ಸಾರಾಂಶ
ಆ.30 ಮತ್ತು 31ರಂದು ರಾಜ್ಯದಾದ್ಯಂತ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿರುವ ಹೋಟೆಲ್, ರೆಸ್ಟೋರೆಂಟ್ ಗಳಲ್ಲಿ ಆಹಾರ ಸುರಕ್ಷತೆ ಬಗ್ಗೆ ವಿಶೇಷ ತಪಾಸಣೆ ನಡೆಸಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ಬೆಂಗಳೂರು : ಆ.30 ಮತ್ತು 31ರಂದು ರಾಜ್ಯದಾದ್ಯಂತ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿರುವ ಹೋಟೆಲ್, ರೆಸ್ಟೋರೆಂಟ್ ಗಳಲ್ಲಿ ಆಹಾರ ಸುರಕ್ಷತೆ ಬಗ್ಗೆ ವಿಶೇಷ ತಪಾಸಣೆ ನಡೆಸಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಂಸ, ಮೀನು, ಮೊಟ್ಟೆಗಳ ಆಹಾರ ಮಾದರಿಗಳನ್ನೂ ಸಂಗ್ರಹಿಸಿ ತಪಾಸಣೆ ನಡೆಸಲಾಗುವುದು. ಜೊತೆಗೆ ಅಸುರಕ್ಷಿತ ಆಹಾರ ತಯಾರಿಸುತ್ತಿರುವ ಉದ್ದಿಮೆದಾರರ ಮೇಲೂ ಕಾನೂನು ರೀತಿಯಲ್ಲಿ ಕ್ರಮ ಜರುಗಿಸಲಾಗುತ್ತಿದೆ ಎಂದು ಹೇಳಿದರು.
ಜನರೇ ಆಹಾರ ಗುಣಮಟ್ಟ ಪರೀಕ್ಷೆ ಮಾಡಿಕೊಳ್ಳಲು 3400 ಟೆಸ್ಟ್ ಕಿಟ್
ಸಾರ್ವಜನಿಕರು ತಾವು ಸೇವಿಸುವ ಆಹಾರದ ಗುಣಮಟ್ಟವನ್ನು ತಾವೇ ಪರೀಕ್ಷಿಸಿಕೊಳ್ಳಲು ಅನುಕೂಲವಾಗುವಂತೆ ಹೋಟೆಲ್, ರೆಸ್ಟೊರೆಂಟ್, ಫುಡ್ ಪಾರ್ಕ್ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ 3400 ಟೆಸ್ಟಿಂಗ್ ಕಿಟ್ ಅಳವಡಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ ಸಚಿವ ದಿನೇಶ್, ಈಗಾಗಲೇ ಒಂದು ಸಾವಿರ ಕಿಟ್ ಬಂದಿದ್ದು, ಶೀಘ್ರದಲ್ಲಿಯೇ ಸಾರ್ವಜನಿಕರ ಉಪಯೋಗಕ್ಕೆ ಲಭ್ಯವಾಗಲಿವೆ. ಜೊತೆಗೆ ಆಹಾರ ಗುಣಮಟ್ಟ ಪರೀಕ್ಷಿಸುವ ಕಾರ್ಯವನ್ನು ಆಹಾರ ಸುರಕ್ಷತಾ ಇಲಾಖೆ ಕಳೆದ ಒಂದು ವರ್ಷದಿಂದ ನಡೆಸಿಕೊಂಡು ಬರುತ್ತಿದೆ. ಉತ್ತಮ ಗುಣಮಟ್ಟದ ಆಹಾರ ಸೇವೆನೆ ಉತ್ತಮ ಆರೋಗ್ಯಕ್ಕೆ ನಾಂದಿ. ಹೀಗಾಗಿ ಆಹಾರ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದರು.
ಕ್ರಿಮಿನಾಶಕಗಳ ಶೇಷಾಂಶ ಪತ್ತೆ: ಹಣ್ಣು ಮತ್ತು ತರಕಾರಿಗಳ 385 ಆಹಾರ ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗೆ ಒಳಪಡಿಸಲಾಗಿದ್ದು, ವಿಶ್ಲೇಷಿಸಲಾದ 266 ಮಾದರಿಗಳಲ್ಲಿ 239 ಮಾದರಿಗಳು ಸುರಕ್ಷಿತ, 27 ಮಾದರಿಗಳು ಅಸುರಕ್ಷಿತ ಎಂದು ಕಂಡುಬಂದಿದೆ. ಅಸುರಕ್ಷಿತ ಮಾದರಿಗಳಲ್ಲಿ ಕ್ರಿಮಿನಾಶಕಗಳ ಶೇಷಾಂಶಗಳು ಹೆಚ್ಚಿನ ಪ್ರಮಾಣದಲ್ಲಿ ಕಂಡು ಬಂದಿದೆ. ಫಂಗಸ್ ಬೆಳವಣಿಗೆ ಕೂಡ ಕಂಡುಬಂದಿದೆ. ಅಲ್ಲದೇ 211 ಪನ್ನೀರ್, 246 ಕೇಕ್, 67 ಕೋವಾದ ಆಹಾರ ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗೆ ಒಳಪಡಿಸಲಾಗಿದ್ದು, ವಿಶ್ಲೇಷಣಾ ವರದಿಗಳು ಬಂದ ಕ್ರಮ ಕೈಗೊಳ್ಳಲಾಗುವುದು ಎಂದರು.