ಬುಡಕಟ್ಟು ಪುನರ್ವಸತಿಗೆ ಕಂದಾಯ ಭೂಮಿ : 43 ಎಕ್ರೆಯಲ್ಲಿ 20 ಎಕ್ರೆ ಪುನರ್‌ವಸತಿಗಾಗಿ ಹಸ್ತಾಂತರ - ಪರಿಸರ ತಜ್ಞರ ವಿರೋಧ

| N/A | Published : Feb 16 2025, 10:18 AM IST

Land Surveying

ಸಾರಾಂಶ

ಕೊಡಗು ಜಿಲ್ಲೆಯಲ್ಲಿ ಅರಣ್ಯ ಪ್ರದೇಶದಲ್ಲಿದ್ದ ಬುಡಕಟ್ಟು ಸಮುದಾಯದವರಿಗೆ ಪುನರ್ವಸತಿ ಕಲ್ಪಿಸಲು ನಿಗದಿ ಮಾಡಲಾಗಿರುವ ಭೂಮಿಯಿಂದ ವನ್ಯಜೀವಿಗಳಿಗೆ ಸಮಸ್ಯೆಯಾಗುವ ಜತೆಗೆ ಮಾನವ-ಆನೆ ಸಂಘರ್ಷಕ್ಕೆ ಕಾರಣವಾಗುವ ಆತಂಕ ಎದುರಾಗಿದೆ.

 ಬೆಂಗಳೂರು : ಕೊಡಗು ಜಿಲ್ಲೆಯಲ್ಲಿ ಅರಣ್ಯ ಪ್ರದೇಶದಲ್ಲಿದ್ದ ಬುಡಕಟ್ಟು ಸಮುದಾಯದವರಿಗೆ ಪುನರ್ವಸತಿ ಕಲ್ಪಿಸಲು ನಿಗದಿ ಮಾಡಲಾಗಿರುವ ಭೂಮಿಯಿಂದ ವನ್ಯಜೀವಿಗಳಿಗೆ ಸಮಸ್ಯೆಯಾಗುವ ಜತೆಗೆ ಮಾನವ-ಆನೆ ಸಂಘರ್ಷಕ್ಕೆ ಕಾರಣವಾಗುವ ಆತಂಕ ಎದುರಾಗಿದೆ.

ಕೊಡಗು ಜಿಲ್ಲೆಯಲ್ಲಿನ ದಿಡ್ಡಳ್ಳಿ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ವಾಸವಿದ್ದ 100ಕ್ಕೂ ಹೆಚ್ಚಿನ ಬುಡಕಟ್ಟು ಸಮುದಾಯದವರನ್ನು ತೆರವು ಮಾಡಿ ಅವರಿಗೆ ಪುನರ್ವಸತಿ ಕಲ್ಪಿಸಲು ಕಳೆದ 2017ರಿಂದಲೂ ಕ್ರಮ ಕೈಗೊಳ್ಳಲಾಗುತ್ತಿದೆ. ಆ ಬುಡಕಟ್ಟು ಸಮುದಾಯದವರಿಗಾಗಿ ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ತೇರಾಳು ಗ್ರಾಮದಲ್ಲಿನ ಕಂದಾಯ ಭೂಮಿಯನ್ನು ನಿಗದಿ ಮಾಡಲಾಗಿದೆ.

ತೇರಾಳು ಗ್ರಾಮದಲ್ಲಿನ ಸರ್ವೇ ನಂ.147ರಲ್ಲಿನ 43 ಎಕರೆ ಭೂಮಿಯನ್ನು ಅದಕ್ಕಾಗಿ ಗುರುತಿಸಲಾಗಿದ್ದು, ಆ ಭೂಮಿಯಲ್ಲಿ ಈವರೆಗೆ 20 ಎಕರೆ ಭೂಮಿಯನ್ನು ಇಂಟಿಗ್ರೇಟೆಡ್‌ ಟ್ರೈಬಲ್‌ ಡೆವೆಲಪ್‌ಮೆಂಟ್‌ ಪ್ರೋಗ್ರಾಂಗೆ ಕಂದಾಯ ಇಲಾಖೆ ವರ್ಗಾಯಿಸಲಾಗಿದೆ. ಆದರೆ ಈ ಭೂಮಿಯಲ್ಲಿ ಪುನರ್ವಸತಿಗಾಗಿ ಮನೆ ನಿರ್ಮಿಸುವುದು ವನ್ಯಜೀವಿ ಹಾಗೂ ಅರಣ್ಯ ನಾಶಕ್ಕೆ ಎಡೆ ಮಾಡಿಕೊಡಲಿದೆ ಎಂದು ವನ್ಯಜೀವಿ ತಜ್ಞರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಹಲವು ವನ್ಯಜೀವಿಗಳ ವಾಸ ಸ್ಥಾನ:

ಪೊನ್ನಂಪೇಟೆಯ ತೇರಾಳು ಗ್ರಾಮವು ಬ್ರಹ್ಮಗಿರಿ ಮೀಸಲು ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿದೆ. ಈ ಅರಣ್ಯ ಪ್ರದೇಶದಲ್ಲಿ ಆನೆ, ಸಿಂಗಳೀಕ, ಹುಲಿ ಸೇರಿ ಮತ್ತಿತರ ನಶಿಸುವ ಹಂತದಲ್ಲಿರುವ ವನ್ಯಜೀವಿಗಳ ಆವಾಸ ಸ್ಥಾನವಾಗಿದೆ. ಅಲ್ಲದೆ, ಇದು ನಿತ್ಯ ಹರಿದ್ವರ್ಣ ಕಾಡಿನ ಪ್ರದೇಶವಾಗಿದ್ದು, ಹಲವು ಪ್ರಭೇದದ ಸಸ್ಯಗಳಿವೆ. ಈ ರೀತಿಯ ಅರಣ್ಯ ಸಂಪತ್ತನ್ನು ಹೊಂದಿರುವ ಪ್ರದೇಶದ ಸಮೀಪ ಬುಡಕಟ್ಟು ಸಮುದಾಯಕ್ಕೆ ಪುನರ್ವಸತಿ ಕಲ್ಪಿಸುವುದರಿಂದ ವನ್ಯಜೀವಿಗಳಿಗೆ ಸಮಸ್ಯೆಯಾಗುವ ಜತೆಗೆ ಬುಡಕಟ್ಟು ಸಮುದಾಯದವರಿಗೂ ಸಮಸ್ಯೆ ಉಂಟಾಗುವ ಸಾಧ್ಯತೆಗಳಿವೆ.

ಮಾನವ-ಆನೆ ಸಂಘರ್ಷಕ್ಕೆ ನಾಂದಿ?:

ರಾಜ್ಯವು ದೇಶದಲ್ಲಿಯೇ ಅತಿ ಹೆಚ್ಚಿನ ಆನೆಗಳನ್ನು ಹೊಂದಿದೆ. ಅದರಲ್ಲೂ ಕೊಡಗು, ಚಾಮರಾಜನಗರ, ಮೈಸೂರು ಭಾಗದಲ್ಲೇ ಅತಿ ಹೆಚ್ಚಿನ ಆನೆಗಳ ಸಂಚಾರವಿದೆ. ಅಲ್ಲದೆ, ಬ್ರಹ್ಮಗಿರಿ ಮೀಸಲು ಅರಣ್ಯ ಪ್ರದೇಶ ವ್ಯಾಪ್ತಿಯ ತೇರಾಳು ಗ್ರಾಮದಲ್ಲೂ ಆನೆಗಳ ಸಂಚಾರ ಹೆಚ್ಚಿದೆ. ಹೀಗಿರುವಾಗ ತೇರಾಳು ಗ್ರಾಮದಲ್ಲಿ ಬುಡಕಟ್ಟು ಸಮುದಾಯದವರಿಗೆ ಮನೆ ನಿರ್ಮಿಸಿದರೆ, ಮಾನವ-ಆನೆ ಸಂಘರ್ಷಕ್ಕೆ ಎಡೆ ಮಾಡಿಕೊಡುವಂತಾಗಲಿದೆ. ಅಲ್ಲದೆ, ಬುಡಕಟ್ಟು ಸಮುದಾಯದವರೂ ಸಮಸ್ಯೆಗೆ ಸಿಲುಕಲಿದ್ದಾರೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ಬದಲಿ ಜಾಗಕ್ಕೆ ಆಗ್ರಹ:

ಕಳೆದ ಆರೇಳು ವರ್ಷಗಳಿಂದ ಬುಡಕಟ್ಟು ಸಮುದಾಯದವರಿಗೆ ಪುನರ್ವಸತಿ ಕಲ್ಪಿಸಲು ಕಸರತ್ತು ನಡೆಸಲಾಗುತ್ತಿದೆ. ನಿಗದಿ ಮಾಡಲಾಗಿರುವ 43 ಎಕರೆ ಭೂಮಿಯಲ್ಲಿ ಈವರೆಗೆ 20 ಎಕರೆ ಭೂಮಿಯನ್ನಷ್ಟೇ ಹಸ್ತಾಂತರಿಸಲಾಗಿದೆ. ಅದೂ ಆನೆಗಳ ಸಂಚಾರ ಹೆಚ್ಚಿರುವ ಪ್ರದೇಶದಲ್ಲಿ. ಹೀಗಾಗಿ ಬುಡಕಟ್ಟು ಸಮುದಾಯದವರು ಪುನರ್ವಸತಿ ಪಡೆದರೂ ಸಮಸ್ಯೆಗೆ ಸಿಲುಕುವಂತಾಗದಿರಲು ವನ್ಯಜೀವಿಗಳ ಸಂಚಾರವಿರದ, ಮಾನವ-ಆನೆ ಸಂಘಟಕ್ಕೆ ಎಡೆ ಮಾಡಿಕೊಡದ ಭೂಮಿಯನ್ನು ಗುರುತಿಸುವಂತೆ ವನ್ಯಜೀವಿ ತಜ್ಞರು ಕಂದಾಯ ಮತ್ತು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳನ್ನು ಒತ್ತಾಯಿಸುತ್ತಿದ್ದಾರೆ.

ಬುಡಕಟ್ಟು ಸಮುದಾಯದವರಿಗೆ ಪುನರ್ವಸತಿ ಕಲ್ಪಿಸುವುದು ಬಹಳ ಮುಖ್ಯವಾದ ವಿಚಾರ. ಆದರೆ, ಅವರಿಗೆ ಪುನರ್ವಸತಿ ಕಲ್ಪಿಸುವ ಹೆಸರಿನಲ್ಲಿ ಮಾನವ-ವನ್ಯಜೀವಿ ಸಂಘರ್ಷಕ್ಕೆ ಎಡೆ ಮಾಡಿಕೊಡುವಂಥ ಪ್ರದೇಶ ಗುರುತಿಸಲಾಗಿದೆ. ಅಲ್ಲದೆ, ತೇರಾಳು ಗ್ರಾಮವು ಅರಣ್ಯ ಪ್ರದೇಶದ ಸಮೀದಲ್ಲೇ ಇದ್ದು, ಅದರಿಂದ ವನ್ಯಜೀವಿಗಳಿಗೂ ಸಮಸ್ಯೆಯಾಗಲಿದೆ. ಹೀಗಾಗಿ ಕಂದಾಯ ಇಲಾಖೆ ವನ್ಯಜೀವಿಗಳ ಸಂಚಾರವಿಲ್ಲದ, ಸಮಸ್ಯೆಯಾಗದ ಜಾಗ ಗುರುತಿಸಿ ಇಂಟಿಗ್ರೇಟೆಡ್‌ ಟ್ರೈಬಲ್‌ ಡೆವೆಲಪ್‌ಮೆಂಟ್‌ ಪ್ರೋಗ್ರಾಂಗೆ ಹಸ್ತಾಂತರಿಸಬೇಕು.

-ಸಂಜಯ್‌ ಗುಬ್ಬಿ, ವನ್ಯಜೀವಿ ತಜ್ಞ