ಗ್ರಂಥಾಲಯದಿಂದ ಸೃಜನಾತ್ಮಕ ವಿಚಾರ ಹುಟ್ಟಲು ಸಾಧ್ಯ

| Published : Jun 30 2025, 12:34 AM IST

ಗ್ರಂಥಾಲಯದಿಂದ ಸೃಜನಾತ್ಮಕ ವಿಚಾರ ಹುಟ್ಟಲು ಸಾಧ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಾಥಮಿಕವಾಗಿ ಶಿಕ್ಷಣದ ತರಬೇತಿ ಸಾಧನ ಗ್ರಂಥಾಲಯ. ಒಂದು ವಿಶ್ವವಿದ್ಯಾನಿಲಯ ಉತ್ತಮವಾಗಿ ಬೆಳೆಯಲು ಒಳ್ಳೆಯ ಉಪನ್ಯಾಸಕರ ಅವಶ್ಯಕತೆ

ಕನ್ನಡಪ್ರಭ ವಾರ್ತೆ ಮೈಸೂರು

ಗ್ರಂಥಾಲಯದಿಂದ ಮಾತ್ರ ಸೃಜನಾತ್ಮಕ ವಿಚಾರಗಳು ಹುಟ್ಟಲು ಸಾಧ್ಯ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ತಿಳಿಸಿದರು.

ಮೈಸೂರು ವಿವಿ ಮಾನಸ ಗಂಗೋತ್ರಿಯ ವಿಜ್ಞಾನ ಭವನದಲ್ಲಿ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಅಧ್ಯಯನ ವಿಭಾಗ ಹಾಗೂ ಹಳೆ ವಿದ್ಯಾರ್ಥಿಗಳ ನೆಟ್‌ ವರ್ಕ್ (ಮಿಲನ್) ಸಹಯೋಗದೊಂದಿಗೆ ಶನಿವಾರ ಆಯೋಜಿಸಿದ್ದ ಪುಟನಗಳಿಂದಾಚೆ: ಸಂವಹನ ಮತ್ತು ಸೃಜನಶೀಲತೆಯತ್ತ ಗ್ರಂಥಪಾಲನೆ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಅವರು ಉದ್ಘಾಟಿಸಿ ಮಾತನಾಡಿದರು.

ಪ್ರಾಥಮಿಕವಾಗಿ ಶಿಕ್ಷಣದ ತರಬೇತಿ ಸಾಧನ ಗ್ರಂಥಾಲಯ. ಒಂದು ವಿಶ್ವವಿದ್ಯಾನಿಲಯ ಉತ್ತಮವಾಗಿ ಬೆಳೆಯಲು ಒಳ್ಳೆಯ ಉಪನ್ಯಾಸಕರ ಅವಶ್ಯಕತೆಯಂತೆ, ಉತ್ತಮ ಸಂಶೋಧಕರ ಅವಶ್ಯಕತೆಯಿದೆ ಅದು ಗ್ರಂಥಾಲಯಗಳಿಂದ ಮಾತ್ರ ಸಾಧ್ಯ ಎಂದು ಅವರು ಹೇಳಿದರು.

ಹಿಂದೆ ಇಂಟರ್‌ ನೆಟ್ ಯಾವುದು ಇಲ್ಲದ ಕಾರಣ ಕಲಿಕೆಗೆ, ಸಂಶೋಧನೆಗಳಿಗೆ ಗ್ರಂಥಾಲಯವೇ ಆಧಾರ. ಅಂದಿಗೂ ಇಂದಿಗೂ ಮಾಹಿತಿಯನ್ನು ಹುಡುಕುವ ವಿಧಾನದ ಮೂಲ ಬೇರೆ. ಗ್ರಂಥಾಲಯಗಳಲ್ಲಿ ಕುಳಿತು ಹೆಚ್ಚು ಓದುವ, ಬರೆಯುವ ಕೆಲಸಗಳಾಗುತ್ತಿದ್ದವು. ತಂತ್ರಜ್ಞಾನದ ಬಳಕೆಯಿಂದ ಇಂದು ಸಂಶೋಧನೆಗಳು ಹೆಚ್ಚಿನದಾಗಿ ಕೃತಿಚೌರ್ಯವಾಗುತ್ತಿವೆ. ಹಲವರಲ್ಲಿ ಸಮರ್ಥ ಗ್ರಹಿಕೆಯ ಕೊರತೆ ಕಾಣುತ್ತಿದೆ ಎಂದು ಅವರು ವಿಷಾದಿಸಿದರು.

ಇವತ್ತಿನ ದಿನಮಾನಗಳಲ್ಲಿ ಇಂಟರ್ ನೆಟ್ ಅಗಾಧವಾಗಿದ್ದು ಏನನ್ನು ಬೇಕಾದರೂ ಹುಡುಕುವ ಸಾಮರ್ಥ್ಯವಿದೆ. ಡಿಜಿಟಲ್ ಗ್ರಂಥಾಲಯಗಳು ನಿರ್ಮಾಣವಾಗುತ್ತಿವೆ. ಎಲ್ಲರೂ ಜೆರಾಕ್ಸ್ ಮೂಲಕ ಓದುವ ಸುಲಭದ ಹಾದಿ ಕಂಡುಕೊಳ್ಳುತ್ತಿದ್ದಾರೆ. ಗ್ರಂಥಾಲಯ ಉಪಯೋಗಿಸದೇ ಎಷ್ಟೇ ವಿಷಯ ತಿಳಿದುಕೊಂಡರು, ಜೀವನದಲ್ಲಿ ಅಮೂಲ್ಯವಾದ ಕಲಿಕೆಗೆ ಮೂಲವನ್ನು ಕಳೆದುಕೊಂಡಂತೆ ಎಂದು ಅವರು ಹೇಳಿದರು.

ಇವತ್ತಿನ ಗ್ರಂಥಾಲಯಗಳಲ್ಲಿ ಎಲ್ಲಾ ವಿದ್ಯಾರ್ಥಿಗಳು ಮೊಬೈಲ್ ಮೂಲಕ ಓದುವ ಹವ್ಯಾಸ ಬೆಳೆಸಿಕೊಂಡಿದ್ದಾರೆ. ಮೊಬೈಲ್ ಮಾಹಿತಿ ಪರಿಕರವೇ ಹೊರತು ಜ್ಞಾನವಲ್ಲ. ಇದರಿಂದ ಯಾವುದೇ ವಿಚಾರಗಳು ಜ್ಞಾನವಾಗಿ ತಲೆಯಲ್ಲಿ ಉಳಿಯುವುದಿಲ್ಲ ಎಂದರು.

ವಿಶ್ರಾಂತ ಕುಲಪತಿ ಡಾ.ಬಿ.ಜೆ. ಸಂಗಮೇಶ್ವರ ಮಾತನಾಡಿ, ಗ್ರಂಥಾಲಯಗಳು ಯಾವುದೋ ಕಟ್ಟಡದಲ್ಲಿ ಹುಟ್ಟಿಕೊಳ್ಳುವುದಿಲ್ಲ. ಬದಲಿಗೆ ಮನೆಯಿಂದಲೇ ಸ್ಥಾಪಿತವಾಗಿರುತ್ತವೆ. ಗ್ರಂಥಾಲಯಗಳು ಒಂದು ಶಿಕ್ಷಣ ಸಂಸ್ಥೆಯ ಹೃದಯವಿದ್ದಂತೆ. ಇವತ್ತು ಆ ಗ್ರಹಿಕೆ ಮರೆಯಾಗುತ್ತಿದೆ. ಹೆಚ್ಚಿನ ಭಾಗ ವಿದ್ಯಾರ್ಥಿಗಳು ಗ್ರಂಥಾಲಯಕ್ಕೆ ಹೋಗುವ ಹವ್ಯಾಸವನ್ನೇ ಮೆರೆಯುತಿದ್ದಾರೆ ಎಂದರು.

ಒಳ್ಳೆಯ ಕಟ್ಟಡ, ವ್ಯವಸ್ಥೆ, ಸೌಲಭ್ಯಗಳು ಇದ್ದರೆ ಗ್ರಂಥಾಲಯಕ್ಕೆ ಶ್ರೇಷ್ಠತೆ ದೊರಕುವುದಿಲ್ಲ. ಹೆಚ್ಚಿನ ಓದುಗರು ಇದ್ದಲ್ಲಿ ಮಾತ್ರ ಗ್ರಂಥಾಲಯಕ್ಕೆ ಮೆರಗು ಸಾಧ್ಯ. ಓದಿನ ಕಡೆಗೆ ಹೆಚ್ಚು ಗಮನ ಹರಿಸಬೇಕಿದೆ. ವಿದ್ಯಾರ್ಥಿಗಳನ್ನು ಕ್ರಿಯಾತ್ಮಕವಾಗಿ, ಸೃಜನಾತ್ಮಕರನ್ನಾಗಿಸುವ ಕಡೆಗೆ ಒತ್ತು ನೀಡಬೇಕಿದೆ ಎಂದು ಅವರು ಹೇಳಿದರು.

ಬೆಂಗಳೂರು ಇನ್ ಫಾರ್ಮೇಟಿಕ್ ಇಂಡಿಯಾ ಲಿಮಿಟೆಡ್ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಎನ್.ವಿ. ಸತ್ಯನಾರಾಯಣ, ಮಿಲನ್ ಅಧ್ಯಕ್ಷೆ ಡಾ.ಬಿ.ಎಂ. ಮೀರಾ, ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಅಧ್ಯಯನ ವಿಭಾಗ ಅಧ್ಯಕ್ಷ ಪ್ರೊ.ಎಂ ಚಂದ್ರಶೇಖರ ಮೊದಲಾದವರು ಇದ್ದರು.----

ಕೋಟ್...

ಶಿಕ್ಷಣ ಎಂಬುದು ಉದ್ಯೋಗದ ಸಾಧನವಲ್ಲ. ಶಿಕ್ಷಣ ಜ್ಞಾನಾರ್ಜನೆಯ ಮೂಲ. ಜ್ಞಾನ ವೃದ್ಧಿಯಾದರೆ, ಚಿಂತನೆಯ ದೃಷ್ಟಿಕೋನ ಬದಲಾಗುತ್ತದೆ. ಇದೆಲ್ಲ ಪುಸ್ತಕ, ಲೇಖನಗಳಿಂದ ಸಾಧ್ಯ. ಪ್ರಸ್ತುತದಲ್ಲಿ ಎಲ್ಲರೂ ಜ್ಞಾನಕ್ಕಿಂತ ಹೆಚ್ಚಿನದಾಗಿ ಅಂಕಗಳ ಗಳಿಕೆಯಲ್ಲಿ ಆಸಕ್ತಿ ತೋರುತಿದ್ದಾರೆ. ಇದರಿಂದ ಯಾವುದೇ ಕಾರಣಕ್ಕೂ ಕೌಶಲಗಳ ಬೆಳವಣಿಗೆ ಅಸಾಧ್ಯ.

- ಪ್ರೊ.ಎನ್.ಕೆ. ಲೋಕನಾಥ್, ಕುಲಪತಿ, ಮೈಸೂರು ವಿವಿ