ಸಾರಾಂಶ
ಗೌರವಧನ ಹೆಚ್ಚಳಕ್ಕಾಗಿ ಪ್ರತಿಭಟನೆ ಮಾಡುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ಮಾಸಿಕ 1500 ರು. ಗೌರವಧನ ಹೆಚ್ಚಿಸಲು ತೀರ್ಮಾನ
ವಿಧಾನಸಭೆ: ಗೌರವಧನ ಹೆಚ್ಚಳಕ್ಕಾಗಿ ಪ್ರತಿಭಟನೆ ಮಾಡುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ಮಾಸಿಕ 1500 ರು. ಗೌರವಧನ ಹೆಚ್ಚಿಸಲು ತೀರ್ಮಾನಿಸಿದ್ದೇವೆ. ಇದನ್ನು ಸಾಧ್ಯವಾದಷ್ಟೂ ಶೀಘ್ರ ಅಥವಾ ಮುಂದಿನ ತಿಂಗಳಿಂದಲೇ ಜಾರಿಗೊಳಿಸಲು ಪ್ರಯತ್ನಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ಬಿಜೆಪಿ ಸದಸ್ಯ ಆರಗ ಜ್ಞಾನೇಂದ್ರ ಅವರು ವಿಧಾನಸಭೆಯಲ್ಲಿ ಗುರುವಾರ ಆಶಾ ಕಾರ್ಯಕರ್ತೆಯರು ಪ್ರತಿಭಟನೆ ನಡೆಸುತ್ತಿರುವ ಬಗ್ಗೆ ಸದನದ ಗಮನ ಸೆಳೆದರು. ಇದಕ್ಕೆ ಉತ್ತರ ನೀಡಿದ ಸಚಿವರು, ಕಳೆದ ಫೆಬ್ರವರಿಯಲ್ಲಿ ಆಶಾ ಕಾರ್ಯಕರ್ತೆಯರು ಧರಣಿ ನಡೆಸಿದ ವೇಳೆ ಅವರ ಕನಿಷ್ಠ ಗೌರವಧನವನ್ನು 10 ಸಾವಿರ ರು. ತಲುಪಿಸುವ ಆಶ್ವಾಸನೆಯನ್ನು ನೀಡಿದ್ದೆವು ಎಂದು ತಿಳಿಸಿದರು.
ಅದರಂತೆ ಈಗಾಗಲೇ ರಾಜ್ಯ ಸರ್ಕಾರದಿಂದ ನೀಡುತ್ತಿರುವ 5 ಸಾವಿರ ರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ನೀಡುವ 3 ಸಾವಿರ ರು. ಸೇರಿ ಒಟ್ಟು 8 ಸಾವಿರ ರು. ನೀಡಲಾಗುತ್ತಿದೆ. ಗ್ರಾಮೀಣ ಭಾಗದವರಿಗೆ 1 ಸಾವಿರ ಕಡಿಮೆ ಇದ್ದಿದ್ದನ್ನು ಸರಿದೂಗಿಸಲು ರಾಜ್ಯ ಸರ್ಕಾರವೇ ಅದನ್ನು ತಾವೇ ನೀಡುವುದಾಗಿ ಒಪ್ಪಿಕೊಂಡು ಆಗಿದೆ. ಇದರ ಜೊತೆಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಒಟ್ಟಾಗಿ ಸೇರಿ 1500 ರು. ಗೌರವಧನ ಹೆಚ್ಚುವರಿಯಾಗಿ ನೀಡಲು ತೀರ್ಮಾನಿಸಲಾಗಿದೆ.
ಕೇಂದ್ರ ಇದನ್ನು ಅನುಷ್ಠಾನ ಮಾಡುವ ಮೊದಲೇ ರಾಜ್ಯದಿಂದಲೇ ಅನುಷ್ಠಾನ ಮಾಡಲೂ ನಿರ್ಧರಿಸಿದ್ದೇವೆ. ಇದನ್ನು ಮುಂದಿನ ತಿಂಗಳಿಂದಲೇ ಜಾರಿಗೆ ಪ್ರಯತ್ನಿಸುತ್ತೇವೆ ಎಂದರು.
ಇದರಿಂದ ಅವರ ಗೌರವಧನ ಕನಿಷ್ಠ 9500 ರು. ಆಗುತ್ತದೆ. ಇನ್ನು ಮಿನಿಮಮ್ ಕೆಲಸ ಮಾಡಿದವರಿಗೂ 500 ರು. ಅದಕ್ಕಿಂತ ಹೆಚ್ಚು ಇನ್ಸೆಂಟಿವ್ ಬರುತ್ತದೆ. ಇದು ಒಟ್ಟು ಸೌರವಧನವನ್ನು ಅನೇಕರಿಗೆ ಗರಿಷ್ಠ 13 ಸಾವಿರ ರು.ವರೆಗೆ ಸಿಗುವಂತೆ ಮಾಡುತ್ತದೆ. ಈ ಎಲ್ಲವನ್ನೂ ಆಶಾ ಕಾರ್ಯಕರ್ತೆಯರಿಗೆ ತಿಳಿಸಿದ್ದೇವೆ. ಅವರು ಅವರು ನಾಳೆ ವರೆಗೂ ಪ್ರತಿಭಟನೆ ಮುಂದುವರೆಸುವ ಸಾಧ್ಯತೆ ಇದೆ. ನೋಡೋಣ ನಾಳೆ ಅಂತ್ಯಗೊಳಿಸಬಹುದು ಎಂದರು.