ಅಯೋಡಿನ್ ಕೊರತೆ, ಇಲಿ ಜ್ವರದ ಬಗ್ಗೆ ಎಚ್ಚರ ವಹಿಸಿ

| Published : Oct 31 2024, 01:04 AM IST

ಅಯೋಡಿನ್ ಕೊರತೆ, ಇಲಿ ಜ್ವರದ ಬಗ್ಗೆ ಎಚ್ಚರ ವಹಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಅಯೋಡಿನ್ ಕೊರತೆಯಿಂದ ಆಗಬಹುದಾದ ಆರೋಗ್ಯ ಸಮಸ್ಯೆಗಳು ಹಾಗೂ ಇಲಿಜ್ವರ ಬಾರದಂತೆ ತಡೆಯುವ ಕುರಿತು ಅರಿವು ಪಡೆದರೆ ಸಮಸ್ಯೆಗಳಿಂದ ಪಾರಾಗಬಹುದು ಎಂದು ಡಿಎಚ್‌ಒ ಡಾ. ನಟರಾಜ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಅಯೋಡಿನ್ ಕೊರತೆಯಿಂದ ಆಗಬಹುದಾದ ಆರೋಗ್ಯ ಸಮಸ್ಯೆಗಳು ಹಾಗೂ ಇಲಿಜ್ವರ ಬಾರದಂತೆ ತಡೆಯುವ ಕುರಿತು ಅರಿವು ಪಡೆದರೆ ಸಮಸ್ಯೆಗಳಿಂದ ಪಾರಾಗಬಹುದು ಎಂದು ಡಿಎಚ್‌ಒ ಡಾ. ನಟರಾಜ್ ತಿಳಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಕಚೇರಿ, ಎನ್‌ಸಿಟಿ ಘಟಕ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ, ಶಿವಮೊಗ್ಗ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ರಾಷ್ಟ್ರೀಯ ಸೇವಾ ಯೋಜನಾ ಘಟಕಗಳ ಸಹಯೋಗದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ವಿಶ್ವ ಅಯೋಡಿನ್ ಕೊರತೆ ನಿಯಂತ್ರಣಾ ದಿನ ಹಾಗೂ ಇಲಿಜ್ವರ ನಿಯಂತ್ರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಅಯೋಡಿನ್ ಒಂದು ಸೂಕ್ಷ್ಮ ಪೋಷಕಾಂಶವಾಗಿದ್ದು ಇದರ ಕೊರತೆ ಉಂಟಾದರೆ ಗಳಗಂಡ ಖಾಯಿಲೆ ಸೇರಿದಂತೆ ಇನ್ನಿತರೆ ಆರೋಗ್ಯ ಸಮಸ್ಯೆಗಳು ಬರುತ್ತವೆ. ಹಾಗೂ ಇಲಿ ಮತ್ತು ಇತರೆ ಸಾಕು ಪ್ರಾಣಿಗಳ ಮೂತ್ರ ನೀರು, ಆಹಾರದಲ್ಲಿ ಬೆರೆತರೆ ಇಲಿಜ್ವರ ಉಂಟಾಗುತ್ತದೆ. ಇವೆರಡನ್ನೂ ನಿಯಂತ್ರಿಸಿ, ಬಾರದಂತೆ ತಡೆಯಬಹುದು. ಅಯೋಡಿನ್ ಯುಕ್ತ ಉಪ್ಪನ್ನು ಬಳಸಬೇಕು. ಇಲಿಜ್ವರದಿಂದ ಪಾರಾಗಲು ನೀರು, ಆಹಾರವನ್ನು ಮುಚ್ಚಿಡಬೇಕು. ಹಾಗೂ ಸಮಸ್ಯೆ ಬಂದ ತಕ್ಷಣ ಸೂಕ್ತ ಚಿಕಿತ್ಸೆಯಿಂದ ಗುಣಪಡಿಸಬಹುದು ಎಂದರು.ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ನಾಗರಾಜ್ ಮಾತನಾಡಿ, ಇಲಿ ಜ್ವರದಿಂದ ಪಾರಾಗಲು ನಾವು ಶೇಖರಿಸುವ ಆಹಾರ ಪದಾರ್ಥಗಳನ್ನು ಸಮರ್ಪಕವಾಗಿ ಮುಚ್ಚಿಡಬೇಕು. ಇಲಿ ಮತ್ತು ಇತರೆ ಸಾಕು ಪ್ರಾಣಿಗಳ ಮೂತ್ರದಿಂದ ಈ ಜ್ವರ ಬರುವುದರಿಂದ ಆಹಾರ ಪದಾರ್ಥಗಳು, ನೀರನ್ನು ಮುಚ್ಚಿಡಬೇಕು. ವಿದ್ಯಾರ್ಥಿಗಳು, ಎನ್‌ಎಸ್‌ಎಸ್ ಸ್ವಯಂ ಸೇವಕರು ಈ ಬಗ್ಗೆ ಎಲ್ಲರಲ್ಲಿ ಅರಿವು ಮೂಡಿಸಬೇಕು ಎಂದು ತಿಳಿಸಿದರು.

ಆರ್‌ಸಿಎಚ್ ಅಧಿಕಾರಿ ಡಾ.ಮಲ್ಲಪ್ಪ ಮಾತನಾಡಿ, ನಮಗೆ ಮುಖ್ಯವಾಗಿ ಶೇ.50 ರಷ್ಟು ಕಾರ್ಬೋಹೈಡ್ರೇಟ್, ಶೇ.30 ಪ್ರೋಟಿನ್ ಮತ್ತು ಶೇ.20 ಕೊಬ್ಬು ಬೇಕಾಗುತ್ತದೆ. ಅಯೋಡಿನ್ ಕೊರತೆಯಿಂದ ಗಳಗಂಡ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಹದಿಹರೆಯದವರದಲ್ಲಿ ಇದರ ಕೊರತೆಯಿಂದ ಅನಾಸಕ್ತಿ, ನಿದ್ರೆ ಇತರೆ ಸಮಸ್ಯೆ, ಗರ್ಭಿಣಿಯರಲ್ಲಿ ಅಯೋಡಿನ್ ಕೊರತೆಯಾದರೆ ಗರ್ಭಪಾತ, ಕುಬ್ಜ, ಬುದ್ದಿಮಾಂಧ್ಯ ಮಕ್ಕಳ ಜನನ, ಮಕ್ಕಳಲ್ಲಿ ಕೊರತೆಯಾದರೆ ಕಲಿಕೆಯಲ್ಲಿ ಹಿನ್ನಡೆ, ಬೆಳವಣಿಗೆ ಸಮಸ್ಯೆಗಳು ಉಂಟಾಗುತ್ತವೆ ಎಂದು ಹೇಳಿದರು.

ಇಲಿಜ್ವರ ಒಂದು ಬ್ಯಾಕ್ಟೀರಿಯಾದಿಂದ ಹರಡುತ್ತದೆ. ಕೇವಲ ಇಲಿ ಮಾತ್ರ ಸಾಕು ಪ್ರಾಣಿಗಳ ಮೂತ್ರದಿಂದ ಇದು ಹರಡುತ್ತದೆ. ಆದ್ದರಿಂದ ಆಹಾರ ಪದಾರ್ಥ ಇತರೆ, ತಿನ್ನುವ ವಸ್ತುಗಳನ್ನು ಮುಚ್ಚಿಡಬೇಕು. ವಿಪರೀತ ಜ್ವರ, ತಲೆನೋವು, ಮೈಕೈನೋವು, ಕೆಮ್ಮು, ಕಫ, ಜಾಂಡಿಸ್, ಕಿಡ್ನಿ ಸಮಸ್ಯೆಗಳು ಇವೆಲ್ಲಾ ಇಲಿಜ್ವರ ಲಕ್ಷಣಗಳಾಗಿದ್ದು ಸರಳ ಮತ್ತು ಸೂಕ್ತ ಚಿಕಿತ್ಸೆಯಿಂದ ಇದನ್ನು ಗುಣಪಡಿಸಬಹುದು. ಸಾಕು ಪ್ರಾಣಿ ಸಾಕುವವರು, ಹೊಲಗದ್ದೆಗಳಲ್ಲಿ ಕೆಲಸ ಮಾಡುವವರು ಈ ರೋಗಕ್ಕೆ ಹೆಚ್ಚು ತುತ್ತಾಗುತ್ತಾರೆ. ಸೂಕ್ತ ಚಿಕಿತ್ಸೆ ಪಡೆಯದಿದ್ದಲ್ಲಿ ಇದು ಮಾರಣಾಂತಿಕವಾಗಬಹುದು. ಆದ್ದರಿಂದ ಸೂಕ್ತ ಚಿಕಿತ್ಸೆ ಪಡೆಯಬೇಕೆಂದರು.

ಕಾರ್ಯಕ್ರಮದಲ್ಲಿ ಆಶಾ ಮತ್ತು ಆರೋಗ್ಯ ಕಾರ್ಯಕರ್ತರು ಅಯೋಡಿನ್ ಉಪ್ಪು ಹೌದೋ ಅಲ್ಲವೋ ಎಂದು ಕಂಡು ಹಿಡಿಯುವ ಪ್ರಾತ್ಯಕ್ಷಿಕೆ ಪ್ರದರ್ಶಿಸಿದರು.

ಕಾರ್ಯಕ್ರಮದಲ್ಲಿ ತಾಲೂಕು ವೈದ್ಯಾಧಿಕಾರಿ ಡಾ. ಚಂದ್ರಶೇಖರ್, ಜಿಲ್ಲಾ ಆರೋಗ್ಯಶಿಕ್ಷಣಾಧಿಕಾರಿ ದೊಡ್ಡವೀರಪ್ಪ, ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿಗಳಾದ ಸುಧಾಕರ್, ಡಾ. ಸೋಮಶೇಖರ್, ಜಾಹ್ನವಿ, ವಾರ್ತಾ ಸಹಾಯಕಿ ಎಂ.ಟಿ. ಭಾಗ್ಯ ಪಾಲ್ಗೊಂಡಿದ್ದರು.ಎಲ್ಲವನ್ನೂ ಅನುಮಾನಿಸಿ ತಿನ್ನುವ ಪರಿಸ್ಥಿತಿ

ಪ್ರಸ್ತುತ ದಿನಗಳಲ್ಲಿ ಎಲ್ಲ ಆಹಾರ ವಸ್ತುಗಳು ಕಲಬೆರಕೆಯಾಗಿದೆ. ಎಳನೀರು, ತಾಯಿ ಎದೆಹಾಲು ಹೊರತು ಪಡಿಸಿ ಎಲ್ಲ ಆಹಾರ ಪದಾರ್ಥಗಳಲ್ಲಿ ಕಲಬೆರಕೆ ಕಾಣಬಹುದು. ಇದು ಮನುಷ್ಯನ ದುರಾಸೆ. ಆಹಾರವನ್ನು ರುಚಿಗೊಳಿಸಲು, ಆಕರ್ಷಿಸಲು ರಾಸಾಯನಿಕ, ಬಣ್ಣಗಳನ್ನು ಹಾಕಲಾಗುತ್ತಿದೆ. ಈಗ ಎಲ್ಲವನ್ನೂ ಅನುಮಾನಿಸಿ ತಿನ್ನುವ ಪರಿಸ್ಥಿತಿ ಬಂದಿದೆ. ನಾವೆಲ್ಲ ಉತ್ತಮ ಜೀವನಶೈಲಿ, ಆಹಾರ ಕ್ರಮ ಅಳವಡಿಸಿಕೊಳ್ಳಬೇಕು. ಬೆವರು ಬರುವಂತೆ ದೈಹಿಕ ಶ್ರಮ ಮಾಡಬೇಕು. ಜಿಲ್ಲೆಯಲ್ಲಿ ಆಸ್ಪತ್ರೆಗಳಿಗಿಂತ ಶಿಕ್ಷಣ ಸಂಸ್ಥೆಗಳು ಹೆಚ್ಚಾಗಬೇಕು.

ಪ್ರೊ. ಬಿ.ಜಿ. ಚನ್ನಪ್ಪ ಪ್ರಾಂಶುಪಾಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜು