ಸಾರಾಂಶ
ಧರ್ಮಸ್ಥಳ ಕುರಿತು ನಡೆಯುತ್ತಿರುವ ಅಪಪ್ರಚಾರ ಖಂಡಿಸಿ ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ ನೇತೃತ್ವದಲ್ಲಿ ಶನಿವಾರ ‘ಧರ್ಮಸ್ಥಳ ಚಲೋ’ ಅಭಿಯಾನ ನಡೆಯಲಿದೆ
ಬೆಂಗಳೂರು : ಧರ್ಮಸ್ಥಳ ಕುರಿತು ನಡೆಯುತ್ತಿರುವ ಅಪಪ್ರಚಾರ ಖಂಡಿಸಿ ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ ನೇತೃತ್ವದಲ್ಲಿ ಶನಿವಾರ ‘ಧರ್ಮಸ್ಥಳ ಚಲೋ’ ಅಭಿಯಾನ ನಡೆಯಲಿದೆ. ಬೆಳಗ್ಗೆ 6.30ಕ್ಕೆ ಬೆಂಗಳೂರಿನ ನೆಲಮಂಗಲ ಟೋಲ್ ಮೂಲಕ ಸುಮಾರು 400ಕ್ಕೂ ಹೆಚ್ಚು ವಾಹನಗಳಲ್ಲಿ ಯಲಹಂಕ ಕ್ಷೇತ್ರದ ಭಕ್ತರೊಂದಿಗೆ ವಿಶ್ವನಾಥ್ ಅವರು ಶ್ರೀಕ್ಷೇತ್ರಕ್ಕೆ ಪ್ರಯಾಣ ಆರಂಭಿಸಲಿದ್ದಾರೆ.
ಸಂಜೆ ಧರ್ಮಸ್ಥಳದ ಮಂಜುನಾಥನ ವಿಶೇಷ ದರ್ಶನ ಪಡೆದು ತಪ್ಪು ಮಾಡಿದವರಿಗೆ ಶಿಕ್ಷೆಯಾಗಬೇಕು ಎಂಬ ಬೇಡಿಕೆಯೊಂದಿಗೆ ಸಂಕಲ್ಪ ಮಾಡಲಿದ್ದಾರೆ. ಬಳಿಕ ಭಾನುವಾರ ಬೆಳಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಪ್ರತಿಪಕ್ಷದ ನಾಯಕ ಆರ್.ಅಶೋಕ್ ಸೇರಿ ಪಕ್ಷದ ಶಾಸಕರೊಂದಿಗೆ ಮತ್ತೊಮ್ಮೆ ಮಂಜುನಾಥನ ವಿಶೇಷ ದರ್ಶನ ಪಡೆದು ವಾಪಸಾಗಲಿದ್ದಾರೆ.
ಶುಕ್ರವಾರ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ವಿಶ್ವನಾಥ್, ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಖಂಡಿಸಿ ಧರ್ಮಸ್ಥಳಕ್ಕೆ ಹೋಗುತ್ತಿದ್ದೇವೆ. ಸಂಜೆ ಮಂಜುನಾಥ ಸ್ವಾಮಿ ದರ್ಶನ ಪಡೆದು ಸಂಕಲ್ಪ ಮಾಡುತ್ತೇವೆ. ತಪ್ಪು ಮಾಡಿದವರಿಗೆ ಶಿಕ್ಷೆಯಾಗಬೇಕು ಎಂದು ಸಂಕಲ್ಪ ಮಾಡುತ್ತೇವೆ ಎಂದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಧರ್ಮಸ್ಥಳ ಜೊತೆ ಇರುತ್ತೇನೆ ಎಂದಿರುವುದು ಸಂತೋಷದ ಸಂಗತಿ. ಸರ್ಕಾರದ ಭಾಗವಾಗಿ ಎಸ್ಐಟಿ ತನಿಖೆಯಲ್ಲಿ ಏನು ಆಗಿದೆ ಎಂಬ ಮಾಹಿತಿ ಅವರಿಗೆ ಇರುತ್ತದೆ. ಉಪಮುಖ್ಯಮಂತ್ರಿಗಳಿಗೆ ಮಂಜುನಾಥಸ್ವಾಮಿ ಒಳ್ಳೆಯದು ಮಾಡಲಿ. ಬಿಜೆಪಿ ಮೊದಲಿನಿಂದಲೂ ಇಲ್ಲಿ ಅಪಪ್ರಚಾರದ ಹುನ್ನಾರ ನಡೆಯುತ್ತಿದೆ ಎಂಬುದನ್ನು ಹೇಳಿಕೊಂಡೇ ಬಂದಿತ್ತು. ಇದೀಗ ಉಪಮುಖ್ಯಮಂತ್ರಿಗಳೇ ಅಧಿಕೃತವಾಗಿ ಹೇಳಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಸರ್ಕಾರದ ವಿರುದ್ಧ ಆಕ್ರೋಶ:
ಎಸ್ಐಟಿ ತನಿಖೆಯೇ ಅಂತಿಮ. ನಮ್ಮ ಪೊಲೀಸರು ದಕ್ಷರಿದ್ದಾರೆ. ಶೋಧ ಆರಂಭಿಸಿದಾಗ ನಮಗೆ ಆತಂಕ ಉಂಟಾಗಿತ್ತು. ಗುರುವಾರದಿಂದ ಮತ್ತೆ ಧರ್ಮಸ್ಥಳಕ್ಕೆ ಹೆಚ್ಚು ಜನ ಹೋಗುತ್ತಿದ್ದಾರೆ. ಶಕ್ತಿ ಯೋಜನೆಯಡಿ ಧರ್ಮಸ್ಥಳಕ್ಕೆ ಹೋದ ಮಹಿಳೆಯರೆಲ್ಲರೂ ಈಗ ಸರ್ಕಾರದ ನಿರ್ಧಾರದ ವಿರುದ್ಧ ತಿರುಗಿ ಬಿದ್ದಿದ್ದಾರೆ. ಮಂಜುನಾಥ ಸ್ವಾಮಿಯೇ ಎಸ್‌ಐಟಿ ತನಿಖೆ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಒಳ್ಳೆಯ ಬುದ್ಧಿ ಕೊಟ್ಟಿರಬೇಕು ಎಂದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಅನಾಮಿಕ ಇಷ್ಟು ಕಾಲ ಇದನ್ನೆಲ್ಲ ಮುಚ್ಚಿಟ್ಟಿದ್ದಾನೆಂದರೆ ಅವನೂ ಕೂಡ ಆ ಅಪರಾಧದಲ್ಲಿ ಭಾಗಿಯಾಗಿದ್ದಾನೆಂದರ್ಥ. ಆತನನ್ನೂ ಖಂಡಿತಾ ನೇಣಿಗೆ ಏರಿಸಬೇಕು. ನಾನು ವಿಧಾನಸಭೆಯಲ್ಲಿ ಮಾತಾಡಿದ್ದಕ್ಕೆ ನನ್ನ ವಿರುದ್ಧ ಎಸ್ಐಟಿಗೆ ದೂರು ನೀಡಿದ್ದಾರಂತೆ. ಇಂಥ ಹತ್ತು ದೂರು ಕೊಟ್ಟರೂ ಎದುರಿಸುತ್ತೇನೆ. ಸೋಮವಾರ ನಾನು ವಿಧಾನಸಭೆಯಲ್ಲಿ ಹಕ್ಕುಚ್ಯುತಿ ಮಂಡಿಸುತ್ತೇನೆ ಎಂದು ತಿಳಿಸಿದರು.