ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆ ಮತ್ತು ಮುದ್ರಣ, ಲೇಖನ ಸಾಮಗ್ರಿ ಮತ್ತು ಪ್ರಕಟಣೆಗಳ ಇಲಾಖೆಗಳನ್ನು ಈ ವರದಿ ಒಳಗೊಂಡಿದೆ. 2021ರಿಂದ 2024ರವರೆಗೆ ಸಲ್ಲಿಸಿರುವ 7 ವರದಿಗಳಲ್ಲಿ ನಿವೃತ್ತ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ್‌ ಭಾಸ್ಕರ್‌ ಅವರು ಒಟ್ಟಾರೆ ಆಡಳಿತಾತ್ಮಕ ಸುಧಾರಣೆಗೆ 5,039 ಶಿಫಾರಸುಗಳನ್ನು ಮಾಡಿತ್ತು. ಈ ಪೈಕಿ 1506 ಅನುಷ್ಠಾನ ಮಾಡಲಾಗಿದ್ದು, 957 ಅನುಷ್ಠಾನದ ಹಂತದಲ್ಲಿವೆ. 1950 ಪರಿಶೀಲನೆ ಹಂತದಲ್ಲಿವೆ. ಒಟ್ಟಾರೆ. ಶೇ.53ಕ್ಕೂ ಹೆಚ್ಚು ಶಿಫಾರಸುಗಳನ್ನು ಸಂಪೂರ್ಣವಾಗಿ ಅನುಷ್ಠಾನಗೊಳಿಸುವತ್ತ ಕ್ರಮ ಜರುಗಿಸಲಾಗಿದೆ ಎಂದು ತಿಳಿಸಿದರು. ಆದ್ಯತೆ ಮೇಲೆ ಹುದ್ದೆ ಭರ್ತಿ:

ಆಯೋಗವು 23 ಇಲಾಖೆಗಳಲ್ಲಿ ಒಟ್ಟು 21,442 ಹುದ್ದೆಗಳು ಮಂಜೂರಾಗಿದ್ದು ಈ ಪೈಕಿ 15 ಸಾವಿರ ಖಾಲಿ ಹುದ್ದೆಗಳನ್ನು ಗುರುತಿಸಲಾಗಿದೆ. ಕೌಶಲ್ಯಾಭಿವೃದ್ಧಿ ಇಲಾಖೆಯಲ್ಲಿ ಕಿರಿಯ ತರಬೇತಿ ಅಧಿಕಾರಿಗಳ 1521 ಹುದ್ದೆಗಳು, ವೈದ್ಯಕೀಯ ಕಾಲೇಜುಗಳ ಕಿರಿಯ ವೈದ್ಯರು 1080, ವೈದ್ಯಕೀಯ ಕಾಲೇಜು ನರ್ಸಿಂಗ್‌ ಆಫೀಸರ್ಸ್‌ 1397, ಪಶುಸಂಗೋಪನಾ ಇಲಾಖೆ ವೈದ್ಯರು 1043, ಕೃಷಿ ಇಲಾಖೆ ಎಎಒ 1870 ಮತ್ತು ಕೃಷಿ ಅಧಿಕಾರಿ 732, ಸಹಕಾರ ಇಲಾಖೆ 453 ಸೇರಿ ಒಟ್ಟು 15 ಸಾವಿರ ಹುದ್ದೆಗಳು ಖಾಲಿಯಿದ್ದು, ಆದ್ಯತೆ ಮೇರೆಗೆ ಭರ್ತಿ ಮಾಡಬೇಕು ಎಂದು ಶಿಫಾರಸು ಮಾಡಲಾಗಿದೆ ಎಂದರು. ಹೆಚ್ಚು ಜನಸಂದಣಿ ಇರುವ ದೇವಾಲಯಗಳಲ್ಲಿ ಸುವ್ಯವಸ್ಥೆ ಮತ್ತು ಸುರಕ್ಷತೆ ಕಾಪಾಡಿಕೊಳ್ಳಲು ದೇವಾಲಯ ಕಾರ್ಯಪಡೆ (ಟೆಂಪಲ್‌ ಟಾಸ್ಕ್‌ ಫೋರ್ಸ್‌) ಸ್ಥಾಪಿಸಬೇಕು. ವಿಧಾನಸೌಧ, ವಿಕಾಸಸೌಧ ಅಥವಾ ಬಹುಮಹಡಿ ಕಟ್ಟಡದ ಬಳಿ ಸರ್ಕಾರಿ ಕೇಂದ್ರ ಲೇಖನ ಸಾಮಗ್ರಿ ಮಳಿಗೆ ಸ್ಥಾಪಿಸಬೇಕು. ಮುದ್ರಣ ಸೇವೆಗಳಿಗೆ ಅಸ್ತಿತ್ವದಲ್ಲಿರುವ ಬೆಲೆ ನಿಗದಿ ಕಾರ್ಯ ವಿಧಾನ ದಶಕಗಳಷ್ಟು ಹಳೆಯದಾದ ಕೈಪಿಡಿ ಆಧರಿಸಿದೆ. ಉತ್ಪಾದಕತೆ ಮತ್ತು ಮುದ್ರಣ ಗುಣಮಟ್ಟ ಹೆಚ್ಚಿಸಲು ಡಿಜಿಟಲ್‌ ಮುದ್ರಣ, ಸುಧಾರಿತ ತಂತ್ರಜ್ಞಾನ ಬಳಸಲು ಶಿಫಾರಸು ಮಾಡಲಾಗಿದೆ ಎಂದು ಹೇಳಿದರು.

ಗ್ರಾಮ ಠಾಣೆ ಗಡಿಗಳನ್ನು ಹಲವು ವರ್ಷಗಳಿಂದ ಮರು ಗುರುತು ಮಾಡಿಲ್ಲ. ಇದು ಗ್ರಾಮಗಳ ಪಕ್ಕದ ಕಂದಾಯ ಸರ್ವೇ ನಂಬರಿನ ಭೂಮಿಯಲ್ಲಿ ಅನಧಿಕೃತ ನಿರ್ಮಾಣಗಳಿಗೆ ಕಾರಣವಾಗುತ್ತಿದೆ. ಆದ್ದರಿಂದ ಗಡಿ ಸಂಬಂಧಿತ ಸಮಸ್ಯೆಗಳನ್ನು ಹೊಂದಿರುವ ಗ್ರಾಮಗಳಿಗೆ ಆದ್ಯತೆ ನೀಡಿ ಗಡಿಗಳನ್ನು ಮರು ವ್ಯಾಖ್ಯಾನಿಸಲು ಸಮಗ್ರ ಯೋಜನೆ ಅಭಿವೃದ್ಧಿಪಡಿಸುವಂತೆ ಶಿಫಾರಸು ಮಾಡಲಾಗಿದೆ ಎಂದು ತಿಳಿಸಿದರು.

 ಕೆಪಿಎಸ್ಸಿ ಶಾಖಾ ಕಚೇರಿಗೆ ಶಿಫಾರಸು:

ಯುಪಿಎಸ್ಸಿ, ಕೆಪಿಎಸ್ಸಿ, ಕೆಇಎ ಸಂಬಂಧಿಸಿದ ಸ್ಪರ್ಧಾತ್ಮಕ ಪರೀಕ್ಷೆಗಳು ಬೆಂಗಳೂರನ್ನು ಹೊರತುಪಡಿಸಿದರೆ ಧಾರವಾಡದಲ್ಲಿ ನಡೆಸುವುದರಿಂದ ಸಿಬ್ಬಂದಿ ಮತ್ತು ಸಂಪನ್ಮೂಲ ಕೊರತೆ ತಪ್ಪಿಸಲು ಧಾರವಾಡದಲ್ಲಿ ಕರ್ನಾಟಕ ಲೋಕಸೇವಾ ಆಯೋಗದ ಶಾಖಾ ಕಚೇರಿ ತೆರೆಯುವಂತೆ ಶಿಫಾರಸು ಮಾಡಲಾಗಿದೆ ಎಂದರು. ಮುಖ್ಯವಾಗಿ ಪಡಿತರ ಚೀಟಿ ಡೇಟಾಬೇಸ್‌ ಅನ್ನು ಜನನ ಮತ್ತು ಮರಣ ನೋಂದಣಿ ತಂತ್ರಾಂಶದೊಂದಿಗೆ (ಇ-ಜನ್ಮ) ಸಂಯೋಜಿಸಬೇಕು. ಇದರಿಂದ ಮೃತ ಸದಸ್ಯನನ್ನು ರದ್ದುಗೊಳಿಸಲು ನೆರವಾಗಲಿದೆ. ಹಾಗೆಯೇ ಪಡಿತರ ಚೀಟಿ ವಿತರಿಸಲು ಜಿಎಸ್‌ಟಿ, ಇಪಿಎಫ್‌, ಆದಾಯ ತೆರಿಗೆ ಡೇಟಾಬೇಸ್‌ಗಳನ್ನು ಕುಟುಂಬದ ದತ್ತಾಂಶದೊಂದಿಗೆ ಪರಿಶೀಲಿಸಬೇಕು. ಆಗ ಸುಲಭವಾಗಿ ಅನರ್ಹರಿಗೆ ಬಿಪಿಎಲ್‌ ಕಾರ್ಡ್‌ ನೀಡುವುದನ್ನು ತಪ್ಪಿಸಬಹುದು. ಹಾಗೆಯೇ ಬಿಪಿಎಲ್‌ ಕಾರ್ಡ್‌ ರದ್ದುಪಡಿಸುವ ಮುನ್ನ ಮೇಲ್ಮನವಿಗೆ ಅವಕಾಶ ನೀಡಬೇಕು ಎಂದು ಶಿಫಾರಸು ಮಾಡಲಾಗಿದೆ ಎಂದು ಹೇಳಿದರು.

  ಪತ್ರಿಕಾಗೋಷ್ಠಿಯಲ್ಲಿ ನಿವೃತ್ತ ಐಎಎಸ್‌ ಅಧಿಕಾರಿ ಪ್ರಸನ್ನಕುಮಾರ್‌ ಸೇರಿದಂತೆ ಇತರರು ಉಪಸ್ಥಿತರಿದ್ದರು.

Read more Articles on