ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ ಜಿಕೆವಿಕೆಯಲ್ಲಿ ನವೆಂಬರ್‌ 2ನೇ ವಾರ ‘ಕೃಷಿ ಮೇಳ’

| Published : Aug 13 2024, 01:20 AM IST / Updated: Aug 13 2024, 11:14 AM IST

ಸಾರಾಂಶ

ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ ಪ್ರತಿವರ್ಷ ಹೆಬ್ಬಾಳದ ಜಿಕೆವಿಕೆಯಲ್ಲಿ ಆಯೋಜಿಸುವ ಬಹು ನಿರೀಕ್ಷಿತ ‘ಕೃಷಿ ಮೇಳ’ ಈ ಬಾರಿ ನವೆಂಬರ್‌ ಎರಡನೇ ವಾರದಲ್ಲಿ ನಡೆಯುವ ಸಾಧ್ಯತೆಯಿದ್ದು, 4 ಹೊಸ ತಳಿ, 17 ನೂತನ ತಾಂತ್ರಿಕತೆ, 2 ವಿಭಿನ್ನ ಯಂತ್ರಗಳ ಲೋಕಾರ್ಪಣೆಗೆ ಸಿದ್ಧತೆ ನಡೆದಿದೆ.

ಸಿದ್ದು ಚಿಕ್ಕಬಳ್ಳೇಕೆರೆ

 ಬೆಂಗಳೂರು :  ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ ಪ್ರತಿವರ್ಷ ಹೆಬ್ಬಾಳದ ಜಿಕೆವಿಕೆಯಲ್ಲಿ ಆಯೋಜಿಸುವ ಬಹು ನಿರೀಕ್ಷಿತ ‘ಕೃಷಿ ಮೇಳ’ ಈ ಬಾರಿ ನವೆಂಬರ್‌ ಎರಡನೇ ವಾರದಲ್ಲಿ ನಡೆಯುವ ಸಾಧ್ಯತೆಯಿದ್ದು, 4 ಹೊಸ ತಳಿ, 17 ನೂತನ ತಾಂತ್ರಿಕತೆ, 2 ವಿಭಿನ್ನ ಯಂತ್ರಗಳ ಲೋಕಾರ್ಪಣೆಗೆ ಸಿದ್ಧತೆ ನಡೆದಿದೆ.

ಬರಗಾಲದಲ್ಲೂ ಅಧಿಕ ಇಳುವರಿ ನೀಡುವ ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚಾಗಿರುವ ಸೂರ್ಯಕಾಂತಿ, ಮುಸುಕಿನ ಜೋಳ, ಅಲಸಂದೆ ಮತ್ತು ನೇಪಿಯರ್‌ನ ನೂತನ ತಳಿಗಳನ್ನು ಸಂಶೋಧಿಸಿದ್ದು, ಕೃಷಿಮೇಳದಲ್ಲಿ ಬಿಡುಗಡೆಯಾಗಲಿವೆ. ಒಕ್ಕಣಿಕೆಯನ್ನು ಸರಳವಾಗಿಸುವ ಎರಡು ಸುಧಾರಿತ ಕೃಷಿ ಯಂತ್ರಗಳನ್ನೂ ಸಂಶೋಧಿಸಲಾಗಿದೆ. ಜತೆಗೆ, ಬೆಳೆ ಸಂರಕ್ಷಣೆ, ಕಳೆ ನಿರ್ವಹಣೆ, ಉತ್ಪಾದನೆ ಮತ್ತಿತರ ವಿಭಾಗಗಳಲ್ಲಿ ಒಟ್ಟು 17 ನೂತನ ತಾಂತ್ರಿಕತೆಗಳನ್ನು ಕೃಷಿಮೇಳದಲ್ಲಿ ಅನಾವರಣಗೊಳಿಸಲಾಗುವುದು.

ರೋಗ ನಿರೋಧಕತೆಯ ಅಲಸಂದೆ:

ಅಲಸಂದೆಯ ಸಿ-152 ತಳಿಯನ್ನು ರೈತರು ಹೆಚ್ಚಾಗಿ ಬೆಳೆಯುತ್ತಿದ್ದು, ಹೆಕ್ಟೇರ್‌ಗೆ ಏಳೆಂಟು ಕ್ವಿಂಟಾಲ್‌ ಇಳುವರಿ ಪಡೆಯುತ್ತಿದ್ದರು. ಆದರೆ ಇದಕ್ಕೆ ರೋಗಬಾಧೆ ಹೆಚ್ಚಾಗಿತ್ತು. ಆದ್ದರಿಂದ ಕೆಬಿಸಿ-12 ಎಂಬ 80 ದಿನಕ್ಕೆ ಕಟಾವು ಮಾಡುವ ಹೊಸ ತಳಿ ಅಭಿವೃದ್ಧಿಪಡಿಸಿದ್ದು ಹೆಕ್ಟೇರ್‌ಗೆ 13 ರಿಂದ 14 ಕ್ವಿಂಟಾಲ್‌ ಇಳುವರಿ ಬರಲಿದೆ. ಬೇಸಿಗೆ ಮತ್ತು ಮುಂಗಾರಿನಲ್ಲೂ ಬೆಳೆಯಬಹುದು. ಅಂಗಮಾರಿ ರೋಗ, ನಂಜಾಣು ಹಾಗೂ ಬೇರು ಕೊಳೆ ರೋಗಕ್ಕೆ ನಿರೋಧಕ ಶಕ್ತಿಯನ್ನು ಈ ಹೊಸ ತಳಿ ಹೊಂದಿದೆ. ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ತುಮಕೂರು, ಮಂಡ್ಯ, ಚಾಮರಾಜನಗರ, ಮೈಸೂರು ಮತ್ತಿತರ ಜಿಲ್ಲೆಗಳಲ್ಲಿ ಈ ತಳಿಯನ್ನು ಬೆಳೆಯಬಹುದು ಎಂದು ಮಂಡ್ಯ ವಿ.ಸಿ.ಫಾರಂನ ಪ್ರಧಾನ ವಿಜ್ಞಾನಿ ಡಾ। ಎಚ್‌.ಸಿ.ಲೋಹಿತಾಶ್ವ ತಿಳಿಸಿದ್ದಾರೆ.

ಮೇವಿಗೆ ಸಂಬಂಧಿಸಿದಂತೆ ‘ಬಾಜ್ರ ನೇಪಿಯರ್‌ ಪಿಬಿಎನ್‌-342’ ತಳಿಯನ್ನೂ ಸಂಶೋಧಿಸಲಾಗಿದ್ದು, ಹೆಕ್ಟೇರ್‌ಗೆ 1497 ಕ್ವಿಂಟಾಲ್‌ ಹಸಿರು ಮೇವಿನ ಇಳುವರಿ ಬರಲಿದೆ. ಒಣ ಮೇವಿನಲ್ಲಿ 204 ಕ್ವಿಂಟಾಲ್‌ ಇಳುವರಿ ಸಿಗಲಿದೆ, ಅಗಲವಾದ ಎಲೆಗಳನ್ನು ಹೊಂದಿದೆ. ಕಾಂಡ ಮೃದುವಾಗಿದೆ. ಸಸಾರಜನಕವೂ ಅಧಿಕವಾಗಿದ್ದು, ಗುಣಮಟ್ಟದ ಪೌಷ್ಠಿಕಾಂಶ ಒಳಗೊಂಡಿದೆ ಎಂದು ವಿವಿ ಮೂಲಗಳು ತಿಳಿಸಿವೆ.

ಅಧಿಕ ಎಣ್ಣೆ ಅಂಶದ ಸೂರ್ಯಕಾಂತಿ

ಸೂರ್ಯಕಾಂತಿಯ ಕೆಬಿಎಸ್‌ಎಚ್‌-90 ತಳಿಯನ್ನು ಕೃಷಿ ವಿವಿ ಆವಿಷ್ಕರಿಸಿದ್ದು, ಅಧಿಕ ಇಳುವರಿಯ ಜೊತೆಗೆ ಎಣ್ಣೆಯ ಅಂಶವೂ ಹೆಚ್ಚಾಗಿರುವುದು ಇದರ ವಿಶೇಷವಾಗಿದೆ. 80 ದಿನಗಳ ಅಲ್ಪಾವಧಿ ತಳಿ ಇದಾಗಿದ್ದು, ಮಧ್ಯಮ ಎತ್ತರ ಹೊಂದಿದೆ. ಹೆಕ್ಟೇರ್‌ಗೆ 23 ರಿಂದ 24 ಕ್ವಿಂಟಾಲ್‌ ಇಳುವರಿ ಬರಲಿದೆ.

ಬಹುಪಯೋಗಿ ಮುಸುಕಿನ ಜೋಳ

ಮುಸುಕಿನ ಜೋಳದ ಬಹುಪಯೋಗಿ ಎಂಎಎಚ್‌ 15-84 ತಳಿಯನ್ನೂ ಅಭಿವೃದ್ಧಿಪಡಿಸಲಾಗಿದೆ. ಕಾಳು, ಹಸಿ ಮೇವು, ಪಾಶ್ಚರೀಕರಿಸಿದ ಬಳಕೆಗೂ ಇದು ಸೂಕ್ತವಾಗಿದೆ. ಈವರೆಗೆ ಬಳಸುತ್ತಿದ್ದ ಎಂಎಎಚ್‌ 14-5 ತಳಿ ಹೆಕ್ಟೇರ್‌ಗೆ 81 ರಿಂದ 85 ಕ್ವಿಂಟಾಲ್‌ ಇಳುವರಿ ಬರುತ್ತಿತ್ತು. ಆದರೆ ಎಂಎಎಚ್‌ 15-84 ತಳಿಯು 92 ರಿಂದ 95 ಕ್ವಿಂಟಾಲ್‌ ಇಳುವರಿ ನೀಡಲಿದೆ. ರೋಗ ನಿರೋಧಕ ಶಕ್ತಿ ಅಧಿಕವಾಗಿದೆ.

ಬರ ಸಹಿಷ್ಣುವಾಗಿದ್ದು, ಅಧಿಕ ಇಳುವರಿ ನೀಡುವ, ರೋಗನಿರೋಧಕ ಶಕ್ತಿ ಹೆಚ್ಚಾಗಿರುವ ತಳಿಗಳ ಅಭಿವೃದ್ಧಿಗೆ ವಿವಿ ಆದ್ಯತೆ ನೀಡುತ್ತಿದೆ. ಇದರಿಂದಾಗಿ ರೈತರಿಗೆ ಬಹಳಷ್ಟು ಅನುಕೂಲವಾಗಲಿದೆ.

-ಡಾ। ಎಸ್‌.ವಿ.ಸುರೇಶ, ಬೆಂಗಳೂರು ಕೃಷಿ ವಿವಿ ಕುಲಪತಿ.