ಮಲೇರಿಯಾ ನಿಯಂತ್ರಣ : ಪಾಲಿಕೆಯಿಂದ ಮುಂಜಾಗ್ರತಾ ಕ್ರಮ

| Published : Jun 01 2024, 12:46 AM IST

ಮಲೇರಿಯಾ ನಿಯಂತ್ರಣ : ಪಾಲಿಕೆಯಿಂದ ಮುಂಜಾಗ್ರತಾ ಕ್ರಮ
Share this Article
  • FB
  • TW
  • Linkdin
  • Email

ಸಾರಾಂಶ

ಮಲೇರಿಯಾ ನಿಯಂತ್ರಣ ಘಟಕದ ಮೇಲ್ವಿಚಾರಕರು ಈ ನಿರ್ಮಾಣ ಹಂತದ ಕಟ್ಟಡಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿ ನೋಟಿಸ್‌ ನೀಡುತ್ತಿದ್ದಾರೆ. ನಂತರವೂ ಸರಿಪಡಿಸದೆ ಇದ್ದರೆ ದಂಡ ವಿಧಿಸಲು ನಗರ ಯೋಜನಾ ವಿಭಾಗಕ್ಕೆ ಶಿಫಾರಸು ಮಾಡಲಾಗುತ್ತಿದೆ ಎಂದು ಪಾಲಿಕೆ ಆಯುಕ್ತ ಆನಂದ್‌ ಸಿ.ಎಲ್. ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಮಳೆಗಾಲ ಪ್ರಾರಂಭವಾಗುತ್ತಿದ್ದು, ಮಲೇರಿಯಾ, ಡೆಂಘೀ ಇನ್ನಿತರ ರೋಗಗಳು ಹರಡುವ ಸಾಧ್ಯತೆಗಳಿದ್ದು, ಈ ಹಿನ್ನೆಲೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ. ಇದಕ್ಕೆ ಸಾರ್ವಜನಿಕರು ಸಹಕರಿಸುವಂತೆ ಕೋರಿದೆ.ಪಾಲಿಕೆ ವ್ಯಾಪ್ತಿಯ ಜೆಪ್ಪು, ಬಂದರ್, ಬಿಜೈ, ಎಕ್ಕೂರು, ಪಡೀಲ್, ಕೂಳೂರು, ಶಕ್ತಿನಗರ, ಬೆಂಗ್ರೆ, ಸುರತ್ಕಲ್. ಕುಳಾಯಿ ಪ್ರದೇಶಗಳಲ್ಲಿ ಒಟ್ಟು 10 ನಗರ ಆರೋಗ್ಯ ಕೇಂದ್ರಗಳಿದ್ದು, ಮಲೇರಿಯಾ ಹಾಗೂ ಡೆಂಘೀ ನಿಯಂತ್ರಣಕ್ಕಾಗಿ ದಿನನಿತ್ಯ ಕಾರ್ಯಾಚರಣೆ ನಡೆಸಲಾಗುತ್ತಿದೆ. ವಿವಿಧೋದ್ದೇಶ ಕಾರ್ಯಕರ್ತ (ಎಂ.ಪಿ.ಡಬ್ಲ್ಯು)ರಿಂದ ಮನೆ-ಮನೆ, ಶಾಲಾ ಕಾಲೇಜು, ಹೊಟೇಲ್‌, ಆಶ್ರಮ ಹಾಗೂ ಇನ್ನಿತರ ಕಟ್ಟಡಗಳಿಗೆ ದಿನನಿತ್ಯ ಭೇಟಿ ನೀಡಿ, ಸೊಳ್ಳೆ ಉತ್ಪತ್ತಿ ತಾಣಗಳನ್ನು ನಾಶಪಡಿಸಿ, ಸಂಬಂಧಪಟ್ಟವರಿಗೆ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲು ಮನವರಿಕೆ ಮಾಡಲಾಗುತ್ತಿದೆ.

ನಗರದೆಲ್ಲೆಡೆ ಕ್ರಿಮಿನಾಶಕ ಸಿಂಪಡಣಾ ಕಾರ್ಯಕರ್ತರಿಂದ ಮದ್ದು ಸಿಂಪಡಣೆ ಹಾಗೂ ಧೂಮೀಕರಣ ಮಾಡಲಾಗುತ್ತಿದೆ. ಸೊಳ್ಳೆ ಪರದೆಗಳನ್ನು ಉಪಯೋಗಿಸುವಂತೆ ಹಾಗೂ ಸೊಳ್ಳೆಗಳಿಂದ ಸ್ವಯಂ ರಕ್ಷಣೆ ಪಡೆದು ಕೊಳ್ಳುವ ಬಗ್ಗೆ ಮಾಹಿತಿ ನೀಡಲಾಗುತ್ತಿದೆ.ನಿರ್ಮಾಣ ಹಂತದ ಕಟ್ಟಡಗಳ ಮಾಲೀಕರು, ಸಂಬಂಧಪಟ್ಟ ಗುತ್ತಿಗೆದಾರರು ಕಟ್ಟಡಗಳ ಸುತ್ತ ನೀರು ನಿಲ್ಲದ ಹಾಗೆ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ನಿರ್ಮಾಣ ಹಂತದ ಕಟ್ಟಡಗಳಿಗೆ ಜಿಲ್ಲಾ ಮಲೇರಿಯಾ ಕಚೇರಿಯಿಂದ ತಂಡಗಳು ಭೇಟಿ ನೀಡುತ್ತಿದ್ದು, ಸೊಳ್ಳೆ ಉತ್ಪತ್ತಿ ತಾಣಗಳು ಕಂಡುಬಂದರೆ ಮಾಹಿತಿ ನೀಡುತ್ತಿವೆ. ಅದರ ನಂತರ ಮಲೇರಿಯಾ ನಿಯಂತ್ರಣ ಘಟಕದ ಮೇಲ್ವಿಚಾರಕರು ಈ ನಿರ್ಮಾಣ ಹಂತದ ಕಟ್ಟಡಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿ ನೋಟಿಸ್‌ ನೀಡುತ್ತಿದ್ದಾರೆ. ನಂತರವೂ ಸರಿಪಡಿಸದೆ ಇದ್ದರೆ ದಂಡ ವಿಧಿಸಲು ನಗರ ಯೋಜನಾ ವಿಭಾಗಕ್ಕೆ ಶಿಫಾರಸು ಮಾಡಲಾಗುತ್ತಿದೆ ಎಂದು ಪಾಲಿಕೆ ಆಯುಕ್ತ ಆನಂದ್‌ ಸಿ.ಎಲ್. ತಿಳಿಸಿದ್ದಾರೆ.

ಡೆಂಘೀ, ಮಲೇರಿಯಾ ಪ್ರಕರಣ ಕಂಡುಬಂದ ಪ್ರದೇಶಗಳಲ್ಲಿ 24 ಗಂಟೆಗಳೊಳಗೆ ಸುಮಾರು 30ರಿಂದ 40 ಮನೆಗಳ ಸುತ್ತಮುತ್ತ ಧೂಮೀಕರಣ ಹಾಗೂ ಕ್ರಿಮಿನಾಶಕ ಮದ್ದನ್ನು ಕಡ್ಡಾಯವಾಗಿ ಸಿಂಪಡಿಸಲಾಗುತ್ತಿದೆ ಹಾಗೂ ಜೈವಿಕ ವಿಧಾನವಾಗಿ ಬಾವಿಗಳಿಗೆ ಗಪ್ಪಿ ಮೀನುಗಳನ್ನು ಬಿಡಲಾಗುತ್ತಿದೆ.ಸಾರ್ವಜನಿಕರು ಮುಂಜಾಗ್ರತಾ ಕ್ರಮಗಳಾಗಿ ತಮ್ಮ ಪರಿಸರದ ಸುತ್ತ ನೀರು ನಿಲ್ಲದ ಹಾಗೆ ಹಾಗೂ ಶುಚಿತ್ವ ಕಾಪಾಡಲು ಸೂಕ್ತ ಕ್ರಮ ವಹಿಸಬೇಕು. ಸೊಳ್ಳೆ ಉತ್ಪತ್ತಿ ತಾಣಗಳನ್ನು ನಾಶಪಡಿಸಬೇಕು. ಸೊಳ್ಳೆ ಪರದೆಗಳ ಉಪಯೋಗ ಮಾಡುವುದು ಹಾಗೂ ಮನೆಯ ಕಿಟಕಿ, ಬಾಗಿಲುಗಳಿಗೆ ಮೆಶ್ ಅಳವಡಿಸುವುದು ಇತ್ಯಾದಿ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಮಹಾನಗರ ಪಾಲಿಕೆಯ ಆಯುಕ್ತರು ಮನವಿ ಮಾಡಿದ್ದಾರೆ.