ಭರತನಾಟ್ಯಕ್ಕೆ ದೈವತ್ವವಿದೆ: ಶಂಕರ್‌ ಶೇಟ್

| Published : Jul 30 2024, 12:31 AM IST

ಸಾರಾಂಶ

ಸೊರಬದಲ್ಲಿ ಸಾಧನೆ ಎಲ್ಲಿದೆಯೋ ಅಲ್ಲಿ ನಮ್ಮ ನಡೆ ಎಂಬ ಕಾರ್ಯಕ್ರಮ ಜರುಗಿತು.

ಕನ್ನಡಪ್ರಭ ವಾರ್ತೆ ಸೊರಬ

ಭಾರತೀಯ ನಾಟ್ಯ ಪರಂಪರೆಯಲ್ಲಿ ಭರತನಾಟ್ಯಕ್ಕೆ ತನ್ನಕ್ಕೆ ಆದ ಗೌರವ ಮತ್ತು ದೈವತ್ವ ಭಾವನೆ ಇದೆ. ಹಾಗಾಗಿ ಅಂತರಂಗದ ಆನಂದವನ್ನು ನಾಟ್ಯದ ಮೂಲಕ ಹೊರತಂದು, ಅದನ್ನು ಆಸ್ವಾದಿಸುವವರನ್ನು ಅಂತರಂಗಕ್ಕೆ ಒಯ್ಯುವ ಜಾಣ್ಮೆ ಭರತನಾಟ್ಯ ಕಲೆಗೆ ಇದೆ ಎಂದು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಹಾಗೂ ಸಮಾಜ ಸೇವಕ ಶಂಕರ್ ಶೇಟ್ ಹೇಳಿದರು.

ಶುಕ್ರವಾರ ತಾಲೂಕು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ವತಿಯಿಂದ ಸಾಧನೆ ಎಲ್ಲಿದೆಯೋ ಅಲ್ಲಿ ನಮ್ಮ ನಡೆ ಎಂಬ ಕಾರ್ಯಕ್ರಮದ ಅಡಿಯಲ್ಲಿ ತಾಲೂಕಿನ ನಿಸರಾಣಿ ಹೋಬಳಿ ಕೆರೆಕೊಪ್ಪ ಗ್ರಾಮದ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಭರತನಾಟ್ಯ ಕಲಾವಿದೆ ಪೃಥ್ವಿ ಜಾಣ ಅವರನ್ನು ಸನ್ಮಾನಿಸಿ ಮಾತನಾಡಿದರು.

ಭರತ ಮುನಿಗಳ ತಂದ ಭರತನಾಟ್ಯವು ಮೇಲ್ನೋಟಕ್ಕೆ ಮೈ ಕುಣಿಸುವಂತೆ ಕಂಡರೂ ನಾಟ್ಯದಲ್ಲಿ ಭಾವ-ರಾಗ-ತಾಳಗಳ ಒಂದು ಪಾಕವಿದೆ. ಅದು ನಮ್ಮ ಮೈ-ಮನಗಳನ್ನು ಹದವಾಗಿಸಿ ನಮ್ಮನ್ನು ಧನ್ಯರನ್ನಾಗಿ ಮಾಡುತ್ತದೆ. ಅಂತರಂಗದ ಆನಂದವನ್ನು ನಾಟ್ಯದ ಮೂಲಕ ಹೊರತಂದು, ಅದನ್ನು ಆಸ್ವಾದಿಸುವವರನ್ನು ಪರವಶತೆಗೆ ಒಯ್ಯುವ ಜಾಣ್ಮೆ ನಮ್ಮ ಭರತನಾಟ್ಯ ಕಲೆಯಲ್ಲಿದೆ. ಅಲ್ಲಿ ದೇವಿಯ ಸೌಂದರ್ಯವೂ ಉಂಟು, ಶಿವನ ಗಾಂಭೀರ್ಯವೂ ಉಂಟು. ಶಿವೆಯ ಲಾಸ್ಯ-ಶಿವನ ತಾಂಡವಗಳೆರಡೂ ಸಮ್ಮಿಳಿತವಾಗಿದೆ ಎಂದ ಅವರು, ಆದರೆ ಇತ್ತೀಚಿನ ದಿನಗಳಲ್ಲಿ ಮನರಂಜನೆಯೊಡನೆ ಆತ್ಮರಂಜನೆಗೆ ಬೇಕಾದ ರಸ, ಭಾವಗಳನ್ನು ಸೇರಿಸಿದ್ದಾರೆ ಎಂದರು.

ಪೃಥ್ವಿ ಜಾಣ ಇವರ ಸಾಧನೆಯನ್ನು ಎಲ್ಲರೂ ಮೆಚ್ಚುವಂತದ್ದು, ಇದು ಸೊರಬ ತಾಲೂಕಿಗೆ ಹೆಮ್ಮೆಯ ವಿಚಾರ. ಇಂತಹ ಸಾಧಕರನ್ನು ಗುರುತಿಸಿ ಗೌರವಿಸುವುದು ಸಂಘ ಸಂಸ್ಥೆಗಳ ಆದ್ಯ ಕರ್ತವ್ಯ. ಇಂಥವರನ್ನು ಗುರುತಿಸಿ ಗೌರವಿಸಿದಾಗ ಅವರ ಪ್ರತಿಭೆಗೆ ತಕ್ಕ ಗೌರವ ನೀಡಿದಂತಾಗುತ್ತದೆ. ಇದರಿಂದ ಇತರರಿಗೆ ಪ್ರೇರಣೆ ದೊರೆಯುತ್ತದೆ. ಭರತನಾಟ್ಯ ಕಲೆಯನ್ನು ಉಳಿಸಿ ಬೆಳೆಸಿ ಮುಂದಿನ ಪೀಳಿಗೆಗೆ ತಲುಪಿಸುವ ದಿಸೆಯಲ್ಲಿ ಪ್ರತಿಯೊಬ್ಬರು ಹೆಚ್ಚಿನ ಗಮನ ಹರಿಸಬೇಕಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಮಂಜುನಾಥ, ಕೆ.ಎಂ.ರಾಜೇಂದ್ರ, ಎಸ್.ರಾಘವೇಂದ್ರ, ಪೋಷಕರಾದ ಜಾಣ ಸತೀಶ್, ಶೋಭಾ ಜಾಣ, ಪೂರ್ಣ ಜಾಣ, ಪ್ರಕಾಶ್, ಶ್ರೀಪಾದ, ಮಂಜುನಾಥ, ಮಂಗಳಮೂರ್ತಿ, ಶ್ರೀಪತಿ ಮೊದಲಾದವರು ಹಾಜರಿದ್ದರು.---------------------

ಫೋಟೊ:೨೯ಕೆಪಿಸೊರಬ-೦೧ : ಸೊರಬ ತಾಲೂಕಿನ ಕೆರೆಕೊಪ್ಪ ಗ್ರಾಮದಲ್ಲಿ ಭರನಾಟ್ಯ ಕಲಾವಿದೆ ಪೃಥ್ವಿ ಜಾಣ ಅವರನ್ನು ಕನ್ನಡ ಸಾಹಿತ್ಯ ಸಾಂಸ್ಕöÈತಿಕ ವೇದಿಕೆ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು.