ಖಾಸಗಿ ಸಂಸ್ಥೆಗಳಿಂದ ಉತ್ತಮ ಶಿಕ್ಷಣ ಸೇವೆ

| Published : Feb 24 2025, 12:33 AM IST

ಸಾರಾಂಶ

ಖಾಸಗಿ ಅನುದಾನರಹಿತ ಶಿಕ್ಷಣ ಸಂಸ್ಥೆಗಳಲ್ಲಿ ಅನೇಕ ಸಮಸ್ಯೆಗಳಿವೆ. ಹಾಗಿದ್ದರೂ ಉತ್ತಮ ಶಿಕ್ಷಣ, ಫಲಿತಾಂಶ ಸಾಧನೆಯಲ್ಲಿ ಯಶಸ್ವಿಯಾಗುತ್ತಿವೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ.

- ರಾಜ್ಯಾಧ್ಯಕ್ಷರ ಪದಗ್ರಹಣ- ಮುಖ್ಯ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ರೇಣುಕಾಚಾರ್ಯ - - - ಕನ್ನಡಪ್ರಭ ವಾರ್ತೆ ಹೊನ್ನಾಳಿ

ಖಾಸಗಿ ಅನುದಾನರಹಿತ ಶಿಕ್ಷಣ ಸಂಸ್ಥೆಗಳಲ್ಲಿ ಅನೇಕ ಸಮಸ್ಯೆಗಳಿವೆ. ಹಾಗಿದ್ದರೂ ಉತ್ತಮ ಶಿಕ್ಷಣ, ಫಲಿತಾಂಶ ಸಾಧನೆಯಲ್ಲಿ ಯಶಸ್ವಿಯಾಗುತ್ತಿವೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು.

ಪಟ್ಟಣದ ಗುರುಭವನದಲ್ಲಿ ಶನಿವಾರ ರಾಜ್ಯ ಖಾಸಗಿ ಅನುದಾನರಹಿತ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟ ವತಿಯಿಂದ ಹಮ್ಮಿಕೊಂಡಿದ್ದ ರಾಜ್ಯಾಧ್ಯಕ್ಷರ ಪದಗ್ರಹಣ ಹಾಗೂ ಶಾಲಾ ಮುಖ್ಯ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಖಾಸಗಿ ಅನುದಾನರಹಿತ ಶಿಕ್ಷಣ ಸಂಸ್ಥೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಶಿಕ್ಷಕರಿದ್ದಾರೆ. ತಾಯಿ ಸ್ವರೂಪದಲ್ಲಿ ಅವರ ಸೇವೆ ಮಕ್ಕಳಿಗೆ ಲಭಿಸಿ ಗುಣಮಟ್ಟದ ಶಿಕ್ಷಣ ದೊರೆಯುತ್ತದೆ. ಖಾಸಗಿ ಅನುದಾನರಹಿತ ಶಾಲೆಗಳಲ್ಲಿ ವೇತನದ ಬದಲು ಗೌರವ ಧನ ವಿತರಿಸಲಾಗುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ಉತ್ತಮ ವೇತನ ಸೇರಿದಂತೆ ಇತರ ಎಲ್ಲ ಸೌಲಭ್ಯಗಳು ಇವೆ. ಮುಂದಿನ ದಿನಗಳಲ್ಲಿ ಅನುದಾನರಹಿತ ಶಾಲೆಗಳು ಅನುದಾನಕ್ಕೆ ಒಳಪಡುವಂತಾಗಲಿ ಎಂದು ಆಶಿಸಿದರು.

ಕೇಂದ್ರದಲ್ಲಿ ಆಡಳಿತ ನಡೆಸುವ ನರೇಂದ್ರ ಮೋದಿ ಕಳೆದ 11 ವರ್ಷಗಳ ತಮ್ಮ ಅವಧಿಯಲ್ಲಿ ಶಿಕ್ಷಣ ಪ್ರಗತಿಗೆ ಹೆಚ್ಚು ಒತ್ತು ನೀಡಿದ್ದಾರೆ. ಅಲ್ಲದೇ, ಎಲ್ಲ ರಂಗಗಳಲ್ಲಿ ಬಹುದೊಡ್ಡ ಸಾಧನೆ ಮಾಡಿ, ಭಾರತವನ್ನು ವಿಶ್ವಗುರು ಸ್ಥಾನಕ್ಕೆ ತೆಗೆದುಕೊಂಡು ಹೋಗಿದ್ದಾರೆ ಎಂದರು.

ಕೆ.ಪುಟ್ಟಪ್ಪ ನೂತನ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿ, ಅನುದಾನರಹಿತ ಶಿಕ್ಷಣ ಸಂಸ್ಥೆಯ ಎಲ್ಲ ಸಿಬ್ಬಂದಿ ನಮ್ಮ ಆಡಳಿತ ಮಂಡಳಿಗಳ ಒಕ್ಕೂಟದ ವ್ಯವಸ್ಥೆಯಲ್ಲಿ ಸೇರಿಕೊಂಡಾಗ ಒಕ್ಕೂಟಕ್ಕೆ ಹೆಚ್ಚಿನ ಬಲ ಬರುತ್ತದೆ ಎಂದು ಹೇಳಿದರು.

ಆಡಳಿತ ಮಂಡಳಿಯಲ್ಲಿ ಇರುವವರು ದ್ವೇಷ, ಅಸೂಯೆಗಳನ್ನು ಮರೆತು ಒಗ್ಗಟ್ಟು ಪ್ರದರ್ಶಿಸಬೇಕು. ನಮ್ಮ ಅನೇಕ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಪ್ರಯತ್ನಿಸಬೇಕು. ಆಡಳಿತ ಮಂಡಳಿ ಹಾಗೂ ಶಿಕ್ಷಕ ಬಳಗ ಉತ್ತಮವಾಗಿ ಕಾರ್ಯನಿರ್ವಹಿಸಿದರೆ ಒಳ್ಳೆಯ ಫಲಿತಾಂಶ ಬರಲು ಸಾಧ್ಯ. ಸಮಾರಂಭದಲ್ಲಿ ಖಾಸಗಿ ಅನುದಾನರಹಿತ ಎಲ್ಲ ಶಾಲೆಗಳ ಮುಖ್ಯ ಶಿಕ್ಷಕರನ್ನು ಸನ್ಮಾನಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ನಿಕಟಪೂರ್ವ ಅಧ್ಯಕ್ಷ ಆರ್.ರೇವಣಸಿದ್ದಪ್ಪ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಶಿಕ್ಷಕಿ ಆರತಿ ಮಾತನಾಡಿದರು. ಒಕ್ಕೂಟದ ಎಲ್ಲ ನಿರ್ದೇಶಕರು ಇದ್ದರು.

ಸಮಾರಂಭದಲ್ಲಿ ನಿರ್ದೇಶಕ ಸುರೇಶ್ ಸ್ವಾಗತಿಸಿ, ದೇವರಾಜ್ ವಂದಿಸಿದರು. ಕಾರ್ಯದರ್ಶಿ ಬಿ.ವರುಣಾಚಾರಿ ನಿರೂಪಿಸಿದರು.

- - -

(ಬಾಕ್ಸ್‌) * ಶಿಕ್ಷಕ ಪ್ರಶಸ್ತಿ ಕೊಡುವಲ್ಲಿ ತಾರತಮ್ಯ ಸಲ್ಲದು: ರಾಜು ಒಕ್ಕೂಟದ ಗೌರವಾಧ್ಯಕ್ಷ ರಾಜು ಕಣಗಣ್ಣಾರ್ ಮಾತನಾಡಿ, ಖಾಸಗಿ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರನ್ನು ತಾರತಮ್ಯದಿಂದ ನೋಡಲಾಗುತ್ತಿದೆ. ಶಿಕ್ಷಕ ಪ್ರಶಸ್ತಿ ಕೊಡುವಲ್ಲಿ ತಾರತಮ್ಯ, ತಾಲೂಕಿನಲ್ಲಿ ಹಮ್ಮಿಕೊಳ್ಳುವ ಶಿಕ್ಷಕರ ವಿವಿಧ ಸ್ಪರ್ಧೆಗಳಲ್ಲಿ ಖಾಸಗಿ ಶಿಕ್ಷಕರು ಉತ್ತಮವಾಗಿ ಸ್ಪರ್ಧೆಯೊಡ್ಡಿದ್ದರೂ ತಾರತಮ್ಯ ಮಾಡಿ, ಸರ್ಕಾರಿ ಶಾಲಾ ಶಿಕ್ಷಕರಿಗೆ ಬಹುಮಾನ, ಪ್ರಶಸ್ತಿ ನೀಡುವ ಪರಿಪಾಠ ಬೆಳೆಸುತ್ತಿದ್ದಾರೆ. ಇದು ಮಕ್ಕಳ ಪ್ರತಿಭಾ ಕಾರಂಜಿ ವಿಷಯದಲ್ಲಿಯೂ ನಡೆಯುತ್ತಿದೆ. ಇದೇ ರೀತಿ ತಾರತಮ್ಯ ಮುಂದುವರಿದರೆ ಮುಂದಿನ ದಿನಗಳಲ್ಲಿ ಒಕ್ಕೂಟದಿಂದ ಶಿಕ್ಷಕ ಪ್ರಶಸ್ತಿ ವಿತರಿಸುವ ಹಾಗೂ ಪ್ರತ್ಯೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

- - --23ಎಚ್.ಎಲ್.ಐ1.ಜೆಪಿಜಿ:

ಹೊನ್ನಾಳಿಯಲ್ಲಿ ಖಾಸಗಿ ಅನುದಾನರಹಿತ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟದಿಂದ ಹಮ್ಮಿಕೊಂಡಿದ್ದ ರಾಜ್ಯಾಧ್ಯಕ್ಷರ ಪದಗ್ರಹಣ ಹಾಗೂ ಶಾಲಾ ಮುಖ್ಯ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮವನ್ನು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಉದ್ಘಾಟಿಸಿದರು.