ಸಾರಾಂಶ
ಶಿವಾನಂದ ಗೊಂಬಿ
ಹುಬ್ಬಳ್ಳಿ: ನದಿಯಂತೆ ಹರಿದು ಕಾಡುವ ಬೆಣ್ಣಿಹಳ್ಳ- ತುಪರಿಹಳ್ಳ ಪ್ರವಾಹಕ್ಕೆ ಶಾಶ್ವತ ಪರಿಹಾರಕ್ಕಾಗಿ ರೈತರು, ಹೋರಾಟಗಾರರು ಮಾ.7 ರಂದು ಸಿಎಂ ಸಿದ್ದರಾಮಯ್ಯ ಮಂಡಿಸಲಿರುವ ರಾಜ್ಯ ಬಜೆಟ್ ಮೇಲೆ ಭಾರೀ ನಿರೀಕ್ಷೆಹಿಟ್ಟುಕೊಂಡಿದ್ದಾರೆ.ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ದುಂಡಸಿ ಗ್ರಾಮದ ಬಳಿ ಉಗಮವಾಗುವ ಬೆಣ್ಣಿಹಳ್ಳ ಹಾಗೂ ಬೆಳಗಾವಿ ಜಿಲ್ಲೆಯ ಕಿತ್ತೂರಲ್ಲಿ ಹುಟ್ಟುವ ತುಪರಿಹಳ್ಳ ಧಾರವಾಡ ಜಿಲ್ಲೆಯಲ್ಲಿ ಸೃಷ್ಟಿಸುವ ಪ್ರವಾಹದ ಆವಾಂತರ ಅಷ್ಟಿಷ್ಟಲ್ಲ. ಬೇಸಿಗೆಯಲ್ಲಿ ಮೈದಾನದಂತೆ ಇರುವ ಈ ಹಳ್ಳಹಳು ಮಳೆಗಾಲದಲ್ಲಿ ಮಾತ್ರ ಯಾವುದೇ ನದಿಗೂ ಕಮ್ಮಿಯಿಲ್ಲದಂತೆ ಉಕ್ಕೇರಿ ಹರಿಯುತ್ತವೆ. ಹಳ್ಳದ ದಂಡೆಯ ಗ್ರಾಮಗಳು ಅಕ್ಷರಶಃ ನರಳುತ್ತವೆ. ಹೀಗಾಗಿ, ಶಾಶ್ವತ ಪರಿಹಾರ ಕಾರ್ಯ ಕೈಗೊಳ್ಳಬೇಕು ಎಂಬ ಕೂಗು ಬಹುವರ್ಷಗಳದ್ದು.
ಹಾಗಂತ ಸರ್ಕಾರ ಏನು ಮಾಡಿಯೇ ಇಲ್ಲ ಅಂತೇನೂ ಅಲ್ಲ. ತುಪರಿಹಳ್ಳದ ಶಾಶ್ವತ ಯೋಜನೆಗಾಗಿ ₹312 ಕೋಟಿ ಯೋಜನೆಗೆ ಬಿಜೆಪಿ ಸರ್ಕಾರ ಇದ್ದಾಗಲೇ ಅಸ್ತು ಎಂದಿತ್ತು. ಮೊದಲ ಹಂತವಾಗಿ ₹156 ಕೋಟಿ ಬಿಡುಗಡೆಯಾಗಿ ಕೆಲಸ ಸಾಗಿದೆ. ಆದರೆ ಕೆಲಸ ಆಮೆಗತಿಯಲ್ಲಿ ಸಾಗಿದೆ. ಇನ್ನು 2ನೆಯ ಹಂತದ ಕೆಲಸಕ್ಕೆ ಪ್ರಸ್ತಾವನೆ ಹೋದರೂ ಸರ್ಕಾರ ಮಾತ್ರ ಅಸ್ತು ಎನ್ನುತ್ತಲೇ ಇಲ್ಲ. ಈ ಬಜೆಟ್‌ನಲ್ಲಿ ಎರಡನೆಯ ಹಂತದ ಕಾಮಗಾರಿಗೆ ಅನುದಾನ ಮೀಸಲಿಡಬೇಕು ಎಂಬುದು ಹೋರಾಟಗಾರರ ಬೇಡಿಕೆ.₹200 ಕೋಟಿಗೆ ಸೀಮಿತವೇ?
ಬೆಣ್ಣಿಹಳ್ಳದ ಪ್ರವಾಹ ತಡೆಗೆ ಕರ್ನಾಟಕ ನೀರಾವರಿ ನಿಗಮ ಸಿದ್ಧಪಡಿಸಿರುವ ಯೋಜನೆ ಬರೋಬ್ಬರಿ ₹1500 ಕೋಟಿ ಯೋಜನೆಯದ್ದು. ಆದರೆ ರಾಜ್ಯ ಸರ್ಕಾರ ₹200 ಕೋಟಿ ಬಿಡುಗಡೆ ಮಾಡಿದೆ. ಇದರಲ್ಲಿ ಪ್ರವಾಹ ತಡೆಗೇ ಏನೇನು ಬೇಕೋ ಆ ಕೆಲಸ ಕೈಗೊಳ್ಳಿ ಎಂಬ ಸೂಚನೆಯನ್ನು ಸರ್ಕಾರ ನೀಡಿದೆ. ಹೀಗಾಗಿ ₹200 ಕೋಟಿಯಲ್ಲಿ ಏನೇನೂ ಕೈಗೊಳ್ಳಬೇಕೆಂದು ಸೂಚನೆಯನ್ನು ನೀಡಿದೆ. ಅದರಂತೆ ಯಾವ್ಯಾವ ಕಾಮಗಾರಿಗಳನ್ನು ಕೈಗೊಳ್ಳಬಹುದೆಂಬುದನ್ನು ಲೆಕ್ಕ ಹಾಕುವುದರಲ್ಲಿ ನೀರಾವರಿ ನಿಗಮ ಇದೆ. ಹೀಗಾಗಿ, ಈ ಬಜೆಟ್‌ನಲ್ಲಿ ಬೆಣ್ಣಿಹಳ್ಳದ ಶಾಶ್ವತ ಯೋಜನೆಗೆ ಬೇಕಾಗುವ ₹1500 ಕೋಟಿಗೂ ಅಧಿಕ ಅನುದಾನವನ್ನು ಏಕಕಾಲಕ್ಕೆ ನೀಡಬೇಕು. ಈ ಯೋಜನೆ ಕೈಗೊಳ್ಳುವುದರಿಂದ ಪ್ರವಾಹ ತಡೆಗಟ್ಟುವುದರ ಜತೆಗೆ ಸಾಕಷ್ಟು ಪ್ರದೇಶವನ್ನು ನೀರಾವರಿಗೊಳಪಡಿಸಬಹುದು. ₹1500 ಕೋಟಿ ಯೋಜನೆಗೆ ಅಸ್ತು ಎನ್ನಬೇಕು ಎಂಬುದು ರೈತರ ಆಗ್ರಹ.ಮಲಪ್ರಭಾ ಹೂಳೆತ್ತಿ
ಇನ್ನು ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಕಣಕುಂಬಿಯಲ್ಲಿ ಉಗಮಿಸುವ ಮಲಪ್ರಭಾ ನದಿಯ ಉಪಯೋಗ ಹುಬ್ಬಳ್ಳಿ-ಧಾರವಾಡ ಜನತೆಗೆ ಸಾಕಷ್ಟು. ಈ ಮಹಾನಗರಗಳಿಗೆ ದಾಹ ತೀರಿಸುವುದೇ ಮಲಪ್ರಭೆ. ಜತೆಗೆ ಮುಂದೆ ಬೆಣ್ಣಿಹಳ್ಳ- ತುಪರಿಗಳ್ಳಗಳು ಮಲಪ್ರಭಾ ನದಿಯನ್ನೇ ಸೇರುತ್ತವೆ. ಮಲಪ್ರಭಾ ನದಿಯಲ್ಲಿ ದಿನದಿಂದ ದಿನಕ್ಕೆ ಸಾಕಷ್ಟು ಪ್ರಮಾಣದಲ್ಲಿ ಹೂಳು ತುಂಬುತ್ತಿದೆ. ಇದರಿಂದ ನದಿಯ ಮೂಲ ಸ್ವರೂಪವೇ ಬದಲಾಗುತ್ತಿದೆ. ಆದಕಾರಣ ಮಲಪ್ರಭಾ ನದಿಯ ಹೂಳೆತ್ತಲು ವಿಶೇಷ ಅನುದಾನ ಬಿಡುಗಡೆ ಮಾಡಬೇಕು. ಜತೆಗೆ ನದಿಯ ಒತ್ತುವರಿ ತೆರವುಗೊಳಿಸಬೇಕು. ಅದಕ್ಕೆ ಮೊದಲು ಸಮೀಕ್ಷೆ ಕೈಗೊಳ್ಳಬೇಕು. ಇದಕ್ಕಾಗಿ ಪ್ರತ್ಯೇಕ ಅನುದಾನವನ್ನು ಬಿಡುಗಡೆ ಮಾಡಬೇಕು ಎಂಬುದು ರೈತರ ಒಕ್ಕೋರಲಿನ ಆಗ್ರಹ.ಒಟ್ಟಿನಲ್ಲಿ ಬಜೆಟ್ ಬಗ್ಗೆ ಸಾಕಷ್ಟು ನಿರೀಕ್ಷೆಗಳಂತೂ ಇವೆ. ಆದರೆ ಯಾವನ್ನು ಈಡೇರಿಸುತ್ತದೆ ಎಂಬುದನ್ನು ಕಾಯ್ದು ನೋಡಬೇಕಷ್ಟೇ..!
ಕಳಸಾ- ಬಂಡೂರಿ?ಹಾಗೆ ನೋಡಿದರೆ ಮಹದಾಯಿ, ಕಳಸಾ- ಬಂಡೂರಿ ಯೋಜನೆಯಲ್ಲಿ ಸದ್ಯಕ್ಕೆ ರಾಜ್ಯ ಸರ್ಕಾರದ ಪಾತ್ರ ಏನೂ ಇಲ್ಲ. ಕೇಂದ್ರದ ವನ್ಯಜೀವಿ ಮಂಡಳಿಯಿಂದ ಅನುಮತಿ ಸಿಕ್ಕರೆ ಮಾತ್ರ ರಾಜ್ಯ ಸರ್ಕಾರ ಕೆಲಸ ಶುರು ಮಾಡಬಹುದು. ಆದರೆ, ವನ್ಯಜೀವಿ ಮಂಡಳಿ ಬರೀ ಪ್ರತಿ ತಿಂಗಳು ಸಭೆ ನಡೆಸಲು ಮಾತ್ರ ಸೀಮಿತವಾಗಿದೆ. ಅನುಮತಿ ಮಾತ್ರ ಸಿಗುತ್ತಿಲ್ಲ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಒತ್ತಡ ಹೇರುವುದನ್ನು ಬಿಟ್ಟು ಬೇರೆನೂ ಮಾಡಲು ಸಾಧ್ಯವಿಲ್ಲ. ಆ ಕೆಲಸ ಅಧಿವೇಶನದಲ್ಲಾಗಲಿ ಎಂಬುದು ಸಾರ್ವಜನಿಕರ ಆಗ್ರಹ.
ಶಾಶ್ವತ ಪರಿಹಾರಬೆಣ್ಣಿಹಳ್ಳ- ತುಪರಿಹಳ್ಳ ಗಳಿಂದ ಎದುರಾಗುವ ಪ್ರವಾಹ ತಡೆಗೆ ಶಾಶ್ವತ ಪರಿಹಾರ ಕೈಗೊಳ್ಳಬೇಕು. ಈಗ ಬರೀ ಕಾಟಾಚಾರಕ್ಕೆಂಬಂತೆ ₹200 ಕೋಟಿ ಬಿಡುಗಡೆ ಮಾಡಲಾಗಿದೆ. ಆದರೆ ಇದರಿಂದ ಉಪಯೋಗವಿಲ್ಲ. ಕನಿಷ್ಠವೆಂದರೂ ₹1000 ಕೋಟಿಯಾದರೂ ಬಿಡುಗಡೆ ಮಾಡಬೇಕು. ಜತೆಗೆ ಮಲಪ್ರಭಾ ನದಿಯಲ್ಲಿನ ಹೂಳೆತ್ತಲು ಕ್ರಮ ಕೈಗೊಳ್ಳಬೇಕು.- ಕಲ್ಮೇಶ ಹುಲ್ಲತ್ತಿ, ಯುವ ರೈತ