ಬೆಂಗಳೂರು ರೈಸಿಂಗ್ ಬುಲ್ಸ್‌ಗೆ ‘ಒಕ್ಕಲಿಗರ ಕಪ್’ ಕಬಡ್ಡಿ ಪ್ರಶಸ್ತಿ

| Published : Apr 16 2025, 12:33 AM IST

ಸಾರಾಂಶ

ಒಕ್ಕಲಿಗರ ಕಪ್‌ ಕಬಡ್ಡಿ ಪ್ರಶಸ್ತಿಯನ್ನು ಬೆಂಗಳೂರು ರೈಸಿಂಗ್‌ ಬುಲ್ಸ್‌ ತಂಡ ಪಡೆದು ನಗದು 2 ಲಕ್ಷ ರು. ಹಾಗೂ ಆಕರ್ಷಕ ಟ್ರೋಫಿ ತನ್ನದಾಗಿಸಿಕೊಂಡಿತು.

ಕನ್ನಡಪ್ರಭವಾರ್ತೆ ಸೋಮವಾರಪೇಟೆ

ಒಕ್ಕಲಿಗರ ಯುವ ವೇದಿಕೆ, ರಾಜ್ಯ ಮತ್ತು ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ವತಿಯಿಂದ ಜಿಎಂಪಿ ಶಾಲಾ ಮೈದಾನದಲ್ಲಿ 3 ದಿನಗಳು ನಡೆದ ರಾಷ್ಟ್ರೀಯ ಮಟ್ಟದ ಎ ಗ್ರೇಡ್ ಹೊನಲು ಬೆಳಕಿನ ಪ್ರತಿಷ್ಠಿತ ‘ಒಕ್ಕಲಿಗರ ಕಪ್’ ಕಬಡ್ಡಿ ಪ್ರಶಸ್ತಿಯನ್ನು ಬೆಂಗಳೂರು ರೈಸಿಂಗ್ ಬುಲ್ಸ್ ತಂಡ ಪಡೆದು, ನಗದು 2 ಲಕ್ಷ ರು. ಹಾಗು ಆಕರ್ಷಕ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.ಜೆ.ಕೆ.ಅಕಾಡೆಮಿ ಕಾಸರಗೋಡು ತಂಡ ದ್ವಿತೀಯ ಸ್ಥಾನ ಪಡೆದು 1 ಲಕ್ಷ ನಗದು ಹಾಗು ಆಕರ್ಷಕ ಟ್ರೋಫಿಯನ್ನು ಪಡೆದುಕೊಂಡಿತು.ತೃತೀಯ ಸ್ಥಾನವನ್ನು ಬ್ಯಾಂಕ್ ಆಫ್ ಬರೋಡ, ಚತುರ್ಥ ಸ್ಥಾನವನ್ನು ಬಿಪಿಸಿಎಲ್ ತಂಡ ಪಡೆದು ತಲಾ 50 ಸಾವಿರ ರು. ನಗದು ಹಾಗು ಟ್ರೋಫಿಗಳನ್ನು ಪಡೆದುಕೊಂಡವು.ಸೋಮವಾರ ಮುಂಜಾನೆ 3 ಗಂಟೆಗೆ ಪ್ರಾರಂಭವಾದ ರೋಚಕ ಫೈನಲ್‌ನಲ್ಲಿ 28-26 ಅಂಕಗಳ ಅಂತರದಲ್ಲಿ ವಿಜೇತ ತಂಡ ಗೆಲುವು ದಾಖಲಿಸಿತು. ಮೊದಲ ಸೆಮಿಫೈನಲ್‌ನಲ್ಲಿ ಜೆ.ಕೆ.ಅಕಾಡೆಮಿ ಕಾಸರಗೋಡು ತಂಡ ಬಿಪಿಸಿಎಲ್ ತಂಡವನ್ನು 31-29 ಅಂಕಗಳ ಅಂತರದಲ್ಲಿ ಸೋಲಿಸಿ ಫೈನಲ್‌ಗೇರಿತ್ತು. 2ನೇ ಸೆಮಿಫೈನಲ್‌ನಲ್ಲಿ ರೈಸಿಂಗ್ ಬುಲ್ಸ್ ತಂಡ ಬ್ಯಾಂಕ್ ಆಫ್ ಬರೋಡ ತಂಡವನ್ನು 29-17 ಅಂತರದಲ್ಲಿ ಸೋಲಿಸಿ ಫೈನಲ್‌ಗೇರಿತು.

ದಾನಿಗಳಾದ ಕಿರಗಂದೂರು ಎ.ಎನ್.ಪದ್ಮನಾಭ, ಯುವ ವೇದಿಕೆ ಅಧ್ಯಕ್ಷ ಸುರೇಶ್ ಚಕ್ರವರ್ತಿ, ಗೌರವಾಧ್ಯಕ್ಷ ಬಿ.ಜೆ.ದೀಪಕ್, ರಾಜ್ಯ ಅಮೇಚೂರ್ ಕಬಡ್ಡಿ ಅಸೋಸಿಯೇಶನ್ ಅಧ್ಯಕ್ಷ ಬಿ.ಸಿ.ಸುರೇಶ್, ಹಿರಿಯ ಕಬಡ್ಡಿ ಆಟಗಾರ ಮಂಜೂರು ತಮ್ಮಣಿ, ಯುವ ವೇದಿಕೆ ಜಿಲ್ಲಾಧ್ಯಕ್ಷ ಗಿರೀಶ್ ಮಲ್ಲಪ್ಪ, ಎಸಿಎಫ್ ಗಾನಶ್ರೀ, ಯುವ ವೇದಿಕೆಯ ಪದಾಧಿಕಾರಿಗಳು ಬಹುಮಾನ ವಿತರಿಸಿದರು.ಬೆಸ್ಟ್ ರೈಡರ್ ಕಾಸರಗೋಡು ತಂಡದ ವಿಶ್ವರಾಜ್, ಬೆಸ್ಟ್ ಡಿಫೆಂಡರ್ ರೈಸಿಂಗ್ ಬುಲ್ಸ್ ತಂಡದ ದೀಪಕ್, ಬೆಸ್ಟ್ ಆಲ್‌ರೌಂಡರ್ ಬುಲ್ಸ್ ತಂಡದ ಆಶಿಶ್ ಮಲ್ಲಿಕ್, ಮಹಿಳಾ ಕಬಡ್ಡಿ ಪಂದ್ಯಾವಳಿಯಲ್ಲಿ ಬೆಸ್ಟ್ ರೈಡರ್ ಬೆಳೆಗಾವಿ ಜಿಲ್ಲೆಯ ಜೈ ಮಹಾಕಾಳಿ ತಂಡದ ಅಮೂಲ್ಯ ಪಾಟೀಲ್, ಬೆಸ್ಟ್ ಕ್ಯಾಚರ್ ದಕ್ಷಿಣ ಕನ್ನಡ ತಂಡದ ಮಹಾಲಕ್ಷೀ ಪಡೆದರು.ರಾಜ್ಯ ಮಟ್ಟದ ಮಹಿಳಾ ಕಬಡ್ಡಿ ಪ್ರಶಸ್ತಿಯನ್ನು ಬೆಳಗಾವಿ ಜೈ ಮಹಾಕಾಳಿ ತಂಡ ಪಡೆಯಿತು. ದ್ವಿತೀಯ ಸ್ಥಾನವನ್ನು ದಕ್ಷಿಣ ಕನ್ನಡ ಜಿಲ್ಲಾ ತಂಡ ಪಡೆಯಿತು.ಭಾನುವಾರ ರಾತ್ರಿ ನಡೆದ ಸಮಾರೋಪ ಸಮಾರಂಭದಲ್ಲಿ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸೆಮಿಫೈನಲ್ ಪಂದ್ಯಾಟಕ್ಕೆ ಚಾಲನೆ ನೀಡಿದರು. ಮಡಿಕೇರಿ ಶಾಸಕ ಡಾ.ಮಂತರ್‌ಗೌಡ, ಜೆಡಿಎಸ್ ಮುಖಂಡ ನಿಖಿಲ್ ಕುಮಾರ ಸ್ವಾಮಿ. ಹುಣಸೂರು ಶಾಸಕ ಹರೀಶ್ ಗೌಡ ಶುಭಕೋರಿದರು. ಶ್ರೀ ಆದಿ ಚುಂಚನಗಿರಿ ಮಹಾಸಂಸ್ಥಾನದ ಹಾಸನ ಶಾಖ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಅವರು ಆಶೀರ್ವಚನ ನೀಡಿದರು. ವೇದಿಕೆಯಲ್ಲಿ ದಾನಿಗಳಾದ ಹರಪಳ್ಳಿ ರವೀಂದ್ರ, ಹಿರಿಯ ವಕೀಲ ಚಂದ್ರಮೌಳಿ, ವಿ.ಎಂ.ವಿಜಯ ಮತ್ತಿತರ ಗಣ್ಯರು ಇದ್ದರು. ಯುವ ವೇದಿಕೆಯ ಪದಾಧಿಕಾರಿಗಳು, ತೀರ್ಪುಗಾರರು, ದಾನಿಗಳು, ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದವರು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಕೂತಿ ದಿವಾಕರ್, ಗುರುರಾಜ್ ಶಿರಸಿ, ಶೇಖರ್ ಮೂರ್ತಿ ಬೆಂಗಳೂರು ನಿರೂಪಿಸಿದರು.