ಪರ್ಯಾಯ ಸಾಲುಗಳಿಗೆ ನೀರುಣಿಸಿದರೆ ಉತ್ತಮ ಇಳುವರಿ: ಡಾ. ಗುರುಪ್ರಸಾದ

| Published : Jan 29 2024, 01:35 AM IST

ಪರ್ಯಾಯ ಸಾಲುಗಳಿಗೆ ನೀರುಣಿಸಿದರೆ ಉತ್ತಮ ಇಳುವರಿ: ಡಾ. ಗುರುಪ್ರಸಾದ
Share this Article
  • FB
  • TW
  • Linkdin
  • Email

ಸಾರಾಂಶ

ಹಿಂಗಾರು, ಬೇಸಿಗೆ ಬೆಳೆಗಳಲ್ಲಿ ಪರ್ಯಾಯ ಸಾಲುಗಳಿಗೆ ನೀರುಣಿಸುವ ಮುಖಾಂತರ ಲಭ್ಯವಿರುವ ನೀರನ್ನು ಸಮರ್ಪಕವಾಗಿ ಬಳಸಿಕೊಂಡು ಉತ್ತಮ ಇಳುವರಿಯನ್ನು ಪಡೆಯಬಹುದು.

ಕನ್ನಡಪ್ರಭ ವಾರ್ತೆ ರಾಣಿಬೆನ್ನೂರು

ಹಿಂಗಾರು, ಬೇಸಿಗೆ ಬೆಳೆಗಳಲ್ಲಿ ಪರ್ಯಾಯ ಸಾಲುಗಳಿಗೆ ನೀರುಣಿಸುವ ಮುಖಾಂತರ ಲಭ್ಯವಿರುವ ನೀರನ್ನು ಸಮರ್ಪಕವಾಗಿ ಬಳಸಿಕೊಂಡು ಉತ್ತಮ ಇಳುವರಿಯನ್ನು ಪಡೆಯಬಹುದು ಎಂದು ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ. ಗುರುಪ್ರಸಾದ ಜಿ.ಎಸ್. ಹೇಳಿದರು.

ತಾಲೂಕಿನ ರಾಹುತನಕಟ್ಟಿ ಗ್ರಾಮದಲ್ಲಿ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ನಿಕ್ರಾ ಯೋಜನೆ ಅಡಿ ಏರ್ಪಡಿಸಲಾಗಿದ್ದ ಬರಗಾಲ ಪರಿಸ್ಥಿತಿಯಲ್ಲಿ ಬೆಳೆ ಹಾಗೂ ಜಾನುವಾರು ನಿರ್ವಹಣೆ ಕುರಿತು ಹೊರ ಆವರಣ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಜೋಳ ಮತ್ತು ಕಡಲೆ ಬೆಳೆಗಳಲ್ಲಿ ಸಮಗ್ರ ಪೀಡೆ ನಿರ್ವಹಣೆ ಬಗ್ಗೆ ಮಾಹಿತಿ ನೀಡಿದರು. ಅಲ್ಲದೇ ಸಾಮಾನ್ಯವಾಗಿ ರೈತರು ಬೆಳೆಯುವ ಹಿಂಗಾರಿ ಜೋಳದ ಸ್ಥಳೀಯ ಮತ್ತು ಸಂಕರಣ ತಳಿಗಳಿಗೆ ಹೋಲಿಸಿದರೆ ಹೊಸ ತಳಿಯಾದ ಎಸ್.ಪಿ.ವಿ- 2217 ಕಟಾವಿನ ಸಮಯದಲ್ಲಿ ಜೋಳದ ದಂಟು ಹಾಗೂ ಎಲೆಗಳು ಹಸಿರಾಗಿದ್ದು, ಜಾನುವಾರುಗಳಿಗೆ ಉತ್ತಮ ಗುಣಮಟ್ಟದ ಮೇವನ್ನು ಒದಗಿಸುತ್ತದೆ ಎಂದರು.

ಕೇಂದ್ರದ ಪಶು ವಿಜ್ಞಾನಿ ಡಾ. ಮಹೇಶ ಕಡಗಿ ಮಾತನಾಡಿ, ಬರಗಾಲದಲ್ಲಿ ಯೂರಿಯಾ, ಉಪ್ಪು ಹಾಗೂ ಬೆಲ್ಲ ಉಪಯೋಗಿಸಿ ಮಾಡುವ ಒಣ ಮೇವಿನ ಬಳಕೆಯಿಂದ ಜಾನುವಾರುಗಳು ಹೆಚ್ಚಿನ ಮೇವನ್ನು ಸೇವಿಸುತ್ತವೆ. ಇದು ಜೀರ್ಣವಾಗುವಿಕೆಯನ್ನು ಹೆಚ್ಚಿಸುತ್ತದೆ ಹಾಗೂ ಒಣಮೇವಿನ ಪೋಷಕಾಂಶ ವೃದ್ಧಿಸುತ್ತದೆ. ಯೂರಿಯಾ ಪೌಷ್ಟೀಕರಣದಲ್ಲಿ, 1-2 ಕಿಗ್ರಾಂ ಯೂರಿಯಾ ವನ್ನು 4-5 ಲೀ. ನೀರಿನಲ್ಲಿ ಸಂಪೂರ್ಣವಾಗಿ ಕರಗಿಸಿ 100 ಕಿಗ್ರಾಂ ಚೆನ್ನಾಗಿ ಹರಡಿದ ಒಣಮೇವಿಗೆ ಸಿಂಪರಣೆ ಮಾಡಬೇಕು. ಎರಡು ತಾಸಿನ ನಂತರ ಜಾನುವಾರುಗಳಿಗೆ ಕೊಡುವುದರಿಂದ ಒಣಮೇವಿನ ಜೀರ್ಣತೆ ಹೆಚ್ಚಾಗಿ ಸಾರಜನಕವನ್ನು ಹೆಚ್ಚಿಸುತ್ತದೆ. ಯೂರಿಯಾ ಪೌಷ್ಟೀಕರಿಸಿದ ಮೇವನ್ನು ಒಂದು ವರ್ಷದ ಒಳಗಿನ ಜಾನುವಾರುಗಳಿಗೆ ನೀಡಬಾರದು. ಉಪ್ಪು ಮತ್ತು ಬೆಲ್ಲದ ಪೌಷ್ಟೀಕರಣದಲ್ಲಿ 100 ಕಿಗ್ರಾಂ ಒಣಮೇವಿಗೆ 1 ಕಿಗ್ರಾಂ ಉಪ್ಪು ಅಥವಾ ಬೆಲ್ಲವನ್ನು ನೀರಿನಲ್ಲಿ ಕರಗಿಸಿ ಸಿಂಪಡಣೆ ಮಾಡಿ ಜಾನುವಾರುಗಳಿಗೆ ನೀಡುವುದರಿಂದ ಜಾನುವಾರುಗಳಲ್ಲಿ ಒಣಮೇವಿನ ಸೇವನೆ ಹೆಚ್ಚಾಗುತ್ತದೆ ಎಂದರು.

ಹಿರಿಯ ಸಂಶೋಧಕಿ (ನಿಕ್ರಾ ಯೋಜನೆ) ಡಾ. ಲಕ್ಷ್ಮೀ ಪಾಟೀಲ ಮಾತನಾಡಿ, ತೋಟಗಾರಿಕೆ ಬೆಳೆಗಳಲ್ಲಿ ಸಮಯೋಚಿತ ನೀರು ನಿರ್ವಹಣೆ ಹಾಗೂ ಬೆಳೆತ್ಯಾಜ್ಯಗಳಿಂದ ಬೆಳೆ ಸುತ್ತ ಮಣ್ಣಿನ ಮೇಲೆ ಹೊದಿಕೆ ಮಾಡುವುದರ ಮೂಲಕ ಬರಗಾಲದಲ್ಲಿಯೂ ಕೂಡ ಒಳ್ಳೆಯ ಇಳುವರಿ ನಿರೀಕ್ಷಿಸಬಹುದೆಂದು ತಿಳಿಸಿದರು.

ತರಬೇತಿ ಕಾರ್ಯಕ್ರಮದ ನಂತರ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಪ್ರಗತಿಪರ ರೈತ ಪುಟ್ಟಪ್ಪ ಎರೇಕುಪ್ಪಿ ಇವರ ಹಿಂಗಾರಿ ಜೋಳ (ತಳಿ ಎಸ್.ಪಿ.ವಿ- 2217) ಬೆಳೆ ಕ್ಷೇತ್ರಕ್ಕೆ ಭೇಟಿ ನೀಡಿ ತಾಂತ್ರಿಕ ಸಲಹೆ ನೀಡಿದರು.

ಕೇಂದ್ರದ ಶಬ್ಬೀರ ಬೆಳಕೇರಿ ಹಾಗೂ ಗ್ರಾಮದ 30ಕ್ಕೂ ಹೆಚ್ಚು ರೈತರು ಉಪಸ್ಥಿತರಿದ್ದರು.