ಸಾರಾಂಶ
ಆತಂಕದಲ್ಲಿ ಅಚ್ಚುಕಟ್ಟು ಪ್ರದೇಶದ ರೈತರು । ಕಾಡಾ ಅಧ್ಯಕ್ಷ ಡಾ. ಅಂಶುಮಂತ್ ಭೇಟಿ ಪರಿಶೀಲನೆ
ಕನ್ನಡಪ್ರಭ ವಾರ್ತೆ, ತರೀಕೆರೆಲಕ್ಕವಳ್ಳಿ ಬಳಿಯ ಭದ್ರಾ ಅಣೆಕಟ್ಟಿನ ರಿವರ್ ಗೇಟ್ ಜಖಂ ಆಗಿ, ನೀರು ಪೋಲಾಗಿ ನದಿಗೆ ಹರಿಯುತ್ತಿರುವುದರಿಂದ ಅಚ್ಚುಕಟ್ಟು ಪ್ರದೇಶದ ರೈತರು ಆತಂಕಗೊಂಡು ಅಧಿಕಾರಿಗಳನ್ನೆ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
ಶುಕ್ರವಾರ ಬಿ.ಆರ್.ಪ್ರಾಜೆಕ್ಟ್ ನಲ್ಲಿ ನೀರಾವರಿ ಇಲಾಖೆ ಸೂಪರಿಡೆಂಟ್ ಇಂಜಿನಿಯರಿಂಗ್ ಕಚೇರಿ ಬಳಿ ಸೇರಿದ್ದ ಅಚ್ಚಕಟ್ಟು ಪ್ರದೇಶದ ರೈತರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಖೂಡಲೆ ಗೇಟ್ ದುರಸ್ತಿಗೆ ಆಗ್ರಹಿಸಿದರು.ಸಾಮಾನ್ಯವಾಗಿ ಡ್ಯಾಂ ಗೆ ಸಂಬಂಧಿಸಿದಂತೆ ದುರಸ್ತಿಯನ್ನು ನೀರು ಕಡಿಮೆ ಸಂಗ್ರಹವಿರುವ ಸಮಯದಲ್ಲಿ ಮಾಡಲಾಗುತ್ತಿತ್ತು. ಆದರೆ ಸುಮಾರು 15 ವರ್ಷಗಳಿಂದ ತೆರೆಯದೇ ಇದ್ದ ಕಬ್ಬಿಣದ ರಿವರ್ ಗೇಟ್ ಇತ್ತೀಚೆಗೆ, ಪರಿಶೀಲನೆಗಾಗಿ ತೆಗೆದಿದ್ದು ನಂತರ ಪುನಃ ಮುಚ್ಚಲು ಸಾಧ್ಯವಾಗಿಲ್ಲ. ಇದರಿಂದ ಅನಾವಶ್ಯಕವಾಗಿ ನೀರು ಪೋಲಾಗಿ ನದಿಗೆ ಹರಿಯುತ್ತಿದೆ. ಹಾಗಾಗಿ ಅಣೆಕಟ್ಟೆಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ ಎಂದು ರೈತರು ಹೇಳಿದರು.ಈ ಸಂದರ್ಭದಲ್ಲಿ ಕಾಡಾ ಅಧ್ಯಕ್ಷರಾಗಿ ನೂತನವಾಗಿ ನೇಮಕಗೊಂಡಿರುವ ಡಾ. ಅಂಶುಮಂತ್ ಅವರು ಭದ್ರಾ ಜಲಾಶಯದ ಮುಖ್ಯ ಗೇಟ್ ಬಳಿ ಆಗವಮಿಸಿ ಜಖಂ ಗೊಂಡಿರುವ ಅಣೆಕಟ್ಟೆ ರಿವರ್ ಗೇಟ್ ನ್ನು ಖುದ್ದಾಗಿ ಪರೀಶೀಲನೆ ಮಾಡಿ ತಕ್ಷಣ ಸೂಕ್ತ ದುರಸ್ತಿಗೆ ಅತಿ ಶೀಘ್ರ ಕ್ರಮ ವಹಿಸಿ, ರೈತರಿಗೆ ತೊಂದರೆ ಯಾಗದಂತೆ ಎಚ್ಚರಿಕೆ ವಹಿಸಲು ಅಧಿಕಾರಿಗಳಿಗೆ ಸೂಚಿಸಿದರು.
ನಂತರ ಭದ್ರಾ ನೀರಾವರಿ ಇಲಾಖೆ ಕಚೇರಿಯಲ್ಲಿ ರೈತರೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿ, ಡ್ಯಾಂ ನ ರಿವರ್ ಗೇಟ್ ಜಖಂ ಆಗಿರುವುದು ಒಂದು ದುರ್ದೈವ ಸಂಗತಿ. ನೀರಿನ ಕೊರತೆ ಎದುರಾಗುವ ಹಿನ್ನೆಲೆಯಲ್ಲಿ ತುರ್ತಾಗಿ ನುರಿತ ತಜ್ಞರು ಈಗಾಗಲೇ ಜಖಂ ಆಗಿರುವ ಗೇಟ್ ನ್ನು ದುರಸ್ತಿ ಮಾಡುತ್ತಿದ್ದಾರೆ ಎಂದು ರೈತರಿಗೆ ಮಾಹಿತಿ ನೀಡಿದರು. ಭದ್ರಾ ಅಣೆಕಟ್ಟೆ ಬಗ್ಗೆ ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ರೈತರು ಸಭೆಯಲ್ಲಿ ಒತ್ತಾಯಿಸಿದರು.ಜಿ.ಪಂ.ಮಾಜಿ ಅಧ್ಯಕ್ಷರು ಎಚ್.ವಿಶ್ವನಾಥ್, ಜಿಪಂ ಮಾಜಿ ಸದಸ್ಯ ಕೆ.ಪಿ.ಕುಮಾರ್, ರಂಗೇನಹಳ್ಳಿ ಎಚ್.ಎನ್. ಮಂಜುನಾಥ್, ಲವಕುಮಾರ್, ಸೀತಾರಾಂ, ಭಾವಿಕೆರೆ ಗ್ರಾಮದ ಮೂಡ್ಲಗಿರಿಯಪ್ಪ, ಧನಪಾಲ್ ಎಲ್.ಟಿ. ಹೇಮಣ್ಣ, ಫಣಿರಾಜ್ ಜೈನ್, ರೈತ ಮುಖಂಡರಾದ ಹರಿ, ನಂದಕುಮಾರ್, ಎ.ವಿ.ವಂಕಟರಾಮ್, ರೈತ ಮುಖಂಡರಾದ ಮಂಜೇಗೌಡರು, ಹನೀಫ್, ಎಲ್.ಎ.ಪರಮೇಶ್ ಅನೇಕ ರೈತರು ಸಭೆಯಲ್ಲಿ ಭಾಗವಹಿಸಿದ್ದರು.ಭದ್ರಾ ಜಲಾಶಯದ ಅಧಿಕಾರಿಗಳು ಮಾತನಾಡಿ ಅಣೆಕಟ್ಟಿನಲ್ಲಿ ನೀರು ಕಡಿಮೆ ಸಂಗ್ರಹವಿರುವ ಕಾರಣ 15 ವರ್ಷಗಳ ಬಳಕೆ ಮಾಡದೇ ಗೇಟ್ ನಿಂದ ನೀರನ್ನು ಹಾಯಿಸಲು ಕ್ರಮ ತೆಗೆದುಕೊಳ್ಳಲಾಗಿತ್ತು, ಆದರೆ ಗೇಟ್ ತುಕ್ಕು ಹಿಡಿದಿದ್ದರಿಂದ ಪುನಃ ಮುಚ್ಚಲು ಸಾಧ್ಯವಾಗದೇ ತೊಂದರೆಯಾಗಿದೆ. ಶೀಘ್ರದಲ್ಲೇ ಪುನಃ ಗೇಟ್ ಮುಚ್ಚಲು ಪ್ರಯತ್ನಿಸುತ್ತಿದ್ದೇವೆ ಎಂದು ಭರವಸೆ ನೀಡಿದರು.
5ಕೆಟಿಆರ್.ಕೆ.2ಃತರೀಕೆರೆ ಸಮೀಪದ ಭದ್ರಾ ಅಣೆಕಟ್ಟು ರಿವರ್ ಗೇಟ್. ಜಖಂ ಆಗಿ ನೀರು ಹರಿದುಹೋಗುತ್ತಿರುವುದು.5ಕೆಟಿಆರ್.ಕೆ.3ಃ
ಕಾಡಾ ಅಧ್ಯಕ್ಷ ಡಾ.ಅಂಶುಮಂತ್ ಸಭೆಯಲ್ಲಿ ಮಾತನಾಡಿದರು.