ಸಾರಾಂಶ
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಕ್ರೀಡಾಕೂಟ
ಕನ್ನಡಪ್ರಭ ವಾರ್ತೆ ಹೊಳೆನರಸೀಪುರನಮ್ಮ ಮನಸ್ಸುಗಳನ್ನು ಬೆಸೆಯುವ, ಕಾಲೇಜು ಕಾಲೇಜುಗಳ ನಡುವೆ ಉತ್ತಮ ಬಾಂಧವ್ಯ ಹಾಗೂ ಸ್ನೇಹ ಸಂಬಂಧ ಬೆಳೆಸುವ ಕ್ರೀಡಾಕೂಟದಲ್ಲಿ ಯಾರೇ ಗೆದ್ದರೂ ನಮ್ಮ ವಿದ್ಯಾರ್ಥಿಗಳು ಎಂಬ ಮನಸ್ಥಿತಿ ಪ್ರಾಂಶುಪಾಲರು ಹಾಗೂ ಉಪನ್ಯಾಸಕರಲ್ಲಿ ಇರಬೇಕು. ಆದ್ದರಿಂದ ಎಲ್ಲರೂ ಸೋಲು ಗೆಲುವನ್ನು ಸಮಾನಭಾವದಿಂದ ಸ್ವೀಕಾರ ಮಾಡುವ ಜತೆಗೆ ಕ್ರೀಡೆಯನ್ನು ಗೆಲ್ಲಿಸಿ ಎಂದು ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಉಪ ನಿರ್ದೇಶಕ ಸಿ.ಎಂ.ಮಹಾಲಿಂಗಯ್ಯ ಸಲಹೆ ನೀಡಿದರು.
ಪಟ್ಟಣದ ಹೇಮಾವತಿ ಕ್ರೀಡಾಂಗಣದಲ್ಲಿ ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಹಾಸನ ಜಿಲ್ಲೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಪಟ್ಟಣದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಸಹಯೋಗದಲ್ಲಿ ಆಯೋಜನೆ ಮಾಡಿದ್ದ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು. ತಾಲೂಕು ಮಟ್ಟದಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳನ್ನು ಜಿಲ್ಲಾ ಮಟ್ಟಕ್ಕೆ, ನಂತರ ರಾಜ್ಯ ಮಟ್ಟಕ್ಕೆ ಮುಂದಿನ ಹಂತದಲ್ಲಿ ರಾಷ್ಟ್ರಮಟ್ಟಕ್ಕೆ ಕಳುಹಿಸುವ ಪ್ರಕ್ರಿಯೆ ನಡೆಯುತ್ತಿದ್ದು, ಶೈಕ್ಷಣಿಕ ವರ್ಷದಲ್ಲಿ ಉತ್ತಮವಾದ ಕ್ರೀಡಾಪಟುಗಳನ್ನು ರಾಜ್ಯ ಹಾಗೂ ರಾಷ್ಟ್ರಮಟ್ಟಕ್ಕೆ ಕಳುಹಿಸಬೇಕು ಎಂಬ ಉದ್ದೇಶದಿಂದ ಆಯ್ಕೆ ಸಮಿತಿ ರಚಿಸಿ, ವಿಜೇತ ತಂಡ ಹಾಗೂ ಪರಾಜಿತ ತಂಡದಲ್ಲಿ ಉತ್ತಮ ಹಾಗೂ ವಿಶೇಷ ಪ್ರತಿಭೆಗಳು ಗುರುತಿಸಿ, ರಾಜ್ಯ ಮಟ್ಟಕ್ಕೆ ಕಳುಹಿಸಬೇಕು ಎಂಬ ಉದ್ದೇಶವಿದೆ. ಕ್ರೀಡಾಪಟುಗಳು ತೀರ್ಪುಗಾರರ ತೀರ್ಮಾನಕ್ಕೆ ಬದ್ಧರಾಗಬೇಕು ಮತ್ತು ಕ್ರೀಡಾಪಟುಗಳು ಸಮಸ್ಯೆ ಉಂಟಾದಲ್ಲಿ ಶಿಸ್ತು ಸಮಿತಿಗೆ ತಿಳಿಸಬೇಕು. ಸ್ನೇಹ ಸಂಬಂಧ ಹಾಗೂ ಬಾಂಧವ್ಯ ಬೆಸೆಯುವ ಕ್ರೀಡೆಯನ್ನು ಕ್ರೀಡಾ ಮನೋಭಾವದಲ್ಲಿ ಸ್ವೀಕರಿಸುವಂತೆ ಸಲಹೆ ನೀಡಿದರು.ಶಾಸಕ ಎಚ್.ಡಿ.ರೇವಣ್ಣ ಮಾತನಾಡಿ, ಪಟ್ಟಣದ ಬಾಲಕಿಯರ ಪದವಿ ಪೂರ್ವ ಕಾಲೇಜು ರಾಜ್ಯದ ಪದವಿ ಪೂರ್ವ ಕಾಲೇಜುಗಳಲ್ಲಿ ಮೊದಲ ಸಾಲಿನಲ್ಲಿದೆ ಮತ್ತು ಪ್ರಾಂಶುಪಾಲ ದೇವರಾಜ್ ಅವರ ಕಾಳಜಿಯಿಂದ ಉತ್ತಮವಾಗಿದೆ, ವಿದ್ಯಾರ್ಥಿನಿಯರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಗ್ರಾಮೀಣ ಪ್ರದೇಶದಲ್ಲೂ ಉಪನ್ಯಾಸಕರು ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ಹೆಚ್ಚಿನ ಕಾಳಜಿ ತೋರುತ್ತಿದ್ದಾರೆ ಎಂದು ಉಪನ್ಯಾಸಕರ ಕಾರ್ಯವನ್ನು ಶ್ಲಾಘಿಸಿದ ಶಾಸಕರು, ಗೆಲ್ಲುವ ವಿದ್ಯಾರ್ಥಿಗಳಿಗೆ ಶುಭ ಕೋರುವ ಜತೆಗೆ ಸೋತ ವಿದ್ಯಾರ್ಥಿಗಳು ಮುಂದಿನ ಸಲ ಗೆಲುವಿಗೆ ಅಗತ್ಯ ತಯಾರಿ ಮಾಡಿಕೊಳ್ಳಲು ಸಲಹೆ ನೀಡಿದರು.
ಪಟ್ಟಣದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ದೇವರಾಜು ಬಿ.ಆರ್. ಪ್ರಾಸ್ತವಿಕ ನುಡಿಗಳನ್ನಾಡಿದರು. ಉಪನ್ಯಾಸಕಿ ಪವಿತ್ರ ಸ್ವಾಗತಿಸಿದರು ಹಾಗೂ ಉಪನ್ಯಾಸಕ ಗಿರೀಶ್ ನಿರೂಪಿಸಿದರು.ಪುರಸಭಾಧ್ಯಕ್ಷ ಕೆ.ಶ್ರೀಧರ್, ಪುರಸಭಾ ಸದಸ್ಯ ಎ.ಜಗನ್ನಾಥ್, ಜಿಲ್ಲಾ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಎ.ಜಿ.ಸುರೆಂದ್ರ ಕುಮಾರ್, ತಾ.ಸ.ನೌ.ಸಂಘದ ಅಧ್ಯಕ್ಷ ಕುಮಾರಸ್ವಾಮಿ, ಕರ್ನಾಟಕ ರಾಜ್ಯ ಪ.ಪೂ.ಕಾ. ಪ್ರಾಂಶುಪಾಲರ ಸಂಘದ ಉಪಾಧ್ಯಕ್ಷ ಡಿ.ಕೆ.ಕುಮಾರಯ್ಯ, ತಾ. ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ವಿ.ಸುರೇಶ್ ಕುಮಾರ್, ತಾ. ಪ.ಪೂ.ಕಾ.ಉ. ಸಂಘದ ಅಧ್ಯಕ್ಷ ಬಿ.ಟಿ.ಕಂಬೇಗೌಡ, ತಾ. ದೈಹಿಕ ಶಿಕ್ಷಣ ಪರಿವೀಕ್ಷಕ ಜಿ.ಮಹೇಶ್, ತಾ.ಪ್ರೌ.ದೈ.ಶಿ.ಶಿ. ಸಂಘದ ಅಧ್ಯಕ್ಷ ಪಿ.ಎಲ್.ಹರೀಶ್, ತಾ.ಸ.ನೌ.ಸಂ. ಕ್ರೀ. ಕಾರ್ಯದರ್ಶಿ ಸುಜಾತಅಲಿ, ಕಾಲೇಜು ಅಭಿವೃದ್ದಿ ಸಮಿತಿಯ ಅಧ್ಯಕ್ಷ ಹಾಗೂ ಸದಸ್ಯರು, ಇತರರು ಇದ್ದರು.