ಧಾರವಾಡ : ನಗರದ ಮಾಳಾಪುರದಲ್ಲಿ ಶುಕ್ರವಾರ ರಾತ್ರಿ ಯುವ ಕಾಂಗ್ರೆಸ್ ಮುಖಂಡ ಫೈರೋಜ್‌ಖಾನ್ ಪಠಾಣ ಅವರ ಹತ್ಯೆಯಾಗಿದ್ದು, ಸ್ನೇಹಿತನೇ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಶುಕ್ರವಾರ ರಾತ್ರಿ ಮಾಳಾಪುರ ಹಾಶ್ಮಿನಗರ 4ನೇ ಕ್ರಾಸ್‌ನಲ್ಲಿ ಇರುವ ಫೈರೋಜ್ ಮನೆಗೆ ನುಗ್ಗಿದ ನಾಲ್ವರು ದುಷ್ಕರ್ಮಿಗಳು, ಚಾಕುವಿನಿಂದ ಅವರನ್ನು ಇರಿದು ಹತ್ಯೆ ಮಾಡಿ ಪರಾರಿಯಾಗಿದ್ದರು. ಹತ್ಯೆಯ ವೀಡಿಯೋ ವೈರಲ್ ಆಗಿತ್ತು. ಪಠಾಣ ಸ್ನೇಹಿತ, ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ ಶಾ ಗುಂಪು ಕಟ್ಟಿಕೊಂಡು ಬಂದು ಕೊಲೆ ಮಾಡಿದ್ದಾರೆ. ರಾಜಕೀಯ ದ್ವೇಷ ಹಾಗೂ ಒಂದೇ ಸಮಾಜದ ಮತ್ತೊಬ್ಬ ವ್ಯಕ್ತಿ ಬೆಳೆಯಬಾರದು ಎಂಬ ಉದ್ದೇಶದಿಂದ ಕೊಲೆ ಮಾಡಲಾಗಿದೆ. ಇದರ ಹಿಂದೆ ಮುಸ್ಲಿಂ ಸಮುದಾಯದ ಹಿರಿಯ ಮುಖಂಡರೊಬ್ಬರ ಕೈವಾಡ ಇದೆ ಎಂದು ಪಠಾಣ ಅಭಿಮಾನಿಗಳು ಆರೋಪಿಸಿದ್ದಾರೆ. 

ಪ್ರತಿಭಟನೆ:

ಈ ನಡುವೆ ಹಂತಕರನ್ನು ಬಂಧಿಸುವಂತೆ ಆಗ್ರಹಿಸಿ ಹತ್ಯೆಗೀಡಾದ ಫೈರೋಜ್‌ಖಾನ್‌ ಪಠಾಣ ಬೆಂಬಲಿಗರು ಹಾಗೂ ಕುಟುಂಬಸ್ಥರು ಉಪನಗರ ಠಾಣೆ ಎದುರು ಶನಿವಾರ ಮೃತದೇಹವಿಟ್ಟು ಪ್ರತಿಭಟನೆ ನಡೆಸಿದರು. ಕೊಲೆ ಆರೋಪಿಗಳು ಯಾರೆಂಬುದು ಗೊತ್ತಿದ್ದರೂ ಪೊಲೀಸರು ಅವರನ್ನು ಬಂಧಿಸಿಲ್ಲ. ಆರು ತಿಂಗಳ ಹಿಂದೆಯೇ ತಮಗೆ ಜೀವ ಬೆದರಿಕೆ ಇರುವುದಾಗಿ ಅವರು ಪೊಲೀಸರಿಗೆ ದೂರು ನೀಡಿದ್ದರು. ಗೃಹ ಸಚಿವರಿಗೂ ಪತ್ರ ಬರೆಯಲಾಗಿತ್ತು. ಆದರೂ ರಕ್ಷಣೆ ನೀಡಿರಲಿಲ್ಲ ಎಂದು ಆರೋಪಿಸಿದರು.


ಕೆಲ ಹೊತ್ತು ಗೊಂದಲ ನಿರ್ಮಾಣ

ಇದರಿಂದ ಕೆಲ ಹೊತ್ತು ಗೊಂದಲ ನಿರ್ಮಾಣ ಆಗಿತ್ತು. ಮಧ್ಯಪ್ರವೇಶಿಸಿದ ಹಿರಿಯ ಅಧಿಕಾರಿಗಳು ಆರೋಪಿಗಳನ್ನು ಬಂಧಿಸುವುದಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನೆ ವಾಪಸ್‌ ಪಡೆದು, ಮೃತದೇಹವನ್ನು ಅವರ ಮನೆಗೆ ತೆಗೆದುಕೊಂಡು ಹೋಗಲಾಯಿತು. ಬಳಿಕ, ಮೃತದೇಹದ ಅಂತ್ಯಕ್ರಿಯೆ ನಡೆಸಲಾಯಿತು.