ಸಾರಾಂಶ
ದ್ವಿಭಾಷಾ ಸೂತ್ರ ನನ್ನ ಅಭಿಪ್ರಾಯವಾಗಿದ್ದು, ಅದನ್ನು ಸರ್ಕಾರದ ಅಭಿಪ್ರಾಯವಾಗಿಸಲು ಪ್ರಯತ್ನಿಸುತ್ತೇನೆ. ಆ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚೆಯಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಬೆಂಗಳೂರು : ದ್ವಿಭಾಷಾ ಸೂತ್ರ ನನ್ನ ಅಭಿಪ್ರಾಯವಾಗಿದ್ದು, ಅದನ್ನು ಸರ್ಕಾರದ ಅಭಿಪ್ರಾಯವಾಗಿಸಲು ಪ್ರಯತ್ನಿಸುತ್ತೇನೆ. ಆ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚೆಯಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಶನಿವಾರ ನಗರದಲ್ಲಿ ಜನಪ್ರಕಾಶನದಿಂದ ಪ್ರಕಟವಾಗಿರುವ ಸಂಸ್ಕೃತಿ ಚಿಂತಕ ಪ್ರೊ. ಬರಗೂರು ರಾಮಚಂದ್ರಪ್ಪ ಅವರು ಸಂಪಾದಿಸಿರುವ ‘ಕುವೆಂಪು ವಿಚಾರ ಕ್ರಾಂತಿ’ ಕೃತಿಯನ್ನು ಜನಾರ್ಪಣೆಗೊಳಿಸಿ ಅವರು ಮಾತನಾಡಿದರು. ರಾಜ್ಯದ ಎಲ್ಲಾ ಜನರಿಗೆ ಸಂವಿಧಾನವನ್ನು ಅರ್ಥೈಸಲು ಒಂದು ಸಂಸ್ಥೆಯನ್ನೇ ಸ್ಥಾಪಿಸಬೇಕು ಎನ್ನುವ ಸಲಹೆಯನ್ನು ಈ ವೇದಿಕೆಯಲ್ಲಿ ನೀಡಲಾಗಿದೆ. ಅದನ್ನು ಪರಿಗಣಿಸುತ್ತೇವೆ. ಆದರೆ, ಜನರು ಸಂವಿಧಾನವನ್ನು ಓದುವುದನ್ನು ಮತ್ತು ಅರ್ಥೈಸಿಕೊಳ್ಳುವ ಪ್ರಯತ್ನವನ್ನು ಮಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಬಸವಣ್ಣ, ಕುವೆಂಪು ಸೇರಿ ಅನೇಕ ಮಹಾನೀಯರು ಮೌಢ್ಯಗಳನ್ನು ಬಿಟ್ಟು ಹೊರಬನ್ನಿ. ವೈಚಾರಿಕತೆ ಬೆಳೆಸಿಕೊಳ್ಳಬೇಕು ಎಂದು ತಮ್ಮ ಕೃತಿಗಳು, ವಚನಗಳು, ಸಂದೇಶಗಳ ಮೂಲಕ ತಿಳಿಸಿದ್ದಾರೆ. ದಾರ್ಶನಿಕರ ಸಂದೇಶಗಳು ನಮ್ಮ ಸಂವಿಧಾನದಲ್ಲಿ ಅಡಕವಾಗಿವೆ. ಆದರೆ, ಜನರು ಅವುಗಳಿಂದ ಹೊರ ಬರುತ್ತಿಲ್ಲ. ಈ ಕುರಿತು ಕಮ್ಯುನಿಸ್ಟರಿಗೆ, ಸಾಹಿತಿಗಳಿಗೆ, ಸಾಮಾನ್ಯ ಜನರಿಗೆ ನಿರ್ಬಂಧ ಇರುವುದಿಲ್ಲ. ಆದರೆ, ರಾಜಕಾರಣಗಳಿಗೆ ನಿರ್ಬಂಧ ಇರುತ್ತವೆ ಎಂದು ಹೇಳಿದರು.
ಸಾಮಾನ್ಯವಾಗಿ ನಾನು ದೇಗುಲಕ್ಕೆ ಹೋಗುವುದಿಲ್ಲ. ಹೋದಾಗ ಕುಂಕುಮ ಹಚ್ಚಿದರೆ ಅದಕ್ಕೆ ದೊಡ್ಡ ಕತೆ ಕಟ್ಟುತ್ತಾರೆ. ಆದರೆ, ರಾಜಕಾರಣಿ ದೇಗುಲಕ್ಕೆ ಹೋಗದಿದ್ದರೆ ಓಟ್ ಸಿಗುವುದಿಲ್ಲ. ದೇಗುಲಕ್ಕೆ ಹೋಗುವುದಿಲ್ಲ ಎಂದರೆ, ಅಹಂಕಾರ ಎಷ್ಟಿದೆ ನೋಡು, ಇವರಿಗೆ ಓಟ್ ಹಾಕುವುದು ಬೇಡ ಎನ್ನುತ್ತಾರೆ ಎಂದರು.