ಸಾರಾಂಶ
‘ಆರ್ಥಿಕ, ಸಾಮಾಜಿಕವಾಗಿ ಹಿಂದುಳಿದ ದಲಿತರು, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರಿಗೆ ಗುತ್ತಿಗೆಯಲ್ಲಿ ಮೀಸಲಾತಿ ನೀಡಿದ್ದೇವೆ. ಮುಸ್ಲಿಮರಿಗೂ ನ್ಯಾಯ ಸಿಗಬೇಕು ಎಂಬುದು ನಮ್ಮ ನಿಲುವು.
ಬೆಂಗಳೂರು : ‘ಆರ್ಥಿಕ, ಸಾಮಾಜಿಕವಾಗಿ ಹಿಂದುಳಿದ ದಲಿತರು, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರಿಗೆ ಗುತ್ತಿಗೆಯಲ್ಲಿ ಮೀಸಲಾತಿ ನೀಡಿದ್ದೇವೆ. ಮುಸ್ಲಿಮರಿಗೂ ನ್ಯಾಯ ಸಿಗಬೇಕು ಎಂಬುದು ನಮ್ಮ ನಿಲುವು. ಇದನ್ನು ಮುಸ್ಲಿಮರ ಓಲೈಕೆ ಎಂದು ಕೆಲವು ಹೇಳುತ್ತಿದ್ದಾರೆ. ಮುಸ್ಲಿಮರಿಗೆ ಯಾಕೆ ಮೀಸಲಾತಿ ನೀಡಬಾರದು?’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.
ಕಾಂಗ್ರೆಸ್ ಪಕ್ಷ ಕರ್ನಾಟಕದಲ್ಲಿ ಎಸ್ಸಿ, ಎಸ್ಟಿ ಹಾಗೂ ಹಿಂದುಳಿದವರಿಗೆ ಅನ್ಯಾಯ ಮಾಡಿ ಮುಸ್ಲಿಮರಿಗೆ ಮೀಸಲಾತಿ ನೀಡಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಟೀಕೆ ಮಾಡಿರುವ ಬೆನ್ನಲ್ಲೇ ಕೆಪಿಸಿಸಿ ಕಚೇರಿಯಲ್ಲಿ ನಡೆದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದ ವೇಳೆ ಸಿದ್ದರಾಮಯ್ಯ ತಿರುಗೇಟು ನೀಡಿದರು.
ಮುಸ್ಲಿಮರಿಗೆ ಆರ್ಥಿಕವಾಗಿ, ಸಾಮಾಜಿಕವಾಗಿ ಶಕ್ತಿ ಇದೆಯೇ? ಮುಸ್ಲಿಮರು ವಿದ್ಯಾವಂತರಿದ್ದಾರೆಯೇ? ಯಾಕೆ ಮೀಸಲಾತಿ ಮಾಡಬಾರದು? ಎಂದು ಪ್ರಶ್ನೆ ಮಾಡಿದರು.
ದಲಿತರಿಗೆ, ಹಿಂದುಳಿದವರಿಗೆ (ಪ್ರವರ್ಗ 1, ಪ್ರವರ್ಗ 2ಎ) ಹಾಗೂ ಅಲ್ಪಸಂಖ್ಯಾತರಿಗೆ ಮೊದಲು 50 ಲಕ್ಷ ರು.ವರೆಗಿನ ಗುತ್ತಿಗೆ ಕಾಮಗಾರಿಗಳಲ್ಲಿ ಮೀಸಲಾತಿ ನೀಡಿದ್ದೆ. ಬಳಿಕ 1 ಕೋಟಿ ರು. ಮಾಡಿ ಈಗ 2 ಕೋಟಿ ರು. ವರೆಗೆ ಹೆಚ್ಚಳ ಮಾಡಿದ್ದೇನೆ. ಶಕ್ತಿ ಇಲ್ಲದಿದ್ದರೆ ಶಕ್ತಿ ತುಂಬುವುದೇ ಕಾಂಗ್ರೆಸ್ ಪಕ್ಷದ ಧ್ಯೇಯ. ನಾನು ಯಾವ ಮೇಲ್ವರ್ಗದ ಜಾತಿಯ ವಿರೋಧಿಯೂ ಅಲ್ಲ. ಯಾರಿಗೆ ನ್ಯಾಯ, ಅವಕಾಶ ಸಿಕ್ಕಿಲ್ಲವೋ ಆ ಜನರ ಪರ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಕಾಂಗ್ರೆಸ್ ನ್ಯಾಯ ಒದಗಿಸುವ ಪಕ್ಷ- ಡಿಕೆಶಿ:
ನರೇಂದ್ರ ಮೋದಿ ಆರೋಪಕ್ಕೆ ಪ್ರತಿಕ್ರಿಯಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೂ ಮೀಸಲಾತಿ ನೀಡಲಾಗಿದೆ. ಸಮಾಜದಲ್ಲಿ ಯಾರು ಆರ್ಥಿಕವಾಗಿ ಹಿಂದುಳಿದಿದ್ದಾರೋ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವುದು ನಮ್ಮ ಆದ್ಯತೆ. ಕಾಂಗ್ರೆಸ್ ಪಕ್ಷ ಸಮಾಜದ ಎಲ್ಲಾ ವರ್ಗಗಳಿಗೂ ನ್ಯಾಯ ಒದಗಿಸುವ ಪಕ್ಷ ಎಂದು ಹೇಳಿದರು.