ಸಾರಾಂಶ
ಕನ್ನಡಪ್ರಭ ವಾರ್ತೆ ತಿಪಟೂರು
ಮಹಿಳೆಯರ ಸ್ವಾವಲಂಬಿ ಮತ್ತು ಸ್ವಾಭಿಮಾನಿ ಜೀವನಕ್ಕಾಗಿ ಮಹಿಳಾ ಜ್ಞಾನ ವಿಕಾಸ ಕೇಂದ್ರ ಸಹಕಾರಿಯಾಗಿದ್ದು, ಈ ನಿಟ್ಟಿನಲ್ಲಿ ಜ್ಞಾನವಿಕಾಸ ಸಂಯೋಜಕಿಯರು ಯೋಜನೆಯ ಕಾರ್ಯಕ್ರಮಗಳನ್ನು ಮಹಿಳೆಯರಿಗೆ ತಲುಪಿಸುವಲ್ಲಿ ನಿಷ್ಠೆ ವಹಿಸಬೇಕೆಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಸತೀಶ್ ಸುವರ್ಣ ತಿಳಿಸಿದರು.ನಗರದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಕಚೇರಿಯಲ್ಲಿ ತಾಲೂಕಿನ ಜ್ಞಾನ ವಿಕಾಸ ಸಂಯೋಜಕರಿಗೆ ಹಮ್ಮಿಕೊಂಡಿದ್ದ ಕ್ರಿಯಾ ಯೋಜನೆ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮವು ಮಾತೃಶ್ರೀ ಹೇಮಾವತಿ ಅಮ್ಮನವರ ಕನಸಿನ ಕೂಸಾಗಿದ್ದು, ಈ ಕಾರ್ಯಕ್ರಮದ ಮೂಲಕ ಕೌಟುಂಬಿಕ ಸಾಮರಸ್ಯ, ಆರೋಗ್ಯ, ನೈರ್ಮಲ್ಯತೆ, ಶಿಕ್ಷಣ, ಸ್ವ ಉದ್ಯೋಗ, ಸರ್ಕಾರಿ ಸೌಲಭ್ಯ, ಕಾನೂನು ಅರಿವು, ಪೌಷ್ಠಿಕ ಆಹಾರ ಸೇರಿ ಮಹಿಳೆಯರಿಗೆ ಬೇಕಾದ ಅಗತ್ಯ ಮಾಹಿತಿ ನೀಡಲಾಗುವುದು. ಅಲ್ಲದೇ ಮಹಿಳೆಯರ ಸ್ವಾವಲಂಬಿ ಜೀವನಕ್ಕಾಗಿ ಸಾಲ ಸೌಲಭ್ಯಗಳನ್ನು ನೀಡುತ್ತಾ ಸಮಾಜದ ಮುಖ್ಯವಾಹಿನಿಗೆ ತರಲಾಗುತ್ತಿದೆ. ಎಷ್ಟೋ ಮಹಿಳೆಯರು ಉದ್ಯೋಗಸ್ಥರಾಗಿ ಕುಟುಂಬದ ಜವಾಬ್ದಾರಿ ಹೊತ್ತು ನಡೆಯುತ್ತಿದ್ದಾರೆ. ಇಲ್ಲಿ ಕಾರ್ಯನಿರ್ವಹಿಸುವ ಜ್ಞಾನ ವಿಕಾಸ ಸಂಯೋಜಕಿಯರು ತಮ್ಮ ಕೇಂದ್ರದಲ್ಲಿ ಮಾಹಿತಿ ನೀಡುತ್ತಾ ಜ್ಞಾನ ಶಕ್ತಿ, ಕ್ರಿಯಾಶಕ್ತಿ, ಇಚ್ಛಾಶಕ್ತಿಯಿಂದ ಪ್ರಾಮಾಣಿಕವಾಗಿ ಕೆಲಸ ಮಾಡಬೇಕೆಂದರು.ಗ್ರಾಮಾಂತರ ಯೋಜನಾಧಿಕಾರಿ ಕೆ. ಸುರೇಶ್ ಮಾತನಾಡಿ, ಜ್ಞಾನ ವಿಕಾಸ ಕೇಂದ್ರ ಕೇವಲ ಮಹಿಳೆಯರಿಗೆ ಸಾಲ ಸೌಲಭ್ಯ, ಸ್ವ ಉದ್ಯೋಗಕ್ಕೆ ಸೀಮಿತವಾಗದೇ ಅವರಲ್ಲಿ ಸಂಸ್ಕೃತಿ, ಸಂಸ್ಕಾರ ಕುರಿತು ಮಾಹಿತಿ ನೀಡುತ್ತಿದ್ದು, ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸಲಾಗುತ್ತಿದೆ. ಹಲವಾರು ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸಿ ಮಹಿಳೆಯರನ್ನು ಸಾಮಾಜಿಕ, ಶೈಕ್ಷಣಿಕವಾಗಿ ಪ್ರೋತ್ಸಾಹಿಸಲಾಗುತ್ತಿದೆ. ನಮ್ಮ ಜ್ಞಾನ ವಿಕಾಸ ಕೇಂದ್ರಗಳು ಕಳೆದ ವರ್ಷ ಉತ್ತಮ ಗ್ರೇಡಿಂಗ್ ಪಡೆದುಕೊಂಡಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರಾದೇಶಿಕ ವಿಭಾಗದ ಜ್ಞಾನ ವಿಕಾಸ ಯೋಜನಾಧಿಕಾರಿ ಸಂಧ್ಯಾಶೆಟ್ಟಿ ಮಾತನಾಡಿ, ಪೌಷ್ಠಿಕ ಆಹಾರ, ಸಿರಿಧಾನ್ಯ ಬಳಕೆ, ಆರೋಗ್ಯ, ನೈರ್ಮಲ್ಯದ ಬಗ್ಗೆ ಮಾಹಿತಿ ನೀಡಿ, ಕಳೆದ ವರ್ಷ ನಡೆದ ಕಾರ್ಯಕ್ರಮಗಳ ಬಗ್ಗೆ ವಿಮರ್ಶಿಸಿ, ಈ ವರ್ಷವೂ ಎಲ್ಲಾ ಕೇಂದ್ರಗಳಲ್ಲಿ ಸಮರ್ಪಕವಾಗಿ ಸಭೆಗಳು ಮತ್ತು ವಿಶೇಷ ಕಾರ್ಯಕ್ರಮಗಳು ನಡೆಯಬೇಕೆಂದು ಸೂಚಿಸಿದರು.ಆರ್ಥಿಕ ಸಾಕ್ಷರತಾ ಕೇಂದ್ರದ ಆಪ್ತ ಸಮಾಲೋಚಕಿ ರೇಖಾ, ಸಣ್ಣ ಚಟುವಟಿಕೆ, ವಿಶೇಷ ಆಟೋಟ ಚಟುವಟಿಕೆಗಳ ಬಗ್ಗೆ ಬಗ್ಗೆ ತಿಳಿಸಿಕೊಟ್ಟರು.ಅತ್ಯುತ್ತಮವಾಗಿ ಕರ್ತವ್ಯ ನಿರ್ವಹಿಸಿರುವ ಸೇವಾ ಪ್ರತಿನಿಧಿಗಳನ್ನು ಗುರುತಿಸಿ ಬಹುಮಾನ ನೀಡಿ ಪ್ರೋತ್ಸಾಹಿಸಲಾಯತು. ಕಾರ್ಯಕ್ರಮದಲ್ಲಿ ಜಿಲ್ಲಾ ಸಮನ್ವಯ ಅಧಿಕಾರಿ ಪದ್ಮಾವತಿ, ಆಪ್ತ ಸಮಾಲೋಚಕಿ ಕುಸುಮ, ತಾಲೂಕು ಜ್ಞಾನ ವಿಕಾಸ ಸಮನ್ವಯಾಧಿಕಾರಿ ಭಾಗ್ಯಲಕ್ಷ್ಮೀ ಸೇರಿ 25ಕ್ಕೂ ಹೆಚ್ಚು ಜ್ಞಾನ ವಿಕಾಸ ಕೇಂದ್ರಗಳ ಸಂಯೋಜಕಿಯರು ಭಾಗವಹಿಸಿದ್ದರು.