ಬೆಂಗಳೂರು : ದ್ವಿತೀಯ ಪಿಯುಸಿ ಪರೀಕ್ಷೆಯಂತೆ ರಾಜ್ಯದಲ್ಲಿ ಈ ಬಾರಿಯ(2025-26) ಎಸ್ಸೆಸ್ಸೆಲ್ಸಿ ಪರೀಕ್ಷೆ-1ರಲ್ಲಿ ಕೂಡ ಐತಿಹಾಸಿಕ ಶೇ.88.73 ರಷ್ಟು ಫಲಿತಾಂಶ ದಾಖಲಾಗಿದೆ. ಹೈಕೋರ್ಟ್ ಆದೇಶದಂತೆ ಹಿಂದಿ ಸೇರಿ ತೃತೀಯ ಭಾಷಾ ವಿಷಯಗಳಿಗೂ ಅಂಕಗಳನ್ನೇ ಪರಿಗಣಿಸಿ ಫಲಿತಾಂಶ ಪ್ರಕಟಿಸಲಾಗಿದೆ. ಸರ್ಕಾರಿ ಶಾಲಾ ವಿದ್ಯಾರ್ಥಿನಿಯೊಬ್ಬಳು ಸೇರಿ ಒಟ್ಟು ಏಳು ವಿದ್ಯಾರ್ಥಿಗಳು 625ಕ್ಕೆ 625 ಅಂಕ ಪಡೆದು ಸಾಧನೆ ಮಾಡಿದ್ದಾರೆ.
ಈ ಬಾರಿ ಪರೀಕ್ಷೆ ಬರೆದಿದ್ದ ಒಟ್ಟು 8,56,516 ವಿದ್ಯಾರ್ಥಿಗಳ ಪೈಕಿ 7,60,002 ಮಂದಿ ಉತ್ತೀರ್ಣರಾಗಿದ್ದು, ಶೇ.88.73ರಷ್ಟು ಫಲಿತಾಂಶ ದಾಖಲಾಗಿದೆ. ಈ ಪೈಕಿ ಶಾಲಾ ಅಥವಾ ತರಗತಿ ವಿದ್ಯಾರ್ಥಿಗಳಲ್ಲಿ ಶೇ.94.1ರಷ್ಟು ಮಂದಿ ಪಾಸಾಗಿದ್ದಾರೆ. ಕೋವಿಡ್ ವರ್ಷದಲ್ಲಿ ಸಾಮೂಹಿಕ ತೇರ್ಗಡೆಯಿಂದ ಶೇ.99.99 ರಷ್ಟು ಫಲಿತಾಂಶ ಬಂದಿದ್ದು ಬಿಟ್ಟರೆ 2021-22ನೇ ಸಾಲಿನಲ್ಲಿ ಒಟ್ಟಾರೆ ಫಲಿತಾಂಶ ಶೇ.85.63 ಮತ್ತು ಹೊಸಬರ ಫಲಿತಾಂಶ ಶೇ.89.36 ರಷ್ಟು ಬಂದಿದ್ದೇ ಈವರೆಗಿನ ದಾಖಲೆಯಾಗಿತ್ತು. ಆ ದಾಖಲೆ ಈ ಬಾರಿ ಮುರಿದಿದೆ.
ಗ್ರೇಸ್ ಅಂಕವಿಲ್ಲದೆ ಉತ್ತಮ ಫಲಿತಾಂಶ:
ಮತ್ತೊಂದು ವಿಶೇಷವೆಂದರೆ ಪರೀಕ್ಷಾ ಅಕ್ರಮ ತಡೆಗೆ ವೆಬ್‌ಕಾಸ್ಟಿಂಗ್ ಜಾರಿಗೊಳಿಸಿದ ಬಳಿಕ ಎರಡು ವರ್ಷ ಕುಸಿತ ಕಂಡಿದ್ದ ಫಲಿತಾಂಶ ಮೂರನೇ ವರ್ಷ ದಾಖಲೆ ಮಟ್ಟದಲ್ಲಿ ಹೆಚ್ಚಾಗಿರುವುದು. ಅಲ್ಲದೆ, ಕಳೆದೆರಡು ವರ್ಷ ಕ್ರಮವಾಗಿ ಶೇ.20 ಮತ್ತು ಶೇ.10ರಷ್ಟು ಗ್ರೇಸ್ ಅಂಕ ನೀಡಲಾಗಿತ್ತು. ಈ ಬಾರಿ ಯಾವುದೇ ಗ್ರೇಸ್ ಅಂಕ ನೀಡದೆಯೇ ದಾಖಲೆ ಫಲಿತಾಂಶ ಬಂದಿದೆ. ಕಳೆದ ವರ್ಷ ಪರೀಕ್ಷೆ 1ರ ಶೇ.62.34 ಫಲಿತಾಂಶಕ್ಕೆ ಹೋಲಿಸಿದರೆ ಈ ಬಾರಿ ಶೇ.26.34 ರಷ್ಟು ಫಲಿತಾಂಶ ಹೆಚ್ಚಾಗಿದೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಗುರುವಾರ ಮಲ್ಲೇಶ್ವರದ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಕಚೇರಿಯಲ್ಲಿ ಫಲಿತಾಂಶ ಪ್ರಕಟಿಸಿದರು.
ಗಂಡುಮಕ್ಕಳ ಫಲಿತಾಂಶ ಸುಧಾರಣೆ:
ಈ ಬಾರಿಯ ತರಗತಿ ವಿದ್ಯಾರ್ಥಿಗಳ ಫಲಿತಾಂಶವನ್ನು ಲಿಂಗವಾರು, ನಗರ, ಗ್ರಾಮೀಣ, ಕಾಲೇಜುವಾರು ಹೀಗೆ ವಿಭಜಿತ ಮಾದರಿಯಲ್ಲಿ ನೀಡಲಾಗಿದೆ. ಆ ಪ್ರಕಾರ, ಎಂದಿನಂತೆ ಹೆಣ್ಣು ಮಕ್ಕಳೇ ಮೇಲುಗೈ. ಆದರೆ, ಗಂಡು ಮಕ್ಕಳ ಫಲಿತಾಂಶದಲ್ಲಿ ಕಳೆದ ಕೆಲ ವರ್ಷಗಳಿಗೆ ಹೋಲಿಸಿದರೆ ಭಾರೀ ಏರಿಕೆ ಕಂಡುಬಂದಿದೆ. ಪರೀಕ್ಷೆ ಬರೆದಿದ್ದ ಒಟ್ಟು 3.92 ಲಕ್ಷಕ್ಕೂ ಹೆಚ್ಚು ಹೆಣ್ಣುಮಕ್ಕಳಲ್ಲಿ 3.77 ಲಕ್ಷಕ್ಕೂ ಹೆಚ್ಚು (ಶೇ.96.18) ವಿದ್ಯಾರ್ಥಿನಿಯರು ಪಾಸಾಗಿದ್ದಾರೆ. ಅದೇ ರೀತಿ ಪರೀಕ್ಷೆಗೆ ಹಾಜರಾಗಿದ್ದ 3.77 ಲಕ್ಷ ಗಂಡು ಮಕ್ಕಳಲ್ಲಿ 3.46 ಲಕ್ಷಕ್ಕೂ ಹೆಚ್ಚು ಮಂದಿ ಉತ್ತೀರ್ಣರಾಗಿ ಶೇ.91.94ರಷ್ಟು ಫಲಿತಾಂಶ ದಾಖಲಿಸಿದ್ದಾರೆ. ಇನ್ನು ನಗರ ಪ್ರದೇಶದಲ್ಲಿ ಶೇ.94.80 ರಷ್ಟು, ಗ್ರಾಮೀಣ ಭಾಗದ ಶೇ.93.2 ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಜಿಲ್ಲಾವಾರು ದಕ್ಷಿಣ ಕನ್ನಡ ಜಿಲ್ಲೆ ಶೇ.98.4ರಷ್ಟು ಫಲಿತಾಂಶ ಪಡೆದು ಮೊದಲ ಸ್ಥಾನದಲ್ಲಿದ್ದರೆ, ಕಲಬುರಗಿ ಶೇ.85.06 ರಷ್ಟು ಫಲಿತಾಂಶದೊಂದಿಗೆ ಕೊನೆಯ ಸ್ಥಾನದಲ್ಲಿದೆ. ಆದರೆ, ಕಳೆದ ಬಾರಿಗಿಂತ ಫಲಿತಾಂಶ ಶೇ.18 ರಷ್ಟು ಸುಧಾರಿಸಿದೆ.
ಸರ್ಕಾರಿ ಶಾಲೆಗಳ ಫಲಿತಾಂಶ ಭಾರೀ ಏರಿಕೆ:
ಈ ಬಾರಿ ಸರ್ಕಾರಿ ಪ್ರೌಢಶಾಲೆಗಳ ಫಲಿತಾಂಶದಲ್ಲಿ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಕಳೆದ ಸಾಲಿನಲ್ಲಿ ಶೇ.77ರಷ್ಟಿದ್ದ ಸರ್ಕಾರಿ ಶಾಲೆಗಳ ಮಕ್ಕಳ ಉತ್ತೀರ್ಣ ಪ್ರಮಾಣ ಈ ಬಾರಿ ಶೇ.93.97ಕ್ಕೆ ಏರಿದೆ. ಶೇ.75.04ರಷ್ಟಿದ್ದ ಅನುದಾನಿತ ಶಾಲೆಗಳ ಫಲಿತಾಂಶ ಕೂಡ ಶೇ.92.44 ರಷ್ಟಾಗಿದೆ. ಅನುದಾನರಹಿತ ಖಾಸಗಿ ಶಾಲೆಗಳಲ್ಲಿ ಎಂದಿನಂತೆ ಹೆಚ್ಚಿನ ಫಲಿತಾಂಶ ಬಂದಿದ್ದು, ಶೇ.95.4 ರಷ್ಟು ಫಲಿತಾಂಶ ದಾಖಲಾಗಿದೆ. ಕಳೆದ ವರ್ಷ ಫಲಿತಾಂಶ ಶೇ.87.31ರಷ್ಟಿತ್ತು.
2,393 ಸರ್ಕಾರಿ ಶಾಲೆಗಳಲ್ಲಿ ಶೇ.100 ಫಲಿತಾಂಶ:
ಈ ಬಾರಿ ಒಟ್ಟು 6,176 ಶಾಲೆಗಳಲ್ಲಿ ಶೇ.100ರಷ್ಟು ಫಲಿತಾಂಶ ಬಂದಿದ್ದರೆ, 27 ಶಾಲೆಗಳಲ್ಲಿ ಶೂನ್ಯ ಫಲಿತಾಂಶ ಬಂದಿದೆ. ಈ ಪೈಕಿ 2,393 ಸರ್ಕಾರಿ ಶಾಲೆಗಳಲ್ಲಿ ಎಲ್ಲರೂ ಪಾಸಾಗುವ ಮೂಲಕ ಶೇ.100ರಷ್ಟು ಫಲಿತಾಂಶ ದಾಖಲಾಗಿದೆ. ಅದೇ ರೀತಿ ಸತತ ಎರಡನೇ ವರ್ಷವೂ ಯಾವುದೇ ಸರ್ಕಾರಿ ಶಾಲೆಗಳಲ್ಲಿ ಶೂನ್ಯ ಫಲಿತಾಂಶ ಕಂಡು ಬಂದಿಲ್ಲ. ಉಳಿದಂತೆ 2959 ಅನುದಾನ ರಹಿತ ಮತ್ತು 824 ಅನುದಾನಿತ ಶಾಲೆಗಳಲ್ಲೂ ಶೇ.100ರಷ್ಟು ಫಲಿತಾಂಶ ಬಂದಿದೆ. ಆದರೆ, 5 ಅನುದಾನಿತ ಮತ್ತು 22 ಅನುದಾನರಹಿತ ಶಾಲೆಗಳು ಶೂನ್ಯ ಫಲಿತಾಂಶ ಪಡೆದಿವೆ ಎಂದು ಸಚಿವ ಮಧು ಬಂಗಾರಪ್ಪ ವಿವರಿಸಿದರು.
ಮಾಧ್ಯಮವಾರು ಕನ್ನಡ ಮಾಧ್ಯಮದಲ್ಲಿ ಓದಿದವರಲ್ಲಿ ಶೇ.92.6, ಆಂಗ್ಲ ಮಾಧ್ಯಮದವರು ಶೇ.96.16 ರಷ್ಟು ಮಂದಿ ಉತ್ತಿರ್ಣರಾಗಿದ್ದಾರೆ. ಉರ್ದು, ಮರಾಠಿ, ತೆಲುಗು, ತಮಿಳು, ಹಿಂದಿ ಮಾಧ್ಯಮಗಳಲ್ಲಿ ಕನಿಷ್ಠ ಶೇ.88.89ರಿಂದ ಗರಿಷ್ಠ ಶೇ.96.77 ರವರೆಗೆ ಫಲಿತಾಂಶ ಬಂದಿದೆ.
ದ.ಕ. ಪ್ರಥಮ, ಕಲಬುರಗಿ ಲಾಸ್ಟ್:
ಜಿಲ್ಲಾವಾರು ಫಲಿತಾಂಶದಲ್ಲಿ(ಹೊಸಬರು) ದಕ್ಷಿಣ ಕನ್ನಡ ಶೇ.98.4ರಷ್ಟು ಫಲಿತಾಂಶದೊಂದಿಗೆ ಪ್ರಥಮ ಸ್ಥಾನ ಉಳಿಸಿಕೊಂಡಿದೆ. ಉಡುಪಿ ಶೇ.98.18ರಷ್ಟು ಫಲಿತಾಂಶ ಪಡೆದು ಎರಡನೇ ಮತ್ತು ಶೇ.98.09 ಫಲಿತಾಂಶದೊಂದಿಗೆ ಉತ್ತರ ಕನ್ನಡ 2ನೇ ಮೂರನೇ ಸ್ಥಾನ ಪಡೆದಿದೆ. ಕಲಬುರಗಿ ಜಿಲ್ಲೆ ಕೊನೆಯ ಸ್ಥಾನ ಉಳಿಸಿಕೊಂಡಿದ್ದರೂ ಫಲಿತಾಂಶದಲ್ಲಿ ಭಾರೀ ಪ್ರಮಾಣದ ಸುಧಾರಣೆಯಾಗಿದೆ. ಕಳೆದ ಬಾರಿ ಮೂರೂ ಪರೀಕ್ಷೆಗಳಿಂದ ಶೇ.56ರಷ್ಟಿದ್ದ ಈ ಜಿಲ್ಲೆಯ ಫಲಿತಾಂಶ ಈ ಬಾರಿ ಪರೀಕ್ಷೆ 1ರಲ್ಲೇ ಶೇ.85.06ರಷ್ಟಾಗಿದೆ. ಉಳಿದೆಲ್ಲ ಶೈಕ್ಷಣಿಕ ಜಿಲ್ಲೆಗಳ ಫಲಿತಾಂಶ ಶೇ.90ಕ್ಕಿಂತ ಹೆಚ್ಚು ದಾಖಲಾಗಿದೆ.
ಪಾಸ್ ಅಂಕ 33%ಕ್ಕೆ
ಇಳಿಸಿದ್ದರಿಂದ 1532
ವಿದ್ಯಾರ್ಥಿಗಳು ಪಾಸ್
--
ಹುಬ್ಬಳ್ಳಿ ಟ್ಯಾಕ್ಸಿ ಚಾಲಕನ
ಪುತ್ರಿಗೆ 613 ಅಂಕ, 98%
--
ಚಾ.ನಗರ ಪೇದೆಯ ಪುತ್ರಿ
ರಾಜ್ಯಕ್ಕೇ 3ನೇ ರ್‍ಯಾಂಕ್
--
ಉಡುಪಿ ಬಸ್ ಕಂಡಕ್ಟರ್
ಪುತ್ರಿ ರಾಜ್ಯಕ್ಕೇ ಪ್ರಥಮ
--
ಚಿಕ್ಕಮಗಳೂರಿನ ಟೈಲರ್
ದಂಪತಿಯ ಪುತ್ರಿಗೆ 100%
-
ಕೂಲಿಕಾರರ ಪುತ್ರಿಗೆ 97%:
ಕೊಪ್ಪಳಕ್ಕೆ ಸಂಗೀತಾ ಕೀರ್ತಿ
--
ಎಸ್ಸೆಸ್ಸೆಲ್ಸಿ ಪಾಸಾದ ಖುಷೀಲಿ
ಈಜಲು ಹೋದವನ ಸಾವು
--
ಸ್ಟ್ರೆಚರ್‌ನಲ್ಲಿ ಮಲಗಿ ಪರೀಕ್ಷೆ
ಬರೆದ ಹುಡುಗಿ ಫಸ್ಟ್‌ಕ್ಲಾಸ್
--
ತಂದೆ ನಿಧನದ ದಿನವೇ ಪರೀಕ್ಷೆ
ಬರೆದವಳಿಗೆ 625ಕ್ಕೆ 589 ಅಂಕ
--
ಫೇಲಾಗಿದ್ದಕ್ಕೆ ಇಬ್ಬರು
ವಿದ್ಯಾರ್ಥಿಗಳ ಸಾವು
ಎಸ್‌ಎಸ್‌ಎಲ್‌ಸಿ ಫಲಿತಾಂಶ ಬೆನ್ನಲ್ಲೇ ಇಬ್ಬರು ವಿದ್ಯಾರ್ಥಿಗಳು ಸಾವಿಗೆ ಶರಣಾಗಿದ್ದಾರೆ. ಕನ್ನಡ ವಿಷಯದಲ್ಲಿ ಅನುತ್ತೀರ್ಣ ಆಗಿದ್ದಕ್ಕೆ ಚಿತ್ರದುರ್ಗದ ಡಾನ್ ಬಾಸ್ಕೋ ಶಾಲೆಯ ಅಯಾನ್‌ಬೇಗ್ (16) ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದರೂ ಅಂಕ ಕಡಿಮೆ ಆಯ್ತು ಎಂದು ನಂಜನಗೂಡು ತಾಲೂಕಿನ ತ್ರಿಶಾಲ (16) ಸಾವಿಗೆ ಶರಣಾಗಿದ್ದಾಳೆ.
