ಉಪನ್ಯಾಸಕರು, ಸ್ನೇಹಿತನಿಂದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ - ವಿಡಿಯೋ ಇದೆ ಎಂದು ಬ್ಲ್ಯಾಕ್‌ಮೇಲ್‌

| N/A | Published : Jul 16 2025, 12:45 AM IST / Updated: Jul 16 2025, 04:45 AM IST

ಉಪನ್ಯಾಸಕರು, ಸ್ನೇಹಿತನಿಂದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ - ವಿಡಿಯೋ ಇದೆ ಎಂದು ಬ್ಲ್ಯಾಕ್‌ಮೇಲ್‌
Share this Article
  • FB
  • TW
  • Linkdin
  • Email

ಸಾರಾಂಶ

ಕಾಲೇಜು ವಿದ್ಯಾರ್ಥಿನಿಗೆ ಬ್ಲ್ಯಾಕ್‌ಮೇಲ್‌ ಮಾಡಿ ಅತ್ಯಾಚಾರ ಎಸಗಿದ್ದ ಭೌತಶಾಸ್ತ್ರ, ಜೀವ ರಸಾಯನಶಾಸ್ತ್ರ ಉಪನ್ಯಾಸಕರು ಹಾಗೂ ಅವರ ಗೆಳೆಯನೊಬ್ಬನನ್ನು ಬೆಂಗಳೂರಿನ ಮಾರತ್ತಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

  ಬೆಂಗಳೂರು :  ಕಾಲೇಜು ವಿದ್ಯಾರ್ಥಿನಿಗೆ ಬ್ಲ್ಯಾಕ್‌ಮೇಲ್‌ ಮಾಡಿ ಅತ್ಯಾಚಾರ ಎಸಗಿದ್ದ ಭೌತಶಾಸ್ತ್ರ, ಜೀವ ರಸಾಯನಶಾಸ್ತ್ರ ಉಪನ್ಯಾಸಕರು ಹಾಗೂ ಅವರ ಗೆಳೆಯನೊಬ್ಬನನ್ನು ಬೆಂಗಳೂರಿನ ಮಾರತ್ತಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ದಕ್ಷಿಣ ಕನ್ನಡದ ಪ್ರತಿಷ್ಠಿತ ಕಾಲೇಜೊಂದರ ಭೌತಶಾಸ್ತ್ರ ಉಪನ್ಯಾಸಕ ನರೇಂದ್ರ (32), ಅದೇ ಕಾಲೇಜಿನ ಜೀವ ರಸಾಯನಶಾಸ್ತ್ರ ಉಪನ್ಯಾಸಕ ಸಂದೀಪ್‌ (41) ಹಾಗೂ ನರೇಂದ್ರನ ಸ್ನೇಹಿತನಾಗಿರುವ ರಿಯಲ್‌ ಎಸ್ಟೇಟ್‌ ಉದ್ಯಮಿ ಅನೂಪ್‌ (33) ಬಂಧಿತರು. ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಮೂವರನ್ನೂ ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗೆ ಪೊಲೀಸರು ಕಳುಹಿಸಿದ್ದಾರೆ.

ಹೇಯ ಕೃತ್ಯ:

ಎಂಜಿನಿಯರಿಂಗ್‌ ಪದವಿಯ ನೋಟ್ಸ್‌ಗಳನ್ನು ನೀಡುತ್ತೇನೆ ಎಂದು ನಂಬಿಸಿ ಭೌತಶಾಸ್ತ್ರ ಉಪನ್ಯಾಸಕ ನರೇಂದ್ರ ಮಾರತ್ತಹಳ್ಳಿ ಠಾಣೆ ವ್ಯಾಪ್ತಿಯ ಕಾಡುಬೀಸನಹಳ್ಳಿಯ ರೂಂಗೆ ವಿದ್ಯಾರ್ಥಿನಿಯನ್ನು ಕರೆಸಿಕೊಂಡಿದ್ದ. ಅಲ್ಲಿ ಆಕೆಯ ಮೇಲೆ ಅತ್ಯಾಚಾರ ಮಾಡಿ ದೌರ್ಜನ್ಯ ಎಸಗಿದ್ದ. ಇದಾದ ನಂತರ ನರೇಂದ್ರನ ಸ್ನೇಹಿತ ಅನೂಪ್‌ ಸಂತ್ರಸ್ತ ವಿದ್ಯಾರ್ಥಿನಿಯನ್ನು ಇನ್‌ಸ್ಟಾ ಗ್ರಾಂ ಮೂಲಕ ಸಂಪರ್ಕಿಸಿದ್ದ. ನರೇಂದ್ರನ ಜತೆಗಿದ್ದ ಖಾಸಗಿ ಚಿತ್ರಗಳು ತನ್ನ ಬಳಿ ಇದ್ದು, ಅದನ್ನು ಅಪ್‌ಲೋಡ್‌ ಮಾಡುವುದಾಗಿ ಬೆದರಿಕೆಯೊಡ್ಡಿದ್ದ. ಹೆದರಿದ ವಿದ್ಯಾರ್ಥಿನಿಯನ್ನು ಕಾಡುಬೀಸನಹಳ್ಳಿಯ ರೂಂಗೇ ಕರೆಸಿಕೊಂಡು ಅತ್ಯಾಚಾರ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಷಯ ತಿಳಿದ ಜೀವ ರಸಾಯನಶಾಸ್ತ್ರ ಉಪನ್ಯಾಸಕ ಸಂದೀಪ್‌ ಕೂಡ ವಿದ್ಯಾರ್ಥಿನಿಯನ್ನು ಇನ್‌ಸ್ಟಾಗ್ರಾಂ ಮೂಲಕ ಸಂಪರ್ಕಿಸಿದ್ದ. ನರೇಂದ್ರ ತೆಗೆದಿರುವ ಖಾಸಗಿ ಚಿತ್ರಗಳು ತನ್ನ ಬಳಿಯೂ ಇದ್ದು, ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್‌ ಮಾಡುವುದಾಗಿ ಬ್ಲ್ಯಾಕ್‌ಮೇಲ್‌ ಮಾಡಿದ್ದ. ಬಳಿಕ ವಿದ್ಯಾರ್ಥಿನಿಯನ್ನು ಬೆಂಗಳೂರಿನ ಶೇಷಾದ್ರಿಪುರ ರಸ್ತೆಯಲ್ಲಿರುವ ಹೋಟೆಲ್‌ಗೆ ಕರೆಸಿಕೊಂಡು ಅತ್ಯಾಚಾರ ಮಾಡಿದ್ದ ಎಂದು ವಿವರಿಸಿದ್ದಾರೆ.

ಈ ದೌರ್ಜನ್ಯದಿಂದ ಬೇಸತ್ತು ಕೊನೆಗೆ ರಾಜ್ಯ ಮಹಿಳಾ ಆಯೋಗಕ್ಕೆ ಆಕೆ ದೂರು ಕೊಟ್ಟಿದ್ದಳು. ಬಳಿಕ ಆಯೋಗದ ಸೂಚನೆ ಮೇರೆಗೆ ಮಾರತ್ತಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಆರೋಪಿಗಳ ಪತ್ತೆಗೆ ತನಿಖಾ ತಂಡವನ್ನು ರಚನೆ ಮಾಡಿದ್ದರು. ಬಳಿಕ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

Read more Articles on