‘ಶಿವಣ್ಣ, ದರ್ಶನ್ ಮತ್ತು ಧ್ರುವ ಸರ್ಜಾ ಅವರ ಬಗ್ಗೆ ಮಾತನಾಡಿರೋ ಆಡಿಯೋ ನನ್ನದಲ್ಲ. ನಾನು ಹಾಗೆಲ್ಲ ಮಾತಾಡಿಲ್ಲ.

ಬೆಂಗಳೂರು : ‘ಶಿವಣ್ಣ, ದರ್ಶನ್ ಮತ್ತು ಧ್ರುವ ಸರ್ಜಾ ಅವರ ಬಗ್ಗೆ ಮಾತನಾಡಿರೋ ಆಡಿಯೋ ನನ್ನದಲ್ಲ. ನಾನು ಹಾಗೆಲ್ಲ ಮಾತಾಡಿಲ್ಲ. ಮೊದಲು ಶಿವಣ್ಣ, ಧ್ರುವ ಅವರನ್ನೆಲ್ಲ ಭೇಟಿ ಮಾಡಿ ಅವರಿಗೆ ಸತ್ಯ ವಿವರಿಸಿ ಕ್ಷಮೆ ಕೇಳುತ್ತೇನೆ’ ಎಂದು ನಟ ಮಡೆನೂರು ಮನು ಹೇಳಿದ್ದಾರೆ.

ಸಹ ನಟಿ ಮೇಲಿನ ಅತ್ಯಾಚಾರದ ಕೇಸ್‌ನಲ್ಲಿ ಜೈಲು ಸೇರಿದ್ದ ನಟ ಶನಿವಾರ ಜಾಮೀನು ಮೇಲೆ ಬಿಡುಗಡೆಯಾಗಿದ್ದಾರೆ. ಆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ‘ಸ್ಟಾರ್‌ ನಟರಿಗೆ ಬೈದಿರುವ ಆಡಿಯೋ ಕೇಳಿ ನಂಗೇ ಮೈ ಉರೀತು. ಸಿನಿಮಾ ಅನ್ನೋ ಬೈಕ್‌ ಅನ್ನು ಆಗಷ್ಟೇ ಶೋ ರೂಮಿಂದ ಈಚೆ ತಂದಿದ್ದೆ, ಕೀನೂ ಹಾಕಿರಲಿಲ್ಲ. ಆಗಲೇ ಕಾರಲ್ಲಿ ಗುದ್ದಿ ಒಡೆದು ಹಾಕಿದರು. ಹೀರೋಗಳ ಬಗ್ಗೆ ಯಾರೋ ಕೆಟ್ಟದಾಗಿ ಮಾತಾಡಿದ್ದ ಆಡಿಯೋವನ್ನು ನನ್ನದು ಅಂತ ಹೇಳಿ ನನ್ನ ಸಿನಿಮಾ ಕನಸಿನ ಮೇಲೆ ಲಾರಿಯನ್ನೇ ಹತ್ತಿಸಿಬಿಟ್ಟರು. ಮಿದುಳೂ ಉಳಿಯದ ಹಾಗೆ ಸರ್ವನಾಶ ಮಾಡಿಬಿಟ್ಟರು’ ಎಂದು ಬೇಸರ ತೋಡಿಕೊಂಡಿದ್ದಾರೆ.

‘ಲೈಫಲ್ಲಿ ಯಾವತ್ತೂ ಪೊಲೀಸ್‌ ಸ್ಟೇಷನ್‌ ಮೆಟ್ಟಿಲು ಹತ್ತಿದವನಲ್ಲ. ನಮ್ಮ ಹಳ್ಳಿಯಲ್ಲಿ ಈ ವಿಚಾರ ಕೇಳಿ ನನ್ನ ಅಮ್ಮ, ಅಜ್ಜಿ ಬಹಳ ನೊಂದಿದ್ದಾರೆ. ಅವರನ್ನು ಸಮಾಧಾನ ಮಾಡಬೇಕು. 32 ವರ್ಷಕ್ಕೇ ನನ್ನ ಜೊತೆಗಿದ್ದವರೇ ನನಗೆ ಬಹುದೊಡ್ಡ ಪಾಠ ಕಲಿಸಿಬಿಟ್ಟರು. ಇದರಿಂದ ಯಾವಾಗ ಹೇಗೆ ಎದ್ದೇಳ್ತೀನೋ ಗೊತ್ತಿಲ್ಲ’ ಎಂದೂ ನೊಂದು ನುಡಿದಿದ್ದಾರೆ.