ರಾಜ್ಯದಲ್ಲಿದ್ದಾರೆ 967 ಜನ ನಕಲಿ ವೈದ್ಯರು! - ಬೀದರ್‌ನಲ್ಲಿ ಅತಿ ಹೆಚ್ಚು ನಕಲಿ ವೈದ್ಯರು

| N/A | Published : Apr 20 2025, 07:51 AM IST

stethoscope

ಸಾರಾಂಶ

ರಾಜ್ಯದಲ್ಲಿ ನಕಲಿ ವೈದ್ಯರ ಹಾವಳಿ ತಡೆಯುವಂತೆ ಹೈಕೋರ್ಟ್‌ ಸರ್ಕಾರಕ್ಕೆ ನಿರ್ದೇಶನ ನೀಡಿದ ಬೆನ್ನಲ್ಲೇ ಕಳೆದ ಒಂದು ವರ್ಷದಲ್ಲಿ 967 ಮಂದಿ ನಕಲಿ ವೈದ್ಯರು ಪತ್ತೆಯಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಬಹಿರಂಗಪಡಿಸಿದೆ.

ಬೆಂಗಳೂರು : ರಾಜ್ಯದಲ್ಲಿ ನಕಲಿ ವೈದ್ಯರ ಹಾವಳಿ ತಡೆಯುವಂತೆ ಹೈಕೋರ್ಟ್‌ ಸರ್ಕಾರಕ್ಕೆ ನಿರ್ದೇಶನ ನೀಡಿದ ಬೆನ್ನಲ್ಲೇ ಕಳೆದ ಒಂದು ವರ್ಷದಲ್ಲಿ 967 ಮಂದಿ ನಕಲಿ ವೈದ್ಯರು ಪತ್ತೆಯಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಬಹಿರಂಗಪಡಿಸಿದೆ.

ರಾಜ್ಯದಲ್ಲಿ ನಾಯಿ ಕೊಡೆಗಳಂತೆ ತಲೆ ಎತ್ತುತ್ತಿರುವ ನಕಲಿ ವೈದ್ಯರ ಕ್ಲಿನಿಕ್‌ಗಳ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದ ಆರೋಗ್ಯ ಇಲಾಖೆ ನಡೆಗೆ ಹೈಕೋರ್ಟ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. ಅಲ್ಲದೆ ಕೂಡಲೇ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿತ್ತು.

ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಆರೋಗ್ಯ ಇಲಾಖೆಯು ವಿವಿಧ ಜಿಲ್ಲೆಗಳಲ್ಲಿ ನಕಲಿ ವೈದ್ಯರನ್ನು ಪತ್ತೆ ಹಚ್ಚಿರುವ ವಿವರಗಳನ್ನು ಹಂಚಿಕೊಂಡಿದೆ. ಈ ವರ್ಷ ನಡೆಸಿದ ವಿಶೇಷ ಕಾರ್ಯಾಚರಣೆ ವೇಳೆ ನಕಲಿ ವೈದ್ಯರು ಚಿಕಿತ್ಸೆ ನೀಡುವ ಹೆಸರಿನಲ್ಲಿ ಅಮಾಯಕ ನಾಗರಿಕರನ್ನು ವಂಚನೆ ಮಾಡುತ್ತಿರುವುದು ಬಯಲಾಗಿದೆ. ವಿದ್ಯಾರ್ಹತೆ, ಚಿಕಿತ್ಸೆ ನೀಡಲು ಅಗತ್ಯವಿರುವ ಜ್ಞಾನ ಹಾಗೂ ತರಬೇತಿ ಏನೂ ಇಲ್ಲದೆ ಸಾವಿರಾರು ಮಂದಿ ವೈದ್ಯರು ರಾಜ್ಯದಲ್ಲಿ ಜನರಿಗೆ ಚಿಕಿತ್ಸೆ ನೀಡುತ್ತಿದ್ದಾರೆ.

ಬೀದರ್‌ ಜಿಲ್ಲೆ ಒಂದರಲ್ಲೇ 213 ಮಂದಿ ಪತ್ತೆಯಾಗಿದ್ದಾರೆ. ಒಟ್ಟು 442 ಮಂದಿ ನಕಲಿ ವೈದ್ಯರಿಗೆ ನೋಟಿಸ್‌ ನೀಡಿ 163 ಕ್ಲಿನಿಕ್‌ಗಳನ್ನು ಈಗಾಗಲೇ ಮುಚ್ಚಿಸಲಾಗಿದೆ. 67 ಮಂದಿ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹತ್ತನೇ ತರಗತಿ (ಎಸ್‌ಎಸ್‌ಎಲ್‌ಸಿ) ಪಾಸಾಗಿರುವ ಕೆ.ಆರ್‌.ಪೇಟೆಯ ಡಾ. ಎ.ಎ. ಮುರಳೀಧರಸ್ವಾಮಿ ತಾನು ನಡೆಸುತ್ತಿರುವ ಲಕ್ಷ್ಮೀ ಕ್ಲಿನಿಕ್‌ ಅನ್ನು ಕರ್ನಾಟಕ ವೈದ್ಯಕೀಯ ಖಾಸಗಿ ಕಂಪನಿಗಳ ಕಾಯಿದೆ 2007 ರಡಿ ನೋಂದಣಿ ಮಾಡಿಕೊಳ್ಳಲು ಆರೋಗ್ಯ ಇಲಾಖೆಗೆ ನಿರ್ದೇಶನ ನೀಡುವಂತೆ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ವೇಳೆ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ನಕಲಿ ವೈದ್ಯರ ಹಾವಳಿ ತಡೆಯುವಂತೆ ಸರ್ಕಾರಕ್ಕೆ ಸೂಚಿಸಿದ್ದರು.

ಈ ನಕಲಿ ವೈದ್ಯರು ದೂರದ ಪ್ರದೇಶಗಳಲ್ಲಿ ಚಿಕಿತ್ಸಾಲಯಗಳನ್ನು ತೆರೆದು ಅಮಾಯಕ ರೋಗಿಗಳನ್ನು ವಂಚಿಸುವುದರ ಮೂಲಕ ಮುಗ್ಧ ಗ್ರಾಮೀಣ ಜನರ ಜೀವಕ್ಕೆ ಅಪಾಯವನ್ನುಂಟುಮಾಡುತ್ತಿದ್ದಾರೆ. ಇಂತಹ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿವೆ. ಇದರಿಂದ ಎಲ್ಲೆಡೆ ಇಂತಹ ಕ್ಲಿನಿಕ್‌ಗಳು ನಾಯಿಕೊಡೆಗಳಂತೆ ಹುಟ್ಟಿಕೊಂಡಿವೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.