ಸಾರಾಂಶ
ಎಸ್.ಜಿ.ತೆಗ್ಗಿನಮನಿ ನರಗುಂದ
ನಂ.1ರ ಶುಕ್ರವಾರ ಭೈರನಹಟ್ಟಿ ಗ್ರಾಮದ ದೊರೆಸ್ವಾಮಿ ವಿರಕ್ತಮಠದ ಆವರಣದಲ್ಲಿ ಬೆಳಗ್ಗೆ 8 ಗಂಟೆಗೆ ಶಾಂತಲಿಂಗ ಶ್ರೀಗಳ ಸಾನ್ನಿಧ್ಯದಲ್ಲಿ ಧಾರವಾಡದ ಹಿರಿಯ ವಿದ್ವಾಂಸ ಪ್ರೊ. ಚಂದ್ರಮೌಳಿ ಶಿವಶಂಕರಪ್ಪ ನಾಯ್ಕರ ಕನ್ನಡ ರಥೋತ್ಸವಕ್ಕೆ ಚಾಲನೆ ನೀಡುವರು.ಶಾಸಕ ಸಿ.ಸಿ. ಪಾಟೀಲ, ಸಂಸದ ಪಿ.ಸಿ. ಗದ್ದಿಗೌಡ್ರ, ಮಾಜಿ ಸಚಿವ ಬಿ.ಆರ್. ಯಾವಗಲ್, ಗ್ರಾಪಂ ಅಧ್ಯಕ್ಷ ಜ್ಞಾನದೇವ ಮುನೇನಕೊಪ್ಪ, ಶಿಕ್ಷಣಾಧಿಕಾರಿ ಡಾ. ಗುರುನಾಥ ಹೂಗಾರ, ವಿ.ಎನ್. ಕೊಳ್ಳಿ, ಪ್ರೊ. ಬಿ.ಸಿ.ಹನುಮಂತಗೌಡ್ರ, ಎಂ.ಡಿ. ಸಕ್ಕರಿ, ಸಲ್ಮಾ ಎ.ಎಸ್., ಮುಖ್ಯ ಅಥಿತಿಗಳಾಗಿ ಆಗಮಿಸುವರು.
ತಾಯಿ ಭುವನೇಶ್ವರಿಯ ಪಂಚಲೋಹದ ಮೂರ್ತಿಯನ್ನಿರಿಸಿ ಕನ್ನಡಾಂಬೆಯ ರಥ ನ. ೧ರಂದು ಭೈರನಹಟ್ಟಿ ಗ್ರಾಮದ ಬೀದಿಗಳಲ್ಲಿ ಸಂಚಾರ ಮಾಡಲಿದೆ. ಕನ್ನಡ ಭಾಷೆ, ನೆಲ, ಜಲದ ಬಗ್ಗೆ ಜಾಗೃತಿ ಮೂಡಿಸುವ ರಥೋತ್ಸವದಲ್ಲಿ ಸಾವಿರಾರು ಕನ್ನಡಿಗರು ಪಾಲ್ಗೊಳ್ಳುವರು.ನಾಡಿನಲ್ಲಿ ಕನ್ನಡ ಎಂದ ತಕ್ಷಣ ನೆನಪಾಗುವುದು ನಿತ್ಯ ಕನ್ನಡ ಬಾವುಟ ಹಾರಾಡುವ ಭೈರನಹಟ್ಟಿ ಕನ್ನಡ ಮಠ, ಮಠಗಳು ಧಾರ್ಮಿಕ ಕಾರ್ಯಕ್ರಮಕ್ಕೆ ಮಾತ್ರ ಮೀಸಲು ಎಂದು ತಿಳಿದಿರುವ ನಮಗೆಲ್ಲ ಕನ್ನಡಾಂಬೆ ಸೇವೆ ಮಾಡುತ್ತಿರುವ ಭೈರನಹಟ್ಟಿ ಶ್ರೀಮಠದ ಕಾರ್ಯ ಶ್ಲಾಘನೀಯ. ಸುಮಾರು ಒಂದೂವರೆ ದಶಕಗಳ ಕಾಲ ಶ್ವೇತ ವಸ್ತ್ರಧಾರಿಯಾಗಿ ಸಮಾಜಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟು ನಿತ್ಯ ಜಪ-ತಪ, ಅನುಷ್ಠಾನ ಮೂಲಕ ಭಕ್ತರ ಏಳ್ಗೆ ಬಯಸುವ ಜತೆಗೆ ಕನ್ನಡ ಸೇವೆ ಮಾಡುತ್ತಿರುವ ತಾಲೂಕಿನ ಭೈರನಹಟ್ಟಿಯ ಶ್ರೀದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಶ್ರೀಗಳು ಶಿವಯೋಗಿ ಸಾಧಕರಲ್ಲಿ ಒಬ್ಬರು.
ಮಠಗಳೆಂದರೆ ಪುರಾಣ-ಪ್ರವಚನ, ಪೂಜೆ-ಪುನಸ್ಕಾರ, ಧಾರ್ಮಿಕ ಕಾರ್ಯಕ್ರಮ, ದಾಸೋಹ ನಡೆಸುವುದು ಎಂದು ಭಾವಿಸುವುದು ಸಹಜ. ಆದರೆ ಕನ್ನಡದ ಕಟ್ಟಾಳು ಶಾಂತಲಿಂಗ ಸ್ವಾಮೀಜಿ ಅದಕ್ಕೆ ವಿಭಿನ್ನವೆಂಬಂತೆ ಧಾರ್ಮಿಕ ಕಾರ್ಯಕ್ರಮ ನಡೆಸುವ ಜತೆಗೆ ಕನ್ನಡ-ಕನ್ನಡಿಗ-ಕರ್ನಾಟಕ ಎಂದು ಭಾಷೆ ನೆಲ-ಜಲ ಹೀಗೆ ಸದ್ದಿಲ್ಲದೇ ನಮ್ಮ ಕನ್ನಡ ಉಳಿಸಿ-ಬೆಳೆಸುವ ಕೆಲಸದ ಜತೆಗೆ ಸಮಾಜದಲ್ಲಿ ಜಾಗೃತಿ ಮೂಡಿಸುತ್ತಿರುವುದು ಕನ್ನಡಿಗರಿಗೆ ಹೆಮ್ಮೆಯ ಸಂಗತಿಯಾಗಿದೆ.ನ.೧ರಂದು ರಾಜ್ಯೋತ್ಸವ ಆಚರಣೆ ಸಾಮಾನ್ಯ, ಆದರೆ ಭೈರನಹಟ್ಟಿ ಶ್ರೀಮಠದಲ್ಲಿ ನಿತ್ಯ ಭುವನೇಶ್ವರಿ ಮೂರ್ತಿಗೆ ಪೂಜೆ ನಡೆಸಲಾಗುತ್ತದೆ. ಏಕೀಕರಣ ಹೋರಾಟಗಾರರ ಪರಿಚಯಿಸುತ್ತ ವರ್ಷ ಪೂರ್ತಿ ರಾಜ್ಯೋತ್ಸವ ಆಚರಿಸಲಾಗುತ್ತದೆ. ಅಷ್ಟೇ ಅಲ್ಲದೇ ಸಾಹಿತಿ, ಸಾಧಕರನ್ನು ಗುರುತಿಸಿ ಸುಪ್ತ ಪ್ರತಿಭೆಗಳನ್ನು ಬೆಳಕಿಗೆ ತರುವ ಕಾರ್ಯ ಶ್ರೀಮಠದಿಂದ ಮಾಡಲಾಗುತ್ತಿದೆ.
ಸ್ವತಃ ಸಾಹಿತಿಗಳಾದ ಶ್ರೀಗಳು ಸಾಕಷ್ಟು ಪುಸ್ತಕ ಪ್ರಕಟಿಸಿದ್ದಾರೆ. ಶ್ರೀಮಠದಲ್ಲಿ ಸಿಂದಗಿ ಶ್ರೀಶಾಂತವೀರೇಶ್ವರ ಗ್ರಂಥಾಲಯ ಹಾಗೂ ಶ್ರೀ ಕುಮಾರೇಶ್ವರ ದೇಶಿ ಗೋತಳಿ ಸಂರಕ್ಷಣೆ ಮತ್ತು ಸಂವರ್ಧನಾ ಕೇಂದ್ರ ಸ್ಥಾಪಿಸಿ ಜನರಲ್ಲಿ ಓದುವ ಹವ್ಯಾಸ ಬೆಳೆಸುತ್ತಿರುವ ಶ್ರೀಗಳ ಪುಸ್ತಕ ಸೇವೆ ಅನನ್ಯವಾದದ್ದು. ಶ್ರೀಗಳು ಉಚಿತ ಪ್ರಸಾದ ನಿಲಯ ಸ್ಥಾಪಿಸಿದ್ದಾರೆ. ಸಾವಿರಾರು ಬಡ ವಿದ್ಯಾರ್ಥಿಗಳಿಗೆ ಅನ್ನ-ಅಕ್ಷರ, ಸಂಸ್ಕೃತಿ-ಸಂಸ್ಕಾರ ಕಲಿಸುತ್ತಾ ಬಡಮಕ್ಕಳ ಪಾಲಿಗೆ ಭರವಸೆಯ ಬೆಳಕಾಗಿದ್ದಾರೆ.ಶ್ರೀಮಠದೊಂದಿಗೆ ಗಣ್ಯರ ನಂಟು: ಸದಾ ಪ್ರಗತಿಪರ ವಿಚಾರ ಮಾಡುತ್ತಾ ಪ್ರಸ್ತುತ ವಿದ್ಯಮಾನಕ್ಕೆ ತಕ್ಕಂತೆ ಜನ ಜಾಗೃತಿ ಮೂಡಿಸುತ್ತಿರುವ ಶ್ರೀಮಠದೊಂದಿಗೆ ನಾಡಿನ ಶ್ರೇಷ್ಠ ಪತ್ರಕರ್ತರಾಗಿದ್ದ ಪಾಟೀಲ ಪುಟ್ಟಪ್ಪ, ಭಾವೈಕ್ಯ ಕವಿ ಇಬ್ರಾಹಿಂ ಸುತಾರ, ಜಾಜಿ ಮಲ್ಲಿಗೆ ಕವಿ ಸತ್ಯಾನಂದ ಪಾತ್ರೋಟಿ, ಹಿರಿಯ ಸಾಹಿತಿ ಜ್ಞಾನದೇವ ದೊಡ್ಡಮೇಟಿ ಹಾಗೂ ಕಾರ್ಮಿಕ ನೇತಾರ ಡಾ. ಕೆ.ಎಸ್.ಶರ್ಮಾ, ಕುಂ. ವೀರಭದ್ರಪ್ಪ, ಗಜಲ್ ಕವಿ ಅಲ್ಲಾಗಿರಿರಾಜ ಸೇರಿದಂತೆ ಅನೇಕ ಗಣ್ಯರು ಶ್ರೀಮಠದ ನಿಕಟ ಸಂಪರ್ಕ ಹೊಂದಿದ್ದಾರೆ.
ಹಲವಾರು ವರ್ಷಗಳಿಂದ ಕನ್ನಡ ಭಾಷೆಯ ರಕ್ಷಣೆ ಹಾಗೂ ಸೇವೆ ಮಾಡಲು ಭಕ್ತರಿಂದ ಸಹಕಾರ ಸಿಕ್ಕಿದ್ದರಿಂದ ಇಂದು ನಾವು ಕನ್ನಡ ಸೇವೆ ಮಾಡಲು ಸಾಧ್ಯವಾಗಿದೆ ಎಂದು ಶಾಂತಲಿಂಗ ಶ್ರೀಗಳು ತಿಳಿಸಿದ್ದಾರೆ.ರಾಜ್ಯದಲ್ಲಿ ಈ ಹಿಂದೆ ಕನ್ನಡ ಭಾಷೆ ಉಳಿವಿಗಾಗಿ ಗದುಗಿನ ತೋಂಟದಾಯ ಮಠದ ಡಾ. ಸಿದ್ದಲಿಂಗ ಶ್ರೀಗಳ ನಿಂತಿದ್ದರು. ಆ ನಂತರ ನಮ್ಮ ತಾಲೂಕಿನ ಭೈರನಹಟ್ಟಿ ಗ್ರಾಮದ ಶಾಂತಲಿಂಗ ಶ್ರೀಗಳು ಕನ್ನಡ ಭಾಷೆ, ನೆಲ, ಜಲಕ್ಕೆ ತೊಂದರೆ ಬಂದಾಗ ಮೊದಲು ನಮ್ಮ ಶ್ರೀಗಳು ಧ್ವನಿ ಎತ್ತಿ ನಮ್ಮ ಭಾಷೆ ರಕ್ಷಣೆ ಮಾಡುತ್ತಿರುವುದು ಕನ್ನಡಿಗರಿಗೆ ಮತ್ತು ಕನ್ನಡ ನಾಡಿಗೆ ಹೆಮ್ಮಯ ವಿಷಯ ಎಂದು ಶ್ರೀ ಬಸವೇಶ್ವರ ಸಮುದಾಯ ಭವನದ ನಿರ್ದೇಶಕ ವಿ.ಎನ್.ಕೊಳ್ಳಿ ಹೇಳಿದ್ದಾರೆ.