ಉತ್ತಮ ಮನುಷ್ಯನಾಗಲು ಭಗವದ್ಗೀತೆ ಸಹಕಾರಿ: ಹರಿಪ್ರಕಾಶ ಕೋಣೆಮನೆ

| Published : Sep 29 2024, 01:45 AM IST

ಉತ್ತಮ ಮನುಷ್ಯನಾಗಲು ಭಗವದ್ಗೀತೆ ಸಹಕಾರಿ: ಹರಿಪ್ರಕಾಶ ಕೋಣೆಮನೆ
Share this Article
  • FB
  • TW
  • Linkdin
  • Email

ಸಾರಾಂಶ

ಗೀತೆಯಲ್ಲಿ ಜ್ಞಾನ ಮತ್ತು ವಿಜ್ಞಾನ ಎರಡೂ ಅಡಗಿದೆ. ಉತ್ತಮ ಮನುಷ್ಯನಾಗಿ ರೂಪುಗೊಳ್ಳಲು ಗೀತೆ ಸಹಕಾರಿ ಎಂದು ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಹೇಳಿದರು. ಅವರು ಭಗವದ್ಗೀತೆಯ ಪ್ರಶಿಕ್ಷಣ ತರಬೇತಿ ಶಿಬಿರ ಉದ್ಘಾಟಿಸಿದರು.

ಯಲ್ಲಾಪುರ: ಭಗವದ್ಗೀತೆ ಹಿಂದೂಗಳಿಗೆ ಮಾತ್ರ ಸೀಮಿತವಾಗಿಲ್ಲ. ಇಡೀ ವಿಶ್ವವೇ ಗೀತೆಯ ಮಹತ್ವ ಅರಿಯುತ್ತಿದೆ ಎಂದು ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಹೇಳಿದರು.

ಪಟ್ಟಣದ ನಾಯಕನಕೆರೆಯ ಶ್ರೀ ಶಾರದಾಂಬಾ ದೇವಸ್ಥಾನ ಮತ್ತು ಸಂಸ್ಕೃತ ಪಾಠಶಾಲೆಯ ಸಭಾಭವನದಲ್ಲಿ ಶನಿವಾರ ನಡೆದ ಭಗವದ್ಗೀತೆಯ ಪ್ರಶಿಕ್ಷಣ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ಗೀತೆಯಲ್ಲಿ ಜ್ಞಾನ ಮತ್ತು ವಿಜ್ಞಾನ ಎರಡೂ ಅಡಗಿದೆ. ಉತ್ತಮ ಮನುಷ್ಯನಾಗಿ ರೂಪುಗೊಳ್ಳಲು ಗೀತೆ ಸಹಕಾರಿ. ಈ ದೃಷ್ಟಿಯಿಂದಲೇ ನಮ್ಮ ಸೋಂದಾ ಶ್ರೀಗಳು ಕಳೆದ ೨೦ ವರ್ಷಗಳಿಂದ ನಾಡಿನಾದ್ಯಂತ ಗೀತಾ ಅಭಿಯಾನ ಹಮ್ಮಿಕೊಂಡಿದ್ದಾರೆ. ಇದು ಪ್ರತಿಯೊಬ್ಬರ ಮನೆಮನಗಳಲ್ಲಿ ಅನುರಣಿಸಬೇಕು ಎಂದು ಹೇಳಿದರು.೧೪೦ ಕೋಟಿಗಿಂತಲೂ ಹೆಚ್ಚಿನ ಜನಸಂಖ್ಯೆ ಹೊಂದಿರುವ ನಮ್ಮ ದೇಶದ ಶೇ. ೯೦ರಷ್ಟು ಜನರು ಸಂಸ್ಕಾರವಂತರಾಗಿ ದೇಶಾಭಿಮಾನ ಬೆಳೆಸಿಕೊಂಡು ನ್ಯಾಯ, ಧರ್ಮ, ಸತ್ಯದ ದಾರಿಯಲ್ಲಿ ಸಾಗುತ್ತಿದ್ದಾರೆ. ಕೋಲಾರದ ಉರ್ದು ಶಾಲೆಯೊಂದರಲ್ಲಿ ಎಲ್ಲ ವಿದ್ಯಾರ್ಥಿಗಳು ಗೀತೆಯನ್ನು ಕಂಠಪಾಠ ಮಾಡಿದ್ದಾರೆ. ಇಂದು ಕೆಲವು ಬುದ್ಧಿಜೀವಿಗಳು ಬಹಳ ತಿಳಿದವರೆಂದು ಭಾವಿಸಿ, ಜ್ಞಾನ ಶೂನ್ಯರಾಗಿ ಸಮಾಜವನ್ನು ತಪ್ಪುದಾರಿಯತ್ತ ಕೊಂಡೊಯ್ಯುತ್ತಿರುವುದು ವಿಪರ್ಯಾಸ. ನಾವು ಮಾಡುವ ಕಾರ್ಯದಲ್ಲಿ ಆತ್ಮವಿಶ್ವಾಸ ಇದ್ದರೆ ಮಾತ್ರ ಯಶಸ್ಸು ಸಾಧ್ಯ. ಸಂಸ್ಕೃತ ಭಾಷೆಯೂ ಯಾರೊಬ್ಬರ ಸ್ವತ್ತೂ ಅಲ್ಲ. ಈ ನಿಟ್ಟಿನಲ್ಲಿ ನಮ್ಮ ವಿಶ್ವದರ್ಶನ ಶಿಕ್ಷಣ ಸಂಸ್ಥೆಯಲ್ಲಿ ನಾಲ್ಕೂ ಭಾಷೆಗಳಿಗೆ ಪ್ರಾಧಾನ್ಯತೆ ನೀಡಲಾಗಿದೆ ಎಂದ ಅವರು, ಇಂದಿನ ಮಕ್ಕಳಿಗೆ ತಂದೆ, ತಾಯಿಗಳ ಕುರಿತು ಶ್ರದ್ಧೆ, ನಂಬಿಕೆ, ವಿಶ್ವಾಸವೇ ಕ್ಷೀಣವಾಗುತ್ತಿದೆ. ದೇಶದ ಬಗ್ಗೆ ಪ್ರೀತಿ, ಭಕ್ತಿ, ಬೆಳಸಿಕೊಳ್ಳಬೇಕಾದ ಇವರು, ಮೂಲ ನೆಲೆಯಿಂದಲೇ ದೂರವಾಗುತ್ತಿರುವುದು ದುಃಖದ ಸಂಗತಿ. ಇದಕ್ಕೆಲ್ಲ ಟಿವಿ, ಸ್ಮಾರ್ಟ್ ಪೋನ್, ಕಂಪ್ಯೂಟರ್‌ಗಳು ಕೈಗೆ ಸಿಕ್ಕು ಮಕ್ಕಳು ನಕಾರಾತ್ಮಕ ವಿಷಯಗಳಲ್ಲಿ ತೊಡಗಿಸಿಕೊಂಡು ತಮ್ಮ ಬದುಕನ್ನು ಅರ್ಥಹೀನ ಮಾಡಿಕೊಳ್ಳುತ್ತಿದ್ದಾರೆ. ನೈತಿಕೆತೆಯ ಅರ್ಥವೇ ಕಾಣೆಯಾಗಿದೆ. ಆದ್ದರಿಂದ ಶ್ರೀಗಳು ನೈತಿಕತೆ ಬೆಳೆಸುವ ದೃಷ್ಟಿಯಿಂದಲೇ ಅಭಿಯಾನ ಹಮ್ಮಿಕೊಂಡಿದ್ದಾರೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಟಿಎಂಎಸ್ ಅಧ್ಯಕ್ಷ ಎನ್.ಕೆ. ಭಟ್ಟ ಅಗ್ಗಾಶಿಕುಂಬ್ರಿ ಮಾತನಾಡಿ, ಸಮಾಜ ದಾರಿತಪ್ಪಿದಾಗ ಹಿರಿಯರು, ನಮ್ಮ ಮಠ-ಮಾನ್ಯಗಳು ಸೂಕ್ತ ಮಾರ್ಗದರ್ಶನ ನೀಡುವ ಪರಂಪರೆ ನಮ್ಮಲ್ಲಿ ಬೆಳೆದು ಬಂದಿದೆ ಎಂದರು.

ಶ್ರೀ ಶಾರದಾಂಬಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಉಮೇಶ ಭಾಗ್ವತ, ಅಭಿಯಾನ ಸಮಿತಿಯ ಶಂಕರ ಭಟ್ಟ ತಾರೀಮಕ್ಕಿ, ಎಸ್.ಎಲ್. ಜಾಲೀಸತ್ಗಿ, ನರಸಿಂಹ ಗೇರಗದ್ದೆ, ರಮಾ ದೀಕ್ಷಿತ ಉಪಸ್ಥಿತರಿದ್ದರು. ಶಾರದಾಂಬಾ ಪಾಠಶಾಲೆಯ ವಿದ್ಯಾರ್ಥಿಗಳಿಂದ ವೇದಘೋಷ ನಡೆಯಿತು. ಜಿಲ್ಲಾ ಸಂಚಾಲಕ ಕೆ.ಜಿ. ಬೋಡೆ ಸ್ವಾಗತಿಸಿದರು. ಚಂದ್ರಕಲಾ ಭಟ್ಟ ಕಾರ್ಯಕ್ರಮ ನಿರ್ವಹಿಸಿದರು. ಜಿ.ಎನ್. ಭಟ್ಟ ತಟ್ಟೀಗದ್ದೆ ವಂದಿಸಿದರು.