ಉತ್ತಮ ಮಳೆ, ಬೀಜ, ಗೊಬ್ಬರಕ್ಕೆ ಹೆಚ್ಚಿದ ಬೇಡಿಕೆ

| Published : May 26 2024, 01:37 AM IST

ಸಾರಾಂಶ

ಕಳೆದ ಕೆಲವು ದಿನಗಳಿಂದ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ಕೃಷಿ ಚಟುವಟಿಕೆಗಳು ಗರಿಗೆದರಿವೆ. ಬಿತ್ತನೆ ಬೀಜ ಮತ್ತು ರಸಗೊಬ್ಬರಕ್ಕೆ ಹೆಚ್ಚಿನ ಬೇಡಿಕೆ ಬಂದಿದೆ. ಮುಂಗಾರು ಹಂಗಾಮಿಗೆ ಅಗತ್ಯವಿರುವ ಬಿತ್ತನೆ ಬೀಜ ಮತ್ತು ರಸಗೊಬ್ಬರ ಪೂರೈಕೆಗೆ ಕೃಷಿ ಇಲಾಖೆ ವ್ಯವಸ್ಥೆ ಮಾಡಿಕೊಳ್ಳುತ್ತಿದೆ.

ಹಾವೇರಿ:ಕಳೆದ ಕೆಲವು ದಿನಗಳಿಂದ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ಕೃಷಿ ಚಟುವಟಿಕೆಗಳು ಗರಿಗೆದರಿವೆ. ಬಿತ್ತನೆ ಬೀಜ ಮತ್ತು ರಸಗೊಬ್ಬರಕ್ಕೆ ಹೆಚ್ಚಿನ ಬೇಡಿಕೆ ಬಂದಿದೆ. ಮುಂಗಾರು ಹಂಗಾಮಿಗೆ ಅಗತ್ಯವಿರುವ ಬಿತ್ತನೆ ಬೀಜ ಮತ್ತು ರಸಗೊಬ್ಬರ ಪೂರೈಕೆಗೆ ಕೃಷಿ ಇಲಾಖೆ ವ್ಯವಸ್ಥೆ ಮಾಡಿಕೊಳ್ಳುತ್ತಿದೆ.

ಕಳೆದ ವರ್ಷ ಮುಂಗಾರು ಹಂಗಾಮು ವೈಫಲ್ಯದಿಂದ ಕಂಗೆಟ್ಟಿದ್ದ ರೈತರು ಈ ವರ್ಷದ ಉತ್ತಮ ಹದ ಮಳೆಯಿಂದ ಸಂತಸಗೊಂಡಿದ್ದು, ಭೂಮಿ ಹದಗೊಳಿಸುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ.

ಕಳೆದ ವರ್ಷ ತೀವ್ರ ಮಳೆ ಕೊರತೆಯಾಗಿ ತೀವ್ರ ಬರಗಾಲ ಬಿದ್ದು ಬಿತ್ತನೆಗೆ ಮಾಡಿದ ಖರ್ಚೂ ಕೈಗೆ ಸಿಗದೇ ರೈತರು ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿದ್ದರು. ಬೋರ್‌ವೆಲ್‌ಗಳೂ ಕೈಕೊಟ್ಟಿದ್ದವು. ಕೆರೆ ಕಟ್ಟೆಗಳೆಲ್ಲ ಬರಿದಾಗಿ ಕುಡಿಯುವ ನೀರಿಗೂ ಪರದಾಟ ನಡೆಸಿದ್ದರು. ಆದರೆ, ಈ ಸಲ ಮುಂಗಾರು ಪೂರ್ವದಲ್ಲೇ ಉತ್ತಮವಾಗಿ ಮಳೆಯಾಗುತ್ತಿರುವುದರಿಂದ ರೈತರು ಮತ್ತೆ ಹೊಲದತ್ತ ಹೆಜ್ಜೆ ಇಟ್ಟಿದ್ದಾರೆ. ಬೀಜ, ಗೊಬ್ಬರ ಸಂಗ್ರಹ ಮಾಡಿಕೊಂಡು ಬಿತ್ತನೆಗೆ ಅಣಿಯಾಗುತ್ತಿದ್ದಾರೆ. ೩.೨೭ ಲಕ್ಷ ಹೆಕ್ಟೇರ್ ಬಿತ್ತನೆ ಗುರಿ:ಮುಂಗಾರು ಹಂಗಾಮಿನಲ್ಲಿ ಒಟ್ಟಾರೆ ೩.೨೭ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿದೆ. ಜಿಲ್ಲೆಯ ಪ್ರಮುಖ ಬೆಳೆಯಾದ ಮೆಕ್ಕೆಜೋಳ ಹೆಚ್ಚು ಪ್ರದೇಶದಲ್ಲಿ ಬಿತ್ತನೆಯ ಗುರಿ ಹೊಂದಲಾಗಿದೆ. ೩೩೭೧೫ ಹೆಕ್ಟೇರ್ ಪ್ರದೇಶದಲ್ಲಿ ಭತ್ತ, ೨೦೫೮೩೮ ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆ ಗುರಿ ಹೊಂದಲಾಗಿದೆ. ೪೫೭೮೦ ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ, ೧೯೨೦೦ ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ, ೮೪೧೬ ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು, ೨೫೦ ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬಿತ್ತುವ ಗುರಿ ಹೊಂದಲಾಗಿದೆ. ೨,೪೦,೩೦೯೩ ಹೆಕ್ಟೇರ್ ಏಕದಳ, ೧೧೪೬ ಹೆಕ್ಟೇರ್ ದ್ವಿದಳ, ೩೧,೪೩೬ ಹೆಕ್ಟೇರ್ ಎಣ್ಣೆಕಾಳು ಹಾಗೂ ೫೪,೧೯೬ ಹೆಕ್ಟೇರ್ ವಾಣಿಜ್ಯ ಬೆಳೆಗಳ ಬಿತ್ತನೆಯ ಗುರಿಯನ್ನು ಹೊಂದಲಾಗಿದೆ. ಬಿತ್ತನೆಗೆ ಹೊಲವನ್ನು ಸಜ್ಜುಗೊಳಿಸಿದ್ದ ರೈತರು ಈಗ ಬಿತ್ತನೆಗೆ ಮುಂದಾಗಿದ್ದಾರೆ.ಬಿತ್ತನೆ ಬೀಜಕ್ಕೆ ಬೇಡಿಕೆ: ಜಿಲ್ಲೆಯಲ್ಲಿ ಮೆಕ್ಕೆಜೋಳ ೧೨೦೦೦ ಕ್ವಿಂಟಲ್, ಶೇಂಗಾ ೩೨೦೦ ಕ್ವಿಂಟಲ್, ಭತ್ತ ೫ ಸಾವಿರ ಕ್ವಿಂಟಲ್, ಸೋಯಾಬಿನ್ ೧೪೦೦೦ ಕ್ವಿಂಟಲ್, ಜೋಳ ಹೈಬ್ರಿಡ್ ೫೦ ಕ್ವಿಂಟಲ್, ತೊಗರಿ ೯೦೦ ಕ್ವಿಂಟಲ್, ಹೆಸರು, ಸೂರ್ಯಕಾಂತಿ ಸೇರಿದಂತೆ ೩೫,೬೧೦ ಕ್ವಿಂಟಲ್ ಬಿತ್ತನೆ ಬೀಜ ಪೂರೈಕೆಗೆ ಕೃಷಿ ಇಲಾಖೆ ಬೇಡಿಕೆ ಸಲ್ಲಿಸಿದೆ. ೩೭ ಸಾವಿರ ಮೆ.ಟನ್ ಗೊಬ್ಬರ ದಾಸ್ತಾನು: ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಹಂಗಾವಿನಲ್ಲಿ ೩.೨೭ ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಹಾಕಿಕೊಳ್ಳಲಾಗಿದೆ. ಇದಕ್ಕಾಗಿ ಅಗತ್ಯ ಗೊಬ್ಬರ ದಾಸ್ತಾನು ಮಾಡಿಕೊಳ್ಳಲಾಗುತ್ತಿದೆ. ಸದ್ಯಕ್ಕೆ ೨೨೦೨೯ ಟನ್ ಯೂರಿಯಾ, ೩೭೯೨ ಟನ್ ಡಿಎಪಿ, ೯೨೨ ಟನ್ ಎಂಒಪಿ, ೧೧೦೫೦ ಟನ್ ಕಾಂಪ್ಲೆಕ್ಸ್, ೧೪೩ ಟನ್ ಎಸ್‌ಎಸ್‌ಪಿ ಸೇರಿದಂತೆ ಒಟ್ಟು ೩೭೯೩೭ ಮೆ.ಟನ್ ರಸಗೊಬ್ಬರ ದಾಸ್ತಾನು ಮಾಡಲಾಗಿದೆ. ರೈತರ ಬೇಡಿಕೆಗೆ ತಕ್ಕಂತೆ ಗೊಬ್ಬರ ಪೂರೈಕೆಗೆ ಕೃಷಿ ಇಲಾಖೆ ವ್ಯವಸ್ಥೆ ಮಾಡಿಕೊಂಡಿದೆ.ಆತುರದ ನಿರ್ಧಾರ ಬೇಡ: ಜಿಲ್ಲೆಯಲ್ಲಿ ಮುಂಗಾರು ಪೂರ್ವದಲ್ಲಿ ಮಳೆಯಾಗುತ್ತಿದ್ದಂತೆ ಸೋಯಾಬಿನ್ ಬಿತ್ತನೆಗೆ ರೈತರು ಮುಂದಾಗುತ್ತಿದ್ದಾರೆ. ಆದರೆ, ಈ ರೀತಿ ಆತುರ ಮಾಡದೇ ಮಳೆ ನೋಡಿಕೊಂಡು ಬಿತ್ತನೆ ಮಾಡಬೇಕಿದೆ. ಒಂದು ವೇಳೆ ಬಿತ್ತನೆ ನಂತರ ಮಳೆ ವಿಳಂಬವಾದರೆ ಬಿತ್ತಿದ ಬೀಜ ಒಣಗಿ ನಷ್ಟವಾಗುವ ಸಾಧ್ಯತೆಯಿರುತ್ತದೆ. ಅದಕ್ಕಾಗಿ ಮಳೆಯಾದ ಮೇಲೆಯೇ ಬಿತ್ತನೆ ಆರಂಭಿಸಬೇಕು ಎಂದು ಕೃಷಿ ಇಲಾಖೆ ಅಧಿಕಾರಿಗಳು ಸಲಹೆ ನೀಡುತ್ತಿದ್ದಾರೆ. ಜಿಲ್ಲೆಗೆ ಅವಶ್ಯವಿರುವ ರಸಗೊಬ್ಬರ ವಿವಿಧ ಸಂಸ್ಥೆಗಳಿಂದ ಅವಶ್ಯಕತೆಗೆ ಅನುಗುಣವಾಗಿ ಹಂತ ಹಂತವಾಗಿ ಸರಬರಾಗುತ್ತಿದ್ದು, ರಸಗೊಬ್ಬರ ಯಾವುದೇ ಕೊರತೆ ಇರುವುದಿಲ್ಲ. ರಸಗೊಬ್ಬರ ಮತ್ತು ಬಿತ್ತನೆ ಬೀಜ ಮಾರಾಟಗಾರರು ಕೃತಕ ಅಭಾವ ಸೃಷ್ಟಿಸದಂತೆ ಸೂಚನೆ ನೀಡಲಾಗಿದೆ. ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡುವುದು, ಬಿಲ್ ನೀಡದೇ ಇರುವುದು, ಅವಧಿ ಮೀರಿದ ಕೃಷಿ ಪರಿಕರಗಳನ್ನು ವಿತರಣೆ ಮಾಡುವುದು ಅಥವಾ ರಸಗೊಬ್ಬರವನ್ನು ಅಕ್ರಮವಾಗಿ ದಾಸ್ತಾನು ಮಾಡಿರುವುದು ಕಂಡುಬಂದಲ್ಲಿ ಅಂತಹ ಮಾರಾಟಗಾರರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ ಹೇಳಿದರು.ಜಿಲ್ಲೆಯಲ್ಲಿ ಮುಂಗಾರು ಹಂಗಾಮಿಗೆ ೧೯ ರೈತ ಸಂಪರ್ಕ ಕೇಂದ್ರಗಳ ಜೊತೆಗೆ ೨೩ ಹೆಚ್ಚುವರಿ ಬೀಜ ಮಾರಾಟ ಕೇಂದ್ರಗಳ ಮೂಲಕ ಬೀಜ ವಿತರಣೆ ವ್ಯವಸ್ಥೆ ಕಲ್ಪಿಸಲಾಗಿದೆ. ರೈತರು ಬಿತ್ತನೆ ಕೈಗೊಳ್ಳುವಾಗ ಭೂಮಿಯಲ್ಲಿ ಅವಶ್ಯಕ ತೇವಾಂಶ ಇರುವುದನ್ನು ಕಡ್ಡಾಯವಾಗಿ ಖಚಿತಪಡಿಸಿಕೊಂಡು ಬಿತ್ತನೆ ಮಾಡಬೇಕು. ಇಲ್ಲವಾದಲ್ಲಿ ಬೀಜಗಳು ಸರಿಯಾಗಿ ಮೊಳಕೆಯೊಡೆಯದೇ ಉತ್ತಮ ಬೆಳೆ ಪಡೆಯಲು ಸಾಧ್ಯವಾಗುವುದಿಲ್ಲ ಎಂದು ಜಂಟಿ ಕೃಷಿ ನಿರ್ದೇಶಕ ಮಂಜುನಾಥ ಅಂತರವಳ್ಳಿ ಹೇಳಿದರು.