ಬೆಂಗಳೂರಿನ ಪಬ್‌ವೊಂದರ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಆಗಮಿಸಿದ್ದ ಶಾರೂಖ್‌ ಖಾನ್‌ ಪುತ್ರ ಆರ್ಯನ್‌ ಖಾನ್‌ ನೆರೆದಿದ್ದ ಜನರ ಮುಂದೆ ಅಸಭ್ಯವಾಗಿ ಸನ್ನೆ ಮಾಡಿ ಉದ್ಧಟತನದ ವರ್ತನೆ ತೋರಿದ್ದಾರೆ. 

 ಬೆಂಗಳೂರು : ಬೆಂಗಳೂರಿನ ಪಬ್‌ವೊಂದರ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಆಗಮಿಸಿದ್ದ ಶಾರೂಖ್‌ ಖಾನ್‌ ಪುತ್ರ ಆರ್ಯನ್‌ ಖಾನ್‌ ನೆರೆದಿದ್ದ ಜನರ ಮುಂದೆ ಅಸಭ್ಯವಾಗಿ ಸನ್ನೆ ಮಾಡಿ ಉದ್ಧಟತನದ ವರ್ತನೆ ತೋರಿದ್ದಾರೆ. ಬ್ಯಾಡ್ಸ್‌ ಆಫ್‌ ಬಾಲಿವುಡ್‌ ಸರಣಿಯ ನಿರ್ದೇಶಕನೂ ಆಗಿರುವ ಆರ್ಯನ್‌ನ ಈ ವರ್ತನೆಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.

ಪಬ್‌ನಲ್ಲಿ ಮಧ್ಯರಾತ್ರಿ ಆಯೋಜಿತವಾಗಿದ್ದ ಕಾರ್ಯಕ್ರಮ

ನ.28ರಂದು ಅಶೋಕನಗರ ಸಮೀಪದ ಪಬ್‌ನಲ್ಲಿ ಮಧ್ಯರಾತ್ರಿ ಆಯೋಜಿತವಾಗಿದ್ದ ‘ಡಿ''''ಯಾವೋಲ್‌ ಆಫ್ಟರ್‌ ಡಾರ್ಕ್‌’ ಕಾರ್ಯಕ್ರಮದಲ್ಲಿ ಭಾಗಿಯಾದ ಆರ್ಯನ್‌ಗೆ ಶಾರುಖ್‌ ಅಭಿಮಾನಿಗಳು ಭರ್ಜರಿ ಸ್ವಾಗತ ಕೋರಿದ್ದರು. ಜಮೀರ್‌ ಅಹ್ಮದ್‌ ಖಾನ್‌ ಪುತ್ರ ಸಿನಿಮಾ ನಟ ಝೈದ್‌ ಖಾನ್, ಕಾಂಗ್ರೆಸ್‌ ಯುವ ಮುಖಂಡ ನಲಪಾಡ್‌ ಈ ಸಂದರ್ಭ ಆರ್ಯನ್‌ ಜೊತೆಗಿದ್ದರು. ಈ ವೇಳೆ ಪಬ್‌ನ ಬಾಲ್ಕನಿಯಲ್ಲಿ ನಿಂತಿದ್ದ ಆರ್ಯನ್‌ ಜನರತ್ತ ಮಧ್ಯದ ಬೆರಳು ತೋರಿಸಿದ್ದಾರೆ. ಈ ವೀಡಿಯೋ ಸೋಷಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು ಜನ ಆರ್ಯನ್‌ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಜಮೀರ್‌ ಪುತ್ರ ಝೈದ್‌ ಖಾನ್‌ ಈ ಬಗ್ಗೆ ಪ್ರತಿಕ್ರಿಯೆ

ಇನ್ನೊಂದೆಡೆ ಜಮೀರ್‌ ಪುತ್ರ ಝೈದ್‌ ಖಾನ್‌ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ‘ಆರ್ಯನ್‌ ಖಾನ್‌ ಜನರನ್ನು ನೋಡಿ ಆ ಥರ ಸನ್ನೆ ಮಾಡಿರಲಿಲ್ಲ. ಜನರ ಮಧ್ಯೆ ಅವರ ಫ್ರೆಂಡ್‌ ನಿಂತಿದ್ದರು. ಫ್ರೆಂಡ್‌ಶಿಪ್‌ನಲ್ಲಿ ಗೆಳೆಯನತ್ತ ಆ ರೀತಿ ಕೈ ತೋರಿಸಿದ್ದಾರೆ. ಆರ್ಯನ್‌ ಬಹಳ ಕಾಲದಿಂದ ನನ್ನ ಸ್ನೇಹಿತ. ಅವನು ಫೋನ್‌ ಮಾಡಿ ಕರೆದ ಕಾರಣ ನಾನು ಅವನ ಜೊತೆ ಹೋಗಿದ್ದೆ’ ಎಂದಿದ್ದಾರೆ.