ಸಾರಾಂಶ
ಕನ್ನಡಪ್ರಭ ವಾರ್ತೆ ಹನೂರು
ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ರಾಜ್ಯದ ನಾನಾ ಜಿಲ್ಲೆಗಳಿಂದ ಸಂಗಮ ಕಾವೇರಿ ನದಿ ದಾಟಿ ಮಲೆ ಮಹದೇಶ್ವರ ಬೆಟ್ಟಕ್ಕೆ ಅಪಾರ ಸಂಖ್ಯೆಯ ಭಕ್ತಾದಿಗಳು ಕಾಲ್ನಡಿಗೆಯ ಮೂಲಕ ಆಗಮಿಸುತ್ತಿದ್ದಾರೆ. ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಮಹಾಶಿವರಾತ್ರಿ ಹಬ್ಬದ ಜಾತ್ರಾ ಮಹೋತ್ಸವದ ಅಂಗವಾಗಿ ಮಲೆ ಮಹದೇಶ್ವರ ಬೆಟ್ಟದಲ್ಲಿ ಜಾತ್ರೆಗೆ ಬರುವ ಭಕ್ತಾದಿಗಳಿಗೆ ಪ್ರಾಧಿಕಾರದ ವತಿಯಿಂದ ಸಕಲ ಸಿದ್ಧತೆಗಳನ್ನು ಹಮ್ಮಿಕೊಳ್ಳಲಾಗಿದೆ. ರಾಜ್ಯದ ನಾನಾ ಭಾಗಗಳಿಂದ ಹಾಗೂ ವಿವಿಧ ಜಿಲ್ಲೆಗಳಿಂದಲೂ ಸಹ ಪಾದಯಾತ್ರೆಯಲ್ಲಿ ಬಂದಂತ ಭಕ್ತಾದಿಗಳು ಕಾವೇರಿ ನದಿ ದಾಟಿ ದುರ್ಗಮ ಅರಣ್ಯ ಪ್ರದೇಶದ ಕಾಲು ದಾರಿಯಲ್ಲಿ ಅಪಾರ ಸಂಖ್ಯೆಯಲ್ಲಿ ಸಾಗರದಂತೆ ಬರುತ್ತಿರುವ ಮಾದಪ್ಪನ ಭಕ್ತಾದಿಗಳು ಬಿರುಬಿಸಿಲನ್ನು ಸಹ ಲೆಕ್ಕಿಸದೆ ಅರಣ್ಯ ಪ್ರದೇಶದ ಗಿಡಮರಗಳ ನೆರಳಿನಲ್ಲಿ ಕುಳಿತು ಸಹ ದಣಿವು ನೀಗಿಸಿಕೊಂಡು ಅಪಾರ ಸಂಖ್ಯೆಯಲ್ಲಿ ಮಾದಪ್ಪನ ದರ್ಶನಕ್ಕೆ ಬರುತ್ತಿದ್ದಾರೆ.ಕಣಿವೆ ಆಂಜನೇಯ ದೇವಾಲಯದ ಬಳಿ ವಿಶ್ರಾಂತಿ: ಮಲೆ ಮಹದೇಶ್ವರ ಬೆಟ್ಟಕ್ಕೆ ಕಾವೇರಿ ನದಿ ದಾಟಿ ಬರುತ್ತಿರುವ ಭಕ್ತರು ಜೊತೆಗೆ ಮತ್ತೊಂದೆಡೆ ಕೊಳ್ಳೇಗಾಲ ಮಾರ್ಗವಾಗಿ ಮಂಡ್ಯ, ಚಾಮರಾಜನಗರ ಹಾಗೂ ವಿವಿಧ ಜಿಲ್ಲೆಗಳಿಂದಲೂ ಮುಖ್ಯರಸ್ತೆಯ ಮೂಲಕ ಅಪಾರ ಸಂಖ್ಯೆಯಲ್ಲಿ ಬರುತ್ತಿರುವ ಪಾದಯಾತ್ರೆಯ ಭಕ್ತಾದಿಗಳು ಹನೂರು ಸಮೀಪದ ಎಲ್ಲೇ ಮಾಳ ರಸ್ತೆಯ ಮಾರ್ಗ ಮತ್ತೆ ಸಿಗುವ ಕಣಿವೆ ಆಂಜನೇಯ ಸ್ವಾಮಿ ದೇವಾಲಯದ ಬಳಿ ಅಪಾರ ಸಂಖ್ಯೆಯಲ್ಲಿ ಆಗಮಿಸಿ ವಿಶ್ರಾಂತಿ ಪಡೆಯುತ್ತಿದ್ದಾರೆ.ದಣಿವು ನೀಗಿಸಿದ ಭಕ್ತಾದಿಗಳು: ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆಯ ಮೂಲಕ ಆಗಮಿಸುತ್ತಿರುವ ಭಕ್ತಾದಿಗಳಿಗೆ ಮಾರ್ಗ ಮಧ್ಯೆ ಸಿಗುವ ಕಣಿವೆ ಆಂಜನೇಯ ಸ್ವಾಮಿ ದೇವಾಲಯದ ಬಳಿ ಹಾಗೂ ಗೂಳ್ಯ ಮಲೆ ಮಹದೇಶ್ವರ ದೇವಾಲಯದ ಬಳಿ ಹಾಗೂ ಕೆವಿಎನ್ ದೊಡ್ಡಿ ಗ್ರಾಮದ ಬಳಿ ಪಾದಯಾತ್ರೆಯಲ್ಲಿ ಬರುವ ಭಕ್ತಾದಿಗಳ ದಣಿವು ನೀಗಿಸಲು ಮಜ್ಜಿಗೆ ಪಾನಕ ಹಾಗೂ ಕುಡಿಯುವ ನೀರನ್ನು ಸಹ ಮಾದಪ್ಪನ ಭಕ್ತರು ವಿತರಿಸುತ್ತಿದ್ದಾರೆ.
ಮಾದಪ್ಪನ ಬೆಟ್ಟದಲ್ಲಿ ಬಸ್‌ಗಾಗಿ ಪರದಾಟ: ಪ್ರತಿಭಟನೆಹನೂರು: ಪಾದಯಾತ್ರೆಯಲ್ಲಿ ಬಂದಂತಹ ಭಕ್ತಾದಿಗಳು ಗ್ರಾಮಗಳಿಗೆ ತೆರಳಲು ಸರಿಯಾದ ಬಸ್ ವ್ಯವಸ್ಥೆ ಇಲ್ಲದೇ ಮಲೆ ಮಹದೇಶ್ವರ ಬೆಟ್ಟದಲ್ಲಿ ಪ್ರತಿಭಟನೆ ನಡೆಸಿದರು. ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಪ್ರವೇಶ ಮುಖ್ಯ ದ್ವಾರದ ಮುಖ್ಯರಸ್ತೆಯಲ್ಲಿ ಪಾದಯಾತ್ರೆ ಮೂಲಕ ಬಂದ ಭಕ್ತಾದಿಗಳು ವಾಹನಗಳನ್ನು ತಡೆದು ಪ್ರತಿಭಟನೆ ನಡೆಸಿದ ಮಾಹಿತಿ ತಿಳಿದ ತಕ್ಷಣ ಮಲೆ ಮಹದೇಶ್ವರ ಬೆಟ್ಟದ ಪೊಲೀಸರು ಸ್ಥಳ ಆಗಮಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿ ಹೆಚ್ಚು ಬಸ್ ಗಳನ್ನು ವ್ಯವಸ್ಥೆಗೊಳಿಸಲು ಕರ್ನಾಟಕ ರಾಜ್ಯ ಸಾರಿಗೆ ಅಧಿಕಾರಿಗಳಿಗೆ ಮಾಹಿತಿ ನೀಡಿ ವಾಹನಗಳು ತೆರಳಲು ಅನುವು ಮಾಡಿಕೊಟ್ಟರು.ಪಾದಯಾತ್ರೆ ಭಕ್ತರಿಗೆ ಬಸ್ ಕೊರತೆ:ಮಲೆ ಮಹದೇಶ್ವರ ಬೆಟ್ಟಕ್ಕೆ ಬೆಂಗಳೂರು, ರಾಮನಗರ, ಬಿಡದಿ, ಮಂಡ್ಯ ಹಾಗೂ ಇನ್ನಿತರ ಜಿಲ್ಲೆಗಳಿಂದ ಕಳೆದ ಎರಡು ದಿನಗಳಿಂದ ಪಾದಯಾತ್ರೆಯ ಮೂಲಕ ಸಾವಿರಾರು ಭಕ್ತರು ತೆರಳಿ ಮಾದಪ್ಪನ ದರ್ಶನ ಪಡೆಯುತ್ತಿದ್ದು, ಮಂಗಳವಾರ ಬೆಳಗ್ಗೆ ಬಸ್‌ಗಳಿಲ್ಲದೆ ಬೇಸತ್ತ ಮಾದಪ್ಪನ ಭಕ್ತರು ಮಹದೇಶ್ವರ ಬೆಟ್ಟದ ಮುಖ್ಯ ದ್ವಾರದಲ್ಲಿ ಪ್ರತಿಭಟನೆ ನಡೆಸಿ ರಾಜ್ಯ ಸಾರಿಗೆ ಅಧಿಕಾರಿಗಳನ್ನು ಹೆಚ್ಚುವರಿ ಬಸ್ ಗಳ ವ್ಯವಸ್ಥೆಯನ್ನು ಕಲ್ಪಿಸುವಂತೆ ಒತ್ತಾಯಿಸಿದರು.