ಸತೀಶ್‌-ಮಹದೇವಪ್ಪ ಭೇಟಿ: ದಲಿತ ಸಚಿವರ ಭೇಟಿ ಹಿಂದೆ ರಾಜಕೀಯ ಕುತೂಹಲ ಸೃಷ್ಟಿ - ಕೈ ಅಧ್ಯಕ್ಷರ ಲೆಕ್ಕಾಚಾರ

| N/A | Published : Feb 14 2025, 12:06 PM IST

Sathish Jarkiholi

ಸಾರಾಂಶ

ದೆಹಲಿಯಲ್ಲಿ ಹೈಕಮಾಂಡ್‌ ನಾಯಕರನ್ನು ಭೇಟಿ ಮಾಡಿ ಮರಳಿರುವ ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಅವರನ್ನು ಸಮಾಜ ಕಲ್ಯಾಣ ಸಚಿವ ಎಚ್‌.ಡಿ.ಮಹದೇವಪ್ಪ ಗುರುವಾರ ನಗರದಲ್ಲಿ ಭೇಟಿ ಮಾಡಿ ಕೆಲ ಕಾಲ ಮಾತುಕತೆ ನಡೆಸಿದರು.

 ಬೆಂಗಳೂರು : ದೆಹಲಿಯಲ್ಲಿ ಹೈಕಮಾಂಡ್‌ ನಾಯಕರನ್ನು ಭೇಟಿ ಮಾಡಿ ಮರಳಿರುವ ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಅವರನ್ನು ಸಮಾಜ ಕಲ್ಯಾಣ ಸಚಿವ ಎಚ್‌.ಡಿ.ಮಹದೇವಪ್ಪ ಗುರುವಾರ ನಗರದಲ್ಲಿ ಭೇಟಿ ಮಾಡಿ ಕೆಲ ಕಾಲ ಮಾತುಕತೆ ನಡೆಸಿದರು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಇನ್ನು ಮೂರು ದಿನಗಳಲ್ಲಿ ಇನ್ನೂ ಎರಡು ಮೂರು ರಾಜ್ಯಗಳ ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷರ ಬದಲಾವಣೆ ಮಾಡುವುದಾಗಿ ನೀಡಿರುವ ಹೇಳಿಕೆ ರಾಜ್ಯದಲ್ಲೂ ಸಂಚಲನ ಮೂಡಿಸಿರುವ ನಡುವೆಯೇ, ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವ ದಲಿತ ಸಚಿವರ ಭೇಟಿ ಚರ್ಚೆಗೆ ಗ್ರಾಸವಾಗಿದೆ.

ಜಾರಕಿಹೊಳಿ ಅವರ ಸರ್ಕಾರಿ ನಿವಾಸಕ್ಕೆ ಆಗಮಿಸಿದ ಮಹದೇವಪ್ಪ ಅವರು ಕೆಲ ಹೊತ್ತು ಮಾತುಕತೆ ನಡೆಸಿ ತೆರಳಿದರು. ಈ ವೇಳೆ, ದೆಹಲಿಯ ಹೈಕಮಾಂಡ್‌ ನಾಯಕರ ಭೇಟಿ ವೇಳೆ ನಡೆದ ಚರ್ಚೆ, ಮಾತುಕತೆಗಳ ಬಗ್ಗೆ ಉಭಯ ನಾಯಕರು ಚರ್ಚಿಸಿದರು ಎಂದು ತಿಳಿದು ಬಂದಿದೆ.

ಇತ್ತೀಚೆಗಷ್ಟೆ ದೆಹಲಿಗೆ ತೆರಳಿದ್ದ ಸತೀಶ್‌ ಜಾರಕಿಹೊಳಿ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ವಿವಿಧ ಹೈಕಮಾಂಡ್‌ ನಾಯಕರನ್ನು ಭೇಟಿ ಮಾಡಿ ರಾಜ್ಯ ರಾಜಕೀಯ ಹಾಗೂ ಸರ್ಕಾರದ ವಿಚಾರಗಳನ್ನು ಚರ್ಚಿಸಿದ್ದಾಗಿ ಹೇಳಿದ್ದರು.