ರೈತರೊಂದಿಗೆ ಬೆಸ್ಕಾಂ ಇಲಾಖೆಯ ಚಲ್ಲಾಟ

| Published : Feb 15 2024, 01:16 AM IST

ಸಾರಾಂಶ

ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಪದಾಧಿಕಾರಿಗಳು ನಗರದ ಪ್ರವಾಸಿ ಮಂದಿರದಿಂದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ರ್‍ಯಾಲಿ ನಡೆಸಿ ಬೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ, ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಧಿಕ್ಕಾರಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಆಕ್ರೋಶಗೊಂಡ ರೈತರಿಂದ ಪ್ರತಿಭಟನಾ ರ್‍ಯಾಲಿ । ಬೆಸ್ಕಾಂ ಇಲಾಖೆಗೆ ಮುತ್ತಿಗೆ, ಸರ್ಕಾರಕ್ಕೆ ಧಿಕ್ಕಾರ

ಕನ್ನಡಪ್ರಭ ವಾರ್ತೆ ಚಿಂತಾಮಣಿ

ವಿದ್ಯುತ್‌ನ ಕಣ್ಣಾಮುಚ್ಚಾಲೆಯಿಂದಾಗಿ ಬೆಳೆಗಳು ಒಣಗುತ್ತಿದ್ದು, ರೈತರು ವಿಷ ಕುಡಿಯುವ ಸ್ಥಿತಿಗೆ ಬಂದಿದ್ದಾರೆ. ದಿನಕ್ಕೆ ೨ ಗಂಟೆ ವಿದ್ಯುತ್ ನೀಡುತ್ತಾರಾದರೂ ಅದರಲ್ಲಿ ೫-೬ ಬಾರಿ ಲೈನ್ ಟ್ರಬಲ್ ತೆಗೆಯುತ್ತಾರೆ. ದಿನಕ್ಕೆ ಒಂದು ಗಂಟೆಯೂ ಇರುವುದಿಲ್ಲ, ಪರಿಸ್ಥಿತಿ ಹೀಗಾದರೆ ರೈತಾಪಿ ವರ್ಗ ಉಳಿಯಲು ಸಾಧ್ಯವೇ? ಎಂದು ರೈತ ಸಂಘ ಹಾಗೂ ಹಸಿರು ಸೇನೆಯ ತಾಲೂಕು ಘಟಕದ ಅಧ್ಯಕ್ಷ ಸೀಕಲ್ ರಮಣಾರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು.

ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಪದಾಧಿಕಾರಿಗಳು ನಗರದ ಪ್ರವಾಸಿ ಮಂದಿರದಿಂದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ರ್‍ಯಾಲಿ ನಡೆಸಿ ಬೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ, ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಧಿಕ್ಕಾರಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯವು ಬರಪೀಡಿತ ಪ್ರದೇಶವಾಗಿ ಸಕಾಲಕ್ಕೆ ಮಳೆ ಬಾರದೆ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ರೈತರಿಗೆ ಯಾವುದೇ ಸಹಾಯ ಹಸ್ತ ನೀಡದಿರುವುದರಿಂದ ಜೀವನ ನಡೆಸಲು ಕಷ್ಟವಾಗಿದೆಯೆಂದು ರಮಣಾರೆಡ್ಡಿ ಆರೋಪಿಸಿದರು.

ಇಲಾಖೆಯಿಂದ ರೈತರಿಗೆ ಕೊಡುವ ವಿದ್ಯುತ್ ಗುಣಮಟ್ಟವಿಲ್ಲದಿರುವುದರಿಂದ ಐಪಿಸೆಟ್‌ಗಳು ಸರಿಯಾಗಿ ಕೆಲಸ ಮಾಡಿದೇ ಬೇಗನೆ ಟ್ರಾನ್ಸ್‌ಫಾರ್ಮರ್‌ಗಳು ಸುಟ್ಟು ಹೋಗುತ್ತಿರುವುದರಿಂದ ರೈತರಿಗೆ ತುಂಬಾ ತೊಂದರೆಯಾಗುತ್ತಿದೆ, ಕೂಡಲೇ ಈ ಅವ್ಯವಸ್ಥೆಯನ್ನು ಸಂಬಂಧಪಟ್ಟ ಬೆಸ್ಕಾಂ ಅಧಿಕಾರಿಗಳು ಸರಿಪಡಿಸುವಂತೆ ತಾಕೀತು ಮಾಡಿದರು.

ತಾಲೂಕು ಆಂಧ್ರಪ್ರದೇಶದ ಗಡಿಯಲ್ಲಿದ್ದು, ಬಹುತೇಕ ಪ್ರದೇಶ ಬೆಟ್ಟ, ಗುಡ್ಡ ಹಾಗೂ ಅರಣ್ಯ ಪ್ರದೇಶವಾಗಿರುವುದರಿಂದ ವನ್ಯಜೀವಿಗಳಾದ ಮುಳ್ಳು ಹಂದಿ, ಜಿಂಕೆ, ನವಿಲುಗಳು ಹಾಗೂ ಕೋತಿಗಳ ಹಾವಳಿಯಿಂದಾಗಿ ರೈತರು ಕಷ್ಟಪಟ್ಟು ಬೆಳೆದ ಬೆಳೆಗಳು ನಾಶವಾಗುತ್ತಿವೆ. ಇದರಿಂದ ರೈತರಿಗೆ ಜೀವನ ನಡೆಸಲು ತುಂಬಾ ಕಷ್ಟವಾಗಿದೆಯೆಂದು ದೂರಿದರು.

ಪ್ರತಿಭಟನೆ ನಂತರ ಬೆಸ್ಕಾಂ ಎಕ್ಸಿಕ್ಯೂಟಿವ್ ಇಂಜಿನಿಯರ್ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

ರೈತ ಸಂಘ ಹಾಗೂ ಹಸಿರು ಸೇನೆಯ ಪ್ರಧಾನ ಕಾರ್ಯದರ್ಶಿ ಎಂ.ಎಲ್.ಆಂಜನೇಯ ರೆಡ್ಡಿ, ಕಾರ್ಯಧ್ಯಕ್ಷ ಆರ್.ಎಸ್.ಸಿ.ಆಂಜನೇಯರೆಡ್ಡಿ, ಉಪಾಧ್ಯಕ್ಷ ಗಂಜೂರು ನಾರಾಯಣಸ್ವಾಮಿ, ಜಂಟಿ ಕಾರ್ಯದರ್ಶಿ ನಾರಾಯಣಸ್ವಾಮಿ, ಕಸಬಾ ಹೋಬಳಿ ಅಧ್ಯಕ್ಷ ಅಲ್ಲಾಬಕಾಶ್ ಪ್ರಮುಖರಾದ ಕೆ.ವಿ.ಕೃಷ್ಣಾರೆಡ್ಡಿ, ಪ್ರಸಾದ್‌ರೆಡ್ಡಿ, ಶಿವಾರೆಡ್ಡಿ, ಎಸ್.ಆರ್.ಶಿವಾರೆಡ್ಡಿ ಸೇರಿ ರೈತರು ಭಾಗಿಯಾಗಿದ್ದರು.-----ಪ್ರತಿಭಟನಾ ರ್‍ಯಾಲಿ ಮೂಲಕ ಬೆಸ್ಕಾಂ ಎಕ್ಸಿಕ್ಯೂಟಿವ್ ಇಂಜಿನಿಯರ್ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ ರೈತರು.