ಅಡಕೆ ಉತ್ಪಾದನಾ ಕ್ಷೇತ್ರದಲ್ಲಿ ಈ ವರ್ಷ ಕಂಡುಕೇಳರಿಯದ ವಿಪ್ಲವ : ಫಸಲಿಗೆ ಭಾರಿ ಹೊಡೆತ

| N/A | Published : Feb 08 2025, 10:52 AM IST

Arecanut

ಸಾರಾಂಶ

ಅಡಕೆ ಉತ್ಪಾದನಾ ಕ್ಷೇತ್ರದಲ್ಲಿ ಈ ವರ್ಷ ಕಂಡುಕೇಳರಿಯದ ಭಾರಿ ವಿಪ್ಲವ ಕಂಡುಬಂದಿದೆ. ಹಳದಿ ಎಲೆ ರೋಗ, ಎಲೆಚುಕ್ಕಿ ರೋಗದಿಂದ ಕಂಗಾಲಾದ ಬೆಳೆಗಾರರಿಗೆ ಹವಾಮಾನ ವೈಪರೀತ್ಯದ ಶಾಕ್‌ ತಟ್ಟಿದೆ.

ಆತ್ಮಭೂಷಣ್‌

ಮಂಗಳೂರು :  ಅಡಕೆ ಉತ್ಪಾದನಾ ಕ್ಷೇತ್ರದಲ್ಲಿ ಈ ವರ್ಷ ಕಂಡುಕೇಳರಿಯದ ಭಾರಿ ವಿಪ್ಲವ ಕಂಡುಬಂದಿದೆ. ಹಳದಿ ಎಲೆ ರೋಗ, ಎಲೆಚುಕ್ಕಿ ರೋಗದಿಂದ ಕಂಗಾಲಾದ ಬೆಳೆಗಾರರಿಗೆ ಹವಾಮಾನ ವೈಪರೀತ್ಯದ ಶಾಕ್‌ ತಟ್ಟಿದೆ. ಕರಾವಳಿ, ಮಲೆನಾಡಿನ ಪ್ರಮುಖ ವಾಣಿಜ್ಯ ಬೆಳೆ ಅಡಕೆಯಲ್ಲಿ ಈ ಬಾರಿ ಅರ್ಧದಷ್ಟು ಅಂದರೆ ಶೇ.50ರಷ್ಟು ಫಸಲೇ ಇಲ್ಲ. ಅಡಕೆ ಉತ್ಪಾದನಾ ಇತಿಹಾಸದಲ್ಲಿ ಇಂಥದ್ದೊಂದು ಕಂಟಕ ಇದೇ ಮೊದಲು.

ಅಡಕೆ ಉತ್ಪಾದನೆಗೆ ದಶಕಗಳ ಹಿಂದೆ ಕೊಳೆರೋಗ ಹಲವು ರೋಗಗಳು ಕಾಣಿಸಿ ಫಸಲು ನಷ್ಟಕ್ಕೆ ಕಾರಣವಾಗಿತ್ತು. ಆದರೆ ಅಡಕೆ ತೋಟಕ್ಕೆ ತೋಟಗಳೇ ಇಳುವರಿ ಇಲ್ಲದಂತೆ ಆಗಿರುವುದು ಇದೇ ಪ್ರಥಮ.

ಕರಾವಳಿ, ಮಲೆನಾಡಿನಲ್ಲಿ ಮಾತ್ರವಲ್ಲ ನೆರೆಯ ಕಾಸರಗೋಡಿಗೂ ವ್ಯಾಪಕ ಪ್ರಮಾಣದಲ್ಲಿ ಎಲೆಚುಕ್ಕಿ ರೋಗ ವಿಸ್ತರಿಸಿದೆ. ಇಡೀ ಅಡಕೆ ತೋಟಗಳನ್ನೇ ಇದು ಆಪೋಶನ ತೆಗೆದುಕೊಳ್ಳುತ್ತಿದೆ. ಎಲೆಚುಕ್ಕಿ ರೋಗ ಅಷ್ಟಾಗಿ ಕಾಣಿಸದ ಪುತ್ತೂರು, ಬಂಟ್ವಾಳಗಳಲ್ಲಿ ಉಷ್ಣಾಂಶ ಕಾರಣಕ್ಕೆ ಫಸಲು ಕೈಕೊಟ್ಟಿದೆ.

ಶೇ.50ರಷ್ಟು ಫಸಲು ಇಲ್ಲ:

ಕರಾವಳಿ ಸಹಿತ ಕಾಸರಗೋಡು ಜಿಲ್ಲೆಗಳಲ್ಲಿ ಶೇ.40ರಿಂದ 50ರಷ್ಟು ಅಡಕೆ ಫಸಲು ಈಗಲೇ ಇಲ್ಲ. ಕನಿಷ್ಠ ಮೂರು ಅಡಕೆ ಕೊಯ್ಲು ಇರುವಲ್ಲಿ ಈ ಬಾರಿ ಒಂದೇ ಕೊಯ್ಲಿಗೆ ಸೀಮಿತವಾಗಿದೆ. ಆರು ಕೊಯ್ಲು ಮಾಡುತ್ತಿದ್ದವರು ಮೂರು ಕೊಯ್ಲುಗೆ ಸೀಮಿತಗೊಳ್ಳುವ ಆತಂಕದಲ್ಲಿದ್ದಾರೆ. ಕೆಲವು ಕಡೆಗಳಲ್ಲಿ ಕೊಯ್ಲಿನ ಉಸಬಾರಿಯೇ ಬೇಡ ಎಂದು ಕೇವಲ ಬಿದ್ದ ಅಡಕೆಗೆ ಶರಣಾಗಿದ್ದಾರೆ.

ಮರದಲ್ಲಿ ಅಡಕೆ ಗೊಂಚಲೇ ಕಣ್ಮರೆ!:

ಅಡಕೆ ಕೊಯ್ಲಿನ ಈ ಸಮಯದಲ್ಲಿ ಮರದಲ್ಲಿ ಗೊಂಚಲೇ ಕಣ್ಮರೆಯಾಗುತ್ತಿದೆ. ಸಾಮಾನ್ಯವಾಗಿ ಗೊಂಚಲು ಗೊಂಚಲು ಅಡಕೆ ಕಂಡುಬರುತ್ತಿದ್ದುದು ಈ ಬಾರಿ ಅಪರೂಪವಾಗಿದೆ. ಬಹುತೇಕ ಕಡೆಗಳಲ್ಲಿ ಬಿಸಿಲಿನ ಝಳಕ್ಕೆ ತೋಟಗಳು ಹೈರಾಣದಂತೆ ಕಂಡುಬರುತ್ತಿವೆ. ಸುಳ್ಯ, ಬೆಳ್ತಂಗಡಿ ಭಾಗಗಳಲ್ಲಿ ಎಲೆ ಚುಕ್ಕಿ ರೋಗ ಕಾಣಿಸಿ ಗರಿ ಉದುರತೊಡಗಿದೆ. ಹಳದಿ ಎಲೆರೋಗ ಇನ್ನಿಲ್ಲದಂತೆ ಬಾಧಿಸುತ್ತಿದೆ.

ಕಾಸರಗೋಡಿನಲ್ಲಿ ವ್ಯಾಪಕವಾದ ಎಲೆ ಚುಕ್ಕಿ ರೋಗ:

ಕರಾವಳಿ, ಮಲೆನಾಡಿಗಷ್ಟೇ ಸೀಮಿತವಾಗಿದ್ದ ಎಲೆ ಚುಕ್ಕಿ ರೋಗ ಈ ಬಾರಿ ವ್ಯಾಪಕ ಪ್ರಮಾಣದಲ್ಲಿ ಕಾಸರಗೋಡಿಗೆ ವಿಸ್ತರಿಸಿದೆ. ಕಾಸರಗೋಡಿನ ಕೆಲವು ಕಡೆ ಮಾತ್ರ ಎಲೆ ಚುಕ್ಕಿ ರೋಗ ಹಿಂದೆಯೇ ಇತ್ತು. ಆದರೆ ಇಷ್ಟೊಂದು ಪ್ರಮಾಣದಲ್ಲಿ ಹಬ್ಬಿರಲಿಲ್ಲ. ಭೌಗೋಳಿಕವಾಗಿ ಒಣ ಪ್ರದೇಶದಂತಿರುವ ಕಾಸರಗೋಡು ಜಿಲ್ಲೆಯಲ್ಲಿ ಈ ಬಾರಿ ಶೇ. 40ರಿಂದ ಶೇ.50ರಷ್ಟು ಫಸಲನ್ನು ಎಲೆ ಚುಕ್ಕಿ ರೋಗ ಕಸಿದುಕೊಂಡಿದೆ ಎನ್ನುತ್ತಾರೆ ಕ್ಯಾಂಪ್ಕೋ ಉಪಾಧ್ಯಕ್ಷ ಶಂ.ನಾ.ಖಂಡಿಗೆ.

ಎಲೆ ಚುಕ್ಕಿ ರೋಗಕ್ಕೆ ಅಲ್ಲಲ್ಲಿ ಔಷಧ ಸಿಂಪರಣೆ ಮಾಡಿದರೂ ಸಾಮೂಹಿಕವಾಗಿ ವಿಸ್ತರಿಸುವುದನ್ನು ತಡೆಯಲು ಸಾಧ್ಯವಾಗಿಲ್ಲ. ಅಪವಾದ ಎಂಬಂತೆ ಅಲ್ಲೊಂದು ಇಲ್ಲೊಂದು ಕಡೆಗಳಲ್ಲಿ ಅಡಕೆ ಫಸಲು ಬಿಟ್ಟರೆ ಬೇರೆಲ್ಲ ಕಡೆಗಳಲ್ಲಿ ಉತ್ಪಾದನೆಯೇ ಕುಂಠಿತಗೊಂಡಿದೆ. ಈ ಆರ್ಥಿಕ ವರ್ಷ ಬೆಳೆಗಾರರ ಪಾಲಿಗೆ ಅತ್ಯಂತ ನಷ್ಟ, ಹತಾಶೆಯನ್ನು ಅಡಕೆ ಉತ್ಪಾದನೆ ತಂದಿಟ್ಟಿದೆ ಎನ್ನುತ್ತಾರೆ ಅವರು.

ಹವಾಮಾನ ವೈಪರೀತ್ಯ:

ಕಳೆದ ಕೆಲವು ವರ್ಷಗಳಿಂದ ಹಳದಿ ಎಲೆ ರೋಗ, ಎಲೆ ಚುಕ್ಕಿ ರೋಗದ ಜೊತೆಗೆ ಈ ಬಾರಿ ಹವಾಮಾನ ವೈಪರೀತ್ಯವೂ ಅಡಕೆ ಫಸಲಿಗೆ ಏಟು ನೀಡಿದೆ. ಕಳೆದ ವರ್ಷ ಸುಳ್ಯ ತಾಲೂಕಿನಲ್ಲಿ 42 ಡಿಗ್ರಿ ಸೆಲ್ಸಿಯಸ್‌ ವರೆಗೆ ಉಷ್ಣಾಂಶ ಕಂಡುಬಂದಿತ್ತು. ಇದು ಮುಂದಿನ ದಿನಗಳಲ್ಲಿ ಅಡಕೆ ಮರದ ನಳ್ಳಿ ಉದುರಲು ಕಾರಣವಾಯಿತು. ಔಷಧ ಸಿಂಪರಣೆ ಮಾಡಿದರೂ ಪ್ರಯೋಜನವಾಗುತ್ತಿಲ್ಲ. ದ.ಕ. ಜಿಲ್ಲೆಯಲ್ಲಿ ಕೂಡ ಶೇ.50ರಷ್ಟು ಫಸಲು ಈಗಲೇ ನಷ್ಟವಾಗಿದೆ ಎನ್ನುತ್ತಾರೆ ಪ್ರಗತಿಪರ ಕೃಷಿಕ ರಮೇಶ್‌ ದೇಲಂಪಾಡಿ.

ಈಗಲೇ ಜಿಲ್ಲೆಯಲ್ಲಿ 35 ಡಿಗ್ರಿ ಸೆಲ್ಸಿಯಸ್‌ನಷ್ಟು ಉಷ್ಣಾಂಶ ದಾಖಲಾಗುತ್ತಿದೆ. ನೀರಿನ ಆಸರೆ ಬತ್ತಿಹೋಗುತ್ತಿದೆ. ತೇವಾಂಶ ಗಣನೀಯವಾಗಿ ಕುಸಿದಿದೆ. ಶೇ.41ರ ವರೆಗೆ ತೇವಾಂಶ ಏರಿಕೆ ದಾಖಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ನಳ್ಳಿ ಉದುರಲು ಶುರುವಾಗುತ್ತದೆ. ಮತ್ತೆ ಅಡಕೆ ಫಸಲು ಎಲ್ಲಿಂದ ಸಿಗಬೇಕು. ಇದು ಅಡಕೆ ಇಳುವರಿ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಯಾವ ಸಿಂಪಡಣೆಯೂ ಭಾರೀ ಪರಿಣಾಮ ಬೀರದು ಎನ್ನುತ್ತಾರೆ ಅಖಿಲ ಭಾರತ ಅಡಕೆ ಬೆಳೆಗಾರರ ಸಂಘದ ಅಧ್ಯಕ್ಷ ಮಹೇಶ್‌ ಪುಚ್ಚೆಪ್ಪಾಡಿ.

ಡಬ್ಬಲ್‌ ಚೋಲ್‌ಗೂ ಸಂಕಷ್ಟ!

ಸಣ್ಣ, ಮಧ್ಯಮ ಬೆಳೆಗಾರರಲ್ಲಿ ಅಡಕೆ ಉತ್ಪಾದನೆ ಕೊರತೆ ಇದೆ. ಹೊಸ ಅಡಕೆ ಇದ್ದರೂ ಗುಣಮಟ್ಟ ಸಹಿತವಾಗಿಲ್ಲ. ಅಡಕೆಯನ್ನು ಕತ್ತರಿಸಿದರೆ, ಅದರ ಮಧ್ಯೆ ಕಪ್ಪಗಿನ ರಂಧ್ರ ಕಂಡುಬರುತ್ತದೆ. ಇಂತಹ ಅಡಕೆ ಕೋಕ ಅಥವಾ ಪಟೋರವಾಗಿ ಬೇರೆ ದರ್ಜೆಗೆ ಮಾರಾಟವಾಗುತ್ತದೆ. ಅಡಕೆಯ ಉತ್ಪಾದನೆಯೇ ಕೈಕೊಟ್ಟ ಮೇಲೆ ಡಬ್ಬಲ್‌ ಚೋಲ್‌ ಆಗುವುದು ಹೇಗೆ? ಹೀಗಾಗಿ ಮುಂದಿನ ವರ್ಷಕ್ಕೆ ದರ ಏರಿಕೆಯಲ್ಲಿದ್ದರೂ ಹಳೆ ಅಡಕೆ ದಾಸ್ತಾನು, ಮಾರಾಟ ಬಹುತೇಕ ಬೆಳೆಗಾರರಿಗೆ ಕನ್ನಡಿಯೊಳಗಿನ ಗಂಟು ಆಗಿಯೇ ಉಳಿಯಬಹುದು.

ಅಡಕೆ ಇಳುವರಿ ಕಡಿಮೆಯಾಗಲು ಮುಖ್ಯವಾಗಿ ಹವಾಮಾನ ವೈಪರೀತ್ಯವೇ ಪ್ರಮುಖ ಕಾರಣ. ಕರಾವಳಿ ಕರ್ನಾಟಕದಲ್ಲಿ ಶೇ.40ರಿಂದ 50ರಷ್ಟು ಅತ್ಯಧಿಕ ಮಳೆಯಾಗಿದೆ. ಈಗಲೇ ಶೇ.30ರಷ್ಟು ಫಸಲು ನಷ್ಟ ಉಂಟಾಗಿದೆ. ಹವಾಮಾನ ವೈಪರೀತ್ಯ ಹಿನ್ನೆಲೆಯಲ್ಲಿ ಬೆಳೆಗಾರರಿಗೆ ಸೂಕ್ತ ಪರಿಹಾರ ನೀಡುವ ನಿಟ್ಟಿನಲ್ಲಿ ಹವಾಮಾನ ಆಧಾರಿತ ಬೆಳೆ ವಿಮೆ ಮಂಜೂರಾತಿ ಕೋರಿ ಸಾಗರದಲ್ಲಿ ಕೇಂದ್ರ ಕೃಷಿ ಸಚಿವ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರನ್ನು ಭೇಟಿ ಮಾಡಿ ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಕೇಂದ್ರ(ಸಿಪಿಸಿಆರ್‌ಐ) ವತಿಯಿಂದ ಮನವಿ ಮಾಡಲಾಗಿದೆ.

-ಡಾ.ಕೆ.ಬಿ.ಹೆಬ್ಬಾರ್‌, ನಿರ್ದೇಶಕರು, ಸಿಪಿಸಿಆರ್‌ಐ ಕಾಸರಗೋಡು