ಅವಾಂತರಗಳ ತಾಣವಾದ ಭೈರಾಪುರ ಟೋಲ್‌

| Published : Feb 18 2025, 12:31 AM IST

ಸಾರಾಂಶ

ತಾಲೂಕಿನ ಬೈರಾಪುರ ಗ್ರಾಪಂ ವ್ಯಾಪ್ತಿಯ ಚೌಲ್ಗೆರೆ ಬಳಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ನಿರ್ಮಿಸಲಾದ ಟೋಲ್ ಪ್ಲಾಜಾದಲ್ಲಿ ಅಧಿಕಾರಿಗಳ ಬೇಜವಾಬ್ದಾರಿತನ ಹಾಗೂ ಗುತ್ತಿಗೆ ಪಡೆದಿರುವವರ ನಿರ್ಲಕ್ಷ್ಯ ಮನೋಭಾವದಿಂದಾಗಿ ಸರಣಿ ಅಪಘಾತ ಸಂಭವಿಸಿದ್ದು ಇದರಿಂದಾಗಿ ಏಳುಕ್ಕೂ ಹೆಚ್ಚು ವಾಹನಗಳು ಜಖಂಗೊಂಡಿದ್ದು ಹಲವರಿಗೆ ಗಾಯಗಳಾಗಿವೆ.

ಎಚ್ ವಿ ರಾಘವೇಂದ್ರ

ಕನ್ನಡಪ್ರಭ ವಾರ್ತೆ ಆಲೂರು

ತಾಲೂಕಿನ ಬೈರಾಪುರ ಗ್ರಾಪಂ ವ್ಯಾಪ್ತಿಯ ಚೌಲ್ಗೆರೆ ಬಳಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ನಿರ್ಮಿಸಲಾದ ಟೋಲ್ ಪ್ಲಾಜಾದಲ್ಲಿ ಅಧಿಕಾರಿಗಳ ಬೇಜವಾಬ್ದಾರಿತನ ಹಾಗೂ ಗುತ್ತಿಗೆ ಪಡೆದಿರುವವರ ನಿರ್ಲಕ್ಷ್ಯ ಮನೋಭಾವದಿಂದಾಗಿ ಸರಣಿ ಅಪಘಾತ ಸಂಭವಿಸಿದ್ದು ಇದರಿಂದಾಗಿ ಏಳುಕ್ಕೂ ಹೆಚ್ಚು ವಾಹನಗಳು ಜಖಂಗೊಂಡಿದ್ದು ಹಲವರಿಗೆ ಗಾಯಗಳಾಗಿವೆ.

ಕನ್ನಡಪರ ಸಂಘಟನೆಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳ ವಿರೋಧದ ನಡುವೆಯೂ ಪ್ರಾರಂಭಗೊಂಡ ಈ ಟೋಲ್‌ ಪ್ಲಾಜದಲ್ಲಿ ಪ್ರತಿದಿನ ಒಂದಿಲ್ಲೊಂದು ಅಪಘಾತಗಳು, ವಾಹನ ಸವಾರರು ಹಾಗೂ ಇಲ್ಲಿನ ಸಿಬ್ಬಂದಿಗಳ ನಡುವೆ ಗಲಾಟೆಗಳು ನಡೆಯುತ್ತಿದ್ದು ಇದಕ್ಕೆ ಸೂಕ್ತ ಸೌಕರ್ಯಗಳನ್ನು ಒದಗಿಸದೆ ಆತುರದಿಂದ ಹಣ ವಸೂಲಾತಿ ಮಾಡುವ ಉದ್ದೇಶದಿಂದ ಇಲ್ಲಿ ಶುಲ್ಕ ವಸೂಲಾತಿ ಮಾಡುಲು ಪ್ರಾರಂಭಿಸಿದ್ದೆ ಕಾರಣವಾಗಿದೆ.

ಈವರೆಗೂ ರಸ್ತೆ ಕಾಮಗಾರಿಯೇ ಪೂರ್ಣಗೊಂಡಿಲ್ಲ. ಆಲೂರು ಕೂಡಿಗೆಯಿಂದ ಬೈರಾಪುರ ಸಂಪರ್ಕಿಸುವ ರಸ್ತೆಯಲ್ಲಿ ಯಾವ ರೀತಿ ಶುಲ್ಕ ಸಂಗ್ರಹಿಸಬೇಕೆಂಬುದಕ್ಕೆ ಕ್ರಮ ಕೈಗೊಂಡಿಲ್ಲ. ಇದರಿಂದಾಗಿ ಈ ಟೋಲ್ ನಲ್ಲಿ ಶುಲ್ಕದಿಂದ ಬಚಾವಾಗಲು ನೂರಾರು ವಾಹನಗಳು ಆಲೂರಿನ ಮಾರ್ಗವಾಗಿ ಸಂಚರಿಸಿದ ಪರಿಣಾಮ ಆಲೂರು ಮುಖ್ಯ ರಸ್ತೆ ಸಂಪೂರ್ಣ ಹಾಳಾಗಿದ್ದು ಇದರಿಂದಾಗಿ ಈ ರಸ್ತೆಯಲ್ಲಿಯೂ ಸಹ ಪ್ರತಿದಿನ ಅಪಘಾತಗಳು ಸಂಭವಿಸುತ್ತಿವೆ.

ಕಳೆದ ಎರಡು ತಿಂಗಳ ಹಿಂದೆ ಸಂಸದರು, ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದು, ಆಗೇಯೇ ಉಳಿದಿದೆ.

ಟೋಲ್ ಪ್ಲಾಜದಲ್ಲಿ ಸ್ವಯಂ ಚಾಲಿತ ಸುಂಕ ವಸೂಲಾತಿ ಲೈನಿನಲ್ಲಿ ಫಾಸ್ಟ್ ಟ್ಯಾಗ್ ನಲ್ಲಿ ಹಣವಿಲ್ಲದವರು ಸಂಚರಿಸಿದರೆ ಅಲ್ಲಿಂದ ಸಿಬ್ಬಂದಿಗಳು ಹೋಗಿ ಹಣ ಪಡೆದು ವಾಹನಗಳನ್ನು ಬಿಡುವ ವ್ಯವಸ್ಥೆ ಕಲ್ಪಿಸಲಾಗಿದ್ದು ಈ ಸಂದರ್ಭದಲ್ಲಿ ವಾಹನದಟ್ಟಣೆ ಇದ್ದ ವೇಳೆ ಗಂಟೆಗಟ್ಟಲೆ ವಾಹನ ಚಾಲಕರೂ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಶನಿವಾರ ಭಾನುವಾರ ಅಥವಾ ಇತರೆ ರಜಾ ದಿನಗಳಲ್ಲಿ ಸಾವಿರಾರು ವಾಹನಗಳು ಈ ಟೋಲ್ ಗೇಟ್ ನ ಮೂಲಕ ಸಂಚರಿಸುತ್ತಿದ್ದು ಇಲ್ಲಿನ ಸಿಬ್ಬಂದಿಗಳು ಸೂಕ್ತ ವ್ಯವಸ್ಥೆ ಕಲ್ಪಿಸದ ಕಾರಣ ಇಲ್ಲಿ ಈ ರೀತಿ ಘಟನೆಗಳು ನಡೆಯುತ್ತಿವೆ. ಅಲ್ಲದೇ ಇಲ್ಲಿನ ಸಿಬ್ಬಂದಿಗಳು ವಾಹನ ಚಾಲಕರೊಂದಿಗೆ ಅನುಚಿತವಾಗಿ ವರ್ತಿಸುತ್ತಿರುವ ಕಾರಣ ದಿನ ಇಲ್ಲಿ ಜಗಳಗಳು ನಡೆಯುತ್ತಿದ್ದು ಇದು ಕೂಡ ಈ ರೀತಿಯ ಘಟನೆಗಳಿಗೆ ಕಾರಣವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಶೀಘ್ರ ಇತ್ತ ಗಮನಹರಿಸಿ ಈ ಸಮಸ್ಯೆ ಸೂಕ್ತ ಪರಿಹಾರ ಕಲ್ಪಿಸಬೇಕಿದೆ.

ಈ ಟೋಲ್‌ನಿಂದಾಗಿ ಸ್ಥಳೀಯ ಬೆಳಗಾರರಿಗೆ, ರೈತರಿಗೆ ತೀವ್ರ ತೊಂದರೆ ಉಂಟಾಗುತ್ತಿದೆ. ಈ ಭಾಗದಲ್ಲಿ ತೋಟ ಹೊಂದಿರುವ ಹಲವಾರು ಮಂದಿ ಹಾಸನದಲ್ಲಿ ಮನೆ ಮಾಡಿದ್ದು ಪ್ರತಿದಿನ ತೋಟಗಳಿಗೆ ಈ ರಸ್ತೆಯ ಮೂಲಕವೇ ಓಡಾಡಬೇಕಾಗಿದೆ. ಸ್ಥಳೀಯರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸದ ಕಾರಣ ಗೊಂದಲಗಳಿಂದಾಗಿ ದಿನವೂ ಒಂದಿಲ್ಲೊಂದು ಜಗಳಗಳಾಗುತ್ತಿವೆ. ಜಿಲ್ಲಾಧಿಕಾರಿಗಳು ಗಮನಹರಿಸಿ ಈ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕು.

ತನು ಕುಂದುರು ಕಾಫಿ ಬೆಳೆಗಾರ

ಈ ಟೋಲ್ ನಲ್ಲಿ ಶುಲ್ಕದಿಂದ ಬಚಾವಾಗಲು ಭಾರೀ ನೂರಾರು ವಾಹನಗಳು ಪ್ರತಿದಿನ ಆಲೂರಿನ ಮೂಲಕ ಸಂಚರಿಸುತ್ತಿದ್ದು ಇದರಿಂದಾಗಿ ಆಲೂರಿನ ಮುಖ್ಯ ರಸ್ತೆ ಹಾಳಾಗಿದೆ. ಶಾಲಾ ಕಾಲೇಜುಗಳು ಬಿಟ್ಟ ಸಂದರ್ಭದಲ್ಲಿ ವಿದ್ಯಾರ್ಥಿಗಳು ಕಿರಿದಾದ ಈ ರಸ್ತೆಯಲ್ಲಿ ಸಂಚರಿಸಬೇಕಿದೆ. ಅಪಘಾತಗಳು ಸಂಭವಿಸಿದರೆ ಯಾರು ಹೊಣೆಯಾಗುತ್ತಾರೆ. ನಾವುಗಳು ಈ ಬಗ್ಗೆ ಸಂಸದರಿಗೆ ಮನವಿ ಸಲ್ಲಿಸಿದ್ದು, ಅವರು ಕ್ರಮಕ್ಕೆ ಮುಂದಾಗಬೇಕು.

ಶಾಂತಕೃಷ್ಣ ಮುಖಂಡ