ಭಾರತ ಸನಾತನ ಸಂಸ್ಕೃತಿಯ ಆಗರ: ಅಭಿಷೇಕ ದೇಶಪಾಂಡೆ

| Published : Feb 08 2024, 01:34 AM IST

ಸಾರಾಂಶ

ಭಾರತ ಬಾಹ್ಯಾಕಾಶ ವಿಜ್ಞಾನದಲ್ಲಿ ಜಗತ್ತನ್ನು ಬೆರಗುಗೊಳಿಸುತ್ತಿದೆ ಎಂದು ವಿಜಯಪುರ ಮೂಲದ ಇಸ್ರೋ ವಿಜ್ಞಾನಿ ಅಭಿಷೇಕ ದೇಶಪಾಂಡೆ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಅತ್ಯಂತ ಕಡಿಮೆ ವೆಚ್ಚದಲ್ಲಿ ಚಂದ್ರನ ದಕ್ಷಿಣ ಧ್ರುವದಲ್ಲಿ ಉಪಗ್ರಹ ಇಳಿಸುವುದರ ಮೂಲಕ ಇಸ್ರೋ ಜಾಗತಿಕ ದಾಖಲೆಯನ್ನು ಸ್ಥಾಪಿಸಿದೆ ಎಂದು ವಿಜಯಪುರ ಮೂಲದ ಇಸ್ರೋ ವಿಜ್ಞಾನಿ ಅಭಿಷೇಕ ದೇಶಪಾಂಡೆ ಹೇಳಿದರು.

ನಗರದ ಪಿಡಿಜೆ ಪದವಿ ಪೂರ್ವ ಮಹಾವಿದ್ಯಾಲಯದ ಮಾಧ್ಯಮಿಕ ವಿಭಾಗದಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಭಾರತ ಬಾಹ್ಯಾಕಾಶ ವಿಜ್ಞಾನದಲ್ಲಿ ಜಗತ್ತನ್ನು ಬೆರಗುಗೊಳಿಸುತ್ತಿದೆ ಹಾಗಾಗಿ ವಿದ್ಯಾರ್ಥಿಗಳಿಗೆ ಖಗೋಳ ವಿಜ್ಞಾನದಲ್ಲಿ ಅನೇಕ ಅವಕಾಶಗಳಿವೆ ಅವುಗಳನ್ನು ಸದುಪಯೋಗ ಮಾಡಿಕೊಂಡು ಉನ್ನತ ಸಾಧನೆ ಮಾಡಿ ದೇಶಕ್ಕೆ ನಮ್ಮ ಸೇವೆಯನ್ನು ಸಮರ್ಪಿಸಬೇಕು ಎಂದರು.

ಇದು ಸಮಾನ್ಯ ಸಾಧನೆ ಅಲ್ಲ. ಇಂದು ಇಸ್ರೋ ಅನೇಕ ದಾಖಲೆಗಳನ್ನು ಬರೆಯುತ್ತಿದೆ. ಖಗೋಳ ವಿಜ್ಞಾನದಲ್ಲಿ ಸಂಶೋಧನೆಗಳು ನಿರಂತರವಾಗಿ ನಡೆಯುತ್ತಿವೆ. ದೇಶದಲ್ಲಿ ಅವಕಾಶಗಳಿಗೇನು ಕೊರತೆ ಇಲ್ಲ ಕೌಶಲ್ಯ ಇರಬೇಕು ಅಷ್ಟೇ ಎಂದು ತಿಳಿಸಿದರು.

ದೇಶಕ್ಕೆ ನಾವು ಏನನ್ನಾದರೂ ಕೊಡುಗೆ ನೀಡಬೇಕು. ಸಾಧನೆ ಹಾದಿ ಯಾವತ್ತಿಗೂ ಕಠಿಣವಾಗಿಯೇ ಇರುತ್ತದೆ. ಯುವ ಮಿತ್ರರು ದೇಶದ ಕನಸನ್ನು ನನಸುಗೊಳಿಸುವುದರೊಂದಿಗೆ ತಮ್ಮ ಭವಿಷ್ಯ ರೂಪಿಸಿಕೊಳ್ಳಬಹುದಾಗಿದೆ. ಭಾರತ ಅಪರೂಪದ ಸನಾತನ ಸಂಸ್ಕೃತಿಯ ಆಗರ. ಈ ನೆಲದ ಮಣ್ಣು ಅತ್ಯಂತ ಪವಿತ್ರ ಅಂತೆಯೇ ವಿವೇಕಾನಂದರಂತಹ ಅಧ್ಯಾತ್ಮ ಸಾಧಕರು, ಸುಭಾಷಚಂದ್ರ ಬೋಸ್‌ರಂತಹ ವೀರದೇಶಭಕ್ತರು, ಅಬ್ದುಲ್ ಕಲಾಮರಂತಹ ವಿಜ್ಞಾನಿ ಹಾಗೂ ರಾಷ್ಟ್ರಪತಿಗಳು ಇಲ್ಲಿ ಜನ್ಮ ತಾಳಿದ್ದಾರೆ ಎಂದು ತಿಳಿಸಿದರು.ದೇಶದ ಮಹಾನ್ ಸಾಧಕರೆಲ್ಲ ಹೆತ್ತತಾಯಿ ಹೊತ್ತನಾಡು, ಸ್ವರ್ಗಕ್ಕಿಂತ ಮಿಗಿಲೆಂಬ ರೀತಿಯಲ್ಲಿ ಬಾಳಿ ನಮಗೆ ಬೆಳಕು ನೀಡಿ ಆದರ್ಶವಾಗಿದ್ದಾರೆ. ಭಾರತದಲ್ಲಿ ಜನಿಸುವುದೇ ಒಂದು ಪುಣ್ಯ. ಹಾಗಾಗಿ ಸಮೃದ್ಧ ಭಾರತದ ಪ್ರಜೆಗಳಾಗಿ ಜನಿಸಿದ ನಾವು ಹೆಮ್ಮಯಿಂದ ಇಲ್ಲಿಯ ಸಂಸ್ಕ್ರತಿ ಪರಂಪರೆ ಅರಿತು ಆಚರಿಸಬೇಕು ಎಂದರು.

ಅಶೋಕ ಹಂಚಲಿ ಮಾತನಾಡಿ, ಪ್ರಾಣಿಯಂತಿರುವ ವ್ಯಕ್ತಿ ಮಾನವನಾಗಲು ಶಿಕ್ಷಣ ಮುಖ್ಯ, ವ್ಯಕ್ತಿ ಮಾನವನಿಂದ ದೈವತ್ವಕ್ಕೇರಲು ಸಂಸ್ಕಾರ ಅತಿ ಮುಖ್ಯ, ಅಂತಹ ಸಂಸ್ಕಾರಯುತ ಶಿಕ್ಷಣ ಪಡೆಯಬೇಕಾದರೆ ನಾವೆಲ್ಲ ಭಾರತೀಯ ಸಂಸ್ಕ್ರತಿಯನ್ನು ಮೈಗೂಡಿಸಿಕೊಳ್ಳಬೇಕು ಎಂದರು.

ಬಿಡಿಇ ಸಂಸ್ಥೆಯ ಅಧ್ಯಕ್ಷ ಕೆ.ಬಿ.ಕುಲಕರ್ಣಿ ಮಾತನಾಡಿ, ಒಂದು ಮಗು ಜಗದ ಜ್ಯೋತಿಯಾಗಿ ಬೆಳಗಬೇಕಾದರೆ, ಮಕ್ಕಳ ವ್ಯಕ್ತಿತ್ವದ ಬೆಳವಣಿಗೆಗೆ ಶಿಕ್ಷಕರು ಪ್ರಯತ್ನಿಸಬೇಕು, ಪಾಲಕರು ಸಹಕರಿಸಬೇಕು, ಮಕ್ಕಳಲ್ಲಿ ಮಾನವೀಯ ಮೌಲ್ಯಗಳು ಸ್ಥಾಪಿತವಾಗಬೇಕು. ಆಗ ಮಾತ್ರ ಮಕ್ಕಳ ಭವಿಷ್ಯದ ಜೀವನ ಸಾರ್ಥಕವಾಗುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪ್ರಾಂಶುಪಾಲ ಡಿ.ಕೆ.ಕುಲಕರ್ಣಿ, ಉಪ ಪ್ರಾಂಶುಪಾಲ ಎಂ.ಎ.ಆಲೂರ, ಎ.ಎಸ್.ಕುಲಕರ್ಣಿ, ವಿ.ಆರ್.ಕಟ್ಟಿ, ಎಸ್.ಎಲ್.ಜಾಲವಾದಿ, ಎ.ಪಿ.ಕೊರ್ತಿ, ಸಂಸ್ಥೆಯ ಉಪಾಧ್ಯಕ್ಷ ಎ.ಡಿ.ದೇಶಪಾಂಡೆ, ಶಾಲಾ ಸಂಸತ್ತಿನ ಪ್ರಧಾನಿ ಆಕಾಶ, ಪಿ.ಡಿ.ಪೂಜಾರ, ಪಿ.ಕೆ.ಮಲಘಾಣ ಇದ್ದರು.