ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಬಿಳಿ ಅಂಗಿ, ಪಂಚೆ ಧರಿಸಿದ ಕಟ್ಟುಮಸ್ತಿನ ಆಳು ಬಂದರೆಂದರೆ ಅದು ಭಾನುಪ್ರಕಾಶ್. ನಗುಮೊಗದಲ್ಲಿಯೇ ಸಂಘಟನೆ ಶಿಸ್ತಿನ ಪಾಠ ಹೇಳುತ್ತಾ ಎಲ್ಲರಿಗೂ ಹಿರಿಯಣ್ಣನಂತೆ ಮಾದರಿಯಾಗಿದ್ದರು.ವಿಷಯದಲ್ಲಿನ ಆಳ ಜ್ಞಾನದಿಂದಾಗಿ ಅವರ ಮಾತುಗಳಿಗೆ ಯಾವಾಗಲೂ ತೂಕವಿರುತ್ತಿತ್ತು. ಇದರಿಂದಾಗಿಯೇ ಕಾರ್ಯಕರ್ತರಿಗೆ ಸಂಘಟನೆ ಪಾಠ ಹೇಳುವಾಗೆಲ್ಲ ಅಲ್ಲಿ ಭಾನುಪ್ರಕಾಶ್ ಇರುತ್ತಿದ್ದರು. ಶಿವಮೊಗ್ಗ ನಗರದ ಸಮೀಪ ಇರುವ ಮತ್ತೂರಿನವರು. ತೀವ್ರ ಸಂಪ್ರದಾಯವಾದಿಗಳಿಂದ ಕೂಡಿದ ಗ್ರಾಮವದು. ಸಂಸ್ಕೃತ ಗ್ರಾಮದ ಈ ಊರಿನಲ್ಲಿ ಬೆಳೆದ ಭಾನುಪ್ರಕಾಶ್ ಶಿಸ್ತಿನ ಚೌಕಟ್ಟಿನಲ್ಲಿ ಬೆಳೆದವರು.
ಚಿಕ್ಕ ವಯಸ್ಸಿನಿಂದಲೇ ಆರ್‌ಎಸ್‌ಎಸ್ ಜೊತೆಗೇ ಬೆಳೆದವರು. ನಿತ್ಯ ಶಾಖೆಗೆ ಹೋಗುತ್ತಿದ್ದವರು. ಅಲ್ಲಿಂದ ಆರಂಭಗೊಂಡ ಅವರ ವೈಯುಕ್ತಿಕ ಬದುಕು ಕೊನೆಗೆ ಬಿಜೆಪಿ ಮೂಲಕ ರಾಜಕಾರಣ ಪ್ರವೇಶಿಸಿದರು. ಗಾಜನೂರು ಜಿಪಂ ಕ್ಷೇತ್ರದಿಂದ ಆಯ್ಕೆಯಾಗಿ 2001ರಿಂದ 2005ರ ಅವಧಿಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದರು. ಜಿಪಂ ಸಭೆಗೊಂದು ಶೋಭೆಯಾಗಿದ್ದರು. ತಮ್ಮ ಪ್ರಬುದ್ಧ ಮಾತುಗಳಿಂದ ಉಳಿದ ಸದಸ್ಯರಿಗೆ ಮಾದರಿಯಾಗಿದ್ದರು.ನೆರೆ ಜಿಲ್ಲೆ ಬಿಜೆಪಿ ಸಂಘಟನಾ ಜವಾಬ್ದಾರಿಯನ್ನು ಹಲವು ಬಾರಿ ಹೊತ್ತಿದ್ದು, ಮಲೆನಾಡಿನ ತಾಲೂಕಿನ ಸಂಘಟನಾ ಸಂಚಾಲಕರಾಗಿದ್ದರು.
ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪನವರು 2005ರಲ್ಲಿ ಬಿಜೆಪಿ ತೊರೆದು ಸಮಾಜವಾದಿ ಪಕ್ಷದಿಂದ ಶಿವಮೊಗ್ಗ ಲೋಕಸಭೆ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದಾಗ, ಅವರ ವಿರುದ್ಧ ಭಾನುಪ್ರಕಾಶ್ ಸ್ಪರ್ಧೆ ಮಾಡಿದ್ದರು. ಆದರೆ ಗೆಲ್ಲಲಾಗಲಿಲ್ಲ ಎನ್ನುವುದು ಬೇರೆಯದೇ ಸಂಗತಿ.ಬಿಎಸ್ ಯಡಿಯೂರಪ್ಪ ಬಿಜಪಿ ರಾಜ್ಯಾಧ್ಯಕ್ಷರಿದ್ದಾಗ ಕೂಡ ಇವರಿಗೆ ಬಿಜೆಪಿ ಉಪಾಧ್ಯಕ್ಷ ಸ್ಥಾನ ನೀಡಲಾಗಿತ್ತು. ಆದರೆ ಯಡಿಯೂರಪ್ಪ ಅವರ ಕಾರ್ಯವೈಖರಿ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದ ಭಾನುಪ್ರಕಾಶ್ ಬಿಜೆಪಿ ಉಪಾಧ್ಯಕ್ಷ ಸ್ಥಾನ ಒಪ್ಪಿಕೊಳ್ಳುವುದಿಲ್ಲ. ಬದಲಿಗೆ ಬಿಜೆಪಿ ಸಾಮಾನ್ಯ ಕಾರ್ಯಕರ್ತನಾಗಿಯೇ ಉಳಿಯುತ್ತೇನೆ ಎಂದು ಹೇಳಿದ್ದರು. ನಂತರ ನಳಿನ್ ಕುಮಾರ್ ಕಟೀಲ್ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದ ವೇಳೆ ಭಾನುಪ್ರಕಾಶ್‌ರಿಗೆ ಮತ್ತೊಮ್ಮೆ ರಾಜ್ಯ ಬಿಜೆಪಿ ಉಪಾಧ್ಯಕ್ಷ ಪಟ್ಟ ನೀಡಲಾಗಿತ್ತು. ಮತ್ತೂರು ಸಹಕಾರ ಸಂಘ ಕಟ್ಟಿ ಬೆಳೆಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದರು. ಅದರ ನಿರ್ದೇಶಕರೂ ಆಗಿದ್ದರು.
ಪ್ರಸ್ತುತ ಉಡುಪಿ ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ ಜಿಲ್ಲೆಯನ್ನು ಒಳಗೊಂಡ ಲೋಕಸಭಾ ಕ್ಲಸ್ಟರ್ ಸಂಯೋಜಕ ರಾಗಿದ್ದರು. 2013-19 ರವರೆಗೆ ವಿಧಾನಪರಿಷತ್ ಸದಸ್ಯರಾಗಿ ಆಯ್ಕೆಯಾಗಿ ಅತ್ಯುತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿದ್ದರು.