ಪೊಲೀಸ್ ಪಡೆಗೆ ಆತ್ಮಸ್ಥೈರ್ಯ ತುಂಬುವೆ : ನೂತನ ಪೊಲೀಸ್ ಆಯುಕ್ತ ಸೀಮಂತ್

| N/A | Published : Jun 07 2025, 08:47 AM IST

Seemanth Kumar
ಪೊಲೀಸ್ ಪಡೆಗೆ ಆತ್ಮಸ್ಥೈರ್ಯ ತುಂಬುವೆ : ನೂತನ ಪೊಲೀಸ್ ಆಯುಕ್ತ ಸೀಮಂತ್
Share this Article
  • FB
  • TW
  • Linkdin
  • Email

ಸಾರಾಂಶ

ಪೊಲೀಸ್ ಪಡೆಗೆ ಆತ್ಮಸ್ಥೈರ್ಯ ತುಂಬುವೆ: ನೂತನ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ವಿಶ್ವಾಸದ ನುಡಿ

ಗಿರೀಶ್ ಮಾದೇನಹಳ್ಳಿ

 ಬೆಂಗಳೂರು : ಕಾಲ್ತುಳಿತ ಘಟನೆ ಬಳಿಕ ಮಾನಸಿಕವಾಗಿ ಕುಗ್ಗಿರುವ ಪೊಲೀಸರಿಗೆ ಆತ್ಮಸ್ಥೈರ್ಯ ತುಂಬಿ ಮತ್ತೆ ಸಮರ್ಥ ಪಡೆಯಾಗಿ ಸಜ್ಜುಗೊಳಿಸುತ್ತೇನೆ. ನಗರದ ನಾಗರಕರಿಗೆ ಸುರಕ್ಷತೆಯ ಭರವಸೆ ನೀಡುವೆ’.!

ಇವು ರಾಜಧಾನಿಯ ನೂತನ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರ ವಿಶ್ವಾಸದ ನುಡಿಗಳು.

ಕಾಲ್ತುಳಿತ ದುರಂತ ಹಿನ್ನೆಲೆಯಲ್ಲಿ ಹಿಂದಿನ ಆಯುಕ್ತ ಬಿ.ದಯಾನಂದ್ ಅವರ ನಿರ್ಗಮನದ ಬಳಿಕ ಗುರುವಾರ ತಡ ರಾತ್ರಿ ಹಿರಿಯ ಐಪಿಎಸ್ ಅಧಿಕಾರಿ ಸೀಮಂತ್ ಕುಮಾರ್ ಅವರು ಆಯುಕ್ತ ಹುದ್ದೆಗೇರಿದರು.

ದಿನವಿಡೀ ಸಭೆಗಳಲ್ಲಿ ನಿರತರಾಗಿದ್ದ ನೂತನ ಆಯುಕ್ತರು, ಕೆಲಸದೊತ್ತಡದ ನಡುವೆ ಶುಕ್ರವಾರ ಕೆಲ ಕ್ಷಣಗಳು ಬಿಡುವು ಮಾಡಿಕೊಂಡು ‘ಕನ್ನಡಪ್ರಭ’ಕ್ಕೆ ನೀಡಿದ ವಿಶೇಷ ಸಂದರ್ಶನ ಪುಟ್ಟದ್ದಾಗಿ ತಮ್ಮ ಮುಂದಿನ ಯೋಜನೆಗಳ ಕುರಿತು ಮಾತನಾಡಿದರು.

ಕಾಲ್ತುಳಿತ ಘಟನೆಗಳ ಬಳಿಕ ಪೊಲೀಸರಿಗೆ ಆತ್ಮಸ್ಥೈರ್ಯ ತುಂಬಿ ಪುನರ್ ಸಂಘಟಿಸುತ್ತೇನೆ. ಜಾಗತಿಕ ಮಟ್ಚದಲ್ಲಿ ಬೆಂಗಳೂರಿಗೆ ಘಟನೆಯಿಂದ ಮೆತ್ತಿಕೊಂಡಿರುವ ಕಳಂಕ ನಿವಾರಣೆಗೆ ಯತ್ನಿಸುತ್ತೇನೆ. ಸರ್ಕಾರ ಒಳ್ಳೆಯ ಕೆಲಸ ಮಾಡುವುದಕ್ಕೆ ಪ್ರೋತ್ಸಾಹ ನೀಡುತ್ತದೆ. ಮತ್ತೆಂದು ಈ ರೀತಿ ಘಟನೆ ಮರುಕಳಿಸದಂತೆ ಎಚ್ಚರಿಕೆ ವಹಿಸುತ್ತೇನೆ ಎಂದರು.

*ನೀವು ಆಯುಕ್ತರಾದ ಸಮಯವು ಬಹಳ ದುರಂತಮಯವಾಗಿದೆ. ಒಂದೆಡೆ ಹಿಂದಿನ ಆಯುಕ್ತರ ಅಮಾನತ್ತಿನಿಂದ ಪೊಲೀಸರು, ಮತ್ತೊಂದೆಡೆ ಸಾರ್ವಜನಿಕ ವಲಯದಲ್ಲಿ ಅಸಮಾಧಾನವಿದೆ. ಈ ಪರಿಸ್ಥಿತಿ ಹೇಗೆ ನಿಭಾಯಿಸುತ್ತೀರಿ?

-ನನಗೂ ಆಯುಕ್ತರಾದ ಸಂದರ್ಭದ ಬಗ್ಗೆ ನೋವಿದೆ. ಜನರ ಸೇವೆಗೆ ಪೊಲೀಸರು ಶ್ರಮಿಸುತ್ತಾರೆ. ದಿನದ 24 ತಾಸುಗಳು ಜನರ ಒಳಿತಿಗೆ, ಅವರ ರಕ್ಷಣೆಗೆ ಕೆಲಸ ಮಾಡುತ್ತಾರೆ. ಹೀಗಿರುವಾಗ ಒಂದು ದೊಡ್ಡ ಅನಾಹುತ ನಡೆದಿದೆ. ಈ ದುರಂತದಿಂದ ಪಾಠ ಕಲಿಯುತ್ತೇವೆ. ಪೊಲೀಸರಿಗೆ ಆತ್ಮಸ್ಥೈರ್ಯ ತುಂಬಿ ಮತ್ತೆ ಸಮರ್ಥ ಪಡೆಯಾಗಿ ಸಜ್ಜುಗೊಳಿಸುತ್ತೇವೆ.

*ಕಾಲ್ತುಳಿತ ಘಟನೆಯಿಂದ ಕಲಿತ ಪಾಠವೇನು?

-ಈ ಘಟನೆ ಬಗ್ಗೆ ಪ್ರಾಥಮಿಕ ಹಂತದ ಮಾಹಿತಿ ಇದೆಯಷ್ಟೇ. ಈ ಭದ್ರತೆ ಲೋಪದೋಷಗಳ ಕುರಿತು ಅಧಿಕಾರಿಗಳ ಜತೆ ಕೂಲಂಕುಷವಾಗಿ ಚರ್ಚಿಸುತ್ತೇನೆ. ಮತ್ತೆಂದು ಇಂಥ ದುರಂತ ಸಂಭವಿಸದಂತೆ ಮುಂಜಾಗ್ರತೆ ವಹಿಸುತ್ತೇನೆ. ಈ ಪ್ರಕರಣದ ಬಗ್ಗೆ ಸಿಐಡಿ ತನಿಖೆ ನಡೆಸಲಿದೆ.

*ನಿಮಗೆ ಆಡಳಿತ ನಡೆಸಲು ಸರ್ಕಾರ ಫ್ರೀ ಹ್ಯಾಂಡ್ ನೀಡಿದೆಯೇ?

-ಒಳ್ಳೆಯ ಕೆಲಸಗಳಿಗೆ ಸರ್ಕಾರದ ಪ್ರೋತ್ಸಾಹ ಇದ್ದೆ ಇರುತ್ತದೆ. ಇದರಲ್ಲಿ ಯಾವುದೇ ಅನುಮಾನಬೇಡ. ನನಗೆ ಸರ್ಕಾರ ನೀಡಿರುವ ಹೊಣೆಗಾರಿಕೆಯನ್ನು ಅವರ (ಸರ್ಕಾರ) ನಂಬಿಕೆಗೆ ಚ್ಯುತಿಬಾರದಂತೆ ನಿರ್ವಹಿಸುತ್ತೇನೆ.

*ಅಧಿಕಾರಿ-ಸಿಬ್ಬಂದಿ ಆಯ್ಕೆ ಸ್ವತಂತ್ರವಿದೆಯೇ?

-ನಗರದಲ್ಲಿ ಉತ್ತಮವಾಗಿ ಕೆಲಸ ಮಾಡುವ ಅಧಿಕಾರಿಗಳಿದ್ದಾರೆ. ವರ್ಗಾವಣೆ ವಿಚಾರದಲ್ಲಿ ಪಿಇಬಿ ನಿರ್ವಹಿಸುತ್ತದೆ. ನಗರದ ಎಲ್ಲ ಪೊಲೀಸರು ಒಂದು ತಂಡವಾಗಿ ಕೆಲಸ ಮಾಡಬೇಕಾಗುತ್ತದೆ. ಇಲ್ಲಿ ನನ್ನದ್ದು ಮತ್ತೊಬ್ಬರದ್ದು ಆಯ್ಕೆ ಮುಖ್ಯವಲ್ಲ.

*ನಗರದಲ್ಲಿ ಕೆಲಸ ಮಾಡಿದ ಅನುಭವಿ ನೀವು. ಈಗಿನ ಪರಿಸ್ಥಿತಿ ಪೂರಕವಾಗಿದೆಯೇ?

-ನಗರದಲ್ಲಿ ಹೆಚ್ಚುವರಿ ಆಯುಕ್ತನಾಗಿ ಕೆಲಸ ಮಾಡಿದ್ದೇನೆ. ಆದರೆ ಬೆಂಗಳೂರು ಪ್ರತಿದಿನ ಬೆಳವಣಿಗೆ ಕಾಣುವ ನಗರ. ಅದರ ವ್ಯಾಪ್ತಿ ವಿಸ್ತಾರವಾಗುತ್ತಲೇ ಇದೆ. ಜನಸಂಖ್ಯೆ ವೃದ್ಧಿಯಾಗಿದೆ. ನಗರದ ಪ್ರಗತಿಯ ಓಟಕ್ಕೆ ಪೂರಕವಾಗಿ ಪೊಲೀಸರು ಕೆಲಸ ಮಾಡಬೇಕಿದೆ. ಪರಿಸ್ಥಿತಿ ಹೇಗಿದ್ದರೂ ನಾವು ಅದನ್ನು ಹೇಗೆ ನಿಭಾಯಿಸುತ್ತೇವೆ ಎನ್ನುವುದರ ಮೇಲೆ ಫಲಿತಾಂಶವಿರುತ್ತದೆ.

*ನಗರ ಆಡಳಿತಕ್ಕೆ ನಿಮ್ಮ ಆದ್ಯತೆಗಳೇನು?

-ನಾನು ಬೇಸಿಕ್‌ ಪೊಲೀಸಿಂಗ್‌ಗೆ ಹೆಚ್ಚಿನ ಆದ್ಯತೆ ನೀಡುತ್ತೇನೆ. ಪಕ್ಕಾ ಪೊಲೀಸಿಂಗ್ ಕೆಲಸ ನಡೆದರೆ ಅದೆಷ್ಟೋ ಸಮಸ್ಯೆಗಳಿಗೆ ತಳಹಂತದಲ್ಲೇ ಪರಿಹಾರ ಕಾಣುತ್ತವೆ. ಅಧಿಕಾರಿಗಳ ಜತೆ ಸಮಾಲೋಚಿಸಿದ ಬಳಿಕ ಕಾರ್ಯನಿರ್ವಹಣೆಗೆ ನೀಲ ನಕ್ಷೆ ರೂಪಿಸುತ್ತೇನೆ.

*ನಿಮ್ಮ ಅವಧಿಯಲ್ಲಾದರೂ ಸಂಚಾರ ಸಮಸ್ಯೆ ಮುಕ್ತಿ ಕಾಣಲಿದೆಯೇ?

-ನಗರದ ಸಂಚಾರ ಸಮಸ್ಯೆಗಳ ಬಗ್ಗೆ ಅರಿವಿದೆ. ಇದಕ್ಕೆ ಸೂಕ್ತ ಪರಿಹಾರ ಕಾಣಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ.

Read more Articles on