ಸಾರಾಂಶ
ಹೂವಿನಹಡಗಲಿ: ರಾಜ್ಯದಲ್ಲೇ 2ನೇ ಅತಿ ದೊಡ್ಡ ಜಾತ್ರೆ ಎಂಬ ಹೆಗ್ಗಳಿಕೆ ಹೊಂದಿರುವ ಮೈಲಾರಲಿಂಗೇಶ್ವರ ಕಾರ್ಣಿಕೋತ್ಸವ ಸೇರಿದಂತೆ ದೇವಸ್ಥಾನದಲ್ಲಿ ಭರತ ಹುಣ್ಣಿಮೆ ಆಚರಣೆ ಮಾಡಲು ರಾಜ್ಯದ ನಾನಾ ಕಡೆಗಳಿಂದ ಭಕ್ತರ ದಂಡು ಸೇರುತ್ತಿದ್ದಾರೆ.
ಶನಿವಾರ ಭರತ ಹುಣ್ಣಿಮೆ ಇರುವ ಹಿನ್ನೆಲೆಯಲ್ಲಿ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಉತ್ತರ ಕರ್ನಾಟಕದ ಮಣ್ಣಿನ ಸೊಗಡು, ಕೃಷಿ, ರಾಜಕೀಯ, ಆರ್ಥಿಕ, ವಾಣಿಜ್ಯ ಇತರ ಕ್ಷೇತ್ರಗಳ ಭವಿಷ್ಯ ಸಾರುವ ಮೈಲಾರಲಿಂಗೇಶ್ವರ ಕಾರ್ಣಿಕವು ಫೆ. 26ರಂದು ಪುಣ್ಯಭೂಮಿ ಡೆಂಕಣ ಮರಡಿಯಲ್ಲಿ ನಡೆಯಲಿದೆ. ಭರತ ಹುಣ್ಣಿಮೆಯನ್ನು ಮೈಲಾರ ಸುಕ್ಷೇತ್ರದಲ್ಲೇ ಆಚರಿಸಬೇಕು ಎಂದು ಸಾವಿರಾರು ಭಕ್ತರು ಪಾದಯಾತ್ರೆ ಮೂಲಕ ಮೈಲಾರಕ್ಕೆ ಆಗಮಿಸಿದ್ದಾರೆ.ದೇವಸ್ಥಾನಕ್ಕೆ ವಿಶೇಷ ದೀಪಾಲಂಕಾರ ಮಾಡಲಾಗಿದೆ. ಭರತ ಹುಣ್ಣಿಮೆಯ ದಿನ ದೇವಸ್ಥಾನದಲ್ಲಿರುವ ಉದ್ಭವ ಲಿಂಗಕ್ಕೆ ಅಭಿಷೇಕ ಹಾಗೂ ಅರ್ಚನೆ ಪೂಜೆ ಮಾಡಲಾಯಿತು. ಆದರೆ, ದೇವರಿಗೆ ನೈವೇದ್ಯ, ಗಂಟೆ, ಮಂಗಳಾರತಿ ಮಾಡುವುದಿಲ್ಲ. ಕಾರಣ ಡೆಂಕಣ ಮರಡಿಯಲ್ಲಿ ಮೈಲಾರಲಿಂಗೇಶ್ವರನು ಮಲ್ಲಾಸುರ, ಮಣಿಕಾಸುರೊಂದಿಗೆ ಯುದ್ಧ ಮಾಡುತ್ತಿರುವ ಹಿನ್ನೆಲೆಯಲ್ಲಿ ಭಕ್ತರು ಮೌನವಾಗಿರುತ್ತಾರೆ ಎಂದು ದೇವಸ್ಥಾನ ವಂಶಪಾರಂಪರ್ಯ ಧರ್ಮಕರ್ತ ಗುರು ವೆಂಕಪ್ಪಯ್ಯ ಒಡೆಯರ್ ಮಾಹಿತಿ ನೀಡಿದರು.
ಭರತ ಹುಣ್ಣಿಮೆಯ ದಿನ ದೇವಸ್ಥಾನದ ಹು೦ಡಿಗಳನ್ನು ವಿವಿಧ ಕಡೆ ಅಳವಡಿಸಿ ವಿಶೇಷ ಪೂಜೆ ಸಲ್ಲಿಸಿ ವೆಂಕಪ್ಪಯ್ಯ ಒಡೆಯರ್ ನೇತೃತ್ವದಲ್ಲಿ ಅಧಿಕಾರಿಗಳು ಹುಂಡಿಗಳನ್ನು ಅಳವಡಿಸುವ ಮೂಲಕ ದೇವಸ್ಥಾನದ ಅಭಿವೃದ್ಧಿ ಕಾರ್ಯಕ್ಕೆ ಹೆಚ್ಚಿನ ಆದಾಯ ನಿರೀಕ್ಷೆ ಮಾಡಲಾಗಿದೆ.ಪ್ರಚಲಿತ ಪುರಾಣದ ಪ್ರಕಾರ ದ್ವಾಪರ ಯುಗದಲ್ಲಿ ಋಷಿ ಮುನಿಗಳಿಗೆ ನಾನಾ ರೀತಿ ಮಣಿಕಾಸುರ ಮಲ್ಲಾಸುರರು ಕಾಟ ಕೊಡುತ್ತಿದ್ದರು. ಆಗ ಋಷಿ ಮುನಿಗಳು ಶಿವನ ಬಳಿ ಕಾಟ ಕೀಟಲೆಗಳ ಕುರಿತು ಭಿನ್ನವಿಸಿದಾಗ ರಾಕ್ಷಸರ ಸಂಹಾರಕ್ಕಾಗಿ ಶಿವ (ಮೈಲಾರಲಿಂಗ) ಪಾರ್ವತಿ (ಗಂಗಿಮಾಳಮ್ಮ) ರೂಪತಾಳಿ ಮೈಲಾರದ ಡೆಂಕಣ ಮರಡಿಯಲ್ಲಿ ಸಂಹರಿಸಿದನೆಂದು ಭಕ್ತರ ನಂಬಿಕೆ ಇದೆ.
ಮೈಲಾರಲಿಂಗ ಹೇಗೆ ಭೂಮಿಗೆ ಬಂದ, ಈತನ ಉದ್ದೇಶ ಹಾಗೂ ಯಾರನ್ನು ಮದುವೆಯಾದ ಎಂಬುದನ್ನು ಗೊರವರ ಜನಪದ ಹಾಡು ಇಂದಿಗೂ ಪ್ರಚಲಿತ. ಮೈಲಾರಲಿಂಗನ ಹೆಂಡತಿ ಗಂಗಿಮಾಳವ್ವ ನಡುವಿನ ಸಂಸಾರ ಸಂಬಂಧ ಕುರಿತ ಕಥೆ, ಉಪ ಕಥೆಗಳಿವೆ. ಅಂದು ಮೈಲಾರಲಿಂಗ ವೇಶ್ಯೆಯರ ಸಂಗ ಮಾಡಿ ಅವರ ದಾಸನಾಗಿರುವ ಕುರಿತು, ಜನಪದ ಹಾಡು ಇಂದಿಗೂ ದೇವಸ್ಥಾನದಲ್ಲಿ ಆಚರಣೆಯಲ್ಲಿದೆ.ಧಾರ್ಮಿಕ ಕಾರ್ಯಕ್ರಮದಲ್ಲಿ ದೇವಸ್ಥಾನದ ಧರ್ಮಕರ್ತ ವೆಂಕಪ್ಪಯ್ಯ ಒಡೆಯರ್, ಅರ್ಚಕ ಪ್ರಮೋದ್ ಭಟ್, ದೇವಸ್ಥಾನದ ಕಾರ್ಯ ನಿರ್ವಾಹಣಾಧಿಕಾರಿ ಕೃಷ್ಣಪ್ಪ, ದೇವಸ್ಥಾನದ ಬಾಬುದಾರರು ಸೇರಿದಂತೆ ಸಾವಿರಾರು ಭಕ್ತರು ಮೈಲಾರದಲ್ಲಿ ತಂಗಿದ್ದಾರೆ.