ಬೆಂಗಳೂರು ಗ್ರಾಮಾಂತರ: 15 ಅಭ್ಯರ್ಥಿಗಳ ಹಣೆಬರಹ ಇಂದು ನಿರ್ಧಾರ

| Published : Apr 26 2024, 12:53 AM IST / Updated: Apr 26 2024, 11:55 AM IST

vote
ಬೆಂಗಳೂರು ಗ್ರಾಮಾಂತರ: 15 ಅಭ್ಯರ್ಥಿಗಳ ಹಣೆಬರಹ ಇಂದು ನಿರ್ಧಾರ
Share this Article
  • FB
  • TW
  • Linkdin
  • Email

ಸಾರಾಂಶ

ರಾಮನಗರ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಚುನಾವಣೆಯಲ್ಲಿ ಸ್ಪರ್ಧಿಸಿರುವ ರಾಜಕೀಯ ಪಕ್ಷಗಳು ಮತ್ತು ಪಕ್ಷೇತರ ಅಭ್ಯರ್ಥಿಗಳ ಹಣೆಬರಹವನ್ನು ಮತದಾರರು ನಿರ್ಧರಿಸಲಿದ್ದಾರೆ.

ರಾಮನಗರ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಚುನಾವಣೆಯಲ್ಲಿ ಸ್ಪರ್ಧಿಸಿರುವ ರಾಜಕೀಯ ಪಕ್ಷಗಳು ಮತ್ತು ಪಕ್ಷೇತರ ಅಭ್ಯರ್ಥಿಗಳ ಹಣೆಬರಹವನ್ನು ಮತದಾರರು ಇಂದು ನಿರ್ಧರಿಸಲಿದ್ದಾರೆ.

ಡಾ.ಸಿ.ಎನ್.ಮಂಜುನಾಥ್ (ಬಿಜೆಪಿ) ಡಿ.ಕೆ.ಸುರೇಶ್ (ಕಾಂಗ್ರೆಸ್), ನೊಂದಾಯಿತ ರಾಜಕೀಯ ಪಕ್ಷಗಳ ಅಭ್ಯರ್ಥಿಗಳಾದ

ಕೆ.ಅಭಿಷೇಕ್ (ಉತ್ತಮ ಪ್ರಜಾಕೀಯ ಪಕ್ಷ), ಎಲ್ . ಕುಮಾರ್ (ಭಾರತೀಯ ಪ್ರಜೆಗಳ ಕಲ್ಯಾಣ ಪಕ್ಷ), ಎನ್.ಕೃಷ್ಣಪ್ಪ (ಪಿರಮಿಡ್ ಪಾರ್ಟಿ ಆಫ ಇಂಡಿಯಾ), ಎಚ್.ವಿ. ಚಂದ್ರಶೇಖರ್ (ವಿದುತಲೈ ಚಿರುತ್ತಗಲ ಕಟಚಿ ಪಕ್ಷ), ಮಹಮದ್ ಮುಸದಿಕ್ ಪಾಶ (ಕರ್ನಾಟಕ ರಾಷ್ಟ್ರೀಯ ಸಮಿತಿ), ಮಹಮದ್ ದಸ್ತಗಿರ್ (ಯಂಗ್ ಸ್ಟಾರ್ ಎಂಪವರ್‍ಮೆಂಟ್ ಪಕ್ಷ) ಸಿ.ಎನ್.ಮಂಜುನಾಥ (ಬಹುಜನ ಭಾರತ ಪಕ್ಷ), ಜೆ.ವಶಿಷ್ಟ (ಕಂಟ್ರಿ ಸಿಟಿಜನ್ ಪಾರ್ಟಿ), ಎಸ್. ಸುರೇಶ್ (ಕರುನಾಡ ಪಾರ್ಟಿ),ಕೆ.ಹೇಮಾವತಿ ( ಸೋಷಿಯಲಿಷ್ಟ್ ಯೂನಿಟಿ ಸೆಂಟರ್ ಆಪ್ ಇಂಡಿಯಾ -ಕಮ್ಯೂನಿಸ್ಟ್ ) ಪಕ್ಷೇತರ ಅಭ್ಯರ್ಥಿಗಳಾದ ಜೆ.ಪಿ.ನರಸಿಂಹ ಮೂರ್ತಿ, ಜೆ.ಟಿ.ಪ್ರಕಾಶ್ ಹಾಗೂ ಎಂ.ಎನ್.ಸುರೇಶ್ ಅಂತಿಮವಾಗಿ ಕಣದಲ್ಲಿದ್ದು, ಅದೃಷ್ಟ ಪರೀಕ್ಷೆಗಾಗಿ ಕಾಯುತ್ತಿದ್ದರೆ, ಮತದಾರರು ಅವರ ರಾಜಕೀಯ ಭವಿಷ್ಯ ಬರೆಯಲು ಕಾತುರರಾಗಿದ್ದಾರೆ.

ಕ್ಷೇತ್ರದಲ್ಲಿ 14,24,685 ಪುರುಷರು , 13,77,570 ಮಹಿಳಾ ಮತದಾರರು, 325 ಇತರೆ ಮತದಾರರು ಸೇರಿದಂತೆ ಒಟ್ಟು 28,02,580 ಮತದಾರರು ಅಭ್ಯರ್ಥಿಗಳ ಹಣೆಬರಹ ಬರೆಯಲಿದ್ದಾರೆ. ಚುನಾವಣೆ ರಣಾಂಗಣ ಪರಾಕಾಷ್ಠೆಗೆ ಮುಟ್ಟಿದೆ. ಜಿದ್ದಾಜಿದ್ದಿನ ಹೋರಾಟದಲ್ಲಿ ಗೆಲವಿಗಾಗಿ ಪ್ರಮುಖ ಪಕ್ಷಗಳು ಮತ್ತು ಅಭ್ಯರ್ಥಿಗಳು ತಮ್ಮದೇ ಆದ ಕಾರ್ಯತಂತ್ರದೊಂದಿಗೆ ಅಂತಿಮ ಹಂತದ ಕಸರತ್ತು ನಡೆಸಿದ್ದಾರೆ.

ಪಾರಮ್ಯಕ್ಕೆ ಪ್ರಯತ್ನ:

ಈ ಚುನಾವಣೆ ಬಿಜೆಪಿ - ಜೆಡಿಎಸ್ ಮೈತ್ರಿ ಪಾಲಿಗೆ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಮತದಾನಕ್ಕೆ ಕ್ಷಣ ಗಣನೆ ಸಮೀಪಿಸುತ್ತಿದ್ದಂತೆಯೇ ಅಭ್ಯರ್ಥಿಗಳ ಹೃದಯದ ಬಡಿತವೂ ಹೆಚ್ಚಾಗಿದೆ.

ಪಕ್ಷಗಳ ಕಸರತ್ತು:

ರಾಜಕೀಯ ಪಕ್ಷಗಳ ಶಕ್ತಿ ಸಾಬೀತು ಮತ್ತು ಅಭ್ಯರ್ಥಿಗಳ ಸ್ವಸಾಮರ್ಥ್ಯ ಸಾಬೀತು ಪಡಿಸಲು ಸಂಸತ್ ಚುನಾವಣೆ ಅಗ್ನಿ ಪರೀಕ್ಷೆಯಾಗಿದೆ. ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಮೇಲೂ ಫಲಿತಾಂಶ ಪರಿಣಾಮ ಬೀರಲಿರುವ ಕಾರಣಕ್ಕೆ ಪ್ರಮುಖ ರಾಜಕೀಯ ಮುಖಂಡರು ತಮ್ಮ ಪ್ರತಿಷ್ಠೆಯನ್ನು ಪಣಕ್ಕಿಟ್ಟಿದ್ದಾರೆ.

ಅಭ್ಯರ್ಥಿಗಳಿಗೆ ಆರ್ಥಿಕ ಸಂಪನ್ಮೂಲದೊಟ್ಟಿಗೆ ಅಗತ್ಯ ಶಕ್ತಿ ತುಂಬುವ ಕೆಲಸಕ್ಕೆ ಸಾಕಷ್ಟು ಮುಖಂಡರು ಶ್ರಮ ವಹಿಸಿದ್ದಾರೆ. ಗೆಲುವನ್ನೇ ಮಾನದಂಡ ಮಾಡಿರುವ ಅಭ್ಯರ್ಥಿಗಳ ನೀರಿನಂತೆ ಹಣ ಖರ್ಚು ಮಾಡುತ್ತಿದ್ದಾರೆ. ಚುನಾವಣಾ ಅಕ್ರಮಗಳ ಭರಾಟೆಯೂ ಜೋರಾಗಿದೆ.