ಬುದ್ಧ ಧಮ್ಮ ವಾಸ್ತವ ಸತ್ಯವನ್ನು ತಿಳಿಸುತ್ತದೆ

| Published : Oct 20 2025, 01:02 AM IST

ಬುದ್ಧ ಧಮ್ಮ ವಾಸ್ತವ ಸತ್ಯವನ್ನು ತಿಳಿಸುತ್ತದೆ
Share this Article
  • FB
  • TW
  • Linkdin
  • Email

ಸಾರಾಂಶ

ವಿದೇಶಿಗರು ಬುದ್ಧರು ಬೋಧಿಸಿದ ಪಂಚಶೀಲಗಳನ್ನು ಅಳವಡಿಸಿಕೊಂಡಿದ್ದರಿಂದ ಅಭಿವೃದ್ಧಿಯತ್ತ ಸಾಗುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಮೈಸೂರು

ಧರ್ಮ ಎಂದರೆ ನಂಬಿಕೆ, ವಿಷಯದ ಮೇಲೆ ಜನರನ್ನು ಬಂಧಿಸುವುದು. ಆದರೆ, ಬುದ್ಧ ಧಮ್ಮವು ಅಸ್ತಿತ್ವದ ಅಂತಿಮ ಸತ್ಯ, ವಾಸ್ತವ ಸತ್ಯವನ್ನು ತಿಳಿಸುವುದಾಗಿದೆ. ಹೀಗಾಗಿ, ವಾಸ್ತವ ಜಗತ್ತಿನತ್ತ ನಾವು ಸಾಗಬೇಕಿದೆ ಎಂದು ಬೌದ್ಧ ಸಾಹಿತಿ ಮಹಾದೇವಯ್ಯ ಕಲ್ಲಾರೆಪುರ ತಿಳಿಸಿದರು.

ವಿಜಯನಗರ ಒಂದನೇ ಹಂತದ ಡಿ. ಸಂಜೀವಯ್ಯ ಸ್ಮಾರಕ ಶಿಕ್ಷಣ ಸಂಸ್ಥೆ ಆವರಣದಲ್ಲಿರುವ ಸಿದ್ದಾರ್ಥ ಬುದ್ಧ ವಿಹಾರದಲ್ಲಿ ಕರ್ನಾಟಕ ಬುದ್ಧ ಧಮ್ಮ ಸಮಿತಿಯು ಭಾನುವಾರ ಆಯೋಜಿಸಿದ್ದ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಧಮ್ಮ ಧೀಕ್ಷಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ವಿದೇಶಿಗರು ಬುದ್ಧರು ಬೋಧಿಸಿದ ಪಂಚಶೀಲಗಳನ್ನು ಅಳವಡಿಸಿಕೊಂಡಿದ್ದರಿಂದ ಅಭಿವೃದ್ಧಿಯತ್ತ ಸಾಗುತ್ತಿದ್ದಾರೆ. ಆದರೆ, ಭಾರತದಲ್ಲಿ ಹುಟ್ಟಿದ ಬುದ್ಧರನ್ನು ತಾಯ್ನಾಡಿನ ಜನರು ಅರ್ಥ ಮಾಡಿಕೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ವಸ್ತು ವಿಷಯ, ಚಿತ್ರಪಟ, ಮೂರ್ತಿಗಳು, ವಿಗ್ರಹಗಳ ಮೇಲೆ ನಮ್ಮ ಗಮನವನ್ನು ಕೇಂದ್ರೀಕರಿಸುವುದನ್ನು ಧ್ಯಾನ ಎನ್ನುತ್ತೇವೆ. ಆದರೆ, ಬುದ್ಧರು ಬಳಸಿದ ಸಮತ ಭಾವನಾ ಎಂಬ ಪದವು ಮನಸ್ಸಿನ ಪರಿಶುದ್ಧತೆ, ಸಂರಕ್ಷಣೆ, ವಿಕಾಸವನ್ನು ಬಯಸುತ್ತದೆ. ಹೀಗಾಗಿ, ಬದುಕಿನ ಬದಲಾವಣೆಗಾಗಿ ಮನಸ್ಸನ್ನು ಕೇಂದ್ರೀಕರಿಸಿಕೊಂಡು ಸನ್ಮಾರ್ಗದತ್ತ ಹೆಜ್ಜೆ ಇರಿಸಬೇಕು ಎಂದು ಅವರು ಹೇಳಿದರು.

ನಕರಾತ್ಮಕ ಭಾವನೆಗಳಿಂದ ಮಾನಸಿಕ ಕ್ಲೇಶ, ಅನಾರೋಗ್ಯ ಉಂಟಾಗುತ್ತದೆ. ಹೀಗಾಗಿ, ಸಕರಾತ್ಮಕ ಚಿಂತನೆಗಳನ್ನು ಬೆಳೆಸಿಕೊಂಡು ಅಭಿವೃದ್ಧಿ ಪಥದತ್ತ ಸಾಗಬೇಕು ಎಂದರು.

ಮದ್ಯ ಸೇವನೆಯಿಂದ ಅನಾರೋಗ್ಯ ಕುಟುಂಬ ಸಮಾಜ ಹಾಳಾಗುತ್ತದೆ ಎಂಬ ಅರಿವಿದ್ದರೂ ಜನರು ಇದರ ಹಿಂದೆ ಬಿದ್ದಿದ್ದಾರೆ. ಕೆಟ್ಟದ್ದರ ಕಡೆಗೆ ಆಕರ್ಷಣೆ ಹೆಚ್ಚಾಗುತ್ತಿದ್ದು, ಒಳ್ಳೆಯದನ್ನು ಕಡೆಗಣಿಸುತಿದ್ದೇವೆ. ಹೀಗಾಗಿ ಸಮಾಜದಲ್ಲಿ ಅಶಾಂತಿಯ ವಾತಾವರಣ ಸೃಷ್ಟಿಯಾಗುತ್ತಿದೆ. ಮಕ್ಕಳಿಗೆ ಧಾರ್ಮಿಕ ಸಂಸ್ಕೃತಿಯನ್ನು ಹೇಳಿಕೊಡುವ ಕೆಲಸವಾಗಬೇಕು. ಜಾಗೃತರದವರಿಗೆ ಸಾವಿಲ್ಲ ಜಾಗೃತಿ ನಮ್ಮನ್ನು ಯಾವಾಗಲೂ ಎಚ್ಚರಿಸುತ್ತದೆ ಎಂದು ಅವರು ತಿಳಿಸಿದರು.

ಇದೇ ವೇಳೆ ಭರಣಿ ಫೋಟೋಗ್ರಪಿಯ ಮಲ್ಲೇಶ್ ಮತ್ತು ಕುಟುಂಬದವರು ಬೌದ್ಧ ಧಮ್ಮವನ್ನು ಸ್ವೀಕರಿಸಿದರು. ಕೊಳ್ಳೇಗಾಲ ಜೇತವನ ಬುದ್ಧ ವಿಹಾರದ ಮನೋರಖ್ಖಿತ ಬಂತೇಜಿ ಸಮ್ಮುಖ ವಹಿಸಿದ್ದರು.

ಕರ್ನಾಟಕ ಬುದ್ಧ ಧಮ್ಮ ಸಮಿತಿಯ ಅಧ್ಯಕ್ಷ ಪ್ರೊ.ಡಿ. ನಂಜುಂಡಯ್ಯ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಆರ್. ಮಹದೇವಪ್ಪ, ಸಹ ಕಾರ್ಯದರ್ಶಿ ಎಚ್. ಶಿವರಾಜ್, ಉಪಾಧ್ಯಕ್ಷ ಪಿ. ಮಹದೇವ್, ಎಸ್ಸಿ- ಎಸ್ಟಿ ನೌಕರರ ಸಂಘದ ರಾಜ್ಯಾಧ್ಯಕ್ಷ ಡಿ. ಚಂದ್ರಶೇಖರಯ್ಯ, ಎಂ. ಸಾವಕಯ್ಯ, ಆರ್. ನಟರಾಜ್, ನಿಸರ್ಗ ಸಿದ್ದರಾಜು, ಮಹದೇವಸ್ವಾಮಿ, ಶ್ರೀನಿವಾಸ್, ಜಗದೀಶ್, ಚಿದಂಬರಮೂರ್ತಿ, ಉತ್ತಂಬಳ್ಳಿ ನಾಗರಾಜು, ಎಸ್. ಮಹೇಶ್, ದಸಂಸ ಮುಖಂಡ ಚೋರನಹಳ್ಳಿ ಶಿವಣ್ಣ, ಕುಡ್ಲಾಪುರ ಕುಮಾರಸ್ವಾಮಿ, ಕೆ.ಎಂ. ಪುಟ್ಟು, ಮಲ್ಲಿಕಾರ್ಜುನಸ್ವಾಮಿ, ಪುಟ್ಟಸ್ವಾಮಿ, ನಂಜುಂಡಸ್ವಾಮಿ, ವಸಂತ್ ಕುಮಾರ್, ಸಣ್ಣಯ್ಯ, ಶಶಿಕುಮಾರ್, ರಾಘವೇಂದ್ರ, ನಿರಂಜನ್, ಮಂಚಯ್ಯ, ಶ್ರೀನಿವಾಸ್ ಮೊದಲಾದವರು ಇದ್ದರು.

----

ಕೋಟ್...

ಯುದ್ಧದಿಂದ ಎರಡೂ ದೇಶಗಳ ಸಂಪತ್ತು, ಆಸ್ತಿ, ಜೀವಹಾನಿ ಸಂಭವಿಸುತ್ತದೆ. ಆದ್ದರಿಂದ ಜಗತ್ತನ್ನು ನಾವು ದ್ವೇಷದಿಂದ ಗೆಲ್ಲಲು ಸಾಧ್ಯವಿಲ್ಲ. ಬುದ್ಧರು ಬೋಧಿಸಿದ ಪ್ರೀತಿ, ಮೈತ್ರಿ, ಕರುಣೆಯಿಂದ ಗೆಲ್ಲಬಹುದು.

- ಮನೋರಖ್ಖಿತ ಬಂತೇಜಿ, ಜೇತವನ ಬುದ್ಧ ವಿಹಾರ