ಭಗತ್ ಸಿಂಗ್ ನಿಸ್ವಾರ್ಥ, ನಿಷ್ಠಾವಂತ ದೇಶಭಕ್ತ

| Published : Sep 30 2024, 01:26 AM IST / Updated: Sep 30 2024, 01:27 AM IST

ಸಾರಾಂಶ

ಬೇಲೂರು: ದೇಶಭಕ್ತರ ಬಳಗ ಬೇಲೂರು ಮತ್ತು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸಂಯುಕ್ತಾಶ್ರಯದಲ್ಲಿ ಕ್ರಾಂತಿವೀರ ಭಗತ್ ಸಿಂಗ್ ಜನ್ಮದಿನಾಚರಣೆಯನ್ನು ಪಟ್ಟಣದ ಮಾತೃಶ್ರೀ ಕಲ್ಯಾಣ ಮಂಟಪದಲ್ಲಿ ಆಚರಿಸಲಾಯಿತು.

ಬೇಲೂರು: ದೇಶಭಕ್ತರ ಬಳಗ ಬೇಲೂರು ಮತ್ತು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸಂಯುಕ್ತಾಶ್ರಯದಲ್ಲಿ ಕ್ರಾಂತಿವೀರ ಭಗತ್ ಸಿಂಗ್ ಜನ್ಮದಿನಾಚರಣೆಯನ್ನು ಪಟ್ಟಣದ ಮಾತೃಶ್ರೀ ಕಲ್ಯಾಣ ಮಂಟಪದಲ್ಲಿ ಆಚರಿಸಲಾಯಿತು.

ಈ ವೇಳೆ ಮಾತನಾಡಿದ ದೇಶಭಕ್ತರ ಬಳಗದ ಅಧ್ಯಕ್ಷ ಡಾ. ಸಂತೋಷ್, ಭಗತ್ ಸಿಂಗ್ ಓರ್ವ ನಿಸ್ವಾರ್ಥ ಮನೋಭಾವದ ಪರಮ ನಿಷ್ಠಾವಂತ ದೇಶಭಕ್ತರಾಗಿದ್ದರು ಎಂಬುದರಲ್ಲಿ ಎರಡು ಮಾತಿಲ್ಲ. ಇವರು ಮೊದಲಿಗೆ ಗಾಂಧೀಜಿಯವರ ಅಹಿಂಸಾತ್ಮಕ ಚಳವಳಿಗಳತ್ತ ಆಕರ್ಷಿಸಲ್ಪಟ್ಟು ಸ್ವದೇಶಿ ಚಳವಳಿ ಮುಂತಾದವುಗಳಲ್ಲಿ ಭಾಗವಹಿಸುತ್ತಿದ್ದರು. ಮುಂದೆ ಜಲಿಯನ್ ವಾಲಾಬಾಗ್ ದುರಂತದಲ್ಲಿ ಬ್ರಿಟೀಷರಿಂದ ಮಹಾ ಕ್ರೌರ್ಯದಲ್ಲಿ ಸಾವಿರಾರು ಜನರು ಮಡಿದಾಗ ಆಗಲೇ ಬ್ರಿಟೀಷರ ವಿರುದ್ಧ ಹೋರಾಡುವ ಸಂಕಲ್ಪ ಹೊಂದಿದ್ದರು. ಮುಂದೆ ಸೈಮನ್ ಕಮಿಷನ್ ವಿರುದ್ಧ ಲಾಲಾ ಲಜಪತ್ ರಾಯ್ ಅವರು ಚಳವಳಿ ನಡೆಸುತ್ತಿದ್ದಾಗ ಬ್ರಿಟೀಷ್ ಪೊಲೀಸ್ ಅಧಿಕಾರಿಯೊಬ್ಬ ಅವರ ಮೇಲೆ ಬರ್ಬರವಾಗಿ ಲಾಟಿಚಾರ್ಜ್‌ ಮಾಡಿದಾಗ ಲಾಲಾ ಲಜಪತ್ ರಾಯ್ ಅವರು ನಿಧನರಾಗುತ್ತಾರೆ. ಅವರ ನಿಧನ ಭಗತ್ ಸಿಂಗ್ ಅವರು ಅಹಿಂಸಾತ್ಮಕ ಚಳವಳಿಗಳನ್ನು ಅಲ್ಲಿಗೆ ಕೈ ಬಿಟ್ಟು ಕ್ರಾಂತಿಕಾರಿಯಾಗುತ್ತಾರೆ. ಮುಂದಿನ ದಿನಗಳಲ್ಲಿ ಎರಡು ಕಡೆ ಬ್ರಿಟಿಷರ ಮೇಲೆ ಬಾಂಬ್ ಎಸೆಯುತ್ತಾರೆ. ಒಂದು ಬಾಂಬನ್ನು ಬ್ರಿಟಿಷರು ನಡೆಸುತ್ತಿದ್ದ ಎಸೆಂಬ್ಲಿಗೆ ನುಗ್ಗಿ ಎಸೆದು ಬಿಡುತ್ತಾರೆ. ಬ್ರಿಟೀಷರು ಇವರನ್ನು ಬಂಧಿಸಿ ಗಲ್ಲು ಶಿಕ್ಷೆ ವಿಧಿಸುತ್ತಾರೆ. ಇಂತಹ ಕ್ರಾಂತಿಕಾರಿ ಮಹಾತ್ಯಾಗಿ ಬಲಿದಾನ ಶೂರ ಭಗತ್ ಸಿಂಗರ ಜನ್ಮದಿನಾಚರಣೆಯನ್ನು ಆದಷ್ಟು ಎಲ್ಲಾ ಸಂಘಸಂಸ್ಥೆಗಳು ಮುಂದಿನ ದಿನಗಳಲ್ಲಿ ನಡೆಸಿಕೊಂಡು ಬಂದರೆ ಅವರಿಗೆ ನಾವು ನಿಜವಾದ ಶ್ರದ್ಧಾಂಜಲಿ ಸಲ್ಲಿಸಿದಂತಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ದೇಶಭಕ್ತರ ಬಳಗದ ಕಾರ್ಯದರ್ಶಿ ಮಲ್ಲಿಕಾರ್ಜುನ ಮೆಡಿಕಲ್ಸ್ ಮಹೇಶ್ ಮಾತನಾಡಿ, ಭಗತ್ ಸಿಂಗ್‌ರಂತಹ ಮಹಾನ್ ಕ್ರಾಂತಿಕಾರಿಯ ಬಗ್ಗೆ ಇನ್ನಷ್ಟು ವಿವರಗಳು ಮುಂದಿನ ಜನಾಂಗಕ್ಕೆ ತಿಳಿಸಲ್ಪಡಬೇಕು. ಪಠ್ಯದಲ್ಲಿ ಅವರ ಬಗ್ಗೆ ಪಾಠಗಳು ಬರಬೇಕು, ಯುವ ಜನಾಂಗಕ್ಕೆ ಅವರ ಬಗ್ಗೆ ಗೌರವ ಮೂಡಿ ಅವರು ಸ್ವಯಂಪ್ರೇರಿತರಾಗಿ ಭಗತ್ ಸಿಂಗರ ಹೆಸರಿನಲ್ಲಿ ಏನಾದರೂ ಕಾರ್ಯಕ್ರಮವನ್ನು ಮಾಡುವಂತಾಗಬೇಕು. ಈ ನಿಟ್ಟಿನಲ್ಲಿ ಸರಕಾರ ಮತ್ತು ಜವಾಬ್ದಾರಿಯುತ ಸಂಘ-ಸಂಸ್ಥೆಗಳು ಮುಂದಾಗಬೇಕು ಎಂದು ಕರೆ ನೀಡಿದರು.

ರೋಟರಿ ಸಂಸ್ಥೆ ಮಾಜಿ ಅಧ್ಯಕ್ಷ ಜಾನಪದ ಪರಿಷತ್ತು ಮತ್ತು ರೆಡ್ ಕ್ರಾಸ್ ಹಾಲಿ ಅಧ್ಯಕ್ಷ ಸಿದ್ದೇಗೌಡ ಮಾತನಾಡಿ, ದೇಶಭಕ್ತರ ಬಳಗದ ಕಾರ್ಯವೈಖರಿ ಮನಸೂರೆಗೊಂಡಿದೆ. ಅವರು ನಡೆಸಿಕೊಂಡು ಬರುತ್ತಿರುವ ಕಾರ್ಯಕ್ರಮಗಳು ಅತ್ಯಂತ ಅರ್ಥಪೂರ್ಣವಾಗಿರುತ್ತವೆ ಮತ್ತು ಸಮಂಜಸವಾಗಿರುತ್ತವೆ. ಭಗತ್ ಸಿಂಗ್ ಜನ್ಮ ದಿನಾಚರಣೆ ಬೇರೆ ಯಾವುದೇ ಸಂಘ ಸಂಸ್ಥೆ ನಡೆಸದಿರುವುದು ಬೇಸರದ ವಿಷಯವಾಗಿದೆ. ಸಮಾಜದ ಎಲ್ಲಾ ಜವಾಬ್ದಾರಿಯುತ ಜನಾಂಗ ಸಂಘ ಸಂಸ್ಥೆಗಳು ಸ್ವಾತಂತ್ರ್ಯ ವೀರ, ಬಲಿದಾನ ಶೂರ ಭಗತ್ ಸಿಂಗರ ನಿಷ್ಕಲ್ಮಶವಾದ ದೇಶ ಭಕ್ತಿಗೆ ತಲೆಬಾಗಲೇಬೇಕೆಂದು ತಿಳಿಸಿದರು. ನಂತರ ಎಬಿವಿಪಿಯ ಕುಮಾರಿ ಸುಶ್ಮಿತಾ, ಪ್ರಾಧ್ಯಾಪಕ ಮಹೇಶ್ ಮಾತನಾಡಿದರು.

ಈ ಸಂದರ್ಭದಲ್ಲಿ ಉಪನ್ಯಾಸಕ ಧನಂಜಯ್, ಸಮಾಜ ಸೇವಕ ಸುಲೇಮಾನ್, ಶಿಕ್ಷಕ ಬೊಮ್ಮಡಿಹಳ್ಳಿ ಕುಮಾರಸ್ವಾಮಿ ಇತರರು ಇದ್ದರು.