ಶೋಷಣೆ ರಹಿತ ಸಮಾಜದ ನಿರ್ಮಾಣದ ಕನಸು ಕಂಡಿದ್ದ ಭಗತ್ ಸಿಂಗ್

| Published : Mar 24 2025, 12:31 AM IST

ಶೋಷಣೆ ರಹಿತ ಸಮಾಜದ ನಿರ್ಮಾಣದ ಕನಸು ಕಂಡಿದ್ದ ಭಗತ್ ಸಿಂಗ್
Share this Article
  • FB
  • TW
  • Linkdin
  • Email

ಸಾರಾಂಶ

ಚಿತ್ರದುರ್ಗದ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ಭಾನುವಾರ ಹಮ್ಮಿಕೊಳ್ಳಲಾದ ಭಗತ್ ಸಿಂಗ್ 94ನೇ ಸ್ಮರಣ ದಿನದ ಕಾರ್ಯಕ್ರಮದಲ್ಲಿಎಐಕೆಕೆಎಮ್‍ಎಸ್ ರೈತ ಸಂಘಟನೆಯ ರಾಜ್ಯ ಉಪಾಧ್ಯಕ್ಷೆ ವಿ. ನಾಗಮ್ಮಾಳ್ ಮಾತನಾಡಿದರು.

ಭಗತ್‍ಸಿಂಗ್-ಸುಖದೇವ್-ರಾಜ್‍ಗುರು 94ನೇ ಹುತಾತ್ಮದಿನಾಚರಣೆಯಲ್ಲಿ ವಿ.ನಾಗಮ್ಮಾಳ್ ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಮಾನವನಿಂದ ಮಾನವ ಶೋಷಣೆಗೆ ಒಳಗಾಗದಂತಹ ಸಮಾಜ ನಿರ್ಮಾಣದ ಕನಸನ್ನು ಭಗತ್ ಸಿಂಗ್ ಕಂಡಿದ್ದು ಅದಿನ್ನು ಸಾಕಾರಗೊಳ್ಳದೆ ಹಾಗೆಯೇ ಉಳಿದಿದೆ ಎಂದು ಎಐಕೆಕೆಎಮ್‍ಎಸ್ ರೈತ ಸಂಘಟನೆಯ ರಾಜ್ಯ ಉಪಾಧ್ಯಕ್ಷೆ ವಿ. ನಾಗಮ್ಮಾಳ್ ವಿಷಾದ ವ್ಯಕ್ತಪಡಿಸಿದರು.ನಗರದ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ಭಾನುವಾರ ಹಮ್ಮಿಕೊಳ್ಳಲಾದ ಭಗತ್ ಸಿಂಗ್‍ರ 94ನೇ ಸ್ಮರಣ ದಿನದ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು ಭಗತ್ ಸಿಂಗ್, ಸುಖದೇವ್, ರಾಜ್‍ಗುರು ಇವರುಗಳು ದೇಶದ ಸ್ವಾತಂತ್ರ್ಯಕ್ಕಾಗಿ ಹುತಾತ್ಮರಾದ ಈ ದಿನ ನಾವೆಲ್ಲರೂ ಪ್ರಸಕ್ತ ಸಮಾಜದ ಸಮಸ್ಯೆಗಳ ವಿರುದ್ಧ ಹೋರಾಡುವ ಸಂಕಲ್ಪ ತೊಡುವ ದಿನವಾಗಿದೆ ಎಂದರು.

ಬ್ರಿಟಿಷರಿಂದ ಬಂದ ಸ್ವಾತಂತ್ರ್ಯವು ನಮ್ಮ ದೇಶದ ಉಳ್ಳವರು ಮತ್ತು ಬಂಡವಾಳಿಗರ ಪಾಲಾಗಿದೆ. ರೈತರು, ಕಾರ್ಮಿಕರು, ಶ್ರೀಸಾಮಾನ್ಯರು ಇನ್ನೂ ಸಮಸ್ಯೆಗಳನ್ನು ಅನುಭವಿಸುತ್ತಲೇ ಇದ್ದಾರೆ. ಈ ಎಲ್ಲಾ ಸಮಸ್ಯೆಗಳ ಸಂಪೂರ್ಣ ನಿರ್ಮೂಲನೆಗಾಗಿ ಇಂದಿನ ಯುವಜನತೆ ಹೋರಾಡಬೇಕು. ಹಿರಿಯರು, ಪೋಷಕರು ನಮ್ಮ ಮುಂದಿನ ಪೀಳಿಗೆಯನ್ನು ರಕ್ಷಿಸಲು ಅವರಲ್ಲಿ ಉನ್ನತ ನೀತಿ ಮತ್ತು ಚಾರಿತ್ಯವನ್ನು ಬೆಳೆಸಲು ಪ್ರಜ್ಞಾಪೂರ್ವಕವಾಗಿ ಪ್ರಯತ್ನಿಸಬೇಕು. ಇಲ್ಲದೇ ಹೋದರೆ ನಮ್ಮ ಸಮಾಜದ ಕೊಳೆತವನ್ನು ತಪ್ಪಿಸಲು ಸಾಧ್ಯವಿಲ್ಲ ಎಂದರು.

ಜಿಲ್ಲಾಧಿಕಾರಿ ಕಚೇರಿ ಸಮೀಪದ ಭಗತ್ ಸಿಂಗ್ ಉದ್ಯಾನವನದ ಬಳಿ ನಡೆದ ಮತ್ತೊಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಎಐಕೆಕೆಎಂಎಸ್ ರಾಜ್ಯ ಕಾರ್ಯದರ್ಶಿ ಎಂ.ಶಶಿಧರ್, ಕೇವಲ 23ನೇ ವಯಸ್ಸಿಗೆ ಹುತಾತ್ಮರಾದ ಭಗತ್ ಸಿಂಗ್ ವೈಚಾರಿಕವಾಗಿ ಬಹಳ ಸ್ಪಷ್ಟವಾಗಿದ್ದರು. ಕೇವಲ ತಮ್ಮ 13ನೇ ವಯಸ್ಸಿನಲ್ಲಿ ಹೋರಾಟಕ್ಕೆ ಕಾಲಿಟ್ಟ ಅವರು ಬ್ರಿಟಿಷರ ದಬ್ಬಾಳಿಕೆ, ದೌರ್ಜನ್ಯದ ವಿರುದ್ಧ ಕ್ರಾಂತಿಕಾರಿ ಹೋರಾಟಕ್ಕೆ ಕರೆ ನೀಡಿದ್ದರೆಂದರು.

ಭಗತ್ ಸಿಂಗರ ಹೋರಾಟದ ತೀವ್ರತೆಗೆ ದಿಗಿಲುಗೊಂಡ ಬ್ರಿಟೀಷ್ ಸರ್ಕಾರ ಅವರನ್ನು ತರಾತುರಿಯಲ್ಲಿ ನೇಣಿಗೇರಿಸಿ ಅವರ ಶವವನ್ನೂ ಕೂಡ ಸಂಬಂಧಿಕರಿಗೆ ಒಪ್ಪಿಸದೆ ರಾತ್ರೋರಾತ್ರಿ ಅಂತ್ಯಕ್ರಿಯೆ ಮಾಡಿ ಮುಗಿಸಿದರು. ಆದರೆ ಸ್ವತಃ ಭಗತ್ ಸಿಂಗ್ ನುಡಿದ ಆಳ್ವಿಕರು ವ್ಯಕ್ತಿಗಳನ್ನು ಕೊಲ್ಲಬಹುದೇ ಹೊರತು ವಿಚಾರಗಳನ್ನಲ್ಲ ಎಂಬ ಮಾತು ಇಂದಿಗೂ ಸತ್ಯವಾಗಿದೆ ಎಂದರು.

ಭಗತ್ ಸಿಂಗ್ ವ್ಯಕ್ತಿಯಾಗಿ ನಮ್ಮ ನಡುವೆ ಇಲ್ಲದಿದ್ದರೂ, ಅವರ ವಿಚಾರಗಳು ಅಮರವಾಗಿ ಉಳಿದಿವೆ. ಇಂದಿನ ಸಮಸ್ಯೆಗಳಿಗೆ ದಾರಿದೀಪವಾಗಿವೆ. ನಮ್ಮ ಯುವಜನತೆ ಅವರ ವಿಚಾರಗಳನ್ನು ಮೈಗೂಡಿಸಿಕೊಂಡು ಪ್ರಸಕ್ತ ಅನ್ಯಾಯದ ವಿರುದ್ಧ ಧ್ವನಿ ಎತ್ತಬೇಕು. ಸಾವನ್ನು ಎದುರು ನೋಡುತ್ತಿರುವಾಗಲೂ ದೈಹಿಕವಾಗಿ, ಮಾನಸಿಕವಾಗಿ ಕುಗ್ಗದೆ ಭಗತ್ ಸಿಂಗ್ ಅಚಲವಾಗಿ ನಿಂತು ಹೋರಾಡಿದಂತೆ ನಾವು ಇಂದಿನ ಸಮಸ್ಯೆಗಳ ವಿರುದ್ಧ ಹೋರಾಡಬೇಕು ಎಂದು ಕರೆ ನೀಡಿದರು.

ಎಐಯುಟಿಯುಸಿ ಕಾರ್ಮಿಕ ಸಂಘಟನೆ ಮುಖಂಡ ರವಿಕುಮಾರ್, ಎಐಡಿವೈಓ ಸಂಘಟನೆಯ ರಾಜ್ಯ ಉಪಾಧ್ಯಕ್ಷ ವಿಜಯಕುಮಾರ್, ಜಿಲ್ಲಾ ಮುಖಂಡರಾದ ವಿನಯ್, ಅಭಿಷೇಕ್, ಎಐಎಂಎಸ್‍ಎಸ್‍ನ ಸುಜಾತ, ಕುಮುದಾ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.ಆನಂತರ ರಂಗಯ್ಯನ ಬಾಗಿಲು ಬಳಿಯಿರುವ ಎಐಡಿವೈಓ ಜಿಲ್ಲಾ ಕಚೇರಿಯಲ್ಲಿ ದಿ ಲೆಜೆಂಡ್ ಆಫ್ ಭಗತ್ ಸಿಂಗ್ ಸಿನಿಮಾ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು.