ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಗುರುವಾರ ಪ್ರಕಟಗೊಂಡಿದ್ದು, ಜಿಲ್ಲೆಗೆ ದಾಖಲೆಯ ಶೇ.96.87ರಷ್ಟು ಫಲಿತಾಂಶ ಬಂದಿದ್ದು, ರಾಜ್ಯದಲ್ಲಿಯೆ 7ನೇ ಸ್ಥಾನ ದೊರೆತಿದೆ. ಕಳೆದ ವರ್ಷ 13ನೇ ಸ್ಥಾನದಲ್ಲಿದ್ದ ಜಿಲ್ಲೆ ಪ್ರಸಕ್ತ ವರ್ಷ ಆರು ಸ್ಥಾನ ಮೇಲಕ್ಕೇರಿದ್ದು, ವಿದ್ಯಾರ್ಥಿಗಳ ಈ ಸಾಧನೆಗೆ ಪ್ರಶಂಸೆ ವ್ಯಕ್ತವಾಗಿದೆ.
ಹಾವೇರಿ:ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಗುರುವಾರ ಪ್ರಕಟಗೊಂಡಿದ್ದು, ಜಿಲ್ಲೆಗೆ ದಾಖಲೆಯ ಶೇ.96.87ರಷ್ಟು ಫಲಿತಾಂಶ ಬಂದಿದ್ದು, ರಾಜ್ಯದಲ್ಲಿಯೆ 7ನೇ ಸ್ಥಾನ ದೊರೆತಿದೆ. ಕಳೆದ ವರ್ಷ 13ನೇ ಸ್ಥಾನದಲ್ಲಿದ್ದ ಜಿಲ್ಲೆ ಪ್ರಸಕ್ತ ವರ್ಷ ಆರು ಸ್ಥಾನ ಮೇಲಕ್ಕೇರಿದ್ದು, ವಿದ್ಯಾರ್ಥಿಗಳ ಈ ಸಾಧನೆಗೆ ಪ್ರಶಂಸೆ ವ್ಯಕ್ತವಾಗಿದೆ.
ಬ್ಯಾಡಗಿ ತಾಲೂಕಿನ ಕದರಮಂಡಲಗಿ ಸ್ಪಂದನಾ ಪ್ರೌಢಶಾಲೆ ವಿದ್ಯಾರ್ಥಿನಿ ನಿವೇದಿತಾ ಅಜ್ಜಮ್ಮನವರ 623 ಅಂಕಗಳಿಸಿ ರಾಜ್ಯಕ್ಕೆ ಮೂರನೇ ರ‍್ಯಾಂಕ್ ಪಡೆದಿದ್ದಾಳೆ. ಜಿಲ್ಲೆಯಲ್ಲಿ ಪ್ರಸಕ್ತ ವರ್ಷ 21,316 ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿದ್ದು, 20,649 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಜಿಲ್ಲೆಯ ಒಟ್ಟು ಫಲಿತಾಂಶ ಶೇ.96.87ರಷ್ಟಾಗಿದೆ. ಕಳೆದ ವರ್ಷ ಶೇ.80.9ರಷ್ಟಾಗಿತ್ತು.ಮಾಧ್ಯಮವಾರು ಫಲಿತಾಂಶ:ಕನ್ನಡ ಮಾಧ್ಯಮದಲ್ಲಿ ಪರೀಕ್ಷೆಗೆ ಹಾಜರಾದ 14369 ವಿದ್ಯಾರ್ಥಿಗಳಲ್ಲಿ 13930 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಆಂಗ್ಲ ಮಾಧ್ಯಮದಲ್ಲಿ ಪರೀಕ್ಷೆಗೆ ಹಾಜರಾದ 5070 ವಿದ್ಯಾರ್ಥಿಗಳಲ್ಲಿ 4979 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಉರ್ದು ಮಾಧ್ಯಮದಲ್ಲಿ ಪರೀಕ್ಷೆ ಬರೆದ 1877 ವಿದ್ಯಾರ್ಥಿಗಳಲ್ಲಿ 1740 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇವರೇ ಜಿಲ್ಲೆಗೆ ಟಾಪರ್: ಕನ್ನಡ ಮಾಧ್ಯಮದಲ್ಲಿ ಬ್ಯಾಡಗಿ ತಾಲೂಕಿನ ಕದರಮಂಡಲಗಿ ಸ್ಪಂದನಾ ಪ್ರೌಢ ಶಾಲೆಯ ವಿದ್ಯಾರ್ಥಿನಿ ನಿವೇದಿತಾ ಅಜ್ಜಮ್ಮನವರ 623 ಅಂಕಗಳಿಸುವ ಮೂಲಕ ರಾಜ್ಯಕ್ಕೆ ಮೂರನೇ ರ‍್ಯಾಂಕ್ ಹಾಗೂ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾಳೆ. ಬ್ಯಾಡಗಿ ತಾಲೂಕಿನ ಮಲ್ಲೂರ ಎಸ್‌ಎಸ್‌ಬಿಎಚ್‌ವಿ ಪ್ರೌಢಶಾಲೆಯ ಭುವನ್ ಮೋರೆ 621 ಅಂಕಗಳಿಸಿ ದ್ವಿತೀಯ ಹಾಗೂ ಬ್ಯಾಡಗಿ ತಾಲೂಕಿನ ಕೆರವಡಿ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿ ನೀತಾ ಇಂಡುವಳ್ಳಿ 620 ಅಂಕ ಪಡೆದು ತೃತೀಯ ಸ್ಥಾನ ಪಡೆದಿದ್ದಾರೆ.ಆಂಗ್ಲ ಮಾಧ್ಯಮದಲ್ಲಿ ರಟ್ಟೀಹಳ್ಳಿಯ ನೋಬೆಲ್ ಪಬ್ಲಿಕ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿ ಉಮ್ಮೇಜವಾರಿಯಾ ಖಾಜಿ 622 ಅಂಕಗಳಿಸಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾನೆ. ಹಾನಗಲ್ಲ ಆಕ್ಸಫರ್ಡ್ ಶಾಲೆಯ ಸಿಂಧೂ ಪವಾರ್ 621 ಹಾಗೂ ಹಾವೇರಿ ತಾಲೂಕಿನ ಹೊಸರಿತ್ತಿ ಪ್ರೇರಣಾ ಆಂಗ್ಲ ಮಾಧ್ಯಮ ಶಾಲೆಯ ಅನನ್ಯಾ ಕೋರಿ 621 ಅಂಕಗಳೊಂದಿಗೆ ದ್ವಿತೀಯ ಸ್ಥಾನ ಪಡೆದಿದ್ದಾರೆ. ಹಾವೇರಿ ತಾಲೂಕಿನ ಗುತ್ತಲ ಆರ್.ಕೆ.ಆಂಗ್ಲ ಮಾಧ್ಯಮ ಶಾಲೆ ಪ್ರಾರ್ಥನಾ ಪಸಗಿ 620 ಅಂಕ ಗಳಿಸಿ ತೃತೀಯ ಸ್ಥಾನ ಪಡೆದಿದ್ದಾರೆ.ಉರ್ದು ಮಾಧ್ಯಮದಲ್ಲಿ ಹಿರೇಕೆರೂರು ಪಟ್ಟಣದ ಸರ್ಕಾರಿ ಉರ್ದು ಪ್ರೌಢ ಶಾಲೆಯ ಫೈಜ್‌ಅಹ್ಮದ್ ಕಮಲ್ 617 ಅಂಕಗಳಿಸಿ ಜಿಲ್ಲೆಗೆ ಪ್ರಥಮ, ಸವಣೂರು ತಾಲೂಕಿನ ಕಾರಡಗಿ ಸರ್ಕಾರಿ ಉರ್ದು ಪ್ರೌಢ ಶಾಲೆಯ ಅಬಿದಾಕೌಸರ್ ಶಾಂಬನ್ನವರ 615 ಅಂಕಗಳಿಸಿ ದ್ವಿತೀಯ, ಹಾವೇರಿ ತಾಲೂಕಿನ ಕನವಳ್ಳಿ ಸರ್ಕಾರಿ ಉರ್ದು ಪ್ರೌಢ ಶಾಲೆಯ ಮದಿಹಾಬಾನು ತಾಸ್ಕನವರ 612 ಅಂಕಗಳಿಸಿ ತೃತೀಯ ಪಡೆದುಕೊಂಡಿದ್ದಾರೆ.2025-26ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ರಾಜ್ಯಮಟ್ಟದಲ್ಲಿ ಹಾವೇರಿ ಜಿಲ್ಲೆಗೆ 7 ಸ್ಥಾನ ಹಾಗೂ ವಿಭಾಗಕ್ಕೆ 3ನೇ ಸ್ಥಾನ ಪಡೆದಿದೆ. ಜಿಲ್ಲಾಧಿಕಾರಿಯವರು ಹಾಗೂ ಜಿಪಂ ಸಿಇಒ ಅವರ ಮಾರ್ಗದರ್ಶನದಲ್ಲಿ ಮಕ್ಕಳಿಗೆ ಆಗಾಗ ತರಬೇತಿ ಕಾರ್ಯಾಗಾರ, ಶಿಕ್ಷಣ ತಜ್ಞರಿಂದ ಉಪನ್ಯಾಸ ಕೊಡಿಸುವುದು ಸೇರಿ ಪ್ರತಿಯೊಂದು ಕಾರ್ಯವನ್ನೂ ಅಚ್ಚುಕಟ್ಟಾಗಿ ಮಾಡಿದ ಫಲವಾಗಿ ಜಿಲ್ಲೆಗೆ ಉತ್ತಮ ಫಲಿತಾಂಶ ಬಂದಿದೆ. ಫಲಿತಾಂಶದ ಕೀರ್ತಿ ಜಿಲ್ಲೆಯ ಮಕ್ಕಳು ಹಾಗೂ ಶಿಕ್ಷಕರಿಗೆ ಸಲ್ಲುತ್ತದೆ ಎಂದು ಡಿಡಿಪಿಐ ಮೋಹನ್ ದಂಡಿನ್ ಹೇಳಿದರು.
ರೈತನ ಪುತ್ರಿಯ ಸಾಧನೆಗೆ ಉಸ್ತುವಾರಿ ಸಚಿವರ ಮೆಚ್ಚುಗೆ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಯ ಉತ್ತಮ ಸಾಧನೆ ಹಾಗೂ ರೈತನ ಪುತ್ರಿ ರಾಜ್ಯಮಟ್ಟದಲ್ಲಿ ಮೂರನೇ ರ‍್ಯಾಂಕ್ ಪಡೆದಿರುವುದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.ಬ್ಯಾಡಗಿ ತಾಲೂಕು ಕದರಮಂಡಲಗಿ ಗ್ರಾಮದ ಸ್ಪಂದನಾ ಪ್ರೌಢಶಾಲೆ ವಿದ್ಯಾರ್ಥಿನಿ, ರೈತನ ಪುತ್ರಿ ನಿವೇದಿತಾ ಪರಶುರಾಮ ಅಜ್ಜಮ್ಮನವರ್ ಅವರು ರಾಜ್ಯಕ್ಕೆ ಮೂರನೇ ರ‍್ಯಾಂಕ್ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಕಳೆದ ವರ್ಷ ರಾಜ್ಯಕ್ಕೆ 13ನೇ ಸ್ಥಾನದಲ್ಲಿದ್ದ ಹಾವೇರಿ ಜಿಲ್ಲೆ ಈ ವರ್ಷ ಫಲಿತಾಂಶ ಉತ್ತಮಪಡಿಸಿಕೊಂಡು 7ನೇ ಸ್ಥಾನಕ್ಕೆ ಏರಿದೆ. ಮೂರನೇ ರ‍್ಯಾಂಕ್ ಪಡೆದ ನಿವೇದಿತಾ ವೈದ್ಯೆಯಾಗುವ ಕನಸು ಹೊಂದಿದ್ದು, ಅವರ ಕನಸು ನನಸಾಗಲಿ ಹಾಗೂ ತೇರ್ಗಡೆಯಾದ ಎಲ್ಲ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲಿ ಎಂದು ಸಚಿವರು ಹಾರೈಸಿದ್ದಾರೆ.ಕಳೆದ ವರ್ಷದ ಫಲಿತಾಂಶ 69.18ರಷ್ಟು ಇದ್ದು, ಫಲಿತಾಂಶ ಸುಧಾರಣೆಗೆ ಕ್ರಮ ಕೈಗೊಳ್ಳಲು ಕೆಡಿಪಿ ಸಭೆಗಳಲ್ಲಿ ನಿರ್ದೇಶನ ನೀಡಲಾಗಿತ್ತು. ಶಿಕ್ಷಣ ಇಲಾಖೆ ಅಧಿಕಾರಿಗಳು ಮೂರು ಪೂರ್ವ ಸಿದ್ಧತಾ ಪರೀಕ್ಷೆಗಳನ್ನು ಮಾಡಿದ್ದರು. ಶೈಕ್ಷಣಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ಕಡೆ ಹೆಚ್ಚಿನ ಗಮನ ನೀಡಿ ಪ್ರತಿಭಾವಂತ ವಿದ್ಯಾರ್ಥಿಗಳೊಂದಿಗೆ ಅಭ್ಯಾಸ ಮಾಡಲು ಜೋಡಣೆ ಮಾಡಲಾಗಿತ್ತು. ಪ್ರತಿ ಶಿಕ್ಷಕರು 20 ವಿದ್ಯಾರ್ಥಿಗಳನ್ನು ದತ್ತು ತೆಗೆದುಕೊಂಡು ಅವರ ಕಲಿಕೆ ಕಡೆ ವಿಶೇಷ ಗಮನ ನೀಡಿದ್ದರು. ಶಿಕ್ಷಣ ಇಲಾಖೆಯ ಈ ಎಲ್ಲ ಕ್ರಮಗಳ ಪರಿಣಾಮ ಈ ವರ್ಷ ಶೇ.98.87ರಷ್ಟು ಫಲಿತಾಂಶ ಬಂದಿದೆ. ಫಲಿತಾಂಶ ಸುಧಾರಣೆಗೆ ಕಾರಣರಾದ ಜಿಲ್ಲಾಧಿಕಾರಿ, ಜಿಪಂ ಸಿಇಒ, ಡಿಡಿಪಿಐ ಶಿಕ್ಷಣ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಶಿಕ್ಷಕರಿಗೆ ಸಚಿವರು ಅಭಿನಂದನೆಗಳನ್ನು ತಿಳಿಸಿದ್ದಾರೆ.