ಸಾರಾಂಶ
ಮಾಗಡಿ ರಸ್ತೆ ಚನ್ನೇನಹಳ್ಳಿಯ ಜನಸೇವಾ ವಿದ್ಯಾಕೇಂದ್ರದ ಆವರಣದಲ್ಲಿ ಆಯೋಜಿಸಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ(ಆರ್‌ಎಸ್‌ಎಸ್) ನೀತಿ-ನಿರ್ಧಾರಗಳನ್ನು ನಿರೂಪಿಸುವ ಮೂರು ದಿನಗಳ ಮಹತ್ವದ ವಾರ್ಷಿಕ ಸಭೆ ‘ಅಖಿಲ ಭಾರತೀಯ ಪ್ರತಿನಿಧಿ ಸಭಾ’ಗೆ ಶುಕ್ರವಾರ ಚಾಲನೆ ದೊರಕಿತು.
ಬೆಂಗಳೂರು : ಮಾಗಡಿ ರಸ್ತೆ ಚನ್ನೇನಹಳ್ಳಿಯ ಜನಸೇವಾ ವಿದ್ಯಾಕೇಂದ್ರದ ಆವರಣದಲ್ಲಿ ಆಯೋಜಿಸಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ(ಆರ್‌ಎಸ್‌ಎಸ್) ನೀತಿ-ನಿರ್ಧಾರಗಳನ್ನು ನಿರೂಪಿಸುವ ಮೂರು ದಿನಗಳ ಮಹತ್ವದ ವಾರ್ಷಿಕ ಸಭೆ ‘ಅಖಿಲ ಭಾರತೀಯ ಪ್ರತಿನಿಧಿ ಸಭಾ’ಗೆ ಶುಕ್ರವಾರ ಚಾಲನೆ ದೊರಕಿತು.
ಆರ್‌ಎಸ್ಎಸ್ ಸರಸಂಘ ಸಂಚಾಲಕ ಡಾ.ಮೋಹನ್ ಭಾಗವತ್ ಮತ್ತು ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರು ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಅಖಿಲ ಭಾರತೀಯ ಪ್ರತಿನಿಧಿ ಸಭಾ ಸಭೆ ಉದ್ಘಾಟಿಸಿದರು.
ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್‌ಎಸ್‌ಎಸ್‌ನ ಸಹ ಸರಕಾರ್ಯವಾಹ ಸಿ.ಆರ್.ಮುಕುಂದ ಅವರು, ಪ್ರತಿ ವರ್ಷದಿಂದ ಈ ವರ್ಷವೂ ಆರ್‌ಎಸ್‌ಎಸ್ ಅಖಿಲ ಭಾರತೀಯ ಪ್ರತಿನಿಧಿ ಸಭಾ ಸಭೆ ನಡೆಯುತ್ತಿದೆ. ಈ ಸಭೆಯಲ್ಲಿ ದೇಶದ ವಿವಿಧ ಭಾಗಗಳ 1,482 ಪ್ರತಿನಿಧಿಗಳು ಭಾಗವಹಿಸಿದ್ದಾರೆ ಎಂದರು.
ಸಭೆಯಲ್ಲಿ ದೇಶಕ್ಕೆ ಮತ್ತು ಸಮಾಜಕ್ಕೆ ಕೊಡುಗೆ ನೀಡಿ ಇತ್ತೀಚೆಗೆ ಅಗಲಿದ ವಿವಿಧ ಕ್ಷೇತ್ರಗಳ ಗಣ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಲಾಗಿದೆ. ಮೂರು ದಿನಗಳ ಕಾಲ ನಡೆಯುವ ಈ ಸಭೆಯಲ್ಲಿ ಹೆಚ್ಚು ಸಮಯವನ್ನು ಸಂಘದ ಕಾರ್ಯಗಳ ವಿಮರ್ಶೆ ಹಾಗೂ ಯೋಜನೆಗಳ ವಿಸ್ತರಣೆಗಳ ಚರ್ಚೆಗೆ ಮೀಸಲಿಡಲಾಗುತ್ತದೆ. ಈ ವರ್ಷ ಸಂಘ 100 ವರ್ಷ ಪೂರೈಸಲಿದೆ. ಹೀಗಾಗಿ ಶತಮಾನೋತ್ಸವ ಸಂಭ್ರಮಿಸುವುದಕ್ಕಿಂತ ಸಂಘದ ಕಾರ್ಯಗಳನ್ನು ವಿಸ್ತರಿಸಲಿದ್ದೇವೆ. ಈ ನಿಟ್ಟಿನಲ್ಲಿ ಸಂಘದ ಕಾರ್ಯಗಳ ಸಾಮಾಜಿಕ ಪರಿಣಾಮ ಹಾಗೂ ಸಮಾಜದಲ್ಲಿ ತರಲಾಗುತ್ತಿರುವ ಬದಲಾವಣೆಗಳ ಬಗ್ಗೆ ಚರ್ಚಿಸಲಾಗುತ್ತಿದೆ ಎಂದರು.
ಸಂಘದ ಶಾಖೆಗಳು ಹೆಚ್ಚಳ: ಮುಂದುವರೆದು ಆರ್‌ಎಸ್‌ಎಸ್‌ನ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದ ಅವರು, ದೇಶದ 51,570 ಸ್ಥಳಗಳಲ್ಲಿ ಸಂಘದ 83,129 ಶಾಖೆಗಳು ನಡೆಯುತ್ತಿವೆ. ಕಳೆದ ವರ್ಷಕ್ಕಿಂತ 9,483 ಶಾಖೆಗಳು ಹೆಚ್ಚಾಗಿವೆ. ವಾರಕೊಮ್ಮೆ ನಡೆಯುವ ಮಿಲನ(ವಾರ) ಕಾರ್ಯಕ್ರಮಗಳು ಕಳೆದ ಬಾರಿಗಿಂತ 4,430 ಹೆಚ್ಚಾಗಿದೆ. ಪ್ರಸ್ತುತ ದೇಶವ್ಯಾಪಿ 32,147 ಮಿಲನ ಕಾರ್ಯಕ್ರಮಗಳು ನಡೆಯುತ್ತಿವೆ. ಇನ್ನು ತಿಂಗಳಿಗೊಮ್ಮೆ 12,097 ಮಂಡಳಿಗಳು (ಮಾಸಿಕ) ನಡೆಯುತ್ತಿವೆ. ಈ ಮೂಲಕ ಶಾಖೆ, ಮಿಲನ ಮತ್ತು ಮಂಡಳಿಗಳು ಸೇರಿ 1.27 ಲಕ್ಷ ಕಾರ್ಯಕ್ರಮಗಳು ನಡೆಯುತ್ತಿವೆ ಎಂದು ಮಾಹಿತಿ ನೀಡಿದರು.
ಸಂಘಕ್ಕೆ ಸೇರುವವರಲ್ಲಿ ಯುವಕರೇ ಹೆಚ್ಚು: ಇನ್ನು ಸಂಘಕ್ಕೆ ಸೇರುವ ಯುವಕರ ಸಂಖ್ಯೆ ಹೆಚ್ಚಳವಾಗಿದೆ. ಪ್ರತಿ ವರ್ಷ ಲಕ್ಷಕ್ಕೂ ಅಧಿಕ ಯುವಕರು ವಿಶೇಷವಾಗಿ 14-25 ವರ್ಷದೊಳಗಿನವರು ಸ್ವಯಂ ಸೇವಕರಾಗಿ ಆರ್‌ಎಸ್‌ಎಸ್ ಸೇರುತ್ತಿದ್ದಾರೆ. ಈ ವರ್ಷ ದೇಶಾದ್ಯಂತ ಒಟ್ಟು 4,415 ಪ್ರಾರಂಭಿಕ ಶಿಕ್ಷಾ ವರ್ಗಗಳು(ಆರಂಭಿಕ ತರಬೇತಿ ಶಿಬಿರ) ನಡೆದಿವೆ. ಇದರಲ್ಲಿ 2.22 ಲಕ್ಷ ಮಂದಿ ಈ ವರ್ಗಗಳಿಗೆ ಹಾಜರಾಗಿದ್ದರು. ಈ ಪೈಕಿ 1.63 ಲಕ್ಷ ಮಂದಿ 14ರಿಂದ 25 ವರ್ಷ ವಯಸ್ಸಿನವರಾದರೆ, 20 ಸಾವಿರಕ್ಕೂ ಅಧಿಕ ಮಂದಿ 40 ವರ್ಷ ಮೇಲ್ಪಟ್ಟವರಾಗಿದ್ದಾರೆ ಎಂದು ಮಾಹಿತಿ ನೀಡಿದರು.
ಪ್ರತಿ ವರ್ಷ ಹೊಸ ವಿದ್ಯಾರ್ಥಿಗಳು ಹಾಗೂ ಯುವಕರು ಆರ್‌ಎಸ್‌ಎಸ್ ಸೇರ್ಪಡೆಯಾಗುತ್ತಿದ್ದಾರೆ. ''ಜಾಯಿನ್ ಆರ್‌ಎಸ್‌ಎಸ್'' ಮುಖಾಂತರ ಸಂಘಕ್ಕೆ ಸೇರಲು ಅವಕಾಶ ನೀಡಲಾಗಿದೆ. ಈ ಮೂಲಕ 2012ರಿಂದ ಈವರೆಗೆ 12.72 ಲಕ್ಷಕ್ಕೂ ಅಧಿಕ ಮಂದಿ ಆರ್‌ಎಸ್‌ಎಸ್ ಸೇರಲು ಆಸಕ್ತಿ ತೋರಿದ್ದಾರೆ. ಇದರಲ್ಲಿ 46 ಸಾವಿರಕ್ಕೂ ಅಧಿಕ ಮಹಿಳೆಯರು ಇದ್ದಾರೆ ಎಂದು ಹೇಳಿದರು.
ಕುಂಭಮೇಳದಲ್ಲಿ ಸೇವೆ: ದೇಶದ ಸಾಂಸ್ಕೃತಿಕ ಹೆಮ್ಮೆ ಹೆಚ್ಚಿಸಿದ ಪ್ರಯಾಗರಾಜ್‌ನಲ್ಲಿ ನಡೆದ ಮಹಾಕುಂಭಮೇಳವು ಭಾರತದ ಆಧ್ಯಾತ್ಮೀಕ ಮತ್ತು ಸಾಂಸ್ಕೃತಿಕ ಪರಂಪರೆಯ ಅಧ್ಬುತ ನೋಟ ನೀಡಿದೆ. ಈ ಮಹಾಕುಂಭಮೇಳದ ವೇಳೆ ಸಂಘ ಹಾಗೂ ಸಂಘಪ್ರೇರಿತ ಸಂಸ್ಥೆಗಳು ವಿವಿಧ ರೀತಿಯ ಸೇವಾ, ಧಾರ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ವೈಚಾರಿಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದವು ಎಂದು ಮುಕುಂದ ಮಾಹಿತಿ ನೀಡಿದರು.
ಭಾಷೆ, ಸೀಮೆ, ಪ್ರದೇಶ, ಉತ್ತರ-ದಕ್ಷಿಣ ವಿಭಜನೆ ಇತ್ಯಾದಿ ಹೆಸರಿನಲ್ಲಿ ಒಂದಲ್ಲಾ ಒಂದು ವಿಭಜಕ ಅಜೆಂಡಾಗಳನ್ನು ಬಳಸಿಕೊಂಡು ರಾಷ್ಟ್ರೀಯ ಐಕ್ಯತೆ ಮತ್ತು ಸಮಗ್ರತೆಗೆ ಹಲವು ಶಕ್ತಿಗಳು ಸವಾಲಾಗಿ ನಿಂತಿವೆ. ಆದರೂ ನಮ್ಮ ಸ್ವಯಂ ಸೇವಕರು ಮತ್ತು ನಮ್ಮ ವಿಚಾರದ ಪರವಾಗಿರುವವರು ವಿಶೇಷವಾಗಿ ದಕ್ಷಿಣ ರಾಜ್ಯಗಳಲ್ಲಿ ಇಂಥ ಸಮಸ್ಯೆಗಳನ್ನು ಬಗೆಹರಿಸಲು ಶ್ರಮಿಸುತ್ತಿದ್ದಾರೆ ಎಂದರು. ಸಂಘದ ಅಖಿಲ ಭಾರತ ಪ್ರಚಾರ ಪ್ರಮುಖ ಸುನೀಲ್ ಅಂಬೇಕರ್ ಉಪಸ್ಥಿತರಿದ್ದರು.
;Resize=(690,390))
)
)

;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))