ನಗರಸಭೆಯಾಗಲಿರುವ ಭಟ್ಕಳ ಪುರಸಭೆ: ಆದೇಶ ಹೊರ ಬೀಳುವುದೊಂದೇ ಬಾಕಿ

| Published : Aug 08 2025, 01:01 AM IST

ನಗರಸಭೆಯಾಗಲಿರುವ ಭಟ್ಕಳ ಪುರಸಭೆ: ಆದೇಶ ಹೊರ ಬೀಳುವುದೊಂದೇ ಬಾಕಿ
Share this Article
  • FB
  • TW
  • Linkdin
  • Email

ಸಾರಾಂಶ

ಭಟ್ಕಳ ಪುರಸಭೆಯನ್ನು ಮೇಲ್ದರ್ಜೆಗೇರಿಸಿ ನಗರಸಭೆಯನ್ನಾಗಿಸಲು ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಂಡಿದ್ದಾರೆ.

ಭಟ್ಕಳ: ಪುರಸಭೆಯನ್ನು ಮೇಲ್ದರ್ಜೆಗೇರಿಸಿ ನಗರಸಭೆಯನ್ನಾಗಿಸಲು ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಂಡಿದ್ದು, ಸರ್ಕಾರದ ಆದೇಶ ಹೊರಬೀಳುವೊಂದೇ ಬಾಕಿ ಇದೆ.

ಕಳೆದ ಬಾರಿ ಚುನಾವಣೆಯಲ್ಲಿ ಗೆದ್ದು ಮಂತ್ರಿಯಾದ ನಂತರ ಮಂಕಾಳ ವೈದ್ಯ ಈ ಬಗ್ಗೆ ಕರಡು ನಿರ್ಣಯವನ್ನು ಮಾಡಿದ್ದು ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. ಭಟ್ಕಳ ನಗರದ ಅಭಿವೃದ್ಧಿಗೆ ಅವಕಾಶವಾದಂತಾಗಿದೆ.

ಭಟ್ಕಳ ಪುರಸಭೆಯಲ್ಲಿ ಪ್ರಸ್ತುತ ೨೩ ಸದಸ್ಯರಿದ್ದು, ಜಾಲಿ ಪಟ್ಟಣ ಪಂಚಾಯತ್‌ನಲ್ಲಿ ೨೦ ಸದಸ್ಯರಿದ್ದಾರೆ. ಹೆಬಳೆ ಗ್ರಾಮ ಪಂಚಾಯತ್‌ನಲ್ಲಿ ೧೬ ಸದಸ್ಯರಿದ್ದಾರೆ. ಒಟ್ಟು ನಗರಸಭೆಯಲ್ಲಿ ಒಟ್ಟು ೪೦ ಸದಸ್ಯರಿರುತ್ತಿದ್ದು, ಅನುದಾನವು ₹೫ ಕೋಟಿ ಇರುವುದು ₹೩೦ ಕೋಟಿಗೆ ಹೆಚ್ಚಳವಾಗಲಿದೆ. ಇದರಿಂದ ಅಭಿವೃದ್ಧಿಗೆ ಹೊಸ ದಿಕ್ಕು ತೆರೆದುಕೊಂಡಂತಾಗಿದೆ. ನಗರ ಸಭೆಯಲ್ಲಿ ₹೪೦ ಲಕ್ಷದ ತನಕದ ಕಾಮಗಾರಿಗೆ ಮಂಜೂರಿ ಮಾಡಲು ಅಧಿಕಾರ ಇದ್ದು, ಸಣ್ಣಪುಟ್ಟ ಕಾಮಗಾರಿಗೂ ನಗರಾಭಿವೃದ್ಧಿ ಕೋಶದ ಮಂಜೂರಾತಿಗಾಗಿ ಕಾಯಬೇಕಾದ ಅವಶ್ಯಕತೆಯೂ ಇಲ್ಲವಾಗಲಿದೆ.

ಭಟ್ಕಳ ಪುರಸಭೆ, ಜಾಲಿ ಪಟ್ಟಣ ಪಂಚಾಯತ್ ಮತ್ತು ಹೆಬಳೆ ಗ್ರಾಮ ಪಂಚಾಯತ್ ಒಳಗೊಂಡ ನಗರ ಸಭೆಯಲ್ಲಿ ಹೆಬಳೆ ಹಾಗೂ ಜಾಲಿ ಭಾಗಗಳೂ ಕೂಡ ಅಭಿವೃದ್ಧಿಯಲ್ಲಿ ವೇಗ ಪಡೆದುಕೊಳ್ಳಲಿವೆ.

ಬಂದರು-ಮೀನುಗಾರಿಕೆ ಸಚಿವ ಮಂಕಾಳ ವೈದ್ಯ ಈ ಹಿಂದೆಯೇ ಈ ಬಗ್ಗೆ ನೀಲನಕ್ಷೆ ತಯಾರಿಸಿ ಕಳುಹಿಸಲು ಅಧಿಕಾರಿಗಳಿಗೆ ಸೂಚಿಸಿದ್ದು ನಗರ ಸಭೆಯನ್ನಾಗಿಲು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ ಅವರ ಸಹಕಾರದಿಂದ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಲು ಸಾಧ್ಯವಾಗಿದೆ.

ನಗರದ ಸಭೆಯ ಕಾರ್ಯಾಲಯವು ಭಟ್ಕಳ ನಗರದಲ್ಲಿರುವುದರಿಂದ ಹೆಬಳೆ ಮತ್ತು ಜಾಲಿ ನಾಗರಿಕರಿಗೆ ತಮ್ಮ ಕೆಲಸ ಕಾರ್ಯಗಳಿಗಾಗಿ ನಗರ ಸಭೆಗೆ ಭಟ್ಕಳಕ್ಕೆ ಬರಬೇಕಾದ ಅನಿವಾರ್ಯತೆ ಉಮಟಾಗುವುದಂತೂ ಸತ್ಯ.