ಸಾರಾಂಶ
ತಲ್ಲೂರು ಗ್ರಾಮದ ಪ್ರಗತಿಪರ ಕೃಷಿಕ ರವಿ ಖಾರ್ವಿ ಸಮುದ್ರ ಮೀನು ಕೃಷಿಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. 1 ಲಕ್ಷ ರು. ನಗದಿನೊಂದಿಗೆ ಈ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕನ್ನಡಪ್ರಭ ವಾರ್ತೆ ಕುಂದಾಪುರ
ಇಲ್ಲಿನ ತಲ್ಲೂರು ಗ್ರಾಮದ ಪ್ರಗತಿಪರ ಮೀನು ಕೃಷಿಕ ರವಿ ಖಾರ್ವಿ, ಭಾರತ ಸರ್ಕಾರದ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯ ನೀಡುವ ಅತ್ಯುತ್ತಮ ಸಮುದ್ರ ಮೀನು ಕೃಷಿಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.ನವದೆಹಲಿಯಲ್ಲಿ ಗುರುವಾರ ನಡೆದ ವಿಶ್ವ ಮೀನುಗಾರಿಕಾ ದಿನಾಚರಣೆಯಲ್ಲಿ ಕೇಂದ್ರ ಮೀನುಗಾರಿಕಾ ಸಚಿವ ರಾಜೀವ್ ರಂಜನ್ ಸಿಂಗ್ ಅವರು 1 ಲಕ್ಷ ರು. ನಗದಿನೊಂದಿಗೆ ಈ ಪ್ರಶಸ್ತಿಯನ್ನು ಪ್ರದಾನ ಮಾಡಿದರು.
ಕೇಂದ್ರೀಯ ಸಮುದ್ರ ಮೀನುಗಾರಿಕಾ ಸಂಶೋಧನಾ ಸಂಸ್ಥೆ(ಐಸಿಎಆರ್- ಸಿಎಂಎಫ್‌ಆರ್‌ಐ) ಮಂಗಳೂರು ಪ್ರಾದೇಶಿಕ ಕೇಂದ್ರ ಕರ್ನಾಟಕದಿಂದ ತರಬೇತಿ ಪಡೆದು ಸಮಗ್ರ ಮಲ್ಟಿಟ್ರೋಫಿಕ್ ಅಕ್ವಾಕಲ್ಚರ್ ಪದ್ಧತಿಯ ಯಶಸ್ವಿ ಅನುಷ್ಠಾನಕ್ಕೆ ರವಿ ಖಾರ್ವಿ ಅವರಿಗೆ ಈ ಪ್ರಶಸ್ತಿ ನೀಡಲಾಗಿದೆ.ರಾಷ್ಟ್ರೀಯ ಮೀನುಗಾರಿಕೆ ಅಭಿವೃದ್ಧಿ ಮಂಡಳಿ, ಹೈದರಾಬಾದ್‌ನ ಹಣಕಾಸಿನ ನೆರವಿನೊಂದಿಗೆ 2023-24ರ ಅವಧಿಯಲ್ಲಿ ಹೊಸ ತಾಂತ್ರಿಕತೆ ಐಎಂಟಿಎ ಅನುಷ್ಠಾನಗೊಳಿಸಲಾಗಿದ್ದು, ರವಿ ಖಾರ್ವಿ ಅವರು ಈ ಯೋಜನೆಯ ಫಲಾನುಭವಿಯಾಗಿದ್ದಾರೆ.
ಈ ವಿಧಾನದಲ್ಲಿ ಭಾರತೀಯ ಪೊಂಪಾನೊ, ಸಿಲ್ವರ್ ಪೊಂಪಾನೊ ಮತ್ತು ಪಚ್ಚಿಲೆ ಮೀನುಗಳ ಸಮಗ್ರ ಕೃಷಿಯನ್ನು ಮಾಡಿ ರವಿ ಖಾರ್ವಿ ಯಶಸ್ವಿಯಾಗಿದ್ದಾರೆ. ಇದು ಕರ್ನಾಟಕದಲ್ಲಿ ಮೊದಲನೇಯ ಪ್ರಯೋಗವಾಗಿದೆ.ರವಿ ಅವರು ಬೆಳೆಸಿದ ಸಿಲ್ವರ್ ಪೊಂಪಾನೊ ಮತ್ತು ಭಾರತೀಯ ಪೊಂಪಾನೊಗಳ ಸರಾಸರಿ ತೂಕ ಕ್ರಮವಾಗಿ 470 ಗ್ರಾಂ ಮತ್ತು 380 ಗ್ರಾಂ ಆಗಿದ್ದು, ಸ್ಥಳೀಯವಾಗಿ ಪ್ರತಿ ಕೆಜಿಗೆ 450 - 480 ರು.ವರೆಗೆ ಮಾರಾಟವಾಗಿದೆ. ಇದರ ಜೊತೆಗೆ ಸುಮಾರು 800 - 900 ಕೆ.ಜಿ. ಪಚ್ಚಿಲೆ ಬೆಳೆಸಿ ಪ್ರತಿ ಕೆಜಿಗೆ 145 - 150 ರು. ನಂತೆ ಮಾರಾಟ ಮಾಡಿದ್ದಾರೆ. ಅವರು ಒಟ್ಟಾರೆ ಒಂದು ವರ್ಷದಲ್ಲಿ 6 ಲಕ್ಷ ರು. ಗಳಿಸಿದ್ದಾರೆ.