ಇಂದಿನ ಯುವಜನತೆಯಲ್ಲಿ ಕ್ಷೀಣಿಸುತ್ತಿರುವ ಸಂಸ್ಕಾರ ಮೌಲ್ಯಗಳನ್ನು ಉಳಿಸಲು ಹಾಗೂ ಮಕ್ಕಳಲ್ಲಿ ಧಾರ್ಮಿಕತೆ ಮತ್ತು ರಾಷ್ಟ್ರೀಯ ಪ್ರಜ್ಞೆಯನ್ನು ಬೆಳೆಸಲು ಭರತನಾಟ್ಯ ಸಹಕಾರಿಯಾಗಿದೆ ಎಂದು ಶ್ರೀ ಎಡನೀರು ಮಠದ ಪರಮಪೂಜ್ಯ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಹೇಳಿದರು.

ಬಂಟ್ವಾಳ : ಇಂದಿನ ಯುವಜನತೆಯಲ್ಲಿ ಕ್ಷೀಣಿಸುತ್ತಿರುವ ಸಂಸ್ಕಾರ ಮೌಲ್ಯಗಳನ್ನು ಉಳಿಸಲು ಹಾಗೂ ಮಕ್ಕಳಲ್ಲಿ ಧಾರ್ಮಿಕತೆ ಮತ್ತು ರಾಷ್ಟ್ರೀಯ ಪ್ರಜ್ಞೆಯನ್ನು ಬೆಳೆಸಲು ಭರತನಾಟ್ಯ ಸಹಕಾರಿಯಾಗಿದೆ ಎಂದು ಶ್ರೀ ಎಡನೀರು ಮಠದ ಪರಮಪೂಜ್ಯ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಹೇಳಿದರು.ಶುಕ್ರವಾರ ಬಿ.ಸಿ.ರೋಡಿನ ಸ್ಪರ್ಶಾ ಕಲಾಮಂದಿರದಲ್ಲಿ ಕಲ್ಲಡ್ಕದ ಕಲಾನಿಕೇತನ ಸಂಸ್ಥೆಯ ‘ರಜತ ಕಲಾಯಾನ’ದ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.

ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಸಂಸ್ಥಾಪಕ ಡಾ. ಪ್ರಭಾಕರ ಭಟ್ ಕಲ್ಲಡ್ಕ ಮಾತನಾಡಿ, ಇತರ ದೇಶಗಳಲ್ಲಿಯೂ ಹಾಡು ಮತ್ತು ನೃತ್ಯಗಳಿದ್ದರೂ, ಭಾರತೀಯ ಭರತನಾಟ್ಯವು ಹೃದಯಕ್ಕೆ ವಿಶಿಷ್ಟ ಕಂಪನವನ್ನು ನೀಡುವುದರ ಜತೆಗೆ ಮಾನಸಿಕ ಶಕ್ತಿಯನ್ನೂ ತುಂಬುತ್ತದೆ ಎಂದರು.ಪುತ್ತೂರಿನ ವಿಶ್ವಕಲಾನಿಕೇತನ ಇನ್‌ಸ್ಟಿಟ್ಯೂಟ್ ಆಫ್ ಆರ್ಟ್ಸ್ ಅಂಡ್ ಕಲ್ಚರ್ ಸಂಸ್ಥೆಯ ನಿರ್ದೇಶಕಿ, ಕರ್ನಾಟಕ ಕಲಾಶ್ರೀ ವಿದುಷಿ ನಯನಾ ವಿ. ರೈ ಹಾಗೂ ಗೋವಾದ ಶಿರೋಡಾದ ಗೋಮಂತಕ್ ಆಯುರ್ವೇದ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದ ಪ್ರಾಂಶುಪಾಲ ಡಾ. ನೀಲೇಶ್ ಪಿ. ಕೊರ್ಡೆ ಉಪಸ್ಥಿತರಿದ್ದರು.

ಕಲಾನಿಕೇತನದಲ್ಲಿ ತರಬೇತಿ ಪಡೆದು ವಿದ್ವತ್ ಪದವಿ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸಂಸ್ಥೆಯ ನಿರ್ದೇಶಕಿ ಹಾಗೂ ಗುರು ವಿದುಷಿ ವಿದ್ಯಾ ಮನೋಜ್ ಸ್ವಾಗತಿಸಿದರು. ವಿದುಷಿ ಶ್ರೀದೇವಿ ನಿರೂಪಿಸಿದರು. ಲಕ್ಷ್ಮಣ್ ಅಗ್ರಬೈಲು ಧನ್ಯವಾದ ನೀಡಿದರು. ಸಂಸ್ಥೆಯ ವಿದ್ಯಾರ್ಥಿಗಳಿಂದ ಪುಷ್ಪಾಂಜಲಿ, ರಾಮ ರಾಮಾಯಣ, ಕೃಷ್ಣಾ ಲೀಲೆ, ಮಹಿಷಮರ್ಧಿನಿ, ಅಯಗಿರಿನಂದಿನಿ, ತಿಲ್ಲಾಣ ನೃತ್ಯ ರೂಪಕ ನಡೆಯಿತು.