ಸಾರಾಂಶ
ಹಾನಗಲ್ಲ: ರಾಜ್ಯಕ್ಕಾಗಿ ನಡೆದ ಯುದ್ಧಗಳೇ ಇತಿಹಾಸವಲ್ಲ, ನಮ್ಮ ಪಾರಂಪರಿಕ ಸಂಪ್ರದಾಯದ ಹಬ್ಬಗಳು, ದೈವಾರಾಧನೆಗಳು ಇತಿಹಾಸವಾಗಿವೆ. ಆದರೆ ಪಠ್ಯಪುಸ್ತಕಗಳಲ್ಲಿ ರಾಜರ ಆಳ್ವಿಕೆಗಳೇ ಇತಿಹಾಸವೆನ್ನುವಂತೆ ಬೋಧಿಸಲಾಗುತ್ತಿದೆ. ಇತ್ತೀಚೆಗೆ ಹಬ್ಬಗಳನ್ನೂ ವಿರೂಪಗೊಳಿಸುವ ಪ್ರಯತ್ನ ನಡೆಯುತ್ತಿದ್ದು, ನಾವೆಲ್ಲರೂ ಎಚ್ಚರಗೊಳ್ಳಬೇಕಿದೆ ಎಂದು ಗದಗ ಬ್ರಹನ್ಮಠದ ಜಗದ್ಗುರು ಸದಾಶಿವಾನಂದ ಸ್ವಾಮಿಗಳು ಹೇಳಿದರು.ಪಟ್ಟಣದ ತಾರಕೇಶ್ವರ ದೇವಸ್ಥಾನದ ಬಳಿ ಪ್ರತಿಷ್ಠಾಪಿಸಿದ ವಿರಾಟ ಹಿಂದೂ ಮಹಾಗಣಪತಿ ಗಣೇಶೋತ್ಸವದ ನಿಮಿತ್ತ ಹಮ್ಮಿಕೊಂಡಿದ್ದ ಧರ್ಮಸಭೆ, ಹಾಸ್ಯಸಂಜೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಎಲ್ಲ ಸಮುದಾಯಗಳಿಗೂ ಗಣಪತಿ ಆರಾಧ್ಯದೈವವಾಗಿದೆ. ಗಣೇಶೋತ್ಸವ ಭಾರತೀಯರಲ್ಲಿ ಏಕತೆಯನ್ನು ಧಾರ್ಮಿಕತೆಯನ್ನು ಹುಟ್ಟುಹಾಕಬೇಕು. ಇತ್ತೀಚೆಗೆ ಜಾತಿ, ಮತ ಪಂಥ, ವಿವಿಧ ಬಣ್ಣಗಳ ಧ್ವಜಗಳ ನಡುವೆ ಸಂಘರ್ಷಗಳು ಏರ್ಪಡುತ್ತಿದ್ದು, ಅವುಗಳನ್ನು ರಾಜಕೀಯಕ್ಕಾಗಿ ಬಳಕೆ ಮಾಡುವವರೂ ಹೆಚ್ಚಾಗಿದ್ದಾರೆ. ಸ್ವಾತಂತ್ರ್ಯ ಸಿಗುವವರೆಗೂ ಭಾರತೀಯರಲ್ಲಿ ಏಕತೆಯನ್ನು ತಂದಿದ್ದು ಗಣೇಶೋತ್ಸವ. ಹತ್ತಿಪ್ಪತ್ತು ವರ್ಷಗಳಿಂದೀಚೆ ಹಬ್ಬಗಳು ವೈಶಿಷ್ಟ್ಯತೆ-ಅರ್ಥವನ್ನು ಕಳೆದುಕೊಳ್ಳುತ್ತಿವೆ. ಭಾರತೀಯ ಸಂಸ್ಕೃತಿ ನಿಂತಿರುವುದು ಹಬ್ಬಗಳು, ಜಾತ್ರೆಗಳು, ಸಂಪ್ರದಾಯ, ಪದ್ಧತಿಗಳ ಮೇಲೆ ಎಂಬುದು ಗಮನಾರ್ಹ ಸಂಗತಿ. ಹಬ್ಬಗಳು ನಮ್ಮ ಯುವಕರನ್ನು ಸದೃಢಗೊಳಿಸಲು, ಉದ್ಯೋಗ, ಕರ್ತವ್ಯ ಪ್ರಜ್ಞೆ ಬೆಳೆಸಲು ಸಶಕ್ತಗೊಳಿಸಲು, ಒಗ್ಗಟ್ಟು ಮೂಡಿಸಲು ಆಚರಣೆಗಳು ಬಳಕೆಯಾಗಬೇಕಿದೆ. ಡಿಜೆ ಸಂಸ್ಕೃತಿ ನಮ್ಮಿಂದ ದೂರವಾಗಬೇಕು. ದೇಶೀಯ ವಾದ್ಯಗಳ ಬಳಕೆಯಾಗಬೇಕು. ನಮ್ಮ ಹಿಂದೂ ಹಬ್ಬಗಳನ್ನು ಬೇರೆಯವರು ಹಾಳು ಮಾಡುತ್ತಿದ್ದಾರೆಂದು ಆರೋಪಿಸುವ ಅಗತ್ಯವಿಲ್ಲ. ನಾವು ಜಾಗೃತಗೊಳ್ಳಬೇಕು. ಯುವಕ ಮಂಡಳಗಳಲ್ಲಿ ಧಾರ್ಮಿಕ, ಸಾಂಸ್ಕೃತಿಕ ಐಕ್ಯತೆ ಮೂಡಬೇಕು. ಕಾಶಾಯ ವಸ್ತ್ರದ ಅಸ್ಮಿತೆ ಮೂಡಿಸಬೇಕು ಎಂದು ಸದಾಶಿವಾನಂದ ಸ್ವಾಮಿಗಳು ಕರೆ ನೀಡಿದರು. ನಂತರ ನಡೆದ ಹಾಸ್ಯ ಕಲಾವಿದರಾದ ಗಂಗಾವತಿಯ ಬಿ.ಪ್ರಾಣೇಶ್, ಬಸವರಾಜ ಮಹಾಮನಿ, ನರಸಿಂಹ ಜೋಶಿ ಅವರು ಹಾಸ್ಯ ಸನ್ನಿವೇಶಗಳು, ನಗೆ ಚಟಾಕೆಗಳ ಮೂಲಕ ಸಾರ್ವಜನಿಕರನ್ನು ನಗೆಗಡಲಲ್ಲಿ ತೇಲಿಸಿದರು. ಬೆಂಗಳೂರಿನ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ವಿಶ್ವನಾಥ ಹಿರೇಮಠ, ಉದ್ಯಮಿ ಸಿದ್ದಲಿಂಗಪ್ಪ ಕಮಡೊಳ್ಳಿ, ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿ ಭುವನೇಶ್ವರಿ ಪಾಟೀಲ, ಕಿರಣ ಮೂಡ್ಲಿಯವರ ಉಪಸ್ಥಿತರಿದ್ದರು. ಮನೋಜ ಕಲಾಲ ಸ್ವಾಗತಿಸಿದರು. ರವಿಚಂದ್ರ ಪುರೋಹಿತ, ರವಿ ಪುರದ್ ಮತ್ತು ಕಿರಣ ಹೂಗಾರ ಕಾರ್ಯಕ್ರಮ ನಿರ್ವಹಿಸಿದರು.